ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳದ ಬೂದಗುಂಪಾ: ನೆಪವಾಯ್ತು ನೂತನ ಡೇರಿಗೆ ಶಂಕುಸ್ಥಾಪನೆ!

Last Updated 17 ಅಕ್ಟೋಬರ್ 2012, 8:40 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಬೂದಗುಂಪಾ ಗ್ರಾಮದಲ್ಲಿ ಮಂಗಳವಾರ ಜರುಗಿದ ನೂತನ ಕೊಪ್ಪಳ ಡೇರಿ ಉದ್ಘಾಟನಾ ಸಮಾರಂಭ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊಗಳಲೆಂದೇ ಹಮ್ಮಿಕೊಂಡಿದ್ದ ಕಾರ್ಯಕ್ರಮದಂತಿತ್ತು.

ಅಲ್ಲದೇ, ಯಡಿಯೂರಪ್ಪ ನವರು ಈ ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯ ಎಷ್ಟಿದೆ, ಯಾರು ನನ್ನೊಂದಿಗೆ ಬರಬಹುದು ಹಾಗೂ ಜನರ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಅರಿತುಕೊಳ್ಳಲು ಅನುಕೂಲ ಮಾಡಿಕೊಟ್ಟ ವೇದಿಕೆಯೂ ಆಗಿತ್ತು. ಕಾರ್ಯಕ್ರಮ ಪ್ರಾರಂಭಗೊಂಡ ನಂತರ ಭಾಷಣ ಆರಂಭಿಸಿದ ಶಾಸಕ ಪರಣ್ಣ ಮುನವಳ್ಳಿ, ಸಹಕಾರ ಸಚಿವ ಬಿ.ಜಿ.ಪುಟ್ಟಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಕೆಎಂಎಫ್ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ, ಶಾಸಕ ಸಂಗಣ್ಣ ಕರಡಿ, ತಮ್ಮ ಮಾತುಗಳನ್ನು ಯಡಿಯೂರಪ್ಪ ಅವರನ್ನು ಹೊಗಳಲು ಮೀಸಲಿಟ್ಟರು.
ಅವರ ಅವಧಿಯಲ್ಲಿ ಕೈಗೊಂಡ ಕಾಮಗಾರಿಗಳು, ಜಾರಿಗೆ ತಂದ ಯೋಜನೆಗಳು ಹಾಗೂ ಬಿಡುಗಡೆಯಾದ ಅನುದಾನದ ಬಗ್ಗೆಯೇ ಹೊಗಳಿ ಮಾತನಾಡಿದರು.

ಜಿ.ಸೋಮಶೇಖರ ರೆಡ್ಡಿ ಅವರಂತೂ `ಹಿಂದಿನ ಮತ್ತು ಮುಂದಿನ ಮುಖ್ಯಮಂತ್ರಿಯಾದ ಯಡಿಯೂರಪ್ಪನವರೇ~ ಎಂದೇ ಮಾತು ಆರಂಭಿಸಿದರು. ಮುಂದಿನ ಚುನಾವಣೆ ನಂತರ ಯಡಿಯೂರಪ್ಪ ಅವರೇ ಈ ರಾಜ್ಯದ ಮುಖ್ಯಮಂತ್ರಿಯಾಗುವರು. ಹೀಗಾಗಿ ಅವರನ್ನು `ಮುಂದಿನ ಮುಖ್ಯಮಂತ್ರಿಗಳು~ ಎಂಬುದಾಗಿಯೇ ಸಂಬೋಧಿಸುತ್ತಿರುವುದಾಗಿ ಸಮಜಾಯಿಷಿಯನ್ನೂ ನೀಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ಅವರಿಂದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿಸುವ ಮೂಲಕ ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು.
 
ಕೃಷ್ಣಾ ಬಿ ಸ್ಕೀಂ ನಡಿ ಲಭ್ಯವಾಗುವ ನೀರನ್ನು ಬಳಸಿ ಜಿಲ್ಲೆಯ ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಅಗತ್ಯವಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಮನ ಹರಿಸಿ, ಬೇಡಿಕೆ ಈಡೇರಿಸಲು ಪ್ರಯತ್ನಿಸಬೇಕು ಎಂದು ಶಾಸಕ ಸಂಗಣ್ಣ ಕರಡಿ ಮನವಿ ಮಾಡಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನೂತನ ಡೇರಿಗೆ ಶಂಕುಸ್ಥಾಪನೆಯಲ್ಲದೇ, ಮೇವು ಸಾಂದ್ರೀಕರಣ ಘಟಕ, ಎನ್‌ಸಿಡಿಸಿ ಆರ್ಥಿಕ ನೆರವಿನ ಸಂಘಗಳ ಕಟ್ಟಡ, ಜಿಲ್ಲಾ ಪಂಚಾಯಿತಿ ಅನುದಾನದ ಸಂಘಗಳ ಕಟ್ಟಡಗಳೂ, ಕೆಎಂಎಫ್ ಅನುದಾನದ ಸಂಘಗಳ ಕಟ್ಟಡ ಹಾಗೂ ಗಂಗಾವತಿ ಉಪಕಚೇರಿಯ ಕಟ್ಟಡಕ್ಕೆ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.

ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ತುಂಗಭದ್ರಾ ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಕಂದಕೂರಪ್ಪ, ಸದಸ್ಯ ಜನಾರ್ದನ ಹುಲಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷ ಬಸವರಾಜ ಪೆದ್ದಲ ಉಪಸ್ಥಿತರಿದ್ದರು. ರಾಯಚೂರು,ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಎಂ.ಸತ್ಯನಾರಾಯಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT