ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಯುತ್ತಿದೆ ಕೆರೆ!

Last Updated 18 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಒಡಲಲ್ಲಿ ಸುತ್ತಮುತ್ತ ಒಂದು ಕಾಲಕ್ಕೆ ಎಷ್ಟೊಂದು ಕೆರೆಗಳಿದ್ದವು! ಅವುಗಳಲ್ಲಿ ಈಗ ಎಷ್ಟೋ ಗುರುತೂ ಸಿಗದಂತಾಗಿವೆ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ ಕೆಲವೇ ದಶಕದ ಹಿಂದೆ ದೊಡ್ಡ ಕೆರೆ ಆಗಿತ್ತು ಎಂದರೆ ಯಾರಾದರೂ ನಂಬುತ್ತಾರೆಯೇ! ಅದೇ ಸ್ಥಿತಿ ಈಗ ನಗರದ ಅಂಚಿನ ಕೆರೆ ಕಟ್ಟೆಗಳಿಗೂ ಎದುರಾಗುತ್ತಿದೆ.

ಮಹಾನಗರದ ಅಂಚಿನಲ್ಲಿರುವ ಚಿಕ್ಕಬಾಣಾವರದ ಕೆರೆಯ ಸ್ಥಿತಿಯನ್ನೇ ನೋಡಿ. ಇದೊಂದು ದೊಡ್ಡ ಕೆರೆ. ಸುತ್ತಲೂ ವಿಶಾಲವಾದ ಹೊಲ, ತೋಟಗಳ ಬಯಲು. ಒಳ್ಳೇ ನೀರಿನ ಹರಿವಿನಿಂದಾಗಿ ಸದಾ ತುಂಬಿರುತ್ತಿತ್ತು. ಎಷ್ಟೋ ಜಲಚರ ಪ್ರಾಣಿ - ಪಕ್ಷಿಗಳಿಗೆ ಆಶ್ರಯ ನೀಡಿತ್ತು. ಹೊಲ ಗದ್ದೆಗಳಿಗೆ ನೀರುಣಿಸಿ, ನಂಬಿದವರಿಗೆ ಅನ್ನ, ದುಡಿಯುವವರಿಗೆ ಕೆಲಸ ಕೊಡುತ್ತಿತ್ತು.

ಆದರೆ ಈಗ ಏನಾಗಿದೆ ನೋಡಿ. ಸುತ್ತಲೂ ಊರು, ಬಡಾವಣೆ ಬೆಳೆದು ಕೊಚ್ಚೆಯೇ ಬಂದು ತುಂಬುವಂತಾಗಿದೆ. ಕಸಾಯಿಖಾನೆ, ಮಾಂಸದ ಹೋಟೆಲ್ ಮುಸುರೆ ಇತ್ಯಾದಿ ಅಕ್ರಮವಾಗಿ ತಂದು ಸುರಿಯುವವರ ಸಂಖ್ಯೆ ಹೆಚ್ಚಿದೆ. ಪರಿಣಾಮ ಕೆರೆಯಂಗಳದಲ್ಲಿ ದುರ್ನಾತ ಹರಡಿದೆ, ನೀರು ಕೊಳೆಯುತ್ತಿದೆ, ಕೊಳಕು ತಿನ್ನಲು ಬರುವ ಬೀದಿ ನಾಯಿಗಳ ಪಿಡುಗು ಹೆಚ್ಚುತ್ತಿದೆ.

ಇದೆಲ್ಲಕ್ಕೂ ಬಲ ನೀಡುವಂತೆ ಜೊಂಡು, ಕಳೆ ಸಸ್ಯ ಕ್ರಮೇಣ ಕೆರೆಯ ಒಡಲನ್ನೆಲ್ಲಾ ಆವರಿಸಿಕೊಂಡು ದಟ್ಟವಾಗಿ ಬೆಳೆಯುತ್ತಿದೆ. ಅದು ಹೆಚ್ಚಾದಂತೆ ಕೆರೆಯ ಅಂಗಳ ಕಿರಿದಾಗುತ್ತಿದೆ. ಕೆರೆಯಲ್ಲಿ ನೀರು ನಿಲ್ಲುವುದು ಕಡಿಮೆಯಾದಂತೆ ಒತ್ತುವರಿ ಜಾಸ್ತಿ ಆಗುತ್ತದೆ. ಈಗಾಗಲೇ ಕೆರೆಯಂಚಿನ ಹೊಲ, ತೋಟದ ಜಮೀನುಗಳಲ್ಲಿ ದೊಡ್ಡ ದೊಡ್ಡ ವಸತಿ ಸಂಕಿರಣಗಳು ತಲೆ ಎತ್ತುತ್ತಿವೆ. ಈಗ ಇರುವ ಬಾಣಾವರ, ಗುಡ್ಡದಹಳ್ಳಿ, ಗಾಣಿಗರಹಳ್ಳಿ ಮೊದಲಾದ ಊರುಗಳ ಜೊತೆಗೆ ಈ ಹೊಸ ಬಡಾವಣೆಗಳ ಕೊಳಕೂ ಸೇರಿ ಕೆರೆಯು ಉಸಿರುಗಟ್ಟಿ ಕ್ರಮೇಣ ಸಾಯುತ್ತದೆ.

ಇದು ಜನಪ್ರತಿನಿಧಿಗಳ ಗಮನಕ್ಕೆ ಬಂದಿಲ್ಲವೇ? ನಗರ ಕೇಂದ್ರಿತ ಪರಿಸರವಾದಿಗಳು ಇಂಥಾ ಸಂಗತಿಗಳ ಬಗ್ಗೆ ಏಕೆ ಮಾತನಾಡುವುದಿಲ್ಲ? ಈ ಭಾಗದ ವಿದ್ಯಾವಂತರಾದರೂ ಕೆರೆಯ ಉಳಿವಿಕೆ, ಅಭಿವೃದ್ಧಿಗೆ ಮುಂದಾಗಬಾರದೆ?

ಸರ್ಕಾರವು ಕೆರೆಗಳ ಹೂಳು ತೆಗೆದು, ಮರು ಜೀವ ಕೊಡಲು ಮುಂದಾಗಬೇಕು. ಚಿಕ್ಕಬಾಣಾವರ ಕೆರೆಯ ಜೊಂಡು, ಕಳೆ ತೆಗೆದು ಏರಿ ತೂಬು ಸರಿ ಮಾಡಿ, ನೀರು ಶುದ್ಧೀಕರಣಕ್ಕೆ ಕೂಡಲೇ ಮನಸ್ಸು ಮಾಡುವುದು ಅತ್ಯಗತ್ಯ. ಹಾಗೆ ಮಾಡಿದಾಗ ಈ ಸುತ್ತಿನಲ್ಲಿ ಇದೊಂದು ಸುಂದರ ಜಲಾಶಯವಾಗುತ್ತದೆ, ವಿಹಾರಧಾಮವಾಗುತ್ತದೆ. ಉದ್ಯಾನ, ದೋಣಿ ವಿಹಾರಕ್ಕೂ ಅವಕಾಶ ಕೊಟ್ಟರೆ ಅದರ ಬಣ್ಣವೇ ಬೇರೆಯಾಗುತ್ತದೆ. ಪರಿಸರದ ಆರೋಗ್ಯವಷ್ಟೇ ಅಲ್ಲ ಜನ, ಜೀವಜಂತುಗಳ ಆರೋಗ್ಯವೂ ಉತ್ತಮವಾಗುತ್ತದೆ.

ನೀರನ್ನೇ ನಂಬಿದ ಮೀನು, ಏಡಿ, ಅವನ್ನು ಹುಡುಕಿ ಬರುವ ದೇಶೀ, ವಿದೇಶೀ ಪಕ್ಷಿಗಳು... ಇವೆಲ್ಲಾ ಕೆರೆಯೊಂದಿಗೇ ಉಳಿಯುತ್ತವೆ. ಇಲ್ಲವಾದರೆ, ಕೊಳಕು ನೀರಲ್ಲೇ ಬಟ್ಟೆ ಮಡಿ ಮಾಡುವವರು, ಮೈತೊಳೆಯುವವರು... ಈ ಮೀನನ್ನೇ ಹಿಡಿದು ಮಾರುವವರು... ಒಂದೆರಡು ದಿನ ಹೇಗೋ ಬದುಕುತ್ತಾರೆ. ಆ ಮೇಲೆ...?
ಕೆರೆಯ ಉಳಿವು ಜೀವ ಜಾಲದ ಉಳಿವು. ಅಲ್ಲವೇ?    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT