ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ ಬಂದ್ ಸಂಪೂರ್ಣ ಯಶಸ್ವಿ

Last Updated 24 ಸೆಪ್ಟೆಂಬರ್ 2011, 9:20 IST
ಅಕ್ಷರ ಗಾತ್ರ

ಕೊರಟಗೆರೆ: ತುಮಕೂರು- ಮಧುಗಿರಿ ರಸ್ತೆ ಕಾಮಗಾರಿ ಪ್ರಾರಂಭಿಸುವಂತೆ ಒತ್ತಾಯಿಸಿ ಕೊರಟಗೆರೆ ನಾಗರಿಕ ಹಿತರಕ್ಷಣಾ ವೇದಿಕೆ ಶುಕ್ರವಾರ ಕರೆ ನೀಡಲಾಗಿದ್ದ ಅನಿರ್ದಿಷ್ಟಾವಧಿ ರಸ್ತೆ ಚಳುವಳಿ ಹಾಗೂ ಕೊರಟಗೆರೆ ಬಂದ್ ಸಂಪೂರ್ಣ ಯಶಸ್ವಿಯಾಗಿ ನಡೆಯಿತು.

ಶುಕ್ರವಾರ ಬೆಳ್ಳಿಗ್ಗೆ 8ರಿಂದಲೇ ಪಟ್ಟಣದಾದ್ಯಂತ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತ ಪಡಿಸಿದ್ದರು. ತುಮಕೂರು- ಮಧುಗಿರಿ ರಸ್ತೆ ವ್ಯಾಪ್ತಿಗೆ ಬರುವ ಬೆಳಧರ, ಎಂ.ಗೊಲ್ಲಹಳ್ಳಿ, ಅಜ್ಜಿಹಳ್ಳಿ, ಥರಟಿ, ಅಗ್ರಹಾರ, ಜಂಪೇನಹಳ್ಳಿ ಕ್ರಾಸ್, ತುಂಬಾಡಿ ಗ್ರಾಮಗಳಲ್ಲಿಯೂ ಸಾರ್ವಜನಿಕರು ಬೆಳಗಿನಿಂದ ಸಂಜೆವರೆಗೂ ಸಂಪೂರ್ಣ ಬಂದ್ ಹಾಗೂ ರಸ್ತೆತಡೆ ನಡೆಸಿದರು.

ಪಟ್ಟಣದಲ್ಲಿ ಮುಖ್ಯರಸ್ತೆಯ ಅಲ್ಲಲ್ಲಿ ರಸ್ತೆ ಮಧ್ಯೆ ಟೈರ್‌ಗಳಿಗೆ ಬೆಂಕಿ ಹಚ್ಚಿದ್ದರು. ರಸ್ತೆಯಲ್ಲಿ ಅಡುಗೆ ಮಾಡಿ ಊಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಬಂದ್ ತೀವ್ರತೆ ಎಷ್ಟಿತ್ತೆಂದರೆ ದ್ವಿಚಕ್ರ ಸವಾರರು ಕೂಡ ಓಡಾಡಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಬೆಳಗಿನಿಂದಲೇ ಬಸ್ ಸಂಚಾರ ಇಲ್ಲದ ಕಾರಣ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು.

ಔಷಧಿ ಅಂಗಡಿ, ಕ್ಲಿನಿಕ್, ಆಸ್ಪತ್ರೆ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಸದಾ ಜನಜಂಗುಳಿಯಿಂದ ಬಣಗುಡುತ್ತಿದ್ದ ಪಟ್ಟಣದ ಮುಖ್ಯರಸ್ತೆ ನೀರಸ ಮೌನದಿಂದ ಕೂಡಿತ್ತು. ಚಿಣ್ಣರು, ಯುವಕರು ರಸ್ತೆ ಮಧ್ಯದಲ್ಲಿಯೇ ಕ್ರಿಕೇಟ್ ಆಡಿದರು. 

ಕನಿಷ್ಟ ಆಟೊ, ದ್ವಿಚಕ್ರ ವಾಹನ ಸಂಚಾರವೂ ಇಲ್ಲದೆ ಸರ್ಕಾರಿ ನೌಕರರು, ಶಿಕ್ಷಕರು, ಉಪನ್ಯಾಸಕರು ತಮ್ಮ ಕೆಲಸಕ್ಕೆ ತೆರಳಲು ಸಾಹಸ ಪಡುವಂತಾಯಿತು. ಕೆಲವರು ನಡೆದುಕೊಂಡೆ ತಮ್ಮ ಊರುಗಳನ್ನು ಸೇರಬೇಕಾಯಿತು.

ರಸ್ತೆ ತಡೆ ಚಳವಳಿ ನಡೆಸುತ್ತಿದ್ದ ಸ್ಥಳಕ್ಕೆ ತಹಶೀಲ್ದಾರ್ ಬಿ.ಆಂಜನೇಯಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ದೊಡ್ಡಪ್ಪ ಭೇಟಿ ನೀಡಿ ಸಾರ್ವಜನಿಕರ ಮನಃ ಒಲಿಸಲು ಮುಂದಾದರಾದರೂ ಇದಕ್ಕೆ ಜಗ್ಗದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ, ಸಂಬಂಧಿಸಿದ ಇಲಾಖೆ ಅಧಿಕಾರಿ ಹಾಗೂ ಉಸ್ತುವಾರಿ ಸಚಿವರು ಸ್ಥಳಕ್ಕಾಗಮಿಸಿ ಕೂಡಲೇ ರಸ್ತೆ ಕಾಮಗಾರಿ ಪ್ರಾರಂಭಿಸುವ ತನಕ ಚಳವಳಿ ಹಿಂಪಡೆಯುವುದಿಲ್ಲ ಎಂದು ಹಠ ಹಿಡಿದರು.

ಹಳ್ಳಿಗಳಲ್ಲಿ ಸಂಜೆ ವೇಳೆಗೆ ಬಂದ್ ಸಡಿಲಗೊಂಡರೂ, ಪಟ್ಟಣದಲ್ಲಿ ಸಂಜೆ 7 ಗಂಟೆಯಾದರೂ ಬಂದ್ ಹಾಗೂ ರಸ್ತೆ ಚಳವಳಿ  ತೀವ್ರ ಸ್ವರೂಪದಲ್ಲಿತ್ತು. ಸಂಬಂಧ ಪಟ್ಟವರು ಸ್ಥಳಕ್ಕಾಗಮಿಸುವವರೆಗೂ ಚಳವಳಿ ಮುಂದುವರೆಸುವುದಾಗಿ ನಾಗರಿಕರು ಪಟ್ಟು ಬಿಡದೆ ರಸ್ತೆ ಮಧ್ಯೆ ಟೆಂಟ್ ಹಾಕಿ ಕುಳಿತಿದ್ದರು.

ಡಿಸಿ ಭರವಸೆ: ಚಳವಳಿ ಸ್ಥಗಿತ
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಸಿ. ಸೋಮಶೇಖರ್ ಭೇಟಿ ನೀಡಿ ಎರಡು ತಿಂಗಳ ಒಳಗಾಗಿ ಪಾವಗಡ- ತುಮಕೂರು ರಸ್ತೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದ ನಂತರ ನಾಗರಿಕರು ಚಳವಳಿಯನ್ನು ರಾತ್ರಿ 8 ಗಂಟೆಗೆ ಕೈ ಬಿಟ್ಟರು.

ಕೆಶಿಪ್‌ನ ಹಾಗೂ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಜತೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಕೊರಟಗೆರೆ ಪಟ್ಟಣ ವಲಯದ ಜಂಪೇನಹಳ್ಳಿಯಿಂದ ಕೋರ್ಟ್ ವರೆಗಿನ ರಸ್ತೆ ಕಾಮಗಾರಿ 8.75 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಮೋದನೆ ಸಿಕ್ಕಿದೆ.

ಟೆಂಡರ್ ಪ್ರಕ್ರಿಯೆ ನಡೆಸಿ ನವೆಂಬರ್ 15ರ ಒಳಗೆ ಕಾಮಗಾರಿ ಆರಂಭಿಸಲಾಗುವುದು. ತುಮಕೂರು-ಪಾವಗಡ ರಸ್ತೆ ಕಾಮಗಾರಿಯನ್ನು ಡಿಸೆಂಬರ್ 1ರ ಒಳಗಾಗಿ ಆರಂಭಿಸಲು ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ ನಂತರ ನಾಗರಿಕರು ಚಳವಳಿ ಹಿಂಪಡೆದರು.

ಎಸ್ಪಿ ಸುರೇಶ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ದೊಡ್ಡಪ್ಪ, ತಹಶೀಲ್ದಾರ್ ಬಿ.ಆಂಜನೇಯಶೆಟ್ಟಿ, ಇನ್ಸ್ ಪೆಕ್ಟರ್ ಕೆ.ಆರ್.ಚಂದ್ರಶೇಖರ್, ಎಇಇ ವಾಸುದೇವನ್ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT