ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ರೂ 959 ಕೋಟಿ ಸಾಲ ಯೋಜನೆ

Last Updated 6 ಏಪ್ರಿಲ್ 2013, 7:21 IST
ಅಕ್ಷರ ಗಾತ್ರ

ಕೊಪ್ಪಳ: ಕೊಪ್ಪಳ ಜಿಲ್ಲಾ ಅಗ್ರಗಣ್ಯ ಬ್ಯಾಂಕ್ ಆಗಿರುವ ಸ್ಟೇಟ್‌ಬ್ಯಾಂಕ್ ಆಫ್ ಹೈದರಾಬಾದ್ ಲೀಡ್ ಬ್ಯಾಂಕ್‌ನಿಂದ ಕೊಪ್ಪಳ ಜಿಲ್ಲೆಗೆ ರೂ. 959. 66 ಕೋಟಿ ಗಳ ಸಾಲ ಯೋಜನೆಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಬಿಡುಗಡೆ ಮಾಡಿದರು.

ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿಲ್ಲಾ ಸಾಲಪತ್ರ ಯೋಜನೆ ಬಿಡುಗಡೆ ಸಮಾರಂಭ ನೆರವೇರಿತು. ಕೊಪ್ಪಳ ಜಿಲ್ಲಾ ಸಾಲಪತ್ರ ಯೋಜನೆ ಬಿಡುಗಡೆಗೊಳಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ಹಿಂದುಳಿದ ಪ್ರದೇಶವಾಗಿರುವುದರಿಂದ, ಈ ಭಾಗದ ಸಣ್ಣ ಮತ್ತು ಅತಿ ಸಣ್ಣ ರೈತರು ಆರ್ಥಿಕವಾಗಿಯೂ ಅತ್ಯಂತ ಹಿಂದುಳಿದಿದ್ದಾರೆ.  ಈ ಭಾಗದ ಸರ್ವತೋಮುಖ ಅಭಿವೃದ್ಧಿಗೊಳಿಸಲು ಬ್ಯಾಂಕ್‌ಗಳ ನೆರವು ಅತ್ಯಗತ್ಯವಾಗಿದೆ.
 
ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಜಿಲ್ಲೆಯಲ್ಲಿ 1ರಿಂದ 10 ನೇ ತರಗತಿಯಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪೈಕಿ ಶೇ. 70 ರಷ್ಟು ಪಿ.ಯು.ಸಿ. ಅಥವಾ ಇತರೆ ಶಿಕ್ಷಣಕ್ಕೆ ದಾಖಲಾತ್ತಾರೆ. ನಂತರ ಈ ಪೈಕಿ ಶೇ. 40ರಷ್ಟು ಪದವಿ ಮಟ್ಟದ ಶಿಕ್ಷಣಕ್ಕೆ ದಾಖಲಾಗುತ್ತಾರೆ. ಸ್ನಾತಕೋತ್ತರ ಶಿಕ್ಷಣಕ್ಕೆ ಕೇವಲ ಶೇ. 10ರಷ್ಟು ವಿದ್ಯಾರ್ಥಿಗಳು ಮಾತ್ರ ಮುಂದೆ ವ್ಯಾಸಂಗಕ್ಕೆ ದಾಖಲಾಗುತ್ತಿದ್ದಾರೆ.
ಇದು, ಈ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗಿರಬಹುದಾಗಿದೆ.  ಓದುವ ಆಸೆ ಇದ್ದರೂ, ಆರ್ಥಿಕ ಸಂಕಷ್ಟದಿಂದಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸುವ ಸಾಧ್ಯತೆ ಇರುತ್ತದೆ. 

ಆದ್ದರಿಂದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಬ್ಯಾಂಕ್‌ಗಳ ಮೂಲಕ ಶೈಕ್ಷಣಿಕ ಸಾಲ ಒದಗಿಸುವ ಯೋಜನೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ.  ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಶೈಕ್ಷಣಿಕ ಸಾಲ ಯೋಜನೆಗಳಿಗೆ ಆದ್ಯತೆ ನೀಡುವುದಲ್ಲದೆ ವಿದ್ಯಾರ್ಥಿಗಳಿಗೆ ಈ ಯೋಜನೆಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಅಗತ್ಯವಾಗಿದೆ ಎಂದರು. ಸಾಲ ಯೋಜನೆ ಮುಖ್ಯಾಂಶ : ಕೊಪ್ಪಳ ಜಿಲೆಗ್ಲೆ ಒಟ್ಟು ರೂ. 959. 56 ಕೋಟಿ ಗಳ ಸಾಲ ಯೋಜನೆ ಬಿಡುಗಡೆ ಮಾಡಲಾಗಿದ್ದು, ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ಅಂದರೆ ರೂ. 639 ಕೋಟಿ ಮೀಸಲಿಡಲಾಗಿದೆ.

ಸಣ್ಣ ಮತ್ತು ಮಧ್ಯಮ ಉದ್ಯಮ/ಕೈಗಾರಿಕಾ ಕ್ಷೇತ್ರಗಳಿಗೆ ರೂ.107. 02 ಕೋಟಿ  ಶಿಕ್ಷಣ ಕ್ಷೇತ್ರಕ್ಕೆ- 20. 26 ಕೋಟಿ, ಗೃಹ ಯೋಜನೆಗಳಿಗೆ-   ರೂ. 69. 69 ಕೋಟಿ, ಇತರೆ ಕ್ಷೇತ್ರಗಳಿಗೆ ರೂ. 123. 59 ಕೋಟಿ  ನಿಗದಿಪಡಿಸಲಾಗಿದೆ. ನಿಗದಿತ ಸಾಲ ಯೋಜನೆಯಲ್ಲಿ ಗಂಗಾವತಿ ತಾಲ್ಲೂಕಿಗೆ ಅತಿ ಹೆಚ್ಚು ಶೇ. 56 ರಷ್ಟು ನಿಗದಿಪಡಿಸಲಾಗಿದ್ದು, ಕೊಪ್ಪಳ ತಾಲ್ಲೂಕಿಗೆ ಶೇ. 30, ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕಿಗೆ ತಲಾ ಶೇ. 07 ರಷ್ಟು ನಿಗದಿಪಡಿಸಲಾಗಿದೆ.  ಕಳೆದ 2012-13 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರಕ್ಕೆ ರೂ. 546 ಕೋಟಿ  ಹಂಚಿಕೆ ಮಾಡಲಾಗಿತ್ತು. 

ಆದರೆ ಪ್ರಸಕ್ತ ಸಾಲಿಗೆ ರೂ. 639 ಕೋಟಿ ನಿಗದಿಪಡಿಸಿದ್ದು, ಶೇ. 17. 03 ರಷ್ಟು ಹೆಚ್ಚಳ ಮಾಡಲಾಗಿದೆ. ಸಾಲ ಯೋಜನೆಯಲ್ಲಿ ಕೊಪ್ಪಳ ತಾಲ್ಲೂಕಿಗೆ ರೂ. 292. 72 ಕೋಟಿ, ಗಂಗಾವತಿ- ರೂ. 534. 54 ಕೋಟಿ , ಕುಷ್ಟಗಿ-  ರೂ. 62. 94 ಕೋಟಿ, ಹಾಗೂ ಯಲಬುರ್ಗಾ ತಾಲ್ಲೂಕಿಗೆ ರೂ. 69. 36 ಕೋಟಿ  ಸಾಲ ವಿತರಣೆಗೆ ಯೋಜನೆ ಹಮ್ಮಿಕೊಳ್ಳಲಾಗಿದೆ.

ಕೃಷಿ ಕ್ಷೇತ್ರಕ್ಕೆ ಕೊಪ್ಪಳ ತಾಲೂಕಿಗೆ 127. 47 ಕೋಟಿ, ಗಂಗಾವತಿ- 413. 81 ಕೋಟಿ, ಕುಷ್ಟಗಿ- 46. 05 ಕೋಟಿ, ಯಲಬುರ್ಗಾ ತಾಲ್ಲೂಕಿಗೆ ರೂ. 51. 67 ಕೋಟಿಗಳನ್ನು ನಿಗದಿಪಡಿಸಲಾಗಿದೆ.  ಸಣ್ಣ ಮತ್ತು ಮಧ್ಯಮ ಉದ್ಯಮ/ಕೈಗಾರಿಕೆ ಕ್ಷೇತ್ರಕ್ಕೆ ಕೊಪ್ಪಳ ತಾಲ್ಲೂಕಿಗೆ 70. 34 ಕೋಟಿ, ಗಂಗಾವತಿ- 31. 92 ಕೋಟಿ, ಕುಷ್ಟಗಿ- 2. 32 ಕೋಟಿ ಮತ್ತು ಯಲಬುರ್ಗಾ ತಾಲೂಕಿಗೆ ರೂ. 2. 44 ಕೋಟಿ  ಸಾಲ ಯೋಜನೆಗೆ ಮೊತ್ತ ನಿಗದಿಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಎಸ್.ಬಿ.ಎಚ್.ನ ಗುಲ್ಬರ್ಗ ವಲಯದ ಡೆಪ್ಯುಟಿ ಜೆನರಲ್ ಮ್ಯಾನೇಜರ್ ಎಲ್.ವಿ. ರವೀಂದ್ರಕುಮಾರ್, ಎಸ್.ಬಿ.ಹೆಚ್. ಬಳ್ಳಾರಿಯ ಎ.ಜಿ.ಎಂ. ವೆಂಕಟೇಶ್ವರರಾವ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರಿನ ಮ್ಯಾನೇಜರ್ ಆನಂದಬಾಬು, ನಬಾರ್ಡ್ ಬೆಂಗಳೂರಿನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಎಸ್.ಎಲ್. ಯೋಗೇಶ್, ಕೊಪ್ಪಳ ಎಸ್.ಬಿ.ಎಚ್. ಪ್ರಧಾನ ವ್ಯವಸ್ಥಾಪಕ ಎಂ.ಜೆ. ಭಾಸ್ಮೆ, ಕೊಪ್ಪಳ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ರವೀಂದ್ರ ಮುಂತಾದವರು  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT