ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಶತಕ; ಭಾರತದ ಹೋರಾಟ

ಕ್ರಿಕೆಟ್‌: ವೇಗಿಗಳ ಎದುರು ಯುವ ಬ್ಯಾಟ್ಸ್‌ಮನ್‌ಗಳ ದಿಟ್ಟ ಆಟ
Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ಡೇಲ್‌ ಸ್ಟೇನ್‌ ಅವರ ಉರಿ ವೇಗದ ದಾಳಿಗೆ ಬಗ್ಗಲಿಲ್ಲ. ಅಗ್ರ ರ್‍ಯಾಂಕ್‌ನ ಈ ವೇಗಿ ಪದೇ ಪದೇ ಕಿಚಾಯಿಸುತ್ತಿದ್ದ ರೀತಿಗೆ ಬೆದರಲಿಲ್ಲ. ಸುಂದರ ಇನಿಂಗ್ಸ್‌ ಕಟ್ಟಿದ ವಿರಾಟ್‌ ಕೊಹ್ಲಿ (119) ದಕ್ಷಿಣ ಆಫ್ರಿಕಾದ ತ್ರಿವಳಿ ವೇಗಿಗಳನ್ನು ಯಶಸ್ವಿಯಾಗಿ ಎದುರಿಸಿ ತಮ್ಮ ಸಾಮರ್ಥ್ಯ ಮೆರೆದರು.

ಸಚಿನ್‌ ತೆಂಡೂಲ್ಕರ್‌ ಸ್ಥಾನದಲ್ಲಿ (ನಾಲ್ಕನೇ ಕ್ರಮಾಂಕ) ಆಡಿದ ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಿವ ಮೂಲಕ ಅವರು ಭರವಸೆಯ ಬೆಳಕಾಗಿ ಹೊರಹೊಮ್ಮಿದರು. ಈ ಮೂಲಕ ಭಾರತ ತಂಡದವರು ದಕ್ಷಿಣ ಆಫ್ರಿಕಾ ಎದುರು ಬುಧವಾರ ಇಲ್ಲಿ ಆರಂಭವಾದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಉತ್ತಮ ಮೊತ್ತ ಗಳಿಸಿದ್ದಾರೆ.

ವಾಂಡರರ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 255 ರನ್‌ ಗಳಿಸಿದೆ.    ಅಜಿಂಕ್ಯ ರಹಾನೆ (ಬ್ಯಾಟಿಂಗ್‌ 43) ಹಾಗೂ ನಾಯಕ ಮಹೇಂದ್ರ ಸಿಂಗ್‌ ದೋನಿ (ಬ್ಯಾಟಿಂಗ್‌ 17) ತಂಡಕ್ಕೆ ಆಸರೆಯಾಗಿದ್ದಾರೆ.

ಆರಂಭಿಕ ವೈಫಲ್ಯ: ಟಾಸ್‌ ಗೆದ್ದ ದೋನಿ ನಿರೀಕ್ಷೆಯಂತೆಯೇ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದರು. ಏಕದಿನ ಸರಣಿಯಲ್ಲಿ ವೈಫಲ್ಯ ಕಂಡಿದ್ದ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಆತಿಥೇಯ ವೇಗಿಗಳ ಎದುರು ತುಂಬಾ ಎಚ್ಚರಿಕೆಯಿಂದ ಆಡಲು ಮುಂದಾದರು.

ಆದರೆ ಸ್ಟೇನ್‌, ವೆರ್ನಾನ್‌ ಫಿಲ್ಯಾಂಡರ್‌ ಹಾಗೂ ಮಾರ್ನ್‌ ಮಾರ್ಕೆಲ್‌ ಅವರು ಬೌನ್ಸರ್‌ಗಳ ಮೂಲಕ ಆರಂಭಿಕ ಬ್ಯಾಟ್ಸ್‌ಮನ್‌ಗಳ ಮೇಲೆರಗಿದರು. ಶಾರ್ಟ್‌ ಪಿಚ್‌ ಎಸೆತಗಳನ್ನು ಹಾಕಿ ಕಾಡಿದರು. ಅದಕ್ಕೆ ಮೊದಲು ಬಲಿಯಾಗಿದ್ದು ಶಿಖರ್‌ ಧವನ್‌. ಆ ವಿಕೆಟ್‌ ಪಡೆದ ಸ್ಟೇನ್‌ ಅವರ ಖುಷಿಗೆ ಅಂತ್ಯವೇ ಇರಲಿಲ್ಲ. ನಂತರ ಮಾರ್ಕೆಲ್‌ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ ವಿಕೆಟ್‌ ಕಬಳಿಸಿದರು. ಅಷ್ಟರಲ್ಲಿ ವಿಜಯ್‌ 42 ಎಸೆತಗಳನ್ನು ಎದುರಿಸಿದ್ದರು.

ಆಗ ಭಾರತದ ಸ್ಕೋರ್‌ 24ಕ್ಕೆ2. ಆಗ ನಾಲ್ಕನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದಿದ್ದು ಕೊಹ್ಲಿ. ಇಷ್ಟು ದಿನ ಈ ಸ್ಥಾನ ಸಚಿನ್‌ ತೆಂಡೂಲ್ಕರ್‌ ಅವರಿಗೆ ಮೀಸಲಾಗಿತ್ತು. 25 ವರ್ಷ ವಯಸ್ಸಿನ ವಿರಾಟ್‌ ನಿರಾಸೆ ಮೂಡಿಸಲಿಲ್ಲ. ಅಮೋಘ ಇನಿಂಗ್ಸ್‌ ಕಟ್ಟುವ ಮೂಲಕ ಈ ಕ್ರಮಾಂಕವನ್ನು ಯಶಸ್ವಿಯಾಗಿ ತುಂಬುವ ಭರವಸೆ ನೀಡಿದರು.

ಎರಡು ವಿಕೆಟ್‌ಗಳು ಬೇಗನೇ ಪತನವಾದಾಗ ಜೊತೆಗೂಡಿದ ಚೇತೇಶ್ವರ ಪೂಜಾರ ಹಾಗೂ ಕೊಹ್ಲಿ, ವೇಗಿಗಳನ್ನು ವಿಶ್ವಾಸದಿಂದ ಎದುರಿಸಿದರು.
ಇವರಿಬ್ಬರು ಮೂರನೇ ವಿಕೆಟ್‌ಗೆ 89 ರನ್‌ ಸೇರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ವಿರಾಟ್‌ ಚೆಂಡಿಗೆ ಒಂದು ರನ್‌ನಂತೆ ಆರಂಭದಲ್ಲಿ ಬಿರುಸಿನ ಆಟವಾಡಿದರು. ಚೇತೇಶ್ವರ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಹಾಗಾಗಿ ಆತಿಥೇಯ ತಂಡದ ನಾಯಕ ಗ್ರೇಮ್‌ ಸ್ಮಿತ್‌ ಬೌಲಿಂಗ್‌ನಲ್ಲಿ ಬದಲಾವಣೆ ಮಾಡದೇ ವಿಧಿ ಇರಲಿಲ್ಲ.

ಎಲ್ಲವೂ ಉತ್ತಮವಾಗಿ ಸಾಗುತ್ತಿದ್ದಾಗ ಎಡವಟ್ಟು ಸಂಭವಿಸಿತು. ತಾಹಿರ್‌ ಓವರ್‌ನಲ್ಲಿ ಚೆಂಡನ್ನು ಬಾರಿಸಿ ಓಡಲು ಮುಂದಾದ ಕೊಹ್ಲಿ ಮತ್ತೆ ಕ್ರೀಸ್‌ಗೆ ಹಿಂದಿರುಗಿದರು. ಅಷ್ಟರಲ್ಲಿ ಚೇತೇಶ್ವರ ಅರ್ಧ ಪಿಚ್‌ ದಾಟಿಯಾಗಿತ್ತು. ಕೊಹ್ಲಿ ತಪ್ಪಿನಿಂದಾಗಿ ಪೂಜಾರ ರನ್‌ಔಟ್‌ ಆಗಬೇಕಾಯಿತು.

ಪೂಜಾರ ವಿಕೆಟ್‌ ಪತನದ ಬಳಿಕ ಕ್ರೀಸ್‌ಗೆ ಬಂದಿದ್ದು ರೋಹಿತ್‌ ಶರ್ಮ. ಸ್ವದೇಶದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಆಡಿದ್ದ ಎರಡೂ ಟೆಸ್ಟ್‌ಗಳಲ್ಲಿ ಶತಕ ಬಾರಿಸಿದ್ದ ಅವರ ಮೇಲೆ ನಿರೀಕ್ಷೆಯ ಭಾರವಿತ್ತು. ಅಷ್ಟು ಮಾತ್ರವಲ್ಲದೇ, ಸತತ ಮೂರು ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಆಟಗಾರ ಎಂಬ ದಾಖಲೆ ಬರೆಯುವ ಉತ್ಸಾಹದಲ್ಲಿದ್ದರು. ಆದರೆ ದಕ್ಷಿಣ ಆಫ್ರಿಕಾ ವೇಗಿಗಳು ಅದಕ್ಕೆ ಅವಕಾಶ ನೀಡಲಿಲ್ಲ. 42 ಎಸೆತಗಳಿಂದ 14 ರನ್‌ ಗಳಿಸಿದ್ದ ಅವರನ್ನು ಫಿಲ್ಯಾಂಡರ್‌ ಪೆವಿಲಿಯನ್‌ಗೆ ಕಳುಹಿಸಿದರು.

ಕೊಹ್ಲಿ ಐದನೇ ಶತಕ: ಪೂಜಾರ ರನ್‌ಔಟ್‌ಗೆ ಕಾರಣವಾದ ಕೊಹ್ಲಿ ಅವರು ಐದನೇ ಶತಕ ಗಳಿಸುವ ಮೂಲಕ ಆ ನಿರಾಸೆ ಮರೆಸಿದರು. ಸುಂದರ ಪುಲ್‌, ಮನೋಮೋಹಕ ಸ್ಟ್ರೇಟ್‌ ಡ್ರೈವ್‌ ಹಾಗೂ ಆಕರ್ಷಕ ಕವರ್‌ ಡ್ರೈವ್‌ಗಳ ಮೂಲಕ ಐದನೇ ಬಾರಿ ಮೂರಂಕಿ ಮೊತ್ತ ದಾಟಿದರು.

ಡುಮಿನಿ ಎಸೆತವನ್ನು ಮಿಡ್‌ವಿಕೆಟ್‌ನತ್ತ ತಳ್ಳಿ ಈ ಸಾಧನೆ ಮಾಡಿದರು. ತಕ್ಷಣವೇ ಮೇಲೆ ಜಿಗಿದು ಗಾಳಿಯಲ್ಲಿ ಪಂಚ್‌ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಅವರು ಗಳಿಸಿದ ಚೊಚ್ಚಲ ಶತಕವಿದು. ಈ ಮೂಲಕ ಹರಿಣಗಳ ನಾಡಿನಲ್ಲಿ ಶತಕ ಗಳಿಸಿದ ಭಾರತದ ಎಂಟನೇ ಆಟಗಾರ ಎನಿಸಿದರು. ಆದರೆ ಜಾಕ್‌ ಕಾಲಿಸ್‌ ಬೌಲಿಂಗ್‌ನಲ್ಲಿ ಕೊಹ್ಲಿ ವಿಕೆಟ್‌ ಒಪ್ಪಿಸಿದರು.  ಅಷ್ಟರಲ್ಲಿ 181 ಎಸೆತಗಳನ್ನು ಎದುರಿಸಿದ್ದ ಅವರು 18 ಬೌಂಡರಿ ಗಳಿಸಿದ್ದರು.
 
ಕೊಹ್ಲಿಗೆ ಉತ್ತಮ ನೆರವು ನೀಡಿದ್ದು ಮತ್ತೊಬ್ಬ ಯುವ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ. ತಮ್ಮ ಎರಡನೇ ಟೆಸ್ಟ್‌ ಪಂದ್ಯ ಆಡುತ್ತಿರುವ ಅವರು ದಿಟ್ಟ ಆಟದ ಮೂಲಕ ತಂಡಕ್ಕೆ ಆಸರೆಯಾದರು. ವೇಗಿಗಳ ಎದುರು ಎಚ್ಚರಿಕೆಯಿಂದ ಆಡಿದ ಅವರು ಸ್ಪಿನ್ನರ್‌ಗಳು ಬಂದಾಗ ಆಕ್ರಮಣಕಾರಿಯಾದರು. 105 ಎಸೆತಗಳನ್ನು ಎದುರಿಸಿರುವ ಅವರು 7 ಬೌಂಡರಿ ಗಳಿಸಿದ್ದಾರೆ. ವಿರಾಟ್‌ ಔಟ್‌ ಆದ ಬಳಿಕ ನಾಯಕ ದೋನಿ ಜೊತೆಗೂಡಿದ ಅವರು ಮುರಿ ಯದ ಆರನೇ ವಿಕೆಟ್‌ಗೆ 36 ರನ್‌ ಸೇರಿಸಿದ್ದಾರೆ.

ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ದಕ್ಷಿಣ ಆಫ್ರಿಕಾ ವೇಗಿಗಳು ಅದೇ ಮಟ್ಟದ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಆದರೂ ಮಾರ್ಕೆಲ್‌ ತಾವು ಮಾಡಿದ 19 ಓವರ್‌ಗಳಲ್ಲಿ ಕೇವಲ 27 ರನ್‌ ನೀಡಿದರು. ಸ್ಪಿನ್ನರ್‌ಗಳಾದ ತಾಹಿರ್‌ ಹಾಗೂ ಡುಮಿನಿ ದುಬಾರಿಯಾದರು.

                                                            ಸ್ಕೋರ್ ವಿವರ 
ಭಾರತ: ಮೊದಲ ಇನಿಂಗ್ಸ್‌ 90 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 255

ಮುರಳಿ ವಿಜಯ್‌ ಸಿ ಎಬಿ ಡಿವಿಲಿಯರ್ಸ್‌ ಬಿ ಮಾರ್ನ್‌ ಮಾರ್ಕೆಲ್‌  06
ಶಿಖರ್‌ ಧವನ್‌ ಸಿ ಇಮ್ರಾನ್‌ ತಾಹಿರ್‌ ಬಿ ಡೇಲ್‌ ಸ್ಟೇನ್‌  13
ಚೇತೇಶ್ವರ ಪೂಜಾರ ರನ್‌ಔಟ್‌ (ತಾಹಿರ್‌/ಆಮ್ಲಾ)  25
ವಿರಾಟ್‌ ಕೊಹ್ಲಿ ಸಿ ಜೀನ್‌ ಪಾಲ್‌ ಡುಮಿನಿ ಬಿ ಜಾಕ್‌ ಕಾಲಿಸ್‌  119
ರೋಹಿತ್‌ ಶರ್ಮ ಸಿ ಎಬಿ ಡಿವಿಲಿಯರ್ಸ್‌ ಬಿ ವೆರ್ನಾನ್‌ ಫಿಲ್ಯಾಂಡರ್‌  14
ಅಜಿಂಕ್ಯ ರಹಾನೆ ಬ್ಯಾಟಿಂಗ್‌  43
ಮಹೇಂದ್ರ ಸಿಂಗ್‌ ದೋನಿ ಬ್ಯಾಟಿಂಗ್‌  17
ಇತರೆ (ಲೆಗ್‌ಬೈ–3, ವೈಡ್‌–14, ನೋಬಾಲ್‌–1)  18
ವಿಕೆಟ್‌ ಪತನ: 1–17 (ಧವನ್‌; 8.6); 2–24 (ವಿಜಯ್‌; 15.1); 3–113 (ಪೂಜಾರ; 42.4); 4–151 (ರೋಹಿತ್‌; 53.2); 5–219 (ಕೊಹ್ಲಿ; 75.3)
ಬೌಲಿಂಗ್‌: ಡೇಲ್‌ ಸ್ಟೇನ್‌ 23–5–56–1 (ವೈಡ್‌–2), ವೆರ್ನಾನ್‌ ಫಿಲ್ಯಾಂಡರ್‌ 21–2–55–1, ಮಾರ್ನ್‌ ಮಾರ್ಕೆಲ್‌ 19–10–27–1 (ನೋಬಾಲ್‌–1, ವೈಡ್‌–2), ಜಾಕ್‌ ಕಾಲಿಸ್‌ 14–4–37–1 (ವೈಡ್‌–2), ಇಮ್ರಾನ್ ತಾಹಿರ್‌ 8–0–47–0, ಜೀನ್‌ ಪಾಲ್‌ ಡುಮಿನಿ 5–0–30–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT