ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೊಳ್ಳುವುದೇ ಅತಿಕ್ರಮಣ ಸಮಸ್ಯೆ?

ಗ್ರಾಮ ಸಂಚಾರ
Last Updated 4 ಸೆಪ್ಟೆಂಬರ್ 2013, 5:31 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಗ್ರಾಮ ಸ್ಥಿತಿವಂತರು ಇರುವಂಥ ಊರು. ಆದರೆ, ಇಂತಹ ಗ್ರಾಮದಲ್ಲಿ ಚರಂಡಿ ಹಾಗೂ ರಸ್ತೆಗಳ ಅತಿಕ್ರಮಣ ಸಮಸ್ಯೆ ಹಲವು ವರ್ಷಗಳಿಂದ ಸಮಸ್ಯೆ ಯಾಗಿಯೇ ಉಳಿದಿದೆ!

ಗ್ರಾಮದ ದೊಡ್ಡಬೀದಿ, ಹುಚ್ಚೇಗೌಡರ ಬೀದಿ, ವ್ಯವಸಾಯ ಸೇವಾ ಸಹಕಾರ ಸಂಘ ಕಚೇರಿ (ಸೊಸೈಟಿ)ಯ ರಸ್ತೆ ಇತರೆಡೆ ರಸ್ತೆ ಹಾಗೂ ಚರಂಡಿ ಅತಿಕ್ರಮಕ್ಕೆ ಒಳಗಾಗಿದೆ. ರಸ್ತೆಗೆ ಸೇರಿದ ಜಾಗದ ವರೆಗೆ ಕಾಂಪೌಂಡ್, ದನದ ಕೊಟ್ಟಿಗೆ. ಅಂಗಡಿಗಳು ವಿಸ್ತರಿಸಿವೆ. ಅಲ್ಲಲ್ಲಿ ತಿಪ್ಪೆಗಳ ರಾಶಿಯೇ ಬಿದ್ದಿದೆ. ಇದರಿಂದ ವಾಹನ, ಎತ್ತಿನ ಗಾಡಿ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಊರಿನ ಪ್ರಮುಖ ಹಬ್ಬ ಹಿರಿದೇವಿಯಮ್ಮನ ಹೂವಿನ ಚಪ್ಪರದ ಉತ್ಸವ ಸಾಗುವ ರಸ್ತೆ ಅತಿಕ್ರಮಣಕ್ಕೆ ಒಳಗಾಗಿದ್ದು ತೆರವು ಮಾಡಿಸುವಂತೆ ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ದೂರು ನೀಡಿದ್ದಾರೆ.

`ಬೆಳಗೊಳ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮ. ಆದರೆ, ಇಲ್ಲಿ ವ್ಯವಸ್ಥಿತ ರಸ್ತೆ, ಚರಂಡಿಗಳಿಲ್ಲ. ಸ್ವಚ್ಛತೆ ಕೂಡ ಅಷ್ಟಕ್ಕಷ್ಟೆ. ಹಿರಿದೇವಿಯಮ್ಮ ಬಡಾವಣೆಯಲ್ಲಿ ಕಬ್ಬಿಣದ ವಿದ್ಯುತ್ ಕಂಬಗಳನ್ನು ಬದಲಿಸಿಲ್ಲ. ವಾರದ ಗ್ರಾಮೀಣ ಸಂತೆಗೆ ಸೂಕ್ತ ಸ್ಥಳಾವಕಾಶ ಇಲ್ಲದೆ ವ್ಯಾಪಾರಿಗಳು ಹಾಗೂ ಗ್ರಾಹಕರು ತೊಂದರೆ ಅನುಭವಿ ಸುತ್ತಿದ್ದಾರೆ.

ಕೆಲವರು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಪಡೆಯಲು ಗುಂಡಿ ತೆಗೆದು ಹಾಗೇ ಬಿಟ್ಟಿರುವುದರಿಂದ ರಾತ್ರಿ ವೇಳೆ ಓಡಾಲು ಕಷ್ಟವಾಗಿದೆ. ಪ್ರಮುಖ ರಸ್ತೆಗಳು ಅತಿಕ್ರಮಕ್ಕೆ ಒಳಗಾಗಿ ಜನರು ತೊಂದರೆ ಅನುಭವಿಸುತ್ತಿದ್ದರೂ ಇಲ್ಲಿನ ಗ್ರಾಮ ಪಂಚಾಯಿತಿ ಇತ್ತಗಮನ ಹರಿಸುತ್ತಿಲ್ಲ. ಸುವರ್ಣ ಗ್ರಾಮೋದಯ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಕಳಪೆಯಿಂದ ಕೂಡಿರುವ ಕಾರಣ ಬಹಳಷ್ಟು ಕಾಮಗಾರಿಗಳು ವರ್ಷ ಕಳೆಯುವ ಮುನ್ನವೇ ಹಾಳಾಗಿವೆ. ಈ ಕುರಿತು ಅಧಿಕಾರಿಗಳಿಗೆ ದೂರು ಕೊಟ್ಟರೂ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ' ಎಂದು ವಿಷಕಂಠೇಗೌಡ, ಸುನಿಲ್ ಇತರರು ದೂರುತ್ತಾರೆ.

`ಗ್ರಾಮದಲ್ಲಿ ಎಲ್ಲೆಲ್ಲಿ ರಸ್ತೆ, ಚರಂಡಿ ಹಾಗೂ ಗ್ರಾಮ ಪಂಚಾಯಿತಿಗೆ ಸೇರಿದ ಜಾಗ ಅತಿಕ್ರಮಣಕ್ಕೆ ಒಳಗಾಗಿದೆಯೋ ಅದನ್ನು ಯಾರ ಮುಲಾಜಿಗೂ ಒಳಗಾಗದೆ ತೆರವು ಮಾಡಿಸ ಲಾಗುವುದು. ಅಧಿಕಾರ ಹೋದರೂ ಚಿಂತೆಯಿಲ್ಲ; ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳುತ್ತೇನೆ. ಅತಿಕ್ರಮಣ ತೆರವು ಸಂಬಂಧ ಸಭೆಯಲ್ಲಿ ಗೊತ್ತುವಳಿ ಕೂಡ ಅಂಗೀಕರಿಸಲಾಗಿದೆ.

ಸ್ವಪ್ರೇರಣೆಯಿಂದ ತೆರವು ಮಾಡುವಂತೆ ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ. ತೆರವು ಮಾಡದಿದ್ದರೆ ಯಂತ್ರಗಳನ್ನು ತರಿಸಿ, ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ' ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ವಿ. ಸುರೇಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT