ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಚೆ ಪ್ರದೇಶ ಮಾದರಿಯಾಗಿ ಅಭಿವೃದ್ಧಿ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಡಗಳ ನಿರ್ಮಾಣಕ್ಕೂ ಮುನ್ನ ನಕ್ಷೆ, ಖಾತೆ ಮಂಜೂರಾತಿ ನೀಡುವಲ್ಲಿ ಆಗುತ್ತಿರುವ ವಿಳಂಬ ಸರಿಪಡಿಸುವಂತೆ ಒತ್ತಾಯಿಸಿದ ಕಟ್ಟಡ ನಿರ್ಮಾಣಕಾರರು, ಸಾಮಾಜಿಕ ಜವಾಬ್ದಾರಿಯಡಿ ಬೆಂಗಳೂರನ್ನು ಕೊಳಚೆಮುಕ್ತ ನಗರವನ್ನಾಗಿ ಮಾಡಲು ಅವಕಾಶ ನೀಡಿದಲ್ಲಿ ಮುಂಬೈ ಮಾದರಿಯಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಸಿದ್ಧ ಎಂದು ಘೋಷಿಸಿದ್ದಾರೆ. ಬಿಲ್ಡರ್‌ಗಳ ಮನವಿಗೆ ಬಿಬಿಎಂಪಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ.

ನಗರದಲ್ಲಿನ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಕೊಳಚೆ ನಿರ್ಮೂಲನಾ ಮಂಡಳಿ ಬಿಟ್ಟರೆ ಬೇರೆ ಯಾವುದೇ ಇಲಾಖೆಗಳು ಅಂತಹ ಯೋಜನೆಗಳನ್ನು ರೂಪಿಸುತ್ತಿಲ್ಲ. ಬಿಬಿಎಂಪಿ ಅವಕಾಶ ಮಾಡಿಕೊಟ್ಟಲ್ಲಿ ನಾವು ಪ್ರಾಯೋಗಿಕ ಯೋಜನೆ ಸಿದ್ಧಪಡಿಸಿ ಮಾದರಿಯಾಗಿ ಕೆಲವು ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಸಿದ್ಧ ಎಂದು `ಕ್ರೆಡಾಯ್~ನ ಅಧ್ಯಕ್ಷ ನಾಗರಾಜ್ ಕೋರಿದರು.

`ಮೊದಲು ಪಾಲಿಕೆಯ ಸಹಭಾಗಿತ್ವದಲ್ಲಿ ಒಂದು ಕೊಳಚೆ ಪ್ರದೇಶವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುತ್ತೇವೆ. ಅದು ಪಾಲಿಕೆಗೆ ಇಷ್ಟವಾದಲ್ಲಿ ಅದೇ ಮಾದರಿಯಲ್ಲಿ ಇತರೆ ಕೊಳಚೆ ಪ್ರದೇಶಗಳನ್ನು ಕೂಡ ಅಭಿವೃದ್ಧಿಪಡಿಸಬಹುದು~ ಎಂದು ಸಲಹೆ ಮಾಡಿದರು.

ಅದಕ್ಕೆ ಉತ್ತರ ನೀಡುವ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, `ನಿಮ್ಮ ಆಹ್ವಾನವನ್ನು ಬಿಬಿಎಂಪಿ ಮನ್ನಿಸಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕೊಳಚೆ ಪ್ರದೇಶಗಳಿವೆ. ಈ ಪೈಕಿ ಕೆಲವನ್ನು ಗುರುತಿಸಿ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಅವಕಾಶ ಮಾಡಿಕೊಡಲು ಸಿದ್ಧ~ ಎಂದು ಘೋಷಿಸಿದರು.

`ಮುಂಬೈ ಅಥವಾ ಚನ್ನೈ ಮಾದರಿಯ ಯೋಜನೆಗಳನ್ನು ನಾವು ಅನುಷ್ಠಾನಗೊಳಿಸಬೇಕೆಂದಿಲ್ಲ. ನಗರಕ್ಕೆ ಅನುಗುಣವಾದ ಮಾದರಿಯನ್ನು ಬಿಲ್ಡರ್‌ಗಳು ರೂಪಿಸಲಿ. ಇದರಿಂದ ಪಾಲಿಕೆಗೆ ಲಾಭವಾಗದಿದ್ದರೂ ಕೊಳಚೆ ಪ್ರದೇಶದ ಜನರಿಗೆ ಅನುಕೂಲವಾಗುವುದಾದರೆ ಆಗಲಿ~ ಎಂದು ಆಯುಕ್ತರು ಹೇಳಿದರು.

`ಸಕಾಲ~ ಪ್ರಯೋಜನ ಪಡೆಯಿರಿ: ಖಾತೆ ಪಡೆಯುವಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಬಿಲ್ಡರ್‌ಗಳು `ಸಕಾಲ~ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ಇದರಿಂದ ನಿಗದಿತ ಅವಧಿಯೊಳಗೆ ಖಾತೆ ಪಡೆಯಲು ಅನುಕೂಲವಾಗಲಿದೆ ಎಂದು ಸಲಹೆ ಮಾಡಿದರು.

`ಬಿಬಿಎಂಪಿಯಲ್ಲಿ ಖಾತೆ ಪಡೆಯುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ನಕ್ಷೆ ಮಂಜೂರಾತಿಗೆ 4ರಿಂದ 10 ತಿಂಗಳು ವಿಳಂಬವಾಗುತ್ತಿದೆ. ಅಲ್ಲದೆ, 20 ಇಲಾಖೆಗಳ ಸುಮಾರು 2000 ಟೇಬಲ್‌ಗಳನ್ನು ಸುತ್ತಿ ಬರಬೇಕು. ನಕ್ಷೆ ಮಂಜೂರಾತಿಗೆ ಏಕೆ ಇಷ್ಟೊಂದು ವಿಳಂಬವಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ~ ಎಂದು ನಾಗರಾಜ್ ಗಮನಸೆಳೆದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತರು, ಆನ್‌ಲೈನ್ ಮೂಲಕ ನಕ್ಷೆ ಮಂಜೂರಾತಿ ಪಡೆಯುವಂತೆ ಬಿಲ್ಡರ್‌ಗಳಿಗೆ ಸಲಹೆ ಮಾಡಿದರು. ಅಲ್ಲದೆ, ನಕ್ಷೆ ಮಂಜೂರಾತಿ ಸಂದರ್ಭದಲ್ಲಿ ಕೆಳ ಹಂತದಲ್ಲಾಗುತ್ತಿರುವ ಅನಗತ್ಯ ವಿಳಂಬವನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಾಲ್, ವಾಣಿಜ್ಯ ಸಂಕೀರ್ಣಗಳಿಗೆ ಕಡಿವಾಣ ಹಾಕಿ: ವಸತಿ ಬಡಾವಣೆಗಳಲ್ಲಿ ಶೇ 20ರಷ್ಟು ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅನುಮತಿ ಮಾಡಿಕೊಟ್ಟಿರುವುದರಿಂದ ವಸತಿ ಪ್ರದೇಶದ ಚಿತ್ರಣವೇ ಬದಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು `ಆದರ್ಶ ಗ್ರೂಪ್~ನ ಜಯಶಂಕರ್ ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಂಕರಲಿಂಗೇಗೌಡ, `ನಾನು ಬಿಡಿಎ ಆಯುಕ್ತನಾಗಿದ್ದಾಗ ರೂಪಿಸಿದ ಸಿಡಿಪಿಯಲ್ಲಿ ಈ ಅವಕಾಶ ಕಲ್ಪಿಸಲಾಗಿತ್ತು. ವಸತಿ ಪ್ರದೇಶಗಳಲ್ಲಿ ಬೇಕರಿ, ಟೈಲರಿಂಗ್ ಶಾಪ್, ಬಾರ್, ಕ್ಲಿನಿಕ್ ಅಥವಾ ಔಷಧಿ ಮಳಿಗೆಯನ್ನು ಸ್ಥಾಪಿಸಲು ಅವಕಾಶ ಕಲ್ಪಿಸಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಆದರೆ, ಇದೀಗ ನಿಯಮಗಳನ್ನು ಉಲ್ಲಂಘಿಸಿ ಮಾಲ್ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ತಲೆಯೆತ್ತುತ್ತಿರುವ ಆರೋಪಗಳ ಕುರಿತು ಹೈಕೋರ್ಟ್ ತೀರ್ಪನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು~ ಎಂದರು.

ಹಸಿರೀಕರಣಕ್ಕೆ ಒತ್ತು ನೀಡಲು ಮನವಿ: ಬಿಲ್ಡರ್‌ಗಳು ಹಸಿರೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಗರ ಅರಣ್ಯ ಮಾದರಿಯಲ್ಲಿ ಪಾಲಿಕೆ ಸಹಭಾಗಿತ್ವದಲ್ಲಿ `ಟ್ರೀ ಪಾರ್ಕ್~ಗಳನ್ನು ನಿರ್ಮಿಸಲು ಸಹಕರಿಸಬೇಕು ಎಂದು ಅವರು ಕೋರಿದರು.

`ಬೃಹತ್ ಕಟ್ಟಡಗಳಲ್ಲಿ ಅಧಿಕ ವಿದ್ಯುತ್ ಬಳಕೆ ವೆಚ್ಚವನ್ನು ತಪ್ಪಿಸಲು ಪವನ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಬೇಕು. ಯೋಜನಾ ವೆಚ್ಚ ಸ್ವಲ್ಪ ಅಧಿಕವಾದರೂ ಪವನ ವಿದ್ಯುತ್ ಬಳಕೆ ಅನಿವಾರ್ಯ. ಅಲ್ಲದೆ, ಸೋಲಾರ್ ಹೀಟರ್‌ಗಳಿಗೆ ಹೆಚ್ಚು ಅವಕಾಶ ಕಲ್ಪಿಸುವ ಸಂಬಂಧ `ಬೆಸ್ಕಾಂ~ನ ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್ ಜತೆ ಚರ್ಚಿಸುತ್ತೇನೆ~ ಎಂದರು.

ಒಂದು ಕಟ್ಟಡ ಯೋಜನೆಯ ನಕ್ಷೆ ಮಂಜೂರಾತಿ ಅವಧಿಯನ್ನು 2ರಿಂದ 5 ವರ್ಷಗಳಿಗೆ ವಿಸ್ತರಿಸುವುದು ಹಾಗೂ ತೆರಿಗೆ ವಿನಾಯಿತಿ ಪಡೆಯಲು ದಂಡ ಬದಲಿಗೆ ಸ್ವಾಧೀನ ಶುಲ್ಕದ ರೂಪದಲ್ಲಿ ಪತ್ರ ನೀಡಲು ಪರಿಶೀಲಿಸಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.

ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಉಲ್ಲಂಘನೆ ತಡೆಯಲು ಹೈದರಾಬಾದ್ ಮಾದರಿಯಲ್ಲಿ ನಕ್ಷೆ ಮಂಜೂರಾತಿ ನೀಡುವಾಗ ಶೇ 10ರಷ್ಟು ಜಾಗವನ್ನು ಪಾಲಿಕೆ ಇಟ್ಟುಕೊಂಡು ಕೆಲಸ ಮುಗಿದ ತಕ್ಷಣ ವಾಪಸು ನೀಡುವ ನಿಯಮ ಪಾಲಿಸಬೇಕು ಎಂದು ಬಿಲ್ಡರ್‌ಗಳು ಸಲಹೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, `ನಮ್ಮ ಅಧಿಕಾರಿಗಳಿಂದ ಇನ್ನಷ್ಟು ತೊಂದರೆ ಅನುಭವಿಸುವುದಾದರೆ ಈ ಸಲಹೆಯನ್ನು ನೀವು ಒಪ್ಪಬಹುದು~ ಎಂದರು.

ಮೇಯರ್ ಡಿ. ವೆಂಕಟೇಶಮೂರ್ತಿ ಮಾತನಾಡಿ, ವಸತಿ ಪ್ರದೇಶಗಳಲ್ಲಿ ಮಾಲ್ ಅಥವಾ ವಾಣಿಜ್ಯ ಸಂಕೀರ್ಣಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಬೇಕು. ಹೊಸ ವಾರ್ಡ್‌ಗಳಲ್ಲಿ ಇವುಗಳಿಗೆ ಅವಕಾಶ ಕಲ್ಪಿಸಿದರೆ ಆ ಭಾಗಗಳೂ ಅಭಿವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್, ಕೆಲವು ರಸ್ತೆಗಳನ್ನು ನಿರ್ವಹಿಸಲು ಬಿಲ್ಡರ್‌ಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರೆ, ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಬೇಕು ಎಂದು ಜೆಡಿಎಸ್ ಗುಂಪಿನ ನಾಯಕ ಟಿ. ತಿಮ್ಮೇಗೌಡ ಅವರು ಕೋರಿದರು.

ವಸತಿ ಬಡಾವಣೆಗಳಲ್ಲಿ ಮಾಲ್ ಹಾಗೂ ಅಪಾರ್ಟ್‌ವೆುಂಟ್‌ಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು ಎಂದು ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್ ಆಗ್ರಹಿಸಿದರು. ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ, ಉಪ ಮೇಯರ್ ಎಲ್. ಶ್ರೀನಿವಾಸ್, ವಿಶೇಷ ಆಯುಕ್ತ ಕೆ.ಆರ್. ನಿರಂಜನ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಎಂಜಿನಿಯರ್‌ಗಳು ರಾಜಕಾಲುವೆ ವಿಭಾಗಕ್ಕೆ..!

ಖಾತೆ ಹಾಗೂ ನಕ್ಷೆ ಮಂಜೂರಾತಿಗೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವಂತಹ ನಗರ ಯೋಜನೆ ವಿಭಾಗದ ಎಂಜಿನಿಯರ್‌ಗಳನ್ನು ರಾಜಕಾಲುವೆ (ಮಳೆ ನೀರಿನ ಚರಂಡಿ) ವಿಭಾಗಕ್ಕೆ ಕಳಿಸುತ್ತಿದ್ದೇವೆ ಎಂದು ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ತಿಳಿಸಿದರು.

`ನಗರ ಯೋಜನೆ ವಿಭಾಗಕ್ಕೆ ಬಹಳಷ್ಟು ಮಂದಿ ಎಂಜಿನಿಯರ್‌ಗಳು ಅತ್ಯಂತ ಉತ್ಸಾಹದಿಂದ ಬರುತ್ತಾರೆ. ಒಂದು ವಲಯದಲ್ಲಿ ನಾಲ್ವರು ಸಹಾಯಕ ನಿರ್ದೇಶಕರಿರುವುದು ಕೂಡ ಸಮಸ್ಯೆಗೆ ಕಾರಣ. ಹೀಗಾಗಿ, ಈ ಸಂಖ್ಯೆಯನ್ನು ಎರಡಕ್ಕೆ ಇಳಿಸಲು ನಿರ್ಧರಿಸಲಾಗಿದೆ~ ಎಂದು ಅವರು ಹೇಳಿದರು.

`ಇಂತಹುದೇ ವಲಯಕ್ಕೆ ಅದರಲ್ಲೂ ನಗರ ಯೋಜನೆ ವಿಭಾಗಕ್ಕೇ ನಿಯೋಜನೆ ಮಾಡಲು ಸರ್ಕಾರದಿಂದ ಆದೇಶ ತರುವಂತಹ ಬಹಳಷ್ಟು ಮಂದಿ ಎಂಜಿನಿಯರ್‌ಗಳು ನಮ್ಮಲ್ಲಿದ್ದಾರೆ. ಇಂತಹ ಅಧಿಕಾರಿಗಳ ಉದ್ದೇಶವೇ ಬೇರೆಯಾಗಿರುವುದರಿಂದ ಖಾತೆ ಅಥವಾ ನಕ್ಷೆ ಮಂಜೂರಾತಿಗೆ ವಿಳಂಬ ಮಾಡುವುದೇ ಅವರ ಕೆಲಸ~ ಎಂದರು.

ಮೂರನೇ ಸ್ಥಾನದಲ್ಲಿ ಬೆಂಗಳೂರು

ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ನವದೆಹಲಿ, ಮುಂಬೈ ಹೊರತುಪಡಿಸಿದರೆ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. `ನೈಸ್~ ಕಾರಿಡಾರ್ ಸೇರಿದಂತೆ ನಗರದ ವಿಸ್ತೀರ್ಣ 840 ಚದರ ಕಿ.ಮೀ. ಅದೇ ಚನ್ನೈ ನಗರದ ವಿಸ್ತೀರ್ಣ 485 ಚದರ ಕಿ.ಮೀ. ಬೆಂಗಳೂರಿನ ಜನಸಂಖ್ಯೆ 90 ಲಕ್ಷ. ಇನ್ನು ವಾಹನಗಳ ಸಂಖ್ಯೆ 42 ಲಕ್ಷ. ಪ್ರತಿ ದಿನ ಹೊಸದಾಗಿ ನೋಂದಣಿಯಾಗುತ್ತಿರುವ ವಾಹನಗಳ ಸಂಖ್ಯೆ 1000.

ಐ.ಟಿ. ಕ್ಷೇತ್ರದಲ್ಲಿ ಈ ಹಿಂದೆ ಬೆಂಗಳೂರಿಗೆ ಪೈಪೋಟಿ ನೀಡುತ್ತಿದ್ದ ನೆರೆಯ ಆಂಧ್ರದ ರಾಜಧಾನಿ ಹೈದರಾಬಾದ್‌ನಲ್ಲಿ 18 ಸಾವಿರ ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಯಾಗುತ್ತಿದ್ದರೆ, ಅದೇ ಬೆಂಗಳೂರಿನಲ್ಲಿ 70 ಸಾವಿರ ಕೋಟಿ ಆದಾಯ ತೆರಿಗೆ ಪಾವತಿಸಲಾಗುತ್ತಿದೆ.

ಇನ್ನು, ಕರ್ನಾಟಕದ ಶೇ 40ರಷ್ಟು ಅಂದರೆ, 3000 ಮೆಗಾವಾಟ್ ವಿದ್ಯುತ್ ಬೆಂಗಳೂರಿನಲ್ಲಿಯೇ ಬಳಕೆಯಾಗುತ್ತಿದೆ. ನೆರೆಯ ಮೈಸೂರಿನಲ್ಲಿ 300ರಿಂದ 350 ಟನ್ ತ್ಯಾಜ್ಯ ಉತ್ಪತ್ತಿಯಾದರೆ, ಬೆಂಗಳೂರಿನಲ್ಲಿ 5000 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.

ಪ್ರಸ್ತುತ ಬೆಂಗಳೂರು ನಗರಕ್ಕೆ 910 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದೆ. ಕಾವೇರಿ 4ನೇ ಹಂತ, 2ನೇ ಘಟ್ಟ ಅನುಷ್ಠಾನಕ್ಕೆ ಬಂದಲ್ಲಿ 1400 ಮಿಲಿಯನ್ ಲೀಟರ್ ನೀರು ಪೂರೈಕೆಯಾಗಲಿದೆ.

ಬಿಲ್ಡರ್‌ಗಳ ಸಭೆಯಲ್ಲಿ ಈ ಅಂಕಿ-ಅಂಶಗಳನ್ನು ನೀಡಿದ ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, `ಬೆಂಗಳೂರಿನ ಬೆಳವಣಿಗೆಗೆ ನೀವೇ ಕಾರಣ. ಇದು ನಿಮ್ಮ ನಗರ~ ಎಂದು ಹೇಳಿ ಶಹಭಾಷ್‌ಗಿರಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT