ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆ ಅಳವಡಿಕೆಗೆ ಮೀನಮೇಷ

Last Updated 30 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಣ್ಣು ಕುಸಿತದಿಂದ ನಗರದ ಎಂ.ಜಿ. ರಸ್ತೆಯ ಟ್ರಿನಿಟಿ ವೃತ್ತದಿಂದ ರಿಚ್‌ಮಂಡ್ ಜಂಕ್ಷನ್‌ವರೆಗಿನ ರಸ್ತೆಯಲ್ಲಿ ಜಲಮಂಡಳಿ ಕೈಗೊಂಡಿರುವ ಒಳಚರಂಡಿ ಕೊಳವೆ ಅಳವಡಿಕೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಹಾಗಾಗಿ ಈ ಭಾಗದಲ್ಲಿ ಇನ್ನೂ ಒಂದು ತಿಂಗಳ ಕಾಲ ಸಂಚಾರಕ್ಕೆ ಅಡಚಣೆಯಾಗಲಿದೆ.

ಟ್ರಿನಿಟಿ ವೃತ್ತದಿಂದ ರಿಚ್‌ಮಂಡ್ ಜಂಕ್ಷನ್‌ವರೆಗಿನ (ಹಾಸ್ಮಟ್ ಆಸ್ಪತ್ರೆ ಬಳಿ) ರಸ್ತೆಯಲ್ಲಿ 690 ಮೀಟರ್ ಉದ್ದದ ಮಾರ್ಗದಲ್ಲಿ ಒಳಚರಂಡಿ ಕೊಳವೆ ಬದಲಾವಣೆ ಕಾರ್ಯವನ್ನು ಜಲಮಂಡಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭಿಸಿತ್ತು. ಆದರೆ ಮಣ್ಣು ಕುಸಿಯುತ್ತಿರುವುದರಿಂದ ಕಾಮಗಾರಿಗೆ ಅಡಚಣೆಯಾಗುತ್ತಿದೆ.

`ರಿಚ್‌ಮಂಡ್ ಜಂಕ್ಷನ್ ಬಳಿ 690 ಮೀಟರ್ ಉದ್ದದ ಮಾರ್ಗದಲ್ಲಿ ಒಳಚರಂಡಿ ಕೊಳವೆ ಅಳವಡಿಕೆ ಕಾಮಗಾರಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಯಿತು. ಸದ್ಯ ಈ ಮಾರ್ಗದಲ್ಲಿರುವ 12 ಇಂಚು ಅಗಲದ ಕೊಳವೆಯನ್ನು ತೆರವುಗೊಳಿಸಿ 18 ಇಂಚು ಅಗಲದ ಕೊಳವೆ ಅಳವಡಿಸಲಾಗುತ್ತಿದೆ~ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಅದಕ್ಕೂ ಮೊದಲೇ ಕೆಲಸ ಮುಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಸುಮಾರು 6 ಮೀಟರ್ ಆಳದಲ್ಲಿ ಕೊಳವೆ ಅಳವಡಿಸಲಾಗುತ್ತಿದೆ. ಆದರೆ ಮಣ್ಣು ಸಡಿಲವಾಗಿದ್ದು, ಕುಸಿಯುತ್ತಿರುವುದರಿಂದ ಕಾಮಗಾರಿಯ ವೇಗ ಕುಂಠಿತಗೊಂಡಿದೆ~ ಎಂದರು.
 
`ಈವರೆಗೆ 460 ಮೀಟರ್ ಉದ್ದದ ಮಾರ್ಗದಲ್ಲಿ ಕೊಳವೆ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಬಾಕಿ ಉಳಿದ 230 ಮೀಟರ್ ಮಾರ್ಗದಲ್ಲಿ ಇನ್ನೊಂದು ತಿಂಗಳಲ್ಲಿ ಕೊಳವೆ ಅಳವಡಿಕೆ ಕಾರ್ಯ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು~ ಎಂದು ವಿವರಿಸಿದರು.

ವಿಪರೀತ ವಾಹನ ದಟ್ಟಣೆ: ಕಾಮಗಾರಿ ಹಿನ್ನೆಲೆಯಲ್ಲಿ ರಿಚ್‌ಮಂಡ್ ಜಂಕ್ಷನ್‌ನಿಂದ ಟ್ರಿನಿಟಿ ವೃತ್ತದ ಕಡೆಗಿನ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಇದರಿಂದ ಬೆಳಿಗ್ಗೆ ಹಾಗೂ ಸಂಜೆ ವೇಳೆ ವಿಪರೀತ ವಾಹನ ದಟ್ಟಣೆ ಉಂಟಾಗುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

`ಟ್ರಿನಿಟಿ ವೃತ್ತದಿಂದ ರಿಚ್‌ಮಂಡ್ ಜಂಕ್ಷನ್‌ವರೆಗೆ ಒಳ ಚರಂಡಿ ಕೊಳವೆ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಈ ಭಾಗದಲ್ಲಿ ವಾಹನ ದಟ್ಟಣೆ ತೀವ್ರವಾಗಿದೆ. ಜಲಮಂಡಳಿಯು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದರೂ ಮಣ್ಣು ಕುಸಿತದಿಂದ ವಿಳಂಬವಾಗುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಈ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗುವುದು~ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT