ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳದಲ್ಲಿ ರೈತರ ಮೇಲೆ ಲಾಠಿ ಪ್ರಹಾರಕ್ಕೆ ಖಂಡನೆ

Last Updated 26 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊಪ್ಪಳದಲ್ಲಿ ರೈತರ ಮೇಲೆ ಪೊಲೀಸರ ಲಾಠಿ ಪ್ರಹಾರ ಖಂಡಿಸಿ ನಗರದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಾರುಕೋಲು ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೂಲಿ ಕೇಳಲು ಹೋದ ರೈತರು, ಕಾರ್ಮಿಕರು ಮತ್ತು ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವುದು ಎಷ್ಟು ಸಮಂಜಸ ಎಂದು ಬಾರುಕೋಲು ಬೀಸಿ ಪ್ರಶ್ನಿಸಿದರು.

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ 2009-10ನೇ ಸಾಲಿನಲ್ಲಿ ಮಾಡಿದ ಕೆಲಸಕ್ಕೆ ಕೂಲಿ ಪಾವತಿಸುವಂತೆ ಮಾರ್ಚ್ 22ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಸ್ಪಂದಿಸದಿದ್ದಾಗ ಅನಿವಾರ್ಯವಾಗಿ ಕೂಲಿ ಕಾರ್ಮಿಕರು ಶುಕ್ರವಾರ ಹೋರಾಟ ತೀವ್ರಗೊಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಮನಬಂದಂತೆ ಲಾಠಿ ಬೀಸಿರುವುದು ಖಂಡನೀಯ ಎಂದರು. ಘಟನೆಯಲ್ಲಿ ರೈತರನ್ನು ಬೂಟುಕಾಲಿನಿಂದ ಒದ್ದಿದ್ದಲ್ಲದೇ ಮಹಿಳೆಯರನ್ನು ಎಳೆದಾಡಿದ ಪೊಲೀಸರು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸುವ ಸೌಜನ್ಯವನ್ನೂ ತೋರಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಬಸವರಾಜಪ್ಪ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಇಂತಹ ಘಟನೆಗಳು ನಡೆಯುತ್ತಲೇ ಇವೆ ಎಂದರು. ಲಾಠಿ ಪ್ರಹಾರ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಕೂಲಿ ಹಣ ತಕ್ಷಣ ಪಾವತಿಸಬೇಕು. ರೈತರ ಮೇಲೆ ಹಾಕಿರುವ ಮೊಕದ್ದಮೆ ಹಿಂಪಡೆಯಬೇಕು ಎಂದು ಒತ್ತಾಯಿಸಿ, ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ಕಡಿದಾಳು ಶಾಮಣ್ಣ, ವೈ.ಜಿ. ಮಲ್ಲಿಕಾರ್ಜುನ, ಹಿಟ್ಟೂರು ರಾಜು, ಜಿ.ಬಿ. ರವಿ, ಎಸ್. ಶಿವಮೂರ್ತಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT