ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

Last Updated 30 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಇಟ್ಟಮಡು ಬಳಿಯ ಮಾರುತಿನಗರದ ಕೊಳೆಗೇರಿ ಫಲಾನುಭವಿಗಳಿಗೆ ಬುಧವಾರ ಗೃಹ ಸಚಿವ ಆರ್.ಅಶೋಕ ನಿವೇಶನ ಹಕ್ಕುಪತ್ರಗಳನ್ನು ವಿತರಿಸಿದರು.

ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `35 ವರ್ಷಗಳಿಂದ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿರಲಿಲ್ಲ. ಇದರಿಂದ ನಾಗರಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಅನೇಕ ಜನಪ್ರತಿನಿಧಿಗಳು ಭರವಸೆ ನೀಡಿದ್ದು ಹೊರತುಪಡಿಸಿದರೆ ಜನರ ನೋವಿಗೆ ಸ್ಪಂದಿಸಲಿಲ್ಲ. ಮಧ್ಯವರ್ತಿಗಳ ಹಾವಳಿಯೂ ಹೆಚ್ಚಿತ್ತು. ಇದನ್ನು ಅರಿತ ಹೊಸಕೆರೆಹಳ್ಳಿ ಪಾಲಿಕೆ ಸದಸ್ಯರು ಹಕ್ಕುಪತ್ರ ವಿತರಿಸಲು ಮುಂದಾಗಿದ್ದು ಸಂತಸದ ವಿಚಾರ~ ಎಂದರು.

`ಹಕ್ಕಿ ಗೂಡು ಕಟ್ಟಿಕೊಳ್ಳುವಂತೆ ಜನರು ಕೂಡ ಮನೆ ಕಟ್ಟಿಕೊಳ್ಳುತ್ತಾರೆ. ಜಮೀನಿಗೆ ನೀಡುವ ಬೆಲೆಗಿಂತಲೂ ಅದರೊಂದಿಗೆ ಹೊಂದಿದ ಬಾಂಧವ್ಯ ಮಹತ್ವವಾದುದು. ಆದರೆ ಇಡೀ ಪ್ರದೇಶವನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ಹೆದರಿಸಿ ಕೆಲವರು ಹಣ ದೋಚುತ್ತಿದ್ದರು. ಆದರೆ ಖಾತೆ, ನೋಂದಣಿ ಕಾರ್ಯಕ್ಕೆ ನಿವಾಸಿಗಳು ಯಾರಿಗೂ ಹಣ ನೀಡಬೇಕಿಲ್ಲ. ಬಿಬಿಎಂಪಿ ವತಿಯಿಂದ ಉಚಿತವಾಗಿ ನಿವೇಶನಗಳ ನೋಂದಣಿ ಮಾಡಿಸಿಕೊಡಲಾಗುವುದು~ ಎಂದು ಹೇಳಿದರು.

`ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸಕೆರೆಹಳ್ಳಿಯಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಈಗಾಗಲೇ ನಿರ್ಮಾಣ ಕಾಮಗಾರಿಗಾಗಿ 2 ಕೋಟಿ ಬಿಡುಗಡೆ ಮಾಡಲಾಗಿದ್ದು ಉಳಿದ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಂಬುಲೆನ್ಸ್ ಸೌಲಭ್ಯ ಒದಗಿಸಲಾಗುವುದು.

ಅಲ್ಲದೆ ಹೊಸಕೆರೆ ಹಳ್ಳಿಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕೆರೆ ಅಭಿವೃದ್ಧಿಗಾಗಿ 33 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಅಲ್ಲಿ ಸುಸಜ್ಜಿತ ಉದ್ಯಾನ ತಲೆ ಎತ್ತಲಿದೆ~ ಎಂದು ಹೇಳಿದರು.

`ಮಾರುತಿನಗರಕ್ಕೆ ಇರುವ ಕೊಳೆಗೇರಿ ಎಂಬ ಹಣೆಪಟ್ಟಿಯನ್ನು ತೆಗೆಯಬೇಕಿದ್ದು ಈ ನಿಟ್ಟಿನಲ್ಲಿ ಒಂದು ವಾರದೊಳಗೆ ಬಿಬಿಎಂಪಿಗೆ ಸೂಚನೆ ನೀಡಲಾಗುವುದು. ಇಡೀ ಪ್ರದೇಶವನ್ನು ಮಾರುತಿನಗರ ಎಂದು ನಾಮಕರಣ ಮಾಡಲಾಗುವುದು. ನಾಗರಿಕರು ಫಲಕಗಳಲ್ಲಿರುವ ಪ್ರದೇಶದ ಹೆಸರನ್ನು ಬದಲಿಸಬೇಕು~ ಎಂದು ಅವರು ಕೋರಿದರು. ಇದೇ ವೇಳೆ 20 ಲಕ್ಷ ವೆಚ್ಚದ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಪಾಲಿಕೆ ಸದಸ್ಯ ಎಲ್. ಶ್ರೀನಿವಾಸ್, `ಇಲ್ಲಿನ ಜನ ನೀರಿನ ಬವಣೆ ಎದುರಿಸುತ್ತಿರುವುದನ್ನು ಅರಿತು ಕೊಳವೆ ಬಾವಿ ಕೊರೆಸಿ ನೀರಿನ ಸೌಲಭ್ಯ ಒದಗಿಸಲಾಗಿದೆ. ಸರತಿ ಸಾಲಿನಲ್ಲಿ ನಿಂತು ನೀರು ಪಡೆಯುವ ತೊಂದರೆ ತಪ್ಪಿದೆ. ರಸ್ತೆ ಸೌಲಭ್ಯ, ಒಳಚರಂಡಿ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ~ ಎಂದರು.

ಬಿಬಿಎಂಪಿ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಸದಸ್ಯ ಎಚ್.ನಾರಾಯಣ್ ಸ್ವಾಗತಿಸಿದರು. ಪಾಲಿಕೆ ಸದಸ್ಯರಾದ ಎಚ್.ಸುರೇಶ್, ಬಿ.ಎಸ್. ವೆಂಕಟಸ್ವಾಮಿನಾಯ್ಡು, ಎಂ.ವೆಂಕಟೇಶ್, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮುರಳಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT