ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲಬೇಡಿ ನಮ್ಮ ನಗರಗಳನ್ನು!

Last Updated 31 ಜುಲೈ 2016, 19:30 IST
ಅಕ್ಷರ ಗಾತ್ರ

‘ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ಮಸೂದೆ–2016’ಕ್ಕೆ  ವಿಧಾನಮಂಡಲ ಅಧಿವೇಶನದಲ್ಲಿ ಇತ್ತೀಚೆಗೆ ಅನುಮೋದನೆ ಪಡೆಯಲಾಗಿದೆ. ನಗರದ ಒಟ್ಟು ಪ್ರದೇಶದಲ್ಲಿ ಶೇ 15ರಷ್ಟನ್ನು ಉದ್ಯಾನ, ಆಟದ ಮೈದಾನ ಇಂತಹ ಸಾರ್ವಜನಿಕ ಮುಕ್ತ ವಲಯಕ್ಕಾಗಿ (ಓಪನ್ ಸ್ಪೇಸ್) ಮೀಸಲಿಟ್ಟಿದ್ದನ್ನು ತಿದ್ದುಪಡಿಯ ಅನ್ವಯ ಶೇ 10ಕ್ಕೆ ಕಡಿತಗೊಳಿಸಲಾಗಿದೆ. ಹಾಗೆಯೇ ನಾಗರಿಕ ಸೌಲಭ್ಯಕ್ಕಾಗಿ ಶೇ 10ರಷ್ಟು ಮೀಸಲಿಟ್ಟಿದ್ದನ್ನು ಶೇ 5ಕ್ಕೆ ಇಳಿಸಲಾಗಿದೆ. ಈ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ಅಂಗೀಕರಿಸಿದಲ್ಲಿ ಕರ್ನಾಟಕದ 250 ಪಟ್ಟಣ ಹಾಗೂ ನಗರಗಳ ಮೇಲೆ ಕರಿನೆರಳು ಬೀಳಲಿದೆ.

ಬೆಂಗಳೂರು ನಗರ ಇದರ ವ್ಯಾಪ್ತಿಗೆ ಬರುವುದಿಲ್ಲವಾದರೂ, ಕರ್ನಾಟಕ ಮುನ್ಸಿಪಲ್ ಕಾಯಿದೆ (ಕೆಎಂಸಿ)– 1976, ಬೆಂಗಳೂರು ಅಭಿವೃದ್ಧಿ  ಪ್ರಾಧಿಕಾರ ಕಾಯಿದೆ– 1976 ಹಾಗೂ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಬೆಂಗಳೂರು ನಗರವನ್ನು ಕೂಡ ಕಾಯಿದೆ ಅಡಿಯಲ್ಲಿ ತರುವ ಸಾಧ್ಯತೆ ಇದೆ.

ಅಷ್ಟೇ ಅಲ್ಲದೆ, ಬಿಡಿಎ ತಯಾರು ಮಾಡಲಿರುವ ಪರಿಷ್ಕೃತ ಮಾದರಿ ಯೋಜನೆ  2031ಕ್ಕೂ ತಿದ್ದುಪಡಿ ತಂದು ಬೆಂಗಳೂರಿಗೂ ಅನ್ವಯಗೊಳಿಸುವ ಚಿಂತನೆ ನಡೆದಿದೆ  ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.

ಹೊಸ ಕಾನೂನನ್ನು ಅಥವಾ ನೀತಿಗಳನ್ನು ಜಾರಿಗೊಳಿಸುವ ಮುನ್ನ ಸಾರ್ವಜನಿಕ ಚರ್ಚೆಗೆ ಒಳಪಡಿಸಲು ಅವುಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ (4)(1)(ಬಿ) ಅಡಿಯಲ್ಲಿ ಬಹಿರಂಗಪಡಿಸಬೇಕು ಮತ್ತು ಆ ಕಾಯ್ದೆಯ ಹಿಂದಿರುವ ಉದ್ದೇಶ ಹಾಗೂ ಅದರ ಗುರಿಯನ್ನು ಸೆಕ್ಷನ್ (4)(1)(ಜ) ಅಡಿಯಲ್ಲಿ ಘೋಷಿಸಬೇಕು. ಇವೆರಡನ್ನೂ ಉಲ್ಲಂಘಿಸಿರುವ ಪ್ರಸಕ್ತ ತಿದ್ದುಪಡಿ ಮಸೂದೆ, ಜನತಂತ್ರದ ಪ್ರಕ್ರಿಯೆಗೆ ಒಳಪಡದೆ ತರಾತುರಿಯಲ್ಲಿ ರೂಪುಗೊಂಡಿದೆ.

ಈ ತಿದ್ದುಪಡಿ ಮಸೂದೆ ಬಗ್ಗೆ  ಪರಿಸರ ಕಾರ್ಯಕರ್ತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಗುತ್ತಿಗೆದಾರರು ಮತ್ತು ರಿಯಲ್ ಎಸ್ಟೇಟ್ ಲಾಬಿ ಮಾತ್ರ ಉತ್ಸಾಹದಿಂದ ಇದನ್ನು ಬರಮಾಡಿಕೊಂಡಿದೆ.

ಪ್ರಪಂಚದಾದ್ಯಂತ ಹಸಿರು ಪ್ರದೇಶಗಳನ್ನು ಹೆಚ್ಚಿಸುವ, ಮಾಲಿನ್ಯವನ್ನು ಕಡಿತಗೊಳಿಸುವ, ನಗರವನ್ನು ಪರಿಸರ ಸ್ನೇಹಿಯನ್ನಾಗಿಸುವ ಪ್ರಯತ್ನ ನಡೆದರೆ, ಕರ್ನಾಟಕದಲ್ಲಿ ಮಾತ್ರ ಇದಕ್ಕೆ ವ್ಯತಿರಿಕ್ತವಾದ ಕಾರ್ಯಗಳು ಜರುಗುತ್ತಿವೆ. ಜಗತ್ತಿನ ಮುಂದುವರಿದ ರಾಷ್ಟ್ರಗಳು, ಎರಡು ಶತಮಾನಕ್ಕೂ ಹೆಚ್ಚು ಕಾಲ ನಗರೀಕರಣವನ್ನು ಕಂಡ ಬೃಹತ್ ನಗರಗಳು ಸಹ ಓಪನ್ ಸ್ಪೇಸ್‌ಗಳನ್ನು-ಹಸಿರು ಹಾಸುಗಳನ್ನು ಗಣನೀಯ ಪ್ರಮಾಣದಲ್ಲಿ ಉಳಿಸಿಕೊಂಡು ಮುನ್ನಡೆಯುತ್ತಿವೆ.

ಸ್ವಚ್ಛ ಗಾಳಿ, ನೀರು, ಪರಿಸರ – ಇವು, ಯಾವುದೇ ಇತರ ಮೂಲಭೂತ ಹಕ್ಕುಗಳಿಗಿಂತ ಕಡಿಮೆಯದಲ್ಲ ಎಂಬುದು ಇಲ್ಲಿರುವ ನಂಬಿಕೆ. ಸಿಂಗಪುರದಲ್ಲಿ ಒಟ್ಟು ಪ್ರದೇಶದ ಶೇ 47ರಷ್ಟು ಭಾಗ, ಹಾಂಕಾಂಗ್ ನಗರದ ಶೇ 40ರಷ್ಟು, ಲಂಡನ್ ನಗರದ ಶೇ 38ರಷ್ಟು, ನ್ಯೂಯಾರ್ಕ್ ನಗರದ ಶೇ 19.7ರಷ್ಟು ಪ್ರದೇಶವನ್ನು  ಸಾರ್ವಜನಿಕರಿಗೆ ಓಪನ್ ಸ್ಪೇಸ್‌ಗಳೆಂದು ಮೀಸಲಿಡಲಾಗಿದೆ.

ಇನ್ನು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾದ ರಾಜಧಾನಿ ಜೊಹಾನ್ಸ್‌ಬರ್ಗ್ ಶೇ 24ರಷ್ಟನ್ನು ಮತ್ತು ಬ್ರೆಜಿಲ್‌ನ ಪ್ರಸಿದ್ಧ ನಗರವಾದ ರಿಯೊ ಡಿ ಜನೈರೊ ಶೇ 40ರಷ್ಟು ಜಾಗವನ್ನು ಮೀಸಲಿಟ್ಟಿದೆ. ಇದಕ್ಕೆ ಹೋಲಿಸಿದರೆ ಕರ್ನಾಟಕದ ನಗರಗಳಲ್ಲಿ  1976ರ ಕಾನೂನಿನ ಪ್ರಕಾರ ಕಡ್ಡಾಯಗೊಳಿಸಿದ ಓಪನ್ ಸ್ಪೇಸ್ ಕೇವಲ ಶೇ 15ರಷ್ಟು.  ಲಂಡನ್‌ನಲ್ಲಿ ವಾಸವಾಗಿರುವ ಪ್ರತಿಯೊಬ್ಬ ಪ್ರಜೆಗೆ 31.68  ಚ.ಮೀ.ನಷ್ಟು ಓಪನ್ ಸ್ಪೇಸ್ ಇದ್ದರೆ, ನ್ಯೂಯಾರ್ಕ್‌ನಲ್ಲಿ  26.4 ಚ.ಮೀ.ನಷ್ಟಿದೆ. 

ಕೆಎಂಸಿ ಕಾಯಿದೆ ಪ್ರಕಾರ, ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಶೇ 15ರಷ್ಟು ಓಪನ್ ಸ್ಪೇಸ್ ಇರಬೇಕಿತ್ತು. ಆದರೆ ವಾಸ್ತವಾಂಶದಲ್ಲಿ ಉಳಿದಿರುವುದು ಶೇ 3.5ರಷ್ಟು ಪ್ರದೇಶ ಮಾತ್ರ ಎಂಬುದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ! ಅಂದರೆ, ಈ ಲೆಕ್ಕಾಚಾರದ ಪ್ರಕಾರ ಬೆಂಗಳೂರಿನ ನಿವಾಸಿಯೊಬ್ಬನಿಗೆ ದೊರಕುವುದು ಕೇವಲ  1.6 ಚ.ಮೀ. ಓಪನ್ ಸ್ಪೇಸ್ ಅಷ್ಟೆ! ಓಪನ್ ಸ್ಪೇಸ್‌ಗಾಗಿ ಮೀಸಲಿಡಬೇಕಿದ್ದ ಪ್ರದೇಶವನ್ನು ಪ್ರಭಾವಿ ಶಕ್ತಿಗಳು ಭಾರೀ ಮಟ್ಟದಲ್ಲಿ ಒತ್ತುವರಿ ಮಾಡಿಕೊಂಡಿರುವುದು ದುರದೃಷ್ಟಕರ ಸಂಗತಿ.

ವಿಶ್ವ ಆರೋಗ್ಯ ಸಂಘಟನೆಯ ಪ್ರಕಾರ, ಒಬ್ಬ ವ್ಯಕ್ತಿಗೆ ಕಡೆಯಪಕ್ಷ 10 ಚ.ಮೀ. ಓಪನ್ ಸ್ಪೇಸ್ ಇರಬೇಕು. ಕುಡಿಯುವ ನೀರು ಮತ್ತದರ ಗುಣಮಟ್ಟ, ಅಂತರ್ಜಲ, ಶುದ್ಧಗಾಳಿ ಮುಂತಾದವು ನಗರಗಳಲ್ಲಿ ಲಭ್ಯವಿರುವ  ಹಸಿರು ಹಾಸಿನ ಮೇಲೆ ಅವಲಂಬಿತವಾಗಿರುತ್ತವೆ. ಹಾಗೆಯೇ, ಸಾರ್ವಜನಿಕರ ಮಾನಸಿಕ ಮತ್ತು ದೈಹಿಕ ಆರೋಗ್ಯವೂ ಇದಕ್ಕೆ ಹೊರತಲ್ಲವೆಂಬುದು ವಿಜ್ಞಾನಿಗಳ ನಂಬಿಕೆ.

ಉದಾಹರಣೆಗೆ 1993ರಲ್ಲಿ ಬೆಂಗಳೂರು ನಗರದ ಶೇ 2ರಷ್ಟು ಮಕ್ಕಳು ಆಸ್ತಮಾದಿಂದ ಬಳಲುತ್ತಿದ್ದರು. ಈ ಪ್ರಮಾಣ 2008ರಲ್ಲಿ ಶೇ 28ಕ್ಕೆ ಏರಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಕಡಿತಗೊಳ್ಳುತ್ತಿರುವ ಹಸಿರು ಹಾಸು ಇದಕ್ಕೆ ಕಾರಣ. ಕಳೆದ ನಾಲ್ಕು ದಶಕಗಳಲ್ಲಿ ಬೆಂಗಳೂರಿನ ಶೇ 74ರಷ್ಟು ಕೆರೆಗಳು ನಾಶವಾಗಿವೆ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ತಜ್ಞರ ಪ್ರಕಾರ, ನಗರದ ಆರೋಗ್ಯ ಸುಸ್ಥಿರವಾಗಿರಲು, ಪ್ರತಿಯೊಬ್ಬ ನಾಗರಿಕನಿಗೂ ಒಂದು ಮರ ಎಂಬಂತೆ ಹಸಿರು ಹಾಸು ಇರಬೇಕು. ಆದರೆ  ಹಸಿರನ್ನು  ಧ್ವಂಸ ಮಾಡುತ್ತಿರುವ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯವೈಖರಿಯ ಪ್ರತಿಫಲವಾಗಿ ಈಗ ಒಬ್ಬ ನಾಗರಿಕನಿಗೆ ಉಳಿದಿರುವುದು ಕೇವಲ 0.1  ಮರವಷ್ಟೆ.

ಇವೆಲ್ಲವನ್ನೂ ಗಮನಿಸಿದರೆ, ಇಂದು ಶ್ವಾಸಕೋಶ ಸಂಬಂಧಿತ ರೋಗಗಳು ಹೆಚ್ಚಾಗುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದ್ದರಿಂದಲೇ  ಬೆಂಗಳೂರನ್ನು  ಅಲರ್ಜಿ ನಗರವೆಂದು ವೈದ್ಯರು ಬಣ್ಣಿಸಿದ್ದಾರೆ. ಇಂತಹ ಬೆಳವಣಿಗೆ ಹಿನ್ನೆಲೆಯಲ್ಲಿ  ಬೆಂಗಳೂರನ್ನು ‘ಸಾವಿನಂಚಿನಲ್ಲಿರುವ ನಗರ’ ಎಂದು ತಜ್ಞರು ವ್ಯಾಖ್ಯಾನಿಸಿದ್ದಾರೆ. ನಗರವಾಸಿಗಳ ಮಾನಸಿಕ ಆರೋಗ್ಯ ಪರೋಕ್ಷವಾಗಿ ಹಸಿರು ಪ್ರದೇಶಗಳಿಂದ ಪ್ರಭಾವಿತವಾಗುತ್ತದೆ.

ತಮ್ಮನ್ನು ಆರಿಸಿ ಕಳಿಸಿರುವ ಜನರಿಗೆ ಯಾವುದೇ ನಿಷ್ಠೆಯನ್ನೂ ತೋರದೆ ಗುತ್ತಿಗೆದಾರರು- ರಿಯಲ್ ಎಸ್ಟೇಟ್ ಲಾಬಿಗೆ ಸರ್ಕಾರ ಮಣಿದಿದೆ ಎಂಬ ಗುಮಾನಿ ಜನರಲ್ಲಿ ಮೂಡಿದೆ. ಸದನದಲ್ಲಿ ಎಲ್ಲಾ ಪಕ್ಷಗಳೂ ಪರಸ್ಪರ ಜಗಳ, ಕೆಸರು ಎರಚಾಟ, ವೈಯಕ್ತಿಕ ನಿಂದನೆಯಲ್ಲಿ ಮುಳುಗಿದ್ದಾಗಲೇ ಈ ತಿದ್ದುಪಡಿಗೆ ಅಂಗೀಕಾರ ದೊರಕಿರುವುದು ಜನತಂತ್ರದ ಅಣಕವಲ್ಲವೇ? ವಿರೋಧ ಪಕ್ಷಗಳು ಸದನದ ಒಳಗೆ ಈ ತಿದ್ದುಪಡಿಯನ್ನು ವಿರೋಧಿಸದೆ ಇದೀಗ ಬೊಬ್ಬೆ ಹಾಕುತ್ತಿರುವುದು ನೋಡಿದರೆ, ಇದು ಜನರನ್ನು ಮರುಳುಮಾಡುವ ತಂತ್ರಗಾರಿಕೆ ಅಲ್ಲದೆ ಮತ್ತೇನು ಎಂಬ ಪ್ರಶ್ನೆ ಹುಟ್ಟುತ್ತದೆ.

ಇಂತಹ ಕಾಯಿದೆಗೆ ರಾಜ್ಯಪಾಲರ ಅನುಮತಿ ದೊರಕಿದಲ್ಲಿ ನಗರಗಳು  ಕಾಂಕ್ರೀಟ್ ಅರಣ್ಯವಾಗುವುದರಲ್ಲಿ ಎರಡು ಮಾತಿಲ್ಲ. ಈ ಕಾಯಿದೆಗೆ ಮಾಡಿರುವ ತಿದ್ದುಪಡಿಯನ್ನು ತಡೆಯದೆ ಹೋದರೆ ರಾಜ್ಯದ ನಗರಗಳಲ್ಲಿ ಹಸಿರು ಪ್ರದೇಶ ಇತ್ತೆಂಬುದನ್ನು ಮ್ಯೂಸಿಯಂಗಳಲ್ಲೋ, ಪೋಸ್ಟ್ ಕಾರ್ಡ್‌ಗಳಲ್ಲೋ ಅಥವಾ ನಮ್ಮ ನೆನಪುಗಳಲ್ಲೋ ಕಾಣಬೇಕಾಗುತ್ತದೆ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT