ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ ಆರೋಪಿಯ ಪತ್ತೆಗೆ ಕಾರಣವಾದ ಎಟಿಎಂ ರಸೀದಿ

Last Updated 2 ಜನವರಿ 2012, 5:45 IST
ಅಕ್ಷರ ಗಾತ್ರ

ಬೀದರ್: ಮೃತನ ಕಿಸೆಯಲ್ಲಿದ್ದ ಎಟಿಎಂ ರಸೀದಿಯು ಕೊಲೆಗೈದ ಆರೋಪಿಯ ಪತ್ತೆಗೆ ಸಹಾಯಕವಾಗಿದೆ. ಡಿಸೆಂಬರ್ 20ರ ರಾತ್ರಿ ಹುಮನಾಬಾದ್ ತಾಲ್ಲೂಕಿನ ತಾಳ್ಮಡಗಿ ಸೇತುವೆಯ ಅಡಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಶವದ ಗುರುತು ಪತ್ತೆಯಾಗದಂತೆ ಅವನ ಕೈಮೇಲೆ ಬರೆದಿದ್ದ `ಯಾದಮ್ಮ~ ಹಚ್ಚೆ ಗುರುತು ಉಳಿಯದಂತೆ ಆರೋಪಿಗಳು ಬ್ಲೇಡ್‌ನಿಂದ ಕತ್ತರಿಸಿ ಹಾಕಿದ್ದರು. ಪಕ್ಕದಲ್ಲಿಯೇ ಆಸ್ಪತ್ರೆಯಲ್ಲಿ ಬಳಸುತ್ತಿದ್ದ ಹಳದಿ ಬಣ್ಣದ ಬಟ್ಟೆ ಬಿದ್ದಿತ್ತು.

ಕಿಸೆಯಲ್ಲಿದ್ದ ಎಟಿಎಂ ರಸೀದಿಯ ಸುಳಿವಿನೊಂದಿಗೆ ಹೊರಟ ಮನ್ನಾಎಖ್ಖೇಳಿ ಪೊಲೀಸರು ಹತ್ತೇ ದಿನದಲ್ಲಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೈದರಾಬಾದ್‌ನ ಸೂರಿ ಅಲಿಯಾಸ್ ಸುರೇಶ್ (20) ಕೊಲೆಯಾದ ದುರ್ದೈವಿ. ಅವನ ಪತ್ನಿ ನಾಗಲಕ್ಷ್ಮಿ ಹೈದರಾಬಾದ್‌ನ ಸತ್ಯಂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಅವಳೊಂದಿಗೆ ಆಸ್ಪತ್ರೆಯ ಎಂ.ಡಿ. ಆಗಿರುವ ಅಲೋಕ್ ಶ್ರೀನಿವಾಸರಾವ (42) ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ತೆಲುಗು ದೇಶಂ ಪಕ್ಷದ ಹೈದರಾಬಾದ್ ಘಟಕದ ಕಾರ್ಯದರ್ಶಿಯೂ ಆಗಿರುವ ಅಲೋಕ್‌ಶ್ರೀನಿವಾಸರಾವ್ ಮುಂಬರುವ ವಿಧಾನಸಭೆಯಲ್ಲಿ ಸ್ಪರ್ಧಿಸ ಬಯಸಿದ್ದ.

ಅಲೋಕ್‌ಶ್ರೀನಿವಾಸರಾವ್‌ನಿಗೆ ತನ್ನ ಪತ್ನಿಯ ಜೊತೆಗಿನ ಸಂಬಂಧ ಬಿಡುವಂತೆ ಒತ್ತಾಯಿಸಿ, ಆಗ್ರಹಿಸಿ ಸೂರಿ ಹಲವು ಬಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ. ಆಸ್ಪತ್ರೆಯಲ್ಲಿ ಇವರಿಬ್ಬರ ನಡುವೆ ಕಿತ್ತಾಟ ನಡೆದಿತ್ತು. ತನ್ನ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ವ್ಯಕ್ತಿಗೆ ಸಮಜಾಯಿಷಿ ಹೇಳುವುದಕ್ಕಾಗಿ ಸೂರಿಯನ್ನು ಆಸ್ಪತ್ರೆಗೆ ಕರೆಸಿದ್ದ. ಮಾತುಕತೆ ವಿಕೋಪಕ್ಕೆ ಹೋಗಿದ್ದರಿಂದ ಅಲ್ಲಿಯೇ ಚಾಕುವಿನಿಂದ ಹೊಡೆದಿದ್ದರಿಂ ಸೂರಿಯ ಹಣೆಗೆ ಗಾಯವಾಗಿತ್ತು. ನಂತರ ಸೂರಿಯನ್ನು ಸ್ಕಾರ್ಪಿಯೋ (ಎಪಿ-28, ಡಿಜೆ-9339) ವಾಹನದಲ್ಲಿ ಕೂಡಿಸಿಕೊಂಡು ಬೀದರ್ ಕಡೆಗೆ ಪ್ರಯಾಣ ಬೆಳೆಸಿದರು. ಅವರ ಜೊತೆಯಲ್ಲಿ ಆಸ್ಪತ್ರೆಯಲ್ಲಿಯೇ ಸೇವಕನಾಗಿ ಕೆಲಸ ಮಾಡುತ್ತಿದ್ದ ರಫಿಕ್ (28) ಕೂಡ ಇದ್ದ.

ತಾಳ್ಮಡಗಿ ಸೇತುವೆ ಬಳಿ ನಿಲ್ಲಿಸಿದ ಸಂದರ್ಭದಲ್ಲಿ ಮತ್ತೆ ಜಗಳ-ಕಿತ್ತಾಟ ನಡೆದಿದೆ. ಆಗ ವೈದ್ಯ ಅಲೋಕ್‌ಶ್ರೀನಿವಾಸರಾವ್ ತನ್ನ ಸ್ಕಾರ್ಪಿಯೋ ವಾಹನಕ್ಕೆ ಟಿಡಿಪಿ ಪಾರ್ಟಿಯ ಧ್ವಜ ಕಟ್ಟಿದ್ದ ಸೆಂಟ್ರಿಂಗ್ ಬೈಂಡಿಂಗ್ ವೈರ್ ಬಿಚ್ಚಿ ಅದನ್ನು ಸೂರಿಯ ಕುತ್ತಿಗೆಗೆ ಸುತ್ತಿ ಜೋರಾಗಿ ಬಿಗಿದು ಕೊಲೆ ಮಾಡಿದ. ಆಗ ಎರಡನೇ ಆರೋಪಿ ರಫಿಕ್ ಮೃತ ಸೂರಿ ತಪ್ಪಿಸಿಕೊಳ್ಳಲಾಗದಂತೆ ತಲೆ ಹಿಡಿದಿದ್ದ. ನಂತರ ಮೃತನ ಕೈ ಮೇಲಿದ್ದ ಹಚ್ಚೆಯನ್ನು ಬ್ಲೇಡ್‌ನಿಂದ ಕೆದರಿ ಶವವನ್ನು ಸೇತುವೆ ಕೆಳಗೆ ಬಿಸಾಡಿ ಪರಾರಿಯಾದರು.

ಎಟಿಎಂ ರಸೀದಿ ಆಧರಿಸಿ ಮೃತನ ಪತ್ತೆ ಆಗುತ್ತಿದ್ದಂತೆಯೇ ನಾಗಲಕ್ಷ್ಮಿಯು ತನ್ನ ಗಂಡನ ಜೊತೆಗೆ ಅಲೋಕ್‌ಶ್ರೀನಿವಾಸರಾವ್‌ನ ಜೊತೆಗೆ ಜಗಳ ಆದ ಸಂಗತಿ ವಿವರಿಸಿ ಅವನೇ ಕೊಲೆ ಮಾಡಿರಬಹುದು ಎಂದು ಸುಳಿವು ನೀಡಿದಳು. ಅದಕ್ಕೆ ಪೂರಕವಾದ ಸಾಕ್ಷ್ಯ ಸಂಗ್ರಹಿಸಿ ನಂತರ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶ್‌ಕುಮಾರ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೊಲೆ ಪತ್ತೆಹಚ್ಚುವಲ್ಲಿ ಡಿವೈಎಸ್‌ಪಿ ಎ.ಎಚ್. ಚಿಪ್ಪಾರ ಅವರ ನಿರ್ದೇಶನ ಮತ್ತು ತನಿಖಾಧಿಕಾರಿಯಾಗಿದ್ದ ಸಿಪಿಐ ಬಸವೇಶ್ವರ ಹೀರಾ, ಪಿಎಸ್‌ಐಗಳಾದ ಶ್ರೀಕಾಂತ ಅಲ್ಲಾಪುರ, ಈರಣ್ಣಾ, ಜಿ.ಎಸ್. ಹೆಬ್ಬಾಳ ಶ್ರಮಿಸಿದ್ದಾರೆ. ಅವರಿಗೆ ಸೂಕ್ತ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದು ಎಸ್‌ಪಿ ತಿಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಮರ್ತೂರಕರ್ ಉಪಸ್ಥಿತರಿದ್ದರು.

`ಸರಗಳ್ಳತನ ಆದರೆ ನೇರವಾಗಿ ನನಗೇ ಫೋನ್ ಮೂಲಕ ಮಾಹಿತಿ ನೀಡಿದರೆ ದೂರುದಾರರಿಗೆ ತೊಂದರೆ ಆಗದಂತೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತದೆ~ಎಂದು ಎಸ್‌ಪಿ ತಿಳಿಸಿದರು. ಸರಗಳ್ಳತನ ನಡೆದ ಸಂದರ್ಭದಲ್ಲಿ ಮಾಹಿತಿ ನೀಡಿದವರ ಮನೆಗೆ ಪೊಲೀಸ್‌ರನ್ನು ಮಫ್ತಿಯಲ್ಲಿ ಕಳುಹಿಸಲಾಗುತ್ತದೆ~ ಎಂದು ಅವರು ನುಡಿದರು.

ಕಳೆದ ಮೂರು ವರ್ಷಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಿವೆ. ಕೊಲೆಗಳು ಜಾಸ್ತಿಯಾಗಿವೆ. ಆದರೆ, ಕಳ್ಳತನದ ಪ್ರಕರಣಗಳು ಕಡಿಮೆಯಾಗಿವೆ. ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೋಗುವಾಗ ಕಳ್ಳತನ ನಡೆದ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಇದನ್ನು ನಿವಾರಿಸುವುದಕ್ಕಾಗಿ ಪ್ರಯತ್ನಿಸಲಾಗುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT