ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಿಯರ್, ಮನಿ ಆರ್ಡರ್ ಮೇಲೂ ನಿಗಾ

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬಳ್ಳಾರಿ: ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಏನೆಲ್ಲ ಕ್ರಮಗಳನ್ನು ಕೈಗೊಂಡರೂ, ಕಣದಲ್ಲಿರುವ ಅಭ್ಯರ್ಥಿಗಳು `ರಂಗೋಲಿ ಕೆಳಗೆ ತೂರುತ್ತಾರೆ' ಎಂಬುದನ್ನು ಅರಿತಿರುವ ಚುನಾವಣಾ ಆಯೋಗವು, ಕೊರಿಯರ್ ಮತ್ತು ಅಂಚೆ ಇಲಾಖೆ ಮೂಲಕ ಕಳುಹಿಸುವ ಮನಿ ಆರ್ಡರ್ ಸೇವೆ ಮೇಲೂ ನಿಗಾ ಇರಿಸಲು ನಿರ್ಧರಿಸಿದೆ.

ಮತದಾರರ ಹೆಸರಿನಲ್ಲಿ ಒಂದೇ ವಿಳಾಸದಿಂದ ಏಕರೂಪದಲ್ಲಿ ಬರುವ ಕೊರಿಯರ್ ಪಾರ್ಸಲ್‌ಗಳು, ಅಂಚೆ ಇಲಾಖೆ ಮೂಲಕ ಬರುವ ಮನಿಆರ್ಡರ್‌ಗಳ ಕುರಿತು ವರದಿ ಸಲ್ಲಿಸುವಂತೆ ಪ್ರತಿ ಕೊರಿಯರ್ ಸಂಸ್ಥೆಗಳಿಗೂ ಆಯಾ ಅಂಚೆ ಇಲಾಖೆಗಳ ಮುಖ್ಯಸ್ಥರಿಗೂ ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎ.ಎ. ಬಿಸ್ವಾಸ್ `ಪ್ರಜಾವಾಣಿ'ಗೆ ತಿಳಿಸಿದರು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಅಭ್ಯರ್ಥಿಯೊಬ್ಬರು  ಅಂಚೆ ಇಲಾಖೆಯ ಮನಿಆರ್ಡರ್ ಸೇವೆ ಮೂಲಕ ಹಣ ಕಳುಹಿಸಿ, ಆಮಿಷ ಒಡ್ಡಿರುವ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ  ನೂರಾರು ಸೀರೆಗಳನ್ನು ಮತದಾರರಿಗೆ ಕೊರಿಯರ್ ಮೂಲಕ ಕಳುಹಿಸಿರುವುದನ್ನು ಪತ್ತೆ ಮಾಡಿರುವ ಆಯೋಗ, ರಾಜ್ಯದಾದ್ಯಂತ ಕೊರಿಯರ್ ಸೇವೆ ನೀಡುತ್ತಿರುವ ಸಂಸ್ಥೆಗಳಿಗೂ ಸೂಚನೆ ನೀಡಿದೆ. ಸಂಶಯಾಸ್ಪದವಾಗಿರುವ ಹಾಗೂ ಒಂದೇ ಪ್ರದೇಶದಲ್ಲಿ ವಾಸಿಸುವ ಅನೇಕರಿಗೆ ಪಾರ್ಸಲ್ ಕಳುಹಿಸಿರುವ ಕುರಿತು ವರದಿ ಒಪ್ಪಿಸುವಂತೆ ಆದೇಶಿಸಲಾಗಿದೆ ಎಂದರು.

ಸಗಟು ವ್ಯಾಪಾರಿಗಳಿಗೂ ಸೂಚನೆ: ಸೀರೆ, ಪಂಚೆ, ಎಲೆಕ್ಟ್ರಾನಿಕ್ ವಸ್ತುಗಳು, ಚಿನ್ನ, ಬೆಳ್ಳಿ, ಎಲೆಕ್ಟ್ರಿಕಲ್ ವಸ್ತುಗಳು, ಅಕ್ಕಿ, ಬೇಳೆ, ಸಕ್ಕರೆ ಮತ್ತಿತರ ಆಹಾರ ಧಾನ್ಯಗಳನ್ನು ಸಗಟಾಗಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ದಿನನಿತ್ಯದ ವಹಿವಾಟಿನ ವರದಿ ಸಲ್ಲಿಸಲು ಆದೇಶಿಸಲಾಗಿದೆ. ಪಟ್ಟಣ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಎಲ್ಲ ಸಗಟು ವ್ಯಾಪಾರಿಗಳಿಂದ ಈ ರೀತಿಯ ಮಾಹಿತಿ ಪಡೆಯಲಾಗುತ್ತಿದೆ. ಕಾರಣವಿಲ್ಲದೆ ವ್ಯಕ್ತಿಯೊಬ್ಬರು ಭಾರಿ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿಸಿದ್ದರೆ ಅಂಥವರನ್ನು ವಿಚಾರಣೆಗೆ ಒಳಪಡಿಸಲಾಗುವುದು. ಈ ನಿಟ್ಟಿನಲ್ಲಿ ಗ್ರಾಹಕರ ಸಂಪೂರ್ಣ ಮಾಹಿತಿ ಸಂಗ್ರಹಿಸುವಂತೆ ವರ್ತಕರಿಗೆ ತಿಳಿಸಲಾಗಿದೆ.

ಖಾತೆ ಮೇಲೂ ಕಟ್ಟೆಚ್ಚರ: ಪ್ರತಿ ವ್ಯಕ್ತಿಯ ಬ್ಯಾಂಕ್ ಖಾತೆಗಳು ಮತ್ತು ವಹಿವಾಟಿನ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಯಾವುದೇ ವ್ಯಕ್ತಿ ಬ್ಯಾಂಕ್‌ನಿಂದ ನಿತ್ಯ ರೂ. 1 ಲಕ್ಷಕ್ಕಿಂತ ಅಧಿಕ ಮೊತ್ತದ ವ್ಯವಹಾರ ನಡೆಸಿರುವುದು ತಿಳಿದುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಈಗಾಗಲೇ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಸಂಶಯಾಸ್ಪದ ರೀತಿಯ ವಹಿವಾಟು ನಡೆಸಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.

ಈ ಕುರಿತು  ಶೀಘ್ರವೇ ವರದಿ ಬಹಿರಂಗಪಡಿಸಲಾಗುವುದು ಎಂದರು. ಎಟಿಎಂ ಕೇಂದ್ರಗಳ ಮೂಲಕವೂ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳೊಂದಿಗೆ ನೇರ ಸಂಪರ್ಕದಲ್ಲಿರುವ ಕೆಲವರು ಹಂತಹಂತವಾಗಿ ಗರಿಷ್ಠ ಪ್ರಮಾಣದ ಹಣ ಪಡೆಯುತ್ತಿರುವ ವರದಿಗಳೂ ಬರುತ್ತಿವೆ. ಈ ಬಗ್ಗೆಯೂ ಮಾಹಿತಿ ಸಲ್ಲಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT