ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಚೆ ನೀರು ಮನೆಗೆ ನುಗ್ಗಿ ಸಾವು

ಪೀಣ್ಯ: ರಾಜಕಾಲುವೆ ತಡೆಗೋಡೆ ಕುಸಿದು ಅವಘಡ
Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಪೀಣ್ಯದ ನಾಲ್ಕನೇ ಹಂತದಲ್ಲಿರುವ ರಾಜಕಾಲುವೆಯ ತಡೆಗೋಡೆ ಕುಸಿದು ಮನೆಯೊಂದಕ್ಕೆ ನುಗ್ಗಿದ ಕೊಳಚೆ ನೀರು ಮಲ್ಲೇಶ್ (51) ಎಂಬುವರನ್ನು ಬಲಿ ತೆಗೆದುಕೊಂಡಿದೆ.

ಮೂಲತಃ ಮಂಡ್ಯ ಜಿಲ್ಲೆ ಮದ್ದೂರಿನವರಾದ ಮಲ್ಲೇಶ್, ಪತ್ನಿ ವರಲಕ್ಷ್ಮಿ ಹಾಗೂ ಇಬ್ಬರು ಮಕ್ಕಳಾದ ರಾಜೇಶ್ (25) ಮತ್ತು ರಂಜಿತ್ (22) ಎಂಬುವರ ಜತೆ ಪೀಣ್ಯ ನಾಲ್ಕನೇ ಹಂತದಲ್ಲಿ ವಾಸವಾಗಿದ್ದರು. ಅವರ ಮನೆಯ ಪಕ್ಕದಲ್ಲೇ ರಾಜಕಾಲುವೆ ಇದ್ದು, ಮನೆಗೆ ಹೊಂದಿಕೊಂಡಂತೆ ಸುಮಾರು 10 ಅಡಿಯಷ್ಟು ಎತ್ತರಕ್ಕೆ ರಾಜಕಾಲುವೆಗೆ ಕಾಂಪೌಂಡ್ ನಿರ್ಮಿಸಲಾಗಿದೆ. ರಾತ್ರಿ ಮಳೆ ನೀರಿನ ರಭಸಕ್ಕೆ ಕಾಂಪೌಂಡ್ ಒಡೆದು ಮನೆಯೊಳಗೆ ನೀರು ನುಗ್ಗಿದೆ.

ಈ ಸಂದರ್ಭದಲ್ಲಿ ರಂಜಿತ್ ಕೆಲಸಕ್ಕೆ ಹೋಗಿದ್ದರಿಂದ, ಮನೆಯಲ್ಲಿ ಮಲ್ಲೇಶ್, ವರಲಕ್ಷ್ಮಿ ಮತ್ತು ರಾಜೇಶ್ ಮಾತ್ರ ಇದ್ದರು. ಮನೆಯೊಳಗೆ ನೀರು ನುಗ್ಗುತ್ತಿದ್ದಂತೆ ತಾಯಿ- ಮಗ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಆದರೆ, ಮಲ್ಲೇಶ್ ನೀರಿನಲ್ಲೇ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

`ರಾಜಕಾಲುವೆ ಸಮೀಪ ಬಿಬಿಎಂಪಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದೆ. ಇದರಿಂದಾಗಿ ರಾಜಕಾಲುವೆಯಲ್ಲಿ ಮಣ್ಣು ತುಂಬಿಕೊಂಡಿದ್ದು, ಮಳೆ ನೀರು ಕಾಲುವೆ ಮೂಲಕ ಹರಿದು ಹೋಗುತ್ತಿಲ್ಲ. ರಾತ್ರಿ ಭಾರಿ ಮಳೆ ಸುರಿದ ಕಾರಣ ಗೋಡೆ ಒಡೆದು ಕೊಳಚೆ ನೀರು ಮನೆಯೊಳಗೆ ನುಗ್ಗಿತು' ಎಂದು ಸ್ಥಳೀಯರು ಆರೋಪಿಸಿದರು.

`ಮಳೆ ನೀರು ಮನೆಗಳ ಕಡೆ ನುಗ್ಗುತ್ತಿದ್ದಂತೆ ಸ್ಥಳೀಯರು ಅಲ್ಲಿಂದ ಓಡಿದರು. ಜತೆಗೆ ವರಲಕ್ಷ್ಮೀ ಮತ್ತು ರಾಜೇಶ್ ಕೂಡ ಮನೆಯಿಂದ ಹೊರ ಬಂದು ಪಕ್ಕದ ಮನೆಯ ಮಹಡಿಗೆ ಹೋದರು. ರಾಜೇಶ್ ಕೂಡ ರಸ್ತೆ ಕಡೆಗೆ ಹೋಗಿರಬಹುದು ಎಂದು ಭಾವಿಸಿದೆವು. ಅರ್ಧ ಗಂಟೆಯಾದರೂ ಅವರು ಪತ್ತೆಯಾಗದ ಕಾರಣ ಮನೆಯೊಳಗೆ ಹೋಗಿ ಶೋಧ ಆರಂಭಿಸಿದೆವು. ತುಂಬಾ ಹೊತ್ತು ಹುಡುಕಿದ ಬಳಿಕ ಶವ ಸಿಕ್ಕಿತು' ಎಂದು ಎಲೆಕ್ಟ್ರೀಷಿಯನ್ ನಾಗೇಶ್ ಹೇಳಿದರು.

15 ವರ್ಷಗಳಿಂದಲೂ ಪೀಣ್ಯದಲ್ಲಿ ನೆಲೆಸಿರುವ ಮಲ್ಲೇಶ್ ದಂಪತಿ, ಮನೆ ಸಮೀಪದ ರಾಜಾ ಎಂಟರ್‌ಪ್ರೈಸಸ್ ಎಂಬ ಸಿಲಿಂಡರ್ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮಗ ರಾಜೇಶ್ ಶೇಷಾದ್ರಿಪುರ ಸಂಜೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿಕೊಂಡು, ಬೆಳಿಗ್ಗೆ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಾರೆ. ಮತ್ತೊಬ್ಬ ಮಗ ರಂಜಿತ್, ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT