ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಲಿನ ಹುಡುಗ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಊರ ಜನ ಕಾಡಿಗೆ ಹೋಗಬೇಕು ಅಂದರೆ ಪುಟ್ಟಜ್ಜಿ ಮನೆ ಮುಂದಿನಿಂದಲೇ ಹೋಗಬೇಕು. ಹೀಗೆ ಹೋಗುವವರೆಲ್ಲ ಪುಟ್ಟಜ್ಜಿಯನ್ನ ಮಾತನಾಡಿಸಿಕೊಂಡು ಹೋಗಬೇಕು. ಇಲ್ಲ ಪುಟ್ಟಜ್ಜಿಯೇ ಅವರನ್ನ ಮಾತನಾಡಿಸುವುದೂ ಇತ್ತು. ಸದಾ ಮನೆಯ ಮುಂದೆ ಕೂತು ಪುಟ್ಟಜ್ಜಿ ಅದು ಇದು ಮಾಡುವವಳು.

ಹೀಗಾಗಿ ಅವಳ ಕಣ್ಣು ತಪ್ಪಿಸಿ ಕೊಂಡು ಯಾರೂ ಕಾಡಿಗೆ ಹೋಗಲು ಆಗುತ್ತಿರಲಿಲ್ಲ ಅವಳ ಕಣ್ಣು ತಪ್ಪಿಸಿ ಹೋಗುವ ಪ್ರಮೇಯ ಕೂಡ ಯಾರಿಗೂ ಇರಲಿಲ್ಲ. ಜನ ಕಾಡಿಗೆ ಹೋಗುವುದಾದರೂ ಏಕೆ? ಯಾವುದೋ ಮರದ ಬೇರಿಗೆ, ತೊಗಟಿಗೆ, ಇಲ್ಲ ಎಲೆಗೆ ಹೋಗುತ್ತಾರೆ.
 
ಮನೆಯಲ್ಲಿ ಜನರಿಗೆ ಜಾನುವಾರಿಗೆ ಔಷಧಿ ಮಾಡಲು ಇದು ಬೇಕಾಗುತ್ತದೆ. ಇಲ್ಲವೆ ಮರದ ಕಂಬಕ್ಕೆ, ನೇಗಿಲು ಮಾಡಲು, ಇಲ್ಲವೆ ಕೊಡಲಿ ಕಾವು ಮಾಡಲು ಮರ ತರಲು ಹೋಗುತ್ತಾರೆ. ಹೆಂಗಸರು ಮನೆಯ ಒಲೆಯಲ್ಲಿ ಅಡಿಗೆ ಮಾಡಲು ಸೌದೆ ತರಲು ಹೋಗುತ್ತಾರೆ. ಇದೆಲ್ಲ ಪುಟ್ಟಜ್ಜಿಗೆ ಗೊತ್ತಿರುವುದೇ. ಹೀಗಾಗಿ ಕಾಡಿಗೆ ಹೊರಟವರನ್ನ ಸುಮ್ಮನೆ ಮಾತನಾಡಿಸಿ ತನ್ನ ಪಾಡಿಗೆ ಉಳಿಯುತ್ತಿದ್ದಳು ಪುಟ್ಟಜ್ಜಿ. ಒಂದು ದಿನ ಹೀಗಾಯಿತು:

ಮುಂಜಾನೆಯಲಿ ತಿಳಿ ಬೆಳಕು ಹರಡಿರಲು
ಮನೆಯ ಬಾಗಿಲಿಗೆ ಅಜ್ಜಿ ರಂಗೋಲೆ ಬರೆದಳು
ರಂಗೋಲೆ ಎಳೆ ಬರೆದು ಏಳುತಿರಲು
ಕಂಡಳು ಮುದ್ದು ಬಾಲಕನ ಕಾಡ ದಾರಿಯಲ್ಲಿ
ಕೈಯಲ್ಲಿ ಕೊಳಲಿತ್ತು ತಲೆಯಲ್ಲಿ ನವಿಲುಗರಿ
ಬಾಲಕನ ಮೈಯಲ್ಲಿ ಬತ್ತದುತ್ಸಾಹ
ನಗುನಗುತ ಆ ಬಾಲ ಕಾಡನ್ನು ಹೊಕ್ಕಿದ್ದ
ಕಣ್ತುಂಬಿ ನೋಡಿದಳು ಅಜ್ಜಿ ನಿಂತಿಲ್ಲಿ
ಅಜ್ಜಿ ಸಂಭ್ರಮ ಪಟ್ಟಳು. ಕಾಡಿಗೆ ಹೀಗೆ ಬಾಲಕನೊಬ್ಬ ಹೋದುದನ್ನ ಊರ ಜನರಿಗೆ ಹೇಳಲು ಅಜ್ಜಿ ಊರಗೆ ಹೊರಟಳು.

ಗೊತ್ತೇನೆ ಪಾರೋತಿ, ಗೊತ್ತೇನೆ ಸಾವಂತ್ರಿ
ಬಾಲನೊಬ್ಬನು ಹೋದ ಈ ಕಾಡಿಗೆ
ಕೈಯಲಿ ್ಲಕೊಳಲಿತ್ತು ತಲೆಗೆ ನವಿಲಿನ ಗರಿ
ಮುದ್ದು ಮುದ್ದಾಗಿತ್ತು ಅವನ ನಡಿಗೆ   
ಈ ಸುದ್ದಿ ಕೇಳಿ ಊರಿನ ಜನ ಕೂಡ ಸಂಭ್ರಮಿಸಿದರು. `ಹೌದೆ ಹೌದೆ?~ ಎಂದು ಕೇಳಿದರು. ಹಾಗಾದರೆ ನಾವೂ ಕಾಡಿಗೆ ಹೋಗಿ ಅವನನ್ನ  ನೋಡೋಣ ನಡೆಯಿರಿ ಎಂದು ಎಲ್ಲರೂ ಹೊರಟರು. ಗುಂಪು ಗುಂಪಾಗಿ ಕಾಡಿಗೆ ಬಂದರು. ಆ ಕಾಡು ಈವರೆಗೆ ಒಣಗಿ ನಿಂತಿತ್ತು, ಎಲೆಗಳು ಬಾಡಿ ನೆಲಕ್ಕೆ ಬಿದ್ದಿದ್ದವು. ಮರಗಳಲ್ಲಿ ಹೂವು ಕಾಯಿ ಇರಲಿಲ್ಲ ಹಳ್ಳಗಳಲ್ಲಿ ನೀರಿರಲಿಲ್ಲ. ಬಂಡೆಗಳು ಅಲ್ಲಲ್ಲಿ ಬಾಯಿ ತೆರೆದಿದ್ದವು:

ಬಿಸಿಲ ಝಳಕೆ ಮರವು ಒಣಗಿ ಬಳ್ಳಿ ಬಾಡಿರೆ
ನೀರ ಹಳ್ಳ ಬರಿಯದಾಗಿ ಉಸುಕು ತುಂಬಿರೆ
ಹಕ್ಕಿಪಕ್ಷಿ ನೀರಿಲ್ಲದೆ ಬಾಯಾರಿ ದಣಿದಿರೆ
ಮಳೆಯು ಬರುವ ಗಳಿಗೆಗಾಗಿ ಕಾಡು ಕಾದಿರೆ.
ಕಾಡಿನಲ್ಲಿ ಕಾಡಕಿಚ್ಚು ಹೊತ್ತಿ ಉರಿದಿರೆ
ಮರಗಳೆಲ್ಲ ಬೆಂಕಿ ಹೊತ್ತಿ ಬೂದಿಯಾಗಿರೆ
ಹಸಿರು ಎಲ್ಲೂ ಇಲ್ಲವಾಗಿ ಬಿಸಿಲುಗುದುರೆ ಕುಣಿದಿರೆ
ನೀರೆ ನೀರು ಎಂದು ಜೀವ ಬಾಯಾರಿ ದಣಿದಿರೆ...

ಕಾಡು ಹೀಗೆ ಸುಡುಗಾಡಾಗಿ ಪರಿಣಮಿಸಿರಲು ಜನರಿಗೆ ಬೇಸರವಾಗಿತ್ತು. ಜನ ಕಾಡನ್ನೇ ಮರೆತಿದ್ದರು. ಕಾಡಿನ ಸಹವಾಸವೇ ಬೇಡ ಎಂದು ಜನ ದೂರ ಸರಿದಿದ್ದರು. ಆದರೆ ಈಗ ನೋಡುತ್ತಾರೆ ಜನ;
ಹರಿದಿತ್ತು ಹಳ್ಳವು, ಧುಮುಕಿತ್ತು ನದಿಯೊಂದು
ಎಲ್ಲೆಲ್ಲು ಹೂ ಬಿಟ್ಟ ಮರ ಬಳ್ಳಿಯು
ಕೋಗಿಲೆ ಕುಕಿಲಿತ್ತು ಗಿಳಿಯ ಸಿಳ್ಳೆಯು ಇತ್ತು
ಹಕ್ಕಿಗಳ  ಕೂಜನವು ಎಲ್ಲೆಲ್ಲಿಯೂ.
ಜಿಂಕೆಗಳ ನಲಿದಾಟ, ಮೊಲಗಳಾ ನೆಗೆದಾಟ
ಕಾನನಕೆ ಮುದ ಬಂದು ಅದು ಕುಣಿಯಿತು
ಹಸಿರಿನ ವೈಭವ ಹೂವುಗಳ ಪರಿಮಳ
ದೇವಲೋಕವೇ ಧರೆಗೆ ಇಳಿದು ಬಂದಿತ್ತು

ಜನ ಈ ಸುಂದರ ಸೊಬಗನ್ನ ನೋಡಿದರು. ಅಂತೆಯೇ ತಾವು ಕಾಡಿಗೆ ಬಂದುದೇಕೆ ಅನ್ನುವುದು ಅವರಿಗೆ ನೆನಪಾಗಿ ಕೊಳಲನ್ನ ಹಿಡಿದ ಹುಡುಗನನ್ನ ಹುಡುಕಿಯೇ ಹುಡುಕಿದರು. ಮರದ ಮೇಲೆ, ಬಂಡೆಗಳ ಮರೆಯಲ್ಲಿ ಅವನು ಕಾಣಲಿಲ್ಲ. ಗುಹೆಯಲ್ಲಿ ಪೊಟರೆಯಲ್ಲಿ ಅವನಿಲ್ಲ. ನಿರಾಶೆಯಾಯಿತು ಜನರಿಗೆ. ಎಲ್ಲ ಬಂದು ಅಜ್ಜಿಗೆ ಕೇಳಿದರು.

`ಅಜ್ಜಿ ಅಜ್ಜಿ ನೀನು ಹೇಳಿದ ಆ ಹುಡುಗ ಎಲ್ಲಿ?~. ಅಜ್ಜಿಯೂ ಅಲ್ಲೆಲ್ಲ ಹುಡುಕಾಡಿದಳು. ಆ ಹುಡುಗನ್ನ ಕಾಣದೆ ಅಜ್ಜಿಗೂ ಬೇಸರವಾಯಿತು. ಆಕೆ ಆ ಹುಡುಗನನ್ನ ಮತ್ತೆ ಮತ್ತೆ ಹುಡುಕಿದಳು. ನಂತರ ಅವಳು ನಕ್ಕಳು. ಅಯ್ಯೋ ನನ್ನ ಮೂರ್ಖತನವೇ ಎಂದಳು. ನಂತರ ಇನಿದನಿಯಲ್ಲಿ ಅಜ್ಜಿ ಹಾಡಿದಳು.

ಅರಳಿರುವಾ ಹೂವಿನಲಿ ಹಕ್ಕಿಯಾ ಕೊರಳಿನಲಿಧುಮುಕುವಾ ಹಳ್ಳದಲಿ ಅವನಿರುವನಲ್ಲಾಚಿಮ್ಮುವಾ ಜಿಂಕೆಯಲಿ ನೆಗೆಯುವಾ ಮೊಲದಲ್ಲಿಹಸಿರಿನಾ ಬಯಲಿನಲಿ ಅವನಿರುವನಲ್ಲಾ.

ಅಜ್ಜಿಯ ಮಾತನ್ನ ಕೇಳಿದ ಜನ ಆ ಕೊಳಲಿನ ಹುಡುಗನನ್ನ ಅಲ್ಲಿ ಇಲ್ಲಿ ಹುಡುಕುವುದನ್ನ ಬಿಟ್ಟು ಇಡೀ ಕಾಡಿನಲ್ಲಿ ಕಾಣತೊಡಗಿದರು.
(ಸ್ಫೂರ್ತಿ: ಪುತಿನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT