ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಳ ಕಾಗದಮಾಲೆ

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುತ್ತಿನ ಮಾಲೆಯಂತೆ ಕಾಣುತ್ತಿದ್ದ ಸರವನ್ನು ಮುಟ್ಟಿದಾಗ, ಮುತ್ತಲ್ಲ, ಬಟ್ಟೆಯೂ ಅಲ್ಲ, ಟೆರ್ರಾಕೋಟ ಸಹ ಅಲ್ಲ... ಹಾಗಾದರೆ ಏನು ಎಂಬುದರ ಎಳೆ ಹಿಡಿದು ಹೋದವರಿಗೆ ಅಚ್ಚರಿ ಕಾದಿತ್ತು. ಅದು ಕಾಗದದ ನಗ. ಕಣ್ಣರಳಿಸಿ ಕೇಳಿದಾಗ, ಉತ್ತರಿಸಿದ್ದು ಕಾಗದವನ್ನು ಆಭರಣವಾಗಿ ಅರಳಿಸಿದ ಪುಷ್ಪಾ.

ಜೊತೆಗೆ ಇನ್ನಷ್ಟು ಸರಗಳನ್ನು ಟೇಬಲ್‌ ಮೇಲೆ ಹರಡಿದ್ದರು. ಹರವಿದರು. ಎಲ್ಲವನ್ನೂ ನೋಡುವಾಗಲೂ ಒಂದು ಸಣ್ಣ ಶಂಕೆ, ಇದು ಪೇಪರ್‌ ಸರವೇ? ಅದವರ ಕೌಶಲವನ್ನು ಮೆಚ್ಚುವ ಪ್ರಶ್ನೆಯಾಗಿದ್ದೂ ಹೌದು. ಪುಷ್ಪಾ ಉಡುಪಿ ಮೂಲದವರು. ಬೆಂಗಳೂರಿನಲ್ಲೀಗ ವಾಸ. ಹವ್ಯಾಸವೊಂದು ವೃತ್ತಿಯಾದ ಬಗೆ ತಿಳಿಸುವುದು ಹೀಗೆ.

‘ಪತಿ ಕೆಲಸಕ್ಕೆ, ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಒಂದು ದಿನ ಟೂತ್‌ಪಿಕ್‌ ಒಂದು ಕೈಗೆ ಸಿಕ್ಕಿತ್ತು. ಜೊತೆಗೆ ಸ್ವಲ್ಪ ಕಾಗದವೂ ಕಂಡಿತು. ಟೂಥ್‌ಪಿಕ್‌ಗೆ ಪೇಪರ್‌ ತುಂಡನ್ನು ಸುತ್ತಲಾರಂಭಿಸಿದೆ. ಕೊನೆಗದು ಮುತ್ತಿನಂತೆ, ಮಣಿಯಂತೆ ಕಾಣತೊಡಗಿತು. ಅಷ್ಟನ್ನೇ ಕೈಯಲ್ಲಿ ಹಿಡಿದರೆ ಪದಕದಂತೆ ಕಾಣಿಸುತ್ತಿತ್ತು. ಒಂದಿಡೀ ದಿನ ಎಲ್ಲ ಸಾಧ್ಯತೆಗಳನ್ನು ಪ್ರಯತ್ನಿಸಿದೆ.

ನಂತರ ‘ಗೂಗಲ್‌’ನಲ್ಲಿ ಹುಡುಕಾಟ ನಡೆಸಿದೆ. ಪೇಪರ್‌ ಆಭರಣಗಳ ಬಗ್ಗೆ ಮಾಹಿತಿ ಕಲೆಹಾಕಿದೆ. ನಂತರ ನಿರಂತರ ಅಭ್ಯಾಸ.  ಒಂದೊಂದೇ ಆಕಾರ ಪಡೆಯುತ್ತಿದ್ದಂತೆ ಹಟವೊಂದು ಹವ್ಯಾಸವಾಗಿತ್ತು. ಬೇಡಿಕೆ ಹೆಚ್ಚಿದಂತೆ ಹವ್ಯಾಸ ವೃತ್ತಿಯಾಯಿತು’ ಎನ್ನುತ್ತಾರೆ ಅವರು. 

ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು, ಆ ಸಾಧನೆಗೆ ಪೂರಕವಾದ ವಾತಾವರಣವನ್ನು ನಾವೇ ಸೃಷ್ಟಿಸಿಕೊಳ್ಳಬೇಕು ಎಂಬುದು ಇವರ ಪಾಲಿಸಿ. ‘ಆರಂಭದಲ್ಲಿ ಕಠಿಣವೆನಿಸಿತ್ತು. ಬಂಡವಾಳ ಕಡಿಮೆ ಇದ್ದರೂ ಸಮಯ ಮತ್ತು ಸಂಯಮವನ್ನು ಹೆಚ್ಚು ಬೇಡುವ ಕಲೆ ಇದು. ಟೂಥ್‌ಪಿಕ್‌ಗೆ ಪೇಪರ್‌ ಸುತ್ತಿದಾಗ ಜಾರುತ್ತಿತ್ತು. ಫೆವಿಕಾಲ್ ಅಂಟಿಸಿದರೂ ಸರಿಯಾದ ವಿನ್ಯಾಸ ಬರುತ್ತಿರಲಿಲ್ಲ.

ಹೊಸ ಹೊಸ ಆಕಾರ ನೀಡುವುದು ಕಷ್ಟವಾಗುತ್ತಿತ್ತು. ಆದರೂ ಕಲಿಯಬೇಕು ಎಂಬ ಛಲ ಬಿಡಲಿಲ್ಲ. ನನ್ನಿಂದ ಆಗಲ್ಲ ಎನ್ನುವುದಕ್ಕಿಂತ ಯಾಕೆ ಆಗಲ್ಲ ಎಂಬ ಪ್ರಶ್ನೆಯೇ ಹೆಚ್ಚಾಗಿ ಕಾಡಿದ್ದು. ಪರಿಣಾಮ ಪೇಪರ್‌ ಆಭರಣಗಳು ಅರಳಲಾರಂಭಿಸಿದ್ದವು’ ಎಂದು ವಿವರಿಸುತ್ತಾರೆ ಪುಷ್ಪಾ.

ಹಗುರವಾದ, ವಿವಿಧ ವರ್ಣವಿನ್ಯಾಸಗಳಲ್ಲಿ ದೊರೆಯುವ ಈ ಆಭರಣಗಳನ್ನು ಮೊದಲು ಸಂಬಂಧಿಕರಿಗೆ ಸ್ನೇಹಿತೆಯರಿಗೆ ಕೊಡುಗೆಯಾಗಿ ನೀಡಲು ಮಾತ್ರ ಬಳಸುತ್ತಿದ್ದರು. ಅವರು ಧರಿಸಿದಾಗ ಮೆಚ್ಚಿದವರಿಂದ ಬೇಡಿಕೆ ಆರಂಭವಾಯಿತು. ಆಗಷ್ಟೇ ಮಾರಾಟವನ್ನು ಆರಂಭಿಸಿದ್ದು. ಇದೀಗ ವ್ಯಾಪಾರವಾಗಿ ಬೆಳೆಯುತ್ತಿದೆ. ಹೆಚ್ಚು ಬೇಡಿಕೆಯೂ ಇದೆ. 

‘ಸರಗಳೊಂದಿಗೆ  ಕಿವಿಯೋಲೆ, ಬ್ರೇಸ್‌ಲೆಟ್‌ಗಳನ್ನು ಮಾಡುತ್ತೇನೆ. ಉಡುಗೊರೆ ಸುತ್ತಲು ಬಳಸುವ ಪೇಪರ್‌, ಇತರ ಯಾವುದೇ ಕಾಗದವನ್ನು ಬಳಸಿ ಆಭರಣ ಮಾಡಬಹುದು. ಅಗತ್ಯವಿದ್ದಲ್ಲಿ ಬಣ್ಣಗಳನ್ನು ಬಳಸಬಹುದು. ಸಮಯ, ಸಂಯಮ, ವಿನ್ಯಾಸಗಳನ್ನು ರೂಪಿಸುವಷ್ಟು ಸೃಜನಶೀಲ ಮನಸು ನಿಮಗಿದ್ದರೆ ಈ ಕಲೆಯನ್ನು ಕಲಿಯಬಹುದು ಎಂಬುದು ಪುಷ್ಪಾ ಅಭಿಪ್ರಾಯ. 

ಇವರ ಕೆಲಸಕ್ಕೆ ಪತಿ ಕೂಡ ಕೈಜೋಡಿಸಿದ್ದಾರೆ. ಇವರು ವಿನ್ಯಾಸ ಮಾಡುತ್ತಿದ್ದರೆ, ಇವರ ಪತಿ ಅದನ್ನು ಪ್ಯಾಕ್‌ ಮಾಡಲು ಸಹಾಯ ಮಾಡುತ್ತಾರೆ. ನೆರೆಯವರು ಬಂದು ತಮ್ಮ ಸೀರೆಗಳನ್ನು ಕೊಟ್ಟು ಅದರ ಬಣ್ಣಕ್ಕೆ ತಕ್ಕ ಆಭರಣಗಳನ್ನು ವಿನ್ಯಾಸ ಮಾಡಿಕೊಡುವಂತೆ ಕೇಳುತ್ತಾರಂತೆ. ‘ಹಣಕ್ಕಾಗಿ ಅಲ್ಲ ಹವ್ಯಾಸಕ್ಕಾಗಿ ಮಾಡಿದೆ. ಈಗ ಅದರಲ್ಲಿ ಹಣವೂ ಸಿಗುತ್ತಿದೆ. ನಾನು ತುಂಬಾ ಬೆಲೆ ಹೇಳುವುದಿಲ್ಲ. ನಷ್ಟಮಾಡಿಕೊಳ್ಳದೆ ಬಂದವರಿಗೆ ಇಷ್ಟವಾಗುವ ರೀತಿ ಮಾಡಿಕೊಡುತ್ತೇನೆ’ ಎನ್ನುತ್ತಾರೆ ಪುಷ್ಪಾ.

ಸರಕ್ಕೆ ತಕ್ಕ ಕೆಲವು ಮಣಿಗಳನ್ನು ಹೊರಗಿನಿಂದ ತರುತ್ತಾರೆ. ಅವುಗಳ ಮಧ್ಯೆ ಪೇಪರ್‌ನಿಂದ ಮಾಡಿದ ಮಣಿಗಳನ್ನು ಸೇರಿಸಿ ಸುಂದರವಾದ ಹಾರ ರೂಪಿಸುತ್ತಾರೆ. ಒಂದು ಸರ ಮಾಡುವುದಕ್ಕೆ ಮೂರ್ನಾಲ್ಕು ದಿನಗಳ ಅವಶ್ಯಕತೆಯಿದೆ. ಸರಿಯಾದ ರೀತಿಯಲ್ಲಿ ಬಣ್ಣವನ್ನು ಹಾಕುವುದರಿಂದ ಮೈ ಬೆವರಿದರೂ ಬಣ್ಣ ಮಾಸುವುದಿಲ್ಲ. ಜತೆಗೆ ಈ ಆಭರಣಗಳು ಪರಿಸರ ಸ್ನೇಹಿ.

ತಾವು ಕಲಿತ ವಿದ್ಯೆ ತನ್ನಲ್ಲಿಯೇ ಇದ್ದರೆ ಏನೂ ಪ್ರಯೋಜನವಿಲ್ಲ, ನಾಲ್ಕು ಜನರಿಗೆ ಅದನ್ನು ಹಂಚಬೇಕು ಎಂಬ ಕನಸು ಕಟ್ಟಿಕೊಂಡಿದ್ದಾರೆ ಪುಷ್ಪಾ. ಅವರ ಸಂಪರ್ಕ ಸಂಖ್ಯೆ: 9980345626.
–ಪವಿತ್ರಾ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT