ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆ ಬಾವಿ ನೀರು ಸೇವಿಸಿ ಜನ ಅಸ್ವಸ್ಥ

Last Updated 2 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ಜಲಮಂಡಳಿಯು ಸಮರ್ಪಕವಾಗಿ ಕುಡಿಯುವ ನೀರು ಪೂರೈಸದ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳ (ಬೋರ್‌ವೆಲ್) ನೀರು ಬಳಸುತ್ತಿರುವ ಮಲ್ಲೇಶ್ವರದ ಸೌತ್‌ಎಂಡ್ ರಸ್ತೆ ನಿವಾಸಿಗಳು ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ.
ಒಳಚರಂಡಿಯ ಕೊಳಚೆ ನೀರು ಅಂತರ್ಜಲಕ್ಕೆ ಸೇರ್ಪಡೆಯಾಗಿರುವುದರಿಂದ ಕೊಳವೆ ಬಾವಿಗಳ ನೀರು ಕಲುಷಿತಗೊಂಡಿದೆ. ಇಂತಹ ಕಲುಷಿತ ನೀರನ್ನು ಉಪಯೋಗಿಸುತ್ತಿರುವ ಸಾರ್ವಜನಿಕರಿಗೆ ಒಂದು ವಾರದಿಂದ ವಾಂತಿ, ಅತಿಸಾರ ಮತ್ತು ಚರ್ಮ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ.

ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವುದರಿಂದ ಕೊಳೆ ನೀರು ಸೋರಿಕೆಯಾಗಿ ಅಂತರ್ಜಲದ ಜತೆ ಸೇರುತ್ತಿದೆ. ಆಗಾಗ್ಗೆ ಮ್ಯಾನ್‌ಹೋಲ್‌ಗಳಿಂದ ಕೊಳಚೆ ನೀರು ಹೊರ ಹರಿದು ಅಂತರ್ಜಲಕ್ಕೆ ಸೇರ್ಪಡೆಯಾಗುತ್ತಿದೆ.

‘ಒಳಚರಂಡಿಗಳ ಕೊಳವೆಗಳನ್ನು ಸ್ವಚ್ಛಗೊಳಿಸುವಂತೆ ಜಲಮಂಡಳಿ ಎಂಜಿನಿಯರ್‌ಗಳಿಗೆ ಆರು ತಿಂಗಳಿಂದ ಮನವಿ ಮಾಡಲಾಗುತ್ತಿದೆ. ಆದರೆ ಎಂಜಿನಿಯರ್‌ಗಳು ಮನವಿಗೆ ಸ್ಪಂದಿಸುತ್ತಿಲ್ಲ’ ಎಂದು ಸೌತ್‌ಎಂಡ್ ರಸ್ತೆ ನಿವಾಸಿ ರಮೇಶ್ ದೂರಿದರು.

‘ಕೊಳವೆ ಬಾವಿಯ ನೀರಿನಲ್ಲಿ ಕೆಟ್ಟ ವಾಸನೆ ಬರಲಾರಂಭಿಸುತ್ತಿದ್ದಂತೆ ಆ ನೀರನ್ನು ಬಳಸುತ್ತಿಲ್ಲ. ಈ ನಡುವೆ ಜಲಮಂಡಳಿಯು ಸಮರ್ಪಕವಾಗಿ ನೀರು ಪೂರೈಸದ ಕಾರಣ ಸಾಕಷ್ಟು ತೊಂದರೆಯಾಗಿದೆ’ ಎಂದು ವೀಣಾವಿಹಾರ್ ಅಪಾರ್ಟ್‌ಮೆಂಟ್ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.

‘ಅಪಾರ್ಟ್‌ಮೆಂಟ್‌ನಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಅಲ್ಲದೇ ಕೆಟ್ಟು ಹೋಗಿರುವ ಬೋರ್‌ವೆಲ್‌ಗಳನ್ನು ಸರಿಪಡಿಸಿದ್ದೇವೆ. ಆದರೆ ಕೊಳವೆ ಬಾವಿಗಳಲ್ಲಿ ಒಳಚರಂಡಿ ನೀರು ತುಂಬಿದೆ’ ಎಂದು ವೀಣಾವಿಹಾರ್ ಅಪಾರ್ಟ್‌ಮೆಂಟ್ ಮಾಲೀಕ ವಿಶ್ವನಾಥ್ ಹೇಳಿದರು.

ಸೌತ್‌ಎಂಡ್ ರಸ್ತೆಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಲಮಂಡಳಿ ಸಿಬ್ಬಂದಿ ‘ಯಾವ ಸ್ಥಳದಲ್ಲಿ ಒಳಚರಂಡಿ ನೀರು ಅಂತರ್ಜಲಕ್ಕೆ ಸೇರುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಆ ಭಾಗದಲ್ಲಿ ಒಳಚರಂಡಿ ಕೊಳವೆಗಳನ್ನು ಬದಲಿಸಲಾಗುತ್ತದೆ. ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಭರವಸೆ ನೀಡಿದರು.
‘ಸದ್ಯದಲ್ಲೇ ಎಂಜಿನಿಯರ್‌ಗಳಿಂದ ಸ್ಥಳ ಪರಿಶೀಲನೆ ಮಾಡಿ, ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ನಂತರ ಒಳಚರಂಡಿ ಪೈಪ್ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಲಮಂಡಳಿ ಮುಖ್ಯ ಎಂಜಿನಿಯರ್ ಟಿ.ವೆಂಕಟರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT