ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆ ಬಾವಿ ವಿದ್ಯುತ್ ಸಂಪರ್ಕಕ್ಕೆ ಹಣವಿಲ್ಲ!

Last Updated 15 ಜೂನ್ 2011, 9:40 IST
ಅಕ್ಷರ ಗಾತ್ರ

ಮಂಡ್ಯ: ಕಡು ಬಡವರಿಗೆ ನೆರವಾಗುವ ಉದ್ದೇಶದಿಂದ ವಿವಿಧ ನಿಗಮಗಳ ಮೂಲಕ ಜಿಲ್ಲೆಯಲ್ಲಿ ಸಾವಿರಾರು ರೂಪಾಯಿ ವೆಚ್ಚಮಾಡಿ ಕೊರೆಸಿರುವ ಬಹುತೇಕ ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿಲ್ಲ.

ಸಾವಿರಾರು ರೂಪಾಯಿ ವೆಚ್ಚ ಮಾಡಿ ಕೊಳವೆ ಬಾವಿ ಕೊರೆಸುವ ನಿಗಮಗಳು, ಈ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲು ಚೆಸ್ಕಾಂಗೆ ನಿಗದಿತ ಹಣವನ್ನು ಸಂದಾಯ ಮಾಡದೇ ಇರುವುದು ಈ ಲೋಪಕ್ಕೆ ಕಾರಣ.

ನಿಗಮಗಳು ಹಣ ಸಂದಾಯ ಮಾಡಲು ವಿಳಂಬ ಮಾಡುತ್ತಿದ್ದರೆ, ಚೆಸ್ಕಾಂ ಅಧಿಕಾರಿಗಳು ಹಣ ಸಂದಾಯವಾಗದೇ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಬಿಗಿ ನಿಲುವು ತಳೆದಿದ್ದಾರೆ. ಹೀಗಾಗಿ, ಕೊಳವೆಬಾವಿ ಕೊರೆಸುವ ಮೂಲ ಉದ್ದೇಶವೇ ಇಲ್ಲಿ ವಿಫಲವಾಗಿದ್ದು, ನಿಗಮಗಳ ನಿರ್ಲಕ್ಷ್ಯತನದಿಂದಾಗಿ ಫಲಾನುಭವಿಗಳಿಗೆ ಯೋಜನೆಯ ನೆರವು ತಲುಪುತ್ತಿಲ್ಲ.

ಈ ವಿಷಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಗೆ ಬಂದಿದ್ದು, ವಿದ್ಯುತ್ ಸಂಪರ್ಕ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರೂ ಯಾವುದೇ ಪ್ರಗತಿ ಕಂಡಿಲ್ಲ ಎಂಬುದೇ ವಿಪರ್ಯಾಸ.

ಲಭ್ಯ ಮಾಹಿತಿಯ ಅನುಸಾರ, ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಕೊರೆಸಿರುವ ನೂರಕ್ಕೂ ಹೆಚ್ಚು ಕೊಳವೆ ಬಾವಿಗಳು, ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕೊರೆಸಿರುವ 41 ಕೊಳವೆ ಬಾವಿಗಳು, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಕೊರೆಸಿರುವ 17 ಕೊಳವೆ ಬಾವಿಗಳು ಹೀಗೆ ವಿದ್ಯುತ್ ಸಂಪರ್ಕ ಇಲ್ಲದೇ ನೆನೆಗುದಿಗೆ ಬಿದ್ದಿವೆ.

ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಕೊರೆಸಲಾದ 197 ಕೊಳವೆ ಬಾವಿಗಳ ಪೈಕಿ ಮೇ 2011ರ ವೇಳೆಗೆ ಕೇವಲ 47ಕೊಳವೆ ಬಾವಿಗಳಿಗೆ ಮಾತ್ರವೇ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ.

ಈ ವರ್ಷದ ಮಾರ್ಚ್ 11ರಂದು ನಡೆದ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಾಗ ಗಂಗಾ ಕಲ್ಯಾಣ ಯೋಜನೆಯೂ ಸೇರಿದಂತೆ ಬಾಕಿ ಉಳಿದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಅವರು ಸೂಚನೆ ನೀಡಿದ್ದರು.

ಸೋಮವಾರ (ಜೂ. 13) ಮತ್ತೆ ಈ ವಿಷಯ ಚರ್ಚೆಗೆ ಬಂದಿದ್ದು, ಯಾರು ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬುದೇ ಸಂಬಂಧಿಸಿ ನಿಗಮ ಮತ್ತು ಇಲಾಖೆಗಳ ಅಧಿಕಾರಿಗಳ ನಡುವೆ ಚರ್ಚೆಗೆ ಆಸ್ಪದವಾಯಿತು.

ನಡೆದ ಸಭೆಯಲ್ಲಿಯೂ ಸಿಇಒ ಅವರು, ವಿದ್ಯುತ್ ಸಂಪರ್ಕ ದೊರೆಯದ ಬಗೆ ಕಾಳಜಿ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅಧಿಕಾರಿಗಳೂ ತಲೆ ಅಲ್ಲಾಡಿಸಿದ್ದಾರೆ. ಮುಂದಿನ ಪ್ರಗತಿ ಪರಿಶೀಲನಾ ಸಭೆಯ ವೇಳೆಗಾದರೂ ನಿರೀಕ್ಷಿತ ಪ್ರಗತಿ ಆಗಿರುತ್ತದಾ ಎಂಬುದು ಕುತೂಹಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT