ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೆವ ಚಳಿಗೆ ನಡುಗುತಿದೆ ಕೋಲಾರ

Last Updated 20 ಡಿಸೆಂಬರ್ 2013, 6:32 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಈ ಡಿಸೆಂಬರ್ ಮಾಸವು ಅತಿಯಾಗಿ ಕೊರೆವ ಚಳಿಯ ವಾತಾವರಣವನ್ನು ನಿರ್ಮಿಸಿದೆ. ಕೊರೆಯುವ ಚಳಿಗೆ ಜಿಲ್ಲೆಯು ನಡುಗುತಿದೆ. ಜನ ಬೆಚ್ಚನೆಯ ಉಡುಪಿಲ್ಲದೆ ಹೊರಗೆ ಬರಲಾಗದೆ ಚಡಪಡಿಸುತ್ತಿದ್ದಾರೆ. ಬಟ್ಟೆ ಅಂಗಡಿಗಳಲ್ಲಿ ಉಲ್ಲನಿನ ಟೋಪಿ, ಮಫ್ಲರು, ಸ್ವೆಟರುಗಳ ಮಾರಾಟ ಭರದಿಂದ ನಡೆದಿದೆ. ಬೆಳಗಿನ ಜಾವವೇ ಕೂಲಿ ಕೆಲಸಕ್ಕೆ ಹೊರಟವರು ದಾರಿ ಬದಿಯ ಕಡ್ಡಿ ಕಸವನ್ನು ಸೇರಿಸಿ ಬೆಂಕಿ ಹಚ್ಚಿ ಮೈಕೈ ಬಿಸಿ ಮಾಡಿಕೊಳ್ಳುತ್ತಿದ್ದಾರೆ.

ವಯಸ್ಕರಂತೆ ಚಳಿಯನ್ನು ತಾಳಲಾರದೆ ಹಿರಿಯ ನಾಗರಿಕರು ಸಂಕಟ ಅನುಭವಿಸುತ್ತಿದ್ದಾರೆ. ಅವರನ್ನು ನೋಡಿಕೊಳ್ಳುತ್ತಿರುವ ಮನೆಮಂದಿ ಜಾಗ್ರತೆ ವಹಿಸುತ್ತಿದ್ದಾರೆ. ಮಕ್ಕಳನ್ನು ಬೆಚ್ಚನೆ ಉಡುಪಿಲ್ಲದೆ ಶಾಲೆಗಳಿಗೆ ಪೋಷಕರು ಕಳಿಸುತ್ತಿಲ್ಲ.

ಚಳಿ ಹೀಗೇ ಮುಂದುವರಿದರೆ ಮಾವು ಹೂ ಬಿಡುವುದಿಲ್ಲ ಎಂಬ ಆತಂಕದಲ್ಲಿ ಜಿಲ್ಲೆಯ ಮಾವಿನ ಮಡಿಲಾದ ಶ್ರೀನಿವಾಸಪುರ ಬೆಳೆಗಾರರಿದ್ದಾರೆ. ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಹೆಚ್ಚಾಗಿ ತಗುಲುವ ಸಾಧ್ಯತೆಯೂ ಇರುವುದರಿಂದ ಮುಳಬಾಗಲಿನ ಹೆಚ್ಚಿನ ರೈತರು ಆತಂಕದಲ್ಲಿದ್ದಾರೆ. ಪ್ರಸ್ತುತ ಹವಾಮಾನದಲ್ಲಿ 12 ಡಿಗ್ರಿ ಸೆಲ್ಸಿಯಷ್ಟಿರುವ ತೇವಾಂಶವು ಮುಂದಿನ ದಿನಗಳಲ್ಲಿ ಇನ್ನೂ ಏರುಪೇರಾಗುವ ಸಾಧ್ಯತೆಯೂ ಇದೆ.

‘ಕಳೆದ ಐದು ವರ್ಷದಲ್ಲಿ ಈ ಪಾಟಿ ಚಳಿಯನ್ನು ನಾವು ಕಂಡಿರ­ಲಿಲ್ಲ’ ಎಂಬುದು ಹಲವರ ಸ್ಪಷ್ಟ ಅಭಿಪ್ರಾಯ. ಹಾಗೆ ಹೇಳುತ್ತಲೇ ಅವರು ಗುರುವಾರ ಬೆಳಿಗ್ಗೆ ಸುರಿಯುತ್ತಿದ್ದ ದಟ್ಟ ಮಂಜಿನ ನಡುವೆ ಕರಗಿಹೋದರು !

ಬೆಳಗಿನ ಜಾವ ಐದು ಗಂಟೆಯಿಂದಲೇ ಸುರಿಯಲಾರಂಭಿಸಿದ ಮಂಜು 9 ಗಂಟೆಯಾದರೂ ಕರಗಿರಲಿಲ್ಲ. ಮಂಜಿನ ದಟ್ಟ ಪರದೆಯನ್ನು ಸೀಳಿಕೊಂಡು ಮುನ್ನುಗ್ಗಲು ವಾಹನ ಸವಾರರು ದೀಪಗಳನ್ನು ಬಳಸಬೇಕಾಯಿತು. ಮಧ್ಯಾಹ್ನ ಕಳೆದರೂ ಚಳಿಯ ವಾತಾವರಣವೇ ಇದ್ದ ಪರಿಣಾಮವಾಗಿ ಜನ ಬೆಚ್ಚನೆಯ ಉಡು­ಪುಗಳನ್ನು ಧರಿಸಿಯೇ ಸಂಚರಿಸಿದರು. ಸೂರ್ಯ ಹೊರಗೆ ಬಂದರೂ ಚಳಿ ಕಡಿಮೆಯಾಗದಿರುವುದು ಸಾರ್ವಜನಿಕರನ್ನಷ್ಟೇ ಅಲ್ಲದೆ ರೈತರನ್ನೂ ಚಿಂತೆಗೀಡು ಮಾಡಿದೆ. ಕಳೆದ ಬಾರಿಗಿಂತಲೂ ಈ ಚಿಂತೆ ಈ ಬಾರಿ ಹೆಚ್ಚಾಗಿದೆ.

ಗುರುವಾರ ತಾಪಮಾನ ಗರಿಷ್ಠ  28, ಕನಿಷ್ಠ 12 ಡಿಗ್ರಿ ಸೆಲ್ಸಿಯಸ್ ಇತ್ತು. ಶುಕ್ರವಾರದ ಇದು ಗರಿಷ್ಠ  28, ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ಆಗಲಿದೆ. ಶನಿವಾರ ಮತ್ತು ಭಾನುವಾರ ಗರಿ಼ಷ್ಠ ತಾಪಮಾನ 27, ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ಆಗಲಿದೆ.

ಕೇವಲ ಒಂದು ಅಂಶ ಏರುಪೇರಾಗುವುದರಿಂದ ಚಳಿಯ ವಾತಾವರಣ­ದಲ್ಲಿ ಹೇಳಿಕೊಳ್ಳುವಂಥ ಬದಲಾವಣೆ ಏನೂ ಆಗುವುದಿಲ್ಲ. ಹೀಗಾಗಿ ಜನ ಚಳಿಯಲ್ಲಿ ನಡುಗುವುದು ಅನಿವಾರ್ಯವಾಗಿದೆ ಎನ್ನುತ್ತವೆ ಹವಾಮಾನ ಇಲಾಖೆಯ ಮೂಲಗಳು.

ವೃದ್ಧರ ಸಾವು ಹೆಚ್ಚು: ಚಳಿಯನ್ನು ವೃದ್ಧರು ತಾಳಿಕೊಳ್ಳಲು ಆಗುವುದಿಲ್ಲ.  ಚಳಿಗಾಲದಲ್ಲಿ ವೃದ್ಧರು ಹೆಚ್ಚಾಗಿ ಸಾವಿಗೀಡಾ­ಗುತ್ತಾರೆ. ಹೀಗಾಗಿ ವೃದ್ಧರಿರುವ ಮನೆ ಮಂದಿಗೆ ಚಳಿ ಮಾರ­ಣಾಂತಿಕವಾದ ಅನುಭವವನ್ನೂ ನೀಡುತ್ತದೆ ಎನ್ನುತ್ತಾರೆ ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿಯ ರೈತ ಆರ್.ಚೌಡರೆಡ್ಡಿ.

ಚಳಿ ಹೆಚ್ಚಾದರೆ ಮಾವಿನ ಮರಗಳಲ್ಲಿ ಹೂಬಿಡುವುದಿಲ್ಲ. ಬಿಟ್ಟ ಹೂವುಗಳೂ ಉದುರಿಹೋಗುತ್ತವೆ ಎಂಬ ಆತಂಕವೂ ಮಾವು ಬೆಳೆಗಾರರದ ಅವರನ್ನು ಕಾಡುತ್ತಿದೆ. ಡಿಸೆಂಬರಿನ ವಿಶೇಷವಾದ ಅವರೆ ಕಾಯಿ ಹೂವು ಕೂಡ ಜೀವ ಕಳೆದುಕೊಳ್ಳುತ್ತದೆ ಎಂಬ ಚಿಂತೆಯೂ ಇದೆ.

ದಟ್ಟ ಮೋಡಗಳು ಕವಿದು ಮಂಜು ಸುರಿದರೆ ಆಲೂಗಡ್ಡೆಗೆ ಅಂಗಮಾರಿ ತಗುಲುವುದು ಖಚಿತ. ಡಿಸೆಂಬರಿನ ಮೊದಲ ವಾರದಲ್ಲಿ ತೇವಾಂಶ ಹೆಚ್ಚಾದ ಪರಿಣಾಮ ಬೆಳಮಾರನಹಳ್ಳಿಯ ರೈತರೊಬ್ಬರ ಆಲೂಗಡ್ಡೆಗೆ ಅಂಗಮಾರಿ ತಗುಲಿತ್ತು. ರೈತರು ಎಚ್ಚರಿಕೆ ವಹಿಸಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಎನ್.ಗೋಪಾಲ್.

ದೈಹಿಕ ಚಟುವಟಿಕೆ: ಚಳಿ ಎಷ್ಟೇ ತೀವ್ರವಾಗಿದ್ದರೂ, ಎಲ್ಲ ವಯಸ್ಸಿನವರೂ ಬೆಚ್ಚನೆಯ ಉಡುಪು ಧರಿಸಿ ವ್ಯಾಯಾಮ, ಓಟ, ಯೋಗಾಭ್ಯಾಸ, ಆಟದಂಥ ದೈಹಿಕ ಚಟುವಟಿಕೆಗಳನ್ನು ನಡೆಸಲೇಬೇಕು. ಇಲ್ಲವಾದರೆ ಮೂಳೆ, ಕೀಲುಗಳ ನೋವು ಶುರುವಾಗುತ್ತದೆ. ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳದಿದ್ದರೆ ಶೀತ, ನೆಗಡಿ, ಜ್ವರ ಬಾಧಿಸುತ್ತದೆ. ಚಳಿಯ ವಿರುದ್ಧ ಸೆಣೆಸಾಡುವುದು ಅನಿವಾರ್ಯ ಎನ್ನುತ್ತಾರೆ ಜಿಲ್ಲಾ ಅಥ್ಲೆಟಿಕ್ ತರಬೇತುದಾರರಾದ ಪಿ.ಎಲ್.ಶಂಕರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT