ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆ ತುಂಬಿವೆ ಕೆರೆ, ಕಲ್ಯಾಣಿಗಳು ಕಣ್ಮರೆ

ಬಾಯಾರಿದೆ ಬೆಂಗಳೂರು
Last Updated 17 ಫೆಬ್ರುವರಿ 2013, 19:33 IST
ಅಕ್ಷರ ಗಾತ್ರ

ಬೆಂಗಳೂರು: ತನ್ನದೇ ಆದ ನೀರಿನ ಎಲ್ಲ ಮೂಲಗಳನ್ನು ಈಗಾಗಲೇ ಕಳೆದುಕೊಂಡಿರುವ ಮಹಾನಗರ,ದಾಹವನ್ನು ಮಾತ್ರ ಇನ್ನಿಲ್ಲದಂತೆ ಹೆಚ್ಚಿಸಿಕೊಂಡಿದೆ. ಕಳೆದುಹೋದ ಜಲಮೂಲ ಮತ್ತು ಹೆಚ್ಚಾದ ದಾಹದ ಪರಿಣಾಮ ಬಿಡಿಸಲಾಗದ ಕಗ್ಗಂಟೊಂದು ತಳಕು ಹಾಕಿಕೊಂಡಿದೆ.

ನದಿ ದಂಡೆಗಳ ಮೇಲೆಯೇ ಬಹುತೇಕ ನಾಗರಿಕ ಸಂಸ್ಕೃತಿಗಳು ಬೆಳೆದಿವೆ. ಸುಮಾರು 500 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ನಮ್ಮ ಬೆಂಗಳೂರು ಅಂತಹ ಯಾವ ನದಿಯ ದಂಡೆಯನ್ನೂ ಹೊಂದಿಲ್ಲ. ನಾಡಪ್ರಭು ಕೆಂಪೇಗೌಡ ಇದೇ ಕಾರಣಕ್ಕಾಗಿ ಕೆರೆ, ಬಾವಿ, ಕಾಲುವೆಗಳ ನಿರ್ಮಾಣದ ಕಡೆಗೆ ಲಕ್ಷ್ಯ ವಹಿಸಿದರು. ಆ ದಿನಗಳಲ್ಲಿ ನಗರದ ವ್ಯಾಪ್ತಿಯಲ್ಲಿ 250 ಕೆರೆಗಳಿದ್ದವು. ನೀರಿನ ಬೇಡಿಕೆಯನ್ನು ಅವುಗಳೇ ಈಡೇರಿಸುತ್ತಿದ್ದವು.

ಕೆಂಪಾಂಬುದಿ, ಧರ್ಮಾಂಬುದಿ, ಸಂಪಂಗಿ, ಕೆಂಪಾಪುರ ಅಗ್ರಹಾರ, ಹಲಸೂರು (ಎಷ್ಟೊಂದು ಅಪ್ಯಾಯಮಾನ ಆಗಿವೆಯಲ್ಲವೆ ಈ ಹೆಸರುಗಳು?) ಕೆರೆಗಳು ನಗರಕ್ಕೆ ಅಗತ್ಯವಾದ ನೀರು ಪೂರೈಸುತ್ತಿದ್ದವು. ಕಲ್ಯಾಣಿಗಳು-ತೆರೆದ ಬಾವಿಗಳು ಸಮೃದ್ಧವಾಗಿದ್ದವು.

ಬೆಂಗಳೂರು ನೆಮ್ಮದಿಯಿಂದ ಬದುಕಿದ್ದಾಗಲೇ ದಾಂಗುಡಿ ಇಟ್ಟವರು ಬ್ರಿಟಿಷರು. ಸೈನಿಕರ ತಾಣಕ್ಕಾಗಿ ದಂಡು ಪ್ರದೇಶವನ್ನು ಇಲ್ಲಿಯ ಆಹ್ಲಾದಕರ ವಾತಾವರಣದಲ್ಲಿ ನಿರ್ಮಿಸಲಾಯಿತು. ಅಲ್ಲಿಗೆ ನೀರೊದಗಿಸುವ ಪ್ರಶ್ನೆ ಬಂದಾಗ ಉತ್ತರವಾದವಳು ಅರ್ಕಾವತಿ.

ನಂದಿ ದುರ್ಗದಲ್ಲಿ ಜನಿಸಿ ಹರಿಯುವ ಅರ್ಕಾವತಿಯಿಂದ ನೀರು ಪಡೆಯಲು ಹೆಸರಘಟ್ಟದ ಬಳಿ ಚಾಮರಾಜೇಂದ್ರ ಜಲ ಸಂಗ್ರಹಾಗಾರ ನಿರ್ಮಿಸಲಾಯಿತು. ಆಗಿದ್ದ ಜನಸಂಖ್ಯೆ 1.80 ಲಕ್ಷ. ಇಷ್ಟು ಜನರಿಗೆ ಹೆಸರಘಟ್ಟ ಕೆರೆ ಆರಾಮವಾಗಿ ನೀರು ಪೂರೈಸುತ್ತಿತ್ತು. ಬ್ಯಾಡ ಮತ್ತು ಕಾಕೋಳ ಕೆರೆಗಳು ಹೆಸರಘಟ್ಟ ಕೆರೆಗೆ ಮೂಲವಾಗಿದ್ದವು. 1925ರಲ್ಲಿ ಈ ಜಲಾಶಯ ಸಂಪೂರ್ಣವಾಗಿ ಬತ್ತಿಹೋಯಿತು. ಆಗ ನೀರಿನ ಕೊರತೆ ಕಾಡಲಾರಂಭಿಸಿತು.

ಸರ್ ಎಂ. ವಿಶ್ವೇಶ್ವರಯ್ಯನವರು ತಿಪ್ಪಗೊಂಡನಹಳ್ಳಿ ಬಳಿ ಅದೇ ಅರ್ಕಾವತಿಯಿಂದ ನೀರು ಪಡೆಯಲು ಚಾಮರಾಜ ಸಾಗರ ಜಲಾಶಯ ನಿರ್ಮಾಣ ಮಾಡಿದರು. ಆಗ ನಿತ್ಯ 27 ದಶಲಕ್ಷ ಲೀಟರ್ ನೀರು ಪೂರೈಸುತ್ತಿದ್ದ ಈ ಜಲಾಶಯ, ಹಂತ-ಹಂತವಾಗಿ ಸಾಮರ್ಥ್ಯ ಹೆಚ್ಚಿಸಿಕೊಂಡು ಪ್ರತಿದಿನ 135 ದಶಲಕ್ಷ ಲೀಟರ್ ನೀರು ಪೂರೈಸಲು ಆರಂಭಿಸಿತು. ನಗರ ವೇಗವಾಗಿ ಬೆಳೆದಂತೆ ಬೇಡಿಕೆ ಪ್ರಮಾಣ ಹೆಚ್ಚುತ್ತಾ ಹೋಯಿತು. 1958ರಲ್ಲಿ ಸರ್ಕಾರ ಪರಿಣಿತರ ಸಮಿತಿ ರಚಿಸಿ ನೀರಿನ ಸಮಸ್ಯೆಗೆ ಪರಿಹಾರ ಮಾರ್ಗ ಕಂಡುಕೊಳ್ಳಲು ಯತ್ನಿಸಿತು. ಅರ್ಕಾವತಿ, ಹೇಮಾವತಿ, ಶಿಂಷಾ ಮತ್ತು ಕಾವೇರಿ ನದಿಗಳು ಎದುರಿಗಿದ್ದವು. ಕಾವೇರಿಯಿಂದಲೇ ನೀರು ಪಡೆಯುವುದು ಉತ್ತಮ ಎನ್ನುವ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಯಿತು.

ನೀರು ಪೂರೈಕೆ ಹೊಣೆ ನಿಭಾಯಿಸುವ ಸಲುವಾಗಿ 1964ರ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸ್ಥಾಪನೆ ಮಾಡಲಾಯಿತು. ಕಾವೇರಿ ಮೊದಲ ಹಂತದ ಯೋಜನೆಗೆ ಅಂದಿನ ಕೇಂದ್ರ ಸಚಿವ ಲಾಲ್ ಬಹಾದ್ದೂರ್ ಶಾಸ್ತ್ರಿ ಶಿಲಾನ್ಯಾಸ ನೆರವೇರಿಸಿದರು.

ನಂತರದ ದಿನಗಳಲ್ಲಿ 2, 3 ಮತ್ತು 4ನೇ (ಮೊದಲ ಘಟ್ಟ) ಹಂತದ ಯೋಜನೆಗಳು ಬಂದವು. ಈ ನಾಲ್ಕೂ ಹಂತದ ಯೋಜನೆಗಳಿಂದ ನಗರಕ್ಕೆ ನಿತ್ಯ 910 ದಶಲಕ್ಷ ಲೀಟರ್ ನೀರು ಸಿಗುತ್ತಿದೆ. ನಾಲ್ಕನೇ ಹಂತದ 2ನೇ ಘಟ್ಟದ ಯೋಜನೆ ಕೂಡ 2 ತಿಂಗಳ ಹಿಂದೆ ಪೂರ್ಣಗೊಂಡಿದೆ. ಪ್ರತಿದಿನ 500 ದಶಲಕ್ಷ ಲೀಟರ್ ನೀರು ಈ ಯೋಜನೆಯಿಂದ ಹೆಚ್ಚುವರಿಯಾಗಿ ಲಭ್ಯವಾಗಿದೆ.

ಕಳೆದ ಶತಮಾನದ ಕೊನೆಯ ದಶಕದ ಈಚೆಗಂತೂ ನಗರದ ಜನಸಂಖ್ಯೆ ಅಂಕೆ ಇಲ್ಲದಂತೆ ಬೆಳೆದಿದೆ. 1991ರಲ್ಲಿ 41 ಲಕ್ಷದಷ್ಟಿದ್ದ ಜನಸಂಖ್ಯೆ, 2011ರಲ್ಲಿ 78 ಲಕ್ಷಕ್ಕೇರಿ ಈಗ ಕೋಟಿಯ ಬೇಲಿಯನ್ನು ದಾಟಿದೆ. ಹೀಗಾಗಿ ನೀರಿನ ದಾಹ ಹೆಚ್ಚುತ್ತಲೇ ಇದೆ.

ಈ ನಡುವೆ ಕೆರೆಗಳೆಲ್ಲ ಮಾಯವಾಗಿದ್ದು, ಉಳಿದವುಗಳು ಕೊಳೆಯಾಗಿವೆ, ಪಾಚಿಗಟ್ಟಿವೆ, ಕೊಳಚೆ ಗುಂಡಿಯಾಗಿವೆ. ಕುಡಿಯಲು ಅಲ್ಲ, ಬಳಸುವುದಕ್ಕೂ ಆ ನೀರು ಯೋಗ್ಯವಾಗಿಲ್ಲ. ಕಲ್ಯಾಣಿಗಳು-ತೆರೆದ ಬಾವಿಗಳು ಕಣ್ಮರೆಯಾಗಿವೆ. ಅಂತರ್ಜಲದ ಮೇಲಿನ ಒತ್ತಡ ಹೆಚ್ಚಾಗಿದ್ದು, ತೀವ್ರವಾಗಿ ಕುಸಿತ ಕಂಡಿದೆ. ಬಹುತೇಕ ಕೊಳವೆ ಬಾವಿಗಳು ವೈಫಲ್ಯದ ಹಾದಿ ಹಿಡಿದಿವೆ.

ನಗರಕ್ಕೆ ನೀರು ಸರಬರಾಜು ಆಗುತ್ತಿರುವುದು 100 ಕಿ.ಮೀ. ದೂರದಿಂದ. ಎತ್ತರದಲ್ಲಿರುವ ಬೆಂಗಳೂರಿಗೆ ನೀರು ಮೇಲ್ಮುಖವಾಗಿ ಪೂರೈಕೆ ಆಗುತ್ತಿದೆ. ಕಾವೇರಿ ನದಿ ಬಳಿ ನಿರ್ಮಿಸಿರುವ ಶಿವ ಅಣೆಕಟ್ಟೆ ಹತ್ತಿರದ ನಾಲೆ ಮೂಲಕ ನೆಟ್‌ಕಲ್ ಸಮತೋಲನ ಜಲಾಶಯಕ್ಕೆ ತರಲಾಗುತ್ತದೆ. ಅಲ್ಲಿಂದ ತೊರೆಕಾಡನಹಳ್ಳಿಗೆ ಕಚ್ಚಾ ನೀರು ಸಾಗಿಸಲಾಗುತ್ತದೆ.

ತೊರೆಕಾಡನಹಳ್ಳಿ ನಿರ್ಮಿಸಲಾದ ಬೃಹತ್ ಘಟಕದಲ್ಲಿ ನೀರು ಶುದ್ಧೀಕರಿಸಿ 3000 ಮೀಟರ್ ಮೇಲ್ಮುಖವಾಗಿ ಬೆಂಗಳೂರಿಗೆ ಪಂಪ್ ಮಾಡಲಾಗುತ್ತದೆ. 3,100 ಅಶ್ವಶಕ್ತಿ ಸಾಮರ್ಥ್ಯದ ಪಂಪ್‌ಗಳು ದಿನದ 24 ಗಂಟೆ ಕಾಲ ಎಡೆಬಿಡದೆ ನೀರನ್ನು ಸಾಗಿಸುತ್ತವೆ. ಈ ಪಂಪಿಂಗ್ ಘಟಕಕ್ಕೆ ತಡೆಯಿಲ್ಲದ ವಿದ್ಯುತ್ ಪೂರೈಕೆ ಆಗುತ್ತದೆ. ಯಾವ ಲೋಡ್ ಶೆಡ್ಡಿಂಗ್ ನಿಯಮಗಳು ಇಲ್ಲಿಯ ಘಟಕಕ್ಕೆ ಅನ್ವಯಿಸುವುದಿಲ್ಲ. ಆದಾಯದ ಶೇ 60ರಷ್ಟು ಪ್ರಮಾಣವನ್ನು ಜಲ ಮಂಡಳಿ ವಿದ್ಯುತ್ ಬಿಲ್ಲಿಗಾಗಿ ಖರ್ಚು ಮಾಡುತ್ತದೆ.

ನೆಟ್‌ಕಲ್ ಜಲಾಶಯದಿಂದ ನಗರದವರೆಗೆ ವಿವಿಧ ವ್ಯಾಸದ ಕೊಳವೆ ಮಾರ್ಗ ಅಳವಡಿಸಲಾಗಿದೆ. ಅದರಲ್ಲಿ 1,950 ಮಿ.ಮೀ. ವ್ಯಾಸದ ಮೆದು ಉಕ್ಕಿನ ಕೊಳವೆಗಳು ಸಹ ಸೇರಿವೆ. 56 ಕಡೆ ಬೇರೆ, ಬೇರೆ ಸಾಮರ್ಥ್ಯದ ನೀರು ಸಂಗ್ರಹಾಗಾರಗಳು ಇವೆ.

ನಾಲ್ಕನೇ ಹಂತದ ಯೋಜನೆ ಜಾರಿಯಾದ ಬಳಿಕ ನಗರದ ಕುಡಿಯುವ ನೀರಿನ ಯೋಜನೆಗೆ ಹಂಚಿಕೆಯಾದ ಎಲ್ಲ 19 ಟಿಎಂಸಿ ಅಡಿ ನೀರು ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ 10 ಟಿಎಂಸಿ ಅಡಿ ನೀರಿಗೆ ಜಲ ಮಂಡಳಿ ಬೇಡಿಕೆ ಇಟ್ಟಿದೆ. ಜನಸಂಖ್ಯೆ ಬೆಳೆಯುತ್ತಿರುವ ವೇಗವನ್ನು ಗಮನಿಸಿದಾಗ 2036ರ ವೇಳೆಗೆ ನಿತ್ಯ 2,550 ದಶಲಕ್ಷ ಲೀಟರ್ ನೀರು ಬೇಕಾಗುವುದು ಎನ್ನುವ ಲೆಕ್ಕಾಚಾರ ಹಾಕಲಾಗಿದೆ.

ದೂರದ ಕಣಿವೆಯಲ್ಲಿ ಹರಿಯುತ್ತಿರುವ ಕಾವೇರಿಯಿಂದ ನೀರು ಮೊಗೆದು ಬೆಂಗಳೂರಿನ ಗಗನಚುಂಬಿ ಕಟ್ಟಡಗಳಲ್ಲಿ ವಾಸಿಸುವ ಜನರಿಗೆ ತಲುಪಿಸುವಲ್ಲಿ ಸಾವಿರಾರು ಕಾರ್ಮಿಕರ ಶ್ರಮವಿದೆ. ಆದರೆ, ಕಣಿವೆಯಲ್ಲಿ ಶ್ರಮದಿಂದ ಹರಿಯುವ ಬೆವರಿಗೆ ಬೆಲೆಯೇ ಇಲ್ಲದಂತೆ ನಗರದಲ್ಲಿ ನೀರು ಪೋಲು ಮಾಡಲಾಗುತ್ತಿದೆ.

1,47,500 ಮೆಟ್ರಿಕ್ ಟನ್ ಕಬ್ಬಿಣ
ಕಾವೇರಿ ನಾಲ್ಕನೇ ಹಂತದ 2ನೇ ಘಟ್ಟದ ಯೋಜನೆಗೆ ತೆರೆಕಾಡನಹಳ್ಳಿಯಿಂದ ಬೆಂಗಳೂರುವರೆಗೆ ನೀರು ಸರಬಾರಜು ಮಾಡಲು 2,700 ಮಿ.ಮೀ. ವ್ಯಾಸದ 67 ಕಿ.ಮೀ. ಉದ್ದದ ಕೊಳವೆ ಮಾರ್ಗ ಹಾಕಲಾಗಿದೆ. ಒಟ್ಟಾರೆ 1,47,500 ಮೆಟ್ರಿಕ್ ಟನ್ ಕಬ್ಬಿಣ ಬಳಕೆ ಮಾಡಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ
ತೊರೆಕಾಡನಹಳ್ಳಿ ಜಲ ಶುದ್ಧೀಕರಣ ಘಟಕದಲ್ಲಿ ನೀರಿನ ಮೂಲಕ ಗಾಳಿಯನ್ನು ಹಾಯಿಸುವ (ಡಿಎಎಫ್) ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಲಾಗಿದೆ. ಪಾಚಿ, ಸೂಕ್ಷ್ಮ ಘನವಸ್ತುಗಳನ್ನು ಅದು ಬೇರ್ಪಡಿಸುವ ತಾಕತ್ತು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT