ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ಜನರ ರಕ್ಷಣೆಗೆ ನೀತಿ ರೂಪಿಸಲು ಆಗ್ರಹ

Last Updated 18 ಜನವರಿ 2011, 11:10 IST
ಅಕ್ಷರ ಗಾತ್ರ

 ಚಿತ್ರದುರ್ಗ:  ಕೊಳೆಗೇರಿ ಜನರ ರಕ್ಷಣೆಗೆ ಅಗತ್ಯವಿರುವ ನೀತಿಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸ್ಲಂ ಜನಾಂದೋಲನ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಯಿತು.1975ರಲ್ಲಿ ರಾಜ್ಯದಲ್ಲಿ ಕೊಳೆಗೇರಿ ಜನರ ಹಿತ ಕಾಯಲು ಅಸ್ತಿತ್ವಕ್ಕೆ ಬಂದ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಕೊಳೆಗೇರಿ ಜನತೆಯ ಹಿತಾಸಕ್ತಿ ಕಾಪಾಡದೆ ಭೂಗಳ್ಳರ, ಗುತ್ತಿಗೆದಾರರ, ಮಧ್ಯವರ್ತಿಗಳ ಪರವಾಗಿ ನಿಂತಿದ್ದಾರೆ.

ರಾಜ್ಯದಲ್ಲಿ ಸುಮಾರು 5,750 ಕೊಳಚೆ ಪ್ರದೇಶಗಳಿದ್ದು, ಇದರಲ್ಲಿ 2,729 ಕೊಳೆಗೇರಿಗಳು ಕೊಳಚೆ ನಿರ್ಮೂಲನಾ ಮಂಡಳಿ ವ್ಯಾಪ್ತಿಗೆ ಸೇರುತ್ತವೆ. ಇನ್ನೂ 3,021 ಕೊಳೆಗೇರಿಗಳಲ್ಲಿ ವಾಸಿಸುತ್ತಿರುವವರು ಅನಧಿಕೃತ ಹೆಸರಿನಲ್ಲಿ ಅಂಗೈಯಗಲ ಜಾಗಕ್ಕೆ ಕಾಯುತ್ತಿದ್ದಾರೆ. ಭೂಮಿ ಹಕ್ಕು ಇದುವರೆಗೆ ಕೇವಲ ಶೇ 2ರಷ್ಟು ಜನರಿಗೆ ಮಾತ್ರ ದೊರೆತಿದೆ ಎಂದು ಕಾರ್ಯಕರ್ತರು ದೂರಿದರು.

ಸರ್ಕಾರ ‘ಕೊಳೆಗೇರಿ ಮುಕ್ತ’ ಹೆಸರಿನಲ್ಲಿ ಮತ್ತು ಅಭಿವೃದ್ಧಿ ನೆಪದಲ್ಲಿ ನಗರದಾಚೆಗೆ ಜನರನ್ನು ಹೊರ ದಬ್ಬುತ್ತಿರುವುದು ಪರೋಕ್ಷವಾಗಿ ವರ್ಣ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿದೆ ಎಂದು ಆರೋಪಿಸಿದರು.ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಾಯ್ದೆಗೆ ತಿದ್ದುಪಡಿ ತಂದು ಕೊಳೆಗೇರಿ ರಕ್ಷಣೆಗೆ ಅಗತ್ಯವಿರುವ ನೀತಿಗಳನ್ನು ಜಾರಿಗೊಳಿಸಬೇಕು. 2011ರಿಂದ 2012ರ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಕೊಳಗೇರಿ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಗತ್ಯವಿರುವ ಅನುದಾನವನ್ನು ಮೀಸಲಿಟ್ಟು ಪ್ರತ್ಯೇಕ ಸಚಿವಾಲಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ವಸತಿ ಮತ್ತು ಬಡತನ ನಿರ್ಮೂಲನಾ ಸಚಿವಾಲಯ ಸೂಚಿಸುವಂತೆ ಮುನ್ಸಿಪಲ್ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದು ನಗರದ ಬಡಜನರಿಗೆ ಮೂಲ ಸೇವೆ ನೀಡಲು ಶೇ. 28ರಷ್ಟು ಅನುದಾನವನ್ನು ಸ್ಥಳೀಯ ಸಂಸ್ಥೆಗಳು ತಮ್ಮ ಬಜೆಟ್‌ನಲ್ಲಿ ಮೀಸಲಿಡಬೇಕು. ರಾಜ್ಯದಲ್ಲಿರುವ ಘೋಷಿತ ಮತ್ತು ಅಘೋಷಿತ ಕೊಳಚೆ ಪ್ರದೇಶಗಳಿಗೆ ಗುರುತಿನ ಚೀಟಿ ಪತ್ರವನ್ನು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನೀಡಬೇಕು ಎಂದು ಒತ್ತಾಯಿಸಿದರು.

ಕುಡಿಯುವ ನೀರನ್ನು ಕನ್ನಡಗಂಗಾ ಯೋಜನೆ ಹೆಸರಿನಲ್ಲಿ ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಸಂಪನ್ಮೂಲವನ್ನು ಖಾಸಗಿ ಕಂಪೆನಿಗಳಿಗೆ ವಹಿಸುತ್ತಿರುವ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಬೇಕು ಹಾಗೂ ಎಲ್ಲ ಕೊಳೆಗೇರಿ ನಿವಾಸಿಗಳಿಗೆ ಸಾರ್ವಜನಿಕ ನಲ್ಲಿಗಳ ಮೂಲಕ ಉಚಿತ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.ಪಡಿತರ ವ್ಯವಸ್ಥೆಯಲ್ಲಿರುವ ಯೂನಿಟ್ ಪದ್ಧತಿಯನ್ನು ರದ್ದುಗೊಳಿಸಿ ಒಂದು ಕುಟುಂಬಕ್ಕೆ ಅಗತ್ಯವಿರುವಷ್ಟು ಆಹಾರ ಧಾನ್ಯವನ್ನು ನಗರದ ಬಡಜನರಿಗೆ ಸಬ್ಸಿಡಿ ದರದಲ್ಲಿ ಸರ್ಕಾರ ಪೂರೈಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಮುಖಂಡರಾದ ಎಂ. ಜಯಣ್ಣ, ಬಿ. ತಿಪ್ಪೇಸ್ವಾಮಿ, ಡಿ. ಸತೀಶ್, ಪೈಲ್ವಾನ್ ತಿಪ್ಪೇಸ್ವಾಮಿ, ನಾಗೇಂದ್ರಪ್ಪ, ಟಿ. ಮಲ್ಲೇಶಪ್ಪ, ಆರ್. ರುದ್ರಮುನಿ, ಡಿ.ಆರ್. ಲಿಂಗರಾಜು ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT