ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿ ಖರೀದಿಗೆ ನಕಾರ: ರೈತರ ಪ್ರತಿಭಟನೆ

Last Updated 21 ಡಿಸೆಂಬರ್ 2012, 7:52 IST
ಅಕ್ಷರ ಗಾತ್ರ

ಅರಸೀಕೆರೆ: ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿನ ನ್ಯಾಫೆಡ್ ಕೊಬ್ಬರಿ ಖರೀದಿ ಕೇಂದ್ರದ ಅಧಿಕಾರಿಗಳ ವರ್ತನೆ ಖಂಡಿಸಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ನ್ಯಾಫೆಡ್ ಕೊಬ್ಬರಿ ಕೇಂದ್ರಕ್ಕೆ ಕೊಬ್ಬರಿ ಮಾರಾಟ ಮಾಡಲು ತಂದಿದ್ದ ರೈತರ ಕೊಬ್ಬರಿ ಗುಣಮಟ್ಟ ಮತ್ತು ಗಾತ್ರ ಚಿಕ್ಕದಾಗಿದೆ ಎಂಬ ಕಾರಣ ನೀಡಿ ಖರೀದಿ ಕೇಂದ್ರದ ಮೇಲ್ವಿಚಾರಕ ರಾಜು ಖರೀದಿ ಮಾಡಲು ನಿರಾಕರಿಸಿದ್ದರಿಂದ ರೈತರು ಪ್ರತಿಭಟನೆಗೆ ಮುಂದಾದರು.  

ಇಂಥದ್ದೇ ಕೊಬ್ಬರಿಯನ್ನು ಸ್ಥಳೀಯ ವರ್ತಕರು ಇಂದು ಬೆಳಿಗ್ಗೆಯಿಂದ  ಖರೀದಿ ಕೇಂದ್ರದಲ್ಲಿಯೇ ಮಾರಾಟ ಮಾಡುತ್ತಿದ್ದರೂ, ಅವರ ಕೊಬ್ಬರಿಯನ್ನು ಖರೀದಿಸುತ್ತಿದ್ದಾರೆ. ಆದರೆ ರೈತರ ಕೊಬ್ಬರಿಯನ್ನು ಮಾತ್ರ ತಿರಸ್ಕರಿಸುತ್ತಾರೆ ಎಂದು ಅಧಿಕಾರಿಗಳ ನೀತಿ ಮತ್ತು ತಾರತಮ್ಯದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಥಳಕ್ಕೆ ಆಗಮಿಸಿ ಬೆಂಗಳೂರಿನಲ್ಲಿರುವ ಸಹಕಾರ ಮಹಾ ಮಂಡಳದ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು. ನಂತರ ಹೋಳು ಹಾಗೂ ಕೌಟು ಕೊಬ್ಬರಿ ಹೊರತುಪಡಿಸಿ ಉತ್ತಮ ಗುಣಮಟ್ಟದ ಹಾಗೂ ಗಾತ್ರದಲ್ಲಿ ಚಿಕ್ಕದಾಗಿದ್ದ ಕೊಬ್ಬರಿಯನ್ನು ಖರೀದಿಸುವಂತೆ ಸೂಚಿಸಿದ ಬಳಿಕ ಕೊಬ್ಬರಿ ಖರೀದಿ ಪುನರಾರಂಭಗೊಂಡಿತು.

`ಮಳೆ ಇಲ್ಲದೆ ಕೊಬ್ಬರಿ ಗಾತ್ರ ಮತ್ತು ಇಳುವರಿ ಪ್ರಮಾಣ ಕಡಿಮೆಯಾಗಿದೆ. ನ್ಯಾಪೆಡ್ ಅಧಿಕಾರಿಗಳು ಸಹ ರೈತರ ಕಷ್ಟ ಅರಿತು ಅವರೊಡನೆ ಸ್ಪಂದಿಸಬೇಕು' ಎಂದು ಶಾಸಕರು ಮನವಿ ಮಾಡಿದರು.

ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿ 5150 ರೂಪಾಯಿ ಇದ್ದರೆ ನ್ಯಾಫೆಡ್ ಖರೀದಿ ಕೇಂದ್ರದಲ್ಲಿ ಕೊಬ್ಬರಿ ಬೆಂಬಲ ಬೆಲೆ 5350 ರೂಪಾಯಿ ಇದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT