ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಸಾರಸ್ವತ ಲೋಕದಲ್ಲಿ ಸಂಭ್ರಮ

Last Updated 7 ಫೆಬ್ರುವರಿ 2011, 10:00 IST
ಅಕ್ಷರ ಗಾತ್ರ

ಕೊಪ್ಪಳ: ಎರಡು ದಶಕಗಳ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ-ಕನ್ನಡದ ತೇರನ್ನು ಎಳೆಯುವ ಸೌಭಾಗ್ಯ ಒಲಿದು ಬಂದಿರುವುದು ಜಿಲ್ಲೆಯ ಸಾರಸ್ವತ ಲೋಕದಲ್ಲಿ ಹರ್ಷ ಮೂಡಿಸಿದೆ.

ಬೆಂಗಳೂರಿನಲ್ಲಿ ನಡೆದಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಹು ಚರ್ಚೆಯ ನಂತರ ಈ ಬಗ್ಗೆ ನಿರ್ಣಯ ಹೊರಬಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಹಿತಿಗಳು, ಸಾಹಿತ್ಯ ಪ್ರೇಮಿಗಳು ಹಾಗೂ ರಾಜಕೀಯ ರಂಗದ ಗಣ್ಯರು ವಿಜಯದ ನಗೆ ಬೀರಿದ್ದಾರೆ. ಗಂಗಾವತಿಯಲ್ಲಿ ಭಾನುವಾರ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

22 ವರ್ಷಗಳ ಹಿಂದೆ ಯಾವ ದಿನಗಳಂದು ಕೊಪ್ಪಳ ನಗರದಲ್ಲಿ 62ನೇ ಸಾಹಿತ್ಯ ಸಮ್ಮೇಳನ ನಡೆದಿತ್ತೋ, ಅದೇ ದಿನದಂದು 78ನೇ ಸಾಹಿತ್ಯ ಸಮ್ಮೇಳನ ಕೊಪ್ಪಳ ಜಿಲ್ಲೆಯಲ್ಲಿ ನಡೆಸಬೇಕು ಎಂಬ ಬಗ್ಗೆ ನಿರ್ಣಯ ಹೊರಹೊಮ್ಮಿದ್ದು ಯೋಗಾಯೋಗವೇ ಸರಿ.

ವ್ಯತ್ಯಾಸ ಇಷ್ಟೇ, 62ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಾಗ ಕೊಪ್ಪಳ ಅಭವಿಜಿತ ರಾಯಚೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ ಮಾತ್ರ. ಈಗ ಪ್ರತ್ಯೇಕ ಜಿಲ್ಲೆಯಾದ ನಂತರ ಕೊಪ್ಪಳಕ್ಕೆ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಲಭಿಸಿದ್ದು, ಸಹಜವಾಗಿಯೇ ಜಿಲ್ಲೆಯ ಜನರಲ್ಲಿ ಸಂಚಲನ ಮೂಡಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಶೇಖರಗೌಡ ಮಾಲಿಪಾಟೀಲ ಅವರು, ಆಯ್ಕೆಯಾದ ದಿನದಿಂದಲೇ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಬೇಕು ಎಂಬ ಕನಸು ಕಂಡಿದ್ದರು. ಆ ಕನಸು ಈ ಬಾರಿ ನನಸಾದ ಸಂಭ್ರಮ ಅವರಲ್ಲಿದೆ.

77ನೇ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಅವರು ಭಾನುವಾರ ದೂರವಾಣಿ ಮೂಲಕ ’ಪ್ರಜಾವಾಣಿ’ಯೊಂದಿಗೆ ಮಾತನಾಡಿ ಸಂತಸ ಹಂಚಿಕೊಂಡರಲ್ಲದೇ, 78ನೇ ಸಾಹಿತ್ಯ ಸಮ್ಮೇಳನದ ಆತಿಥ್ಯ ಪಡೆಯಲು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ ಎಂದು ಹೇಳಿದರು.

ವಿಜಯನಗರ ಸಾಮ್ರಾಜ್ಯದ ಐತಿಹ್ಯ ಹೊಂದಿರುವ ಗಂಗಾವತಿಯಲ್ಲಿ ಈ ಸಮ್ಮೇಳನ ನಡೆಯಲಿದ್ದು, ಇತರ ಹಲವಾರು ಕಾರಣಗಳಿಂದಾಗಿ ಗಂಗಾವತಿ ನಗರವೇ ಸೂಕ್ತ ಎಂಬುದಾಗಿ ತೀರ್ಮಾನಿಸಲಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು.

ಸದೃಢ- ಬೆಂಬಲ: ಜಿಲ್ಲೆಯ ರಾಜಕಾರಣ ಕೇಂದ್ರೀಕೃತಗೊಂಡಿರುವುದೇ ಗಂಗಾವತಿ ನಗರದಲ್ಲಿ. ಭತ್ತದ ಕಣಜ ಎಂದೇ ಹೆಸರಾಗಿರುವ ಗಂಗಾವತಿ ಆರ್ಥಿಕವಾಗಿ ಪ್ರಬಲವಾಗಿರುವ ಜಿಲ್ಲೆಯ ಏಕೈಕ ನಗರ. ಸದಾ ಒಂದಿಲ್ಲೊಂದು ಸಾಂಸ್ಕೃತಿಕ-ಸಾಹಿತ್ಯಿಕ ಚಟುವಟಿಕೆಗೆ ಸಾಕ್ಷಿಯಾಗುವ ಈ ನಗರ ಸಾಹಿತ್ಯ ಸಮ್ಮೇಳನದಂತಹ ಬೃಹತ್ ಕಾರ್ಯಕ್ರಮ ಆಯೋಜನೆಗೆ ಪ್ರಶಸ್ತವಾದ ಸ್ಥಳ ಎಂಬ ಸರ್ವಸಮ್ಮತವಾದ ಅಭಿಪ್ರಾಯ ಸಹ ಜಿಲ್ಲೆಯಲ್ಲಿ ವ್ಯಕ್ತವಾಗಿದೆ.

20 ವರ್ಷಗಳ ಹಿಂದೆ ಸಮ್ಮೇಳನ ಆಯೋಜನೆಗೂ, ಈಗ ಸಂಘಟಿಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಈ ಹಿನ್ನೆಲೆಯಲ್ಲಿ ಗಂಗಾವತಿಯೇ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದೂ ಶೇಖರಗೌಡ ಮಾಲಿಪಾಟೀಲ ಹೇಳುತ್ತಾರೆ.

ಸಮ್ಮೇಳನ ನಡೆಸಲು ಸ್ಥಳ, ಆರ್ಥಿಕ ಸಹಾಯ, ದವಸ- ಧಾನ್ಯದಿಂದ ಹಿಡಿದು ಎಲ್ಲ ರೀತಿಯ ಸಹಕಾರ ಹೊಂದುವಲ್ಲಿ ಜಿಲ್ಲೆಯ ಇತರ ಪಟ್ಟಣಗಳಿಗೆ ಹೋಲಿಸಿದಲ್ಲಿ ಗಂಗಾವತಿಯಲ್ಲಿ ಕಷ್ಟವಾಗದು. ಸಮ್ಮೇಳನ ಸಂದರ್ಭದಲ್ಲಿ ವಸತಿ ವ್ಯವಸ್ಥೆ, ವಿವಿಧ ಗೋಷ್ಠಿಗಳಿಗೆ ಸ್ಥಳಾವಕಾಶವೂ ಇದೆ ಎಂಬ ಅಭಿಪ್ರಾಯಗಳು, ಪ್ರತಿಪಾದನೆಗಳು ಸಹ ಈಗ ವ್ಯಕ್ತವಾಗುತ್ತಿವೆ.

ಒಟ್ಟಾರೆ, ಕನ್ನಡ ಸಾರಸ್ವತ ಲೋಕದಲ್ಲಿ ತನ್ನದೇ ಆದ ವೈಶಿಷ್ಟ್ಯ, ಪ್ರಾಮುಖ್ಯ ಹೊಂದಿರುವ ಅಖಿಲ ಭಾರತ 78ನೇ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯಲ್ಲಿ ನಡೆಯುತ್ತಿರುವುದು ಇಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಜನರಲ್ಲಿ ಹೊಸ ಹುಮ್ಮಸ್ಸು ತಂದಿದ್ದು, ಆ ದಿನವನ್ನು ಎದುರು ನೋಡುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT