ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ: ಪ್ರತಿಭಟನಾ ರ್ಯಾಲಿ 28ಕ್ಕೆ

Last Updated 24 ಫೆಬ್ರುವರಿ 2011, 9:05 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಇದೇ ತಿಂಗಳ 28ರಂದು ಪಟ್ಟಣದಲ್ಲಿ ಅಡಿಕೆ ಬೆಳೆಗಾರರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ.ಇಲ್ಲಿನ ಪುರಭವನದಲ್ಲಿ ಮಂಗಳವಾರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ರೈತ ಸಂಘ ಹಾಗೂ ಅಡಿಕೆ ಬೆಳೆಗಾರರ ಸಂಘಗಳ ಪ್ರತಿನಿಧಿಗಳ ಸಭೆಯಲ್ಲಿ ಪ್ರಸ್ತುತ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ತಾಲ್ಲೂಕಿನಲ್ಲಿ 25 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಹಳದಿ ಎಲೆ ರೋಗ ವ್ಯಾಪಿಸಿದ್ದು, ಕಳೆದ ನಾಲ್ಕು ದಶಕಗಳಿಂದ ಜೀವನಾಧರಿತವಾಗಿ ಅಡಿಕೆ ಬೆಳೆಯುತ್ತಿದ್ದ ಹಲವು ಕುಟುಂಬಗಳು ಬದುಕು ಕಳೆದುಕೊಂಡಿವೆ. ಹಲವರು ಗುಳೇ ಹೋಗಿದ್ದಾರೆ. ಆತ್ಮಹತ್ಯೆಗಳು ನಡೆಯುತ್ತಿದ್ದರೂ ಸಂತ್ರಸ್ತರಿಗೆ ಯಾವುದೇ ರೀತಿಯ ಪರಿಹಾರ, ಪರ್ಯಾಯವಾಗಲಿ ರೂಪಗೊಂಡಿಲ್ಲ ಎಂದು ಸಭೆ ಅಭಿಪ್ರಾಯಪಟ್ಟಿತು.

 ಅಡಿಕೆ ಉತ್ಪನ್ನವಾದ ಗುಟ್ಕಾದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿರುವುದರಿಂದ ಅಡಿಕೆ ವ್ಯಾಪಾರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ರಾಜ್ಯದ 8-10 ಜಿಲ್ಲೆಗಳ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಟ್ಕಾ ಉದ್ಯಮ ಅವಲಂಬಿಸಿರುವ ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾಗಿದ್ದಾರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ತತ್‌ಕ್ಷಣ ಮಧ್ಯೆ ಪ್ರವೇಶಿಸಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಸಭೆ ಒತ್ತಾಯಿಸಿತು.

 ಗುಟ್ಕಾದಲ್ಲಿ ಪ್ಲಾಸ್ಟಿಕ್ ಬಳಕೆಗೆ ತಡೆ ಒಡ್ಡಿರುವ ನ್ಯಾಯಾಲಯದ ಅದೇಶಕ್ಕೆ ತಡೆ ನೀಡಿ, ಪರ್ಯಾಯ ವ್ಯವಸ್ಥೆ ಆಗುವವರೆಗೆ ಕಾಲಾವಕಾಶ ಕೋರಲು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕು, ಹಳದಿ ಎಲೆರೋಗ ಬಾಧಿತ ಸಂತ್ರಸ್ತ ಬೆಳೆಗಾರರಿಗೆ ತೋಟಗಾರಿಕಾ ಆಯುಕ್ತ ಗೋರಕ್‌ಸಿಂಗ್ ಮಾಡಿರುವ ಶಿಫಾರಸುಗಳ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನಾ ರ್ಯಾಲಿ ನಡೆಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.

ಸಭೆಯಲ್ಲಿ ಕಾಂಗ್ರೆಸ್ಸಿನ ಕೆ.ಜಿ.ಶೋಭಿಂತ್, ಎ.ಎಸ್.ನಾಗೇಶ್‌ಗೌಡ, ಇನೇಶ್, ಆಂಶುಮಂತ್, ಬಿಜೆಪಿಯ ಜಿ.ಎಸ್.ಮಹಾಬಲ, ಮಳಿಗೆ ಚಂದ್ರಶೇಖರ್, ಜೆಡಿಎಸ್‌ನ ಎಚ್.ಟಿ.ರಾಜೇಂದ್ರ, ಕೃಪಾಲ, ರವಿಶಂಕರ್, ರೈತ ಸಂಘದ ನವೀನ್ ಕರವಾನೆ, ನಿಲುಗುಳಿ ನಾಗರಾಜ್, ಸುಧೀರ್‌ಕುಮಾರ್, ಸತೀಶ್‌ಗೌಡ, ಅಡಿಕೆ ಬೆಳೆಗಾರರ ಸಂಘದ ಎನ್.ಜಿ.ಶಂಕರ್, ಮ್ಯಾಮ್‌ಕೋಸ್ ನಿರ್ದೇಶಕ ಬಿ.ಸಿ.ನರೇಂದ್ರ, ಯಡಗೆರೆ ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT