ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಕೊಗೆ ಕೊಳೆ ರೋಗ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕೋಕೊಗೆ ಈಗ ಉತ್ತಮ ಧಾರಣೆ ಸಿಗುತ್ತಿದೆ. ಆದರೆ ಬೆಳೆಗಾರರು ಕಂಗೆಟ್ಟಿದ್ದಾರೆ. ಈ ವರ್ಷ ಕೊಡಗು ಜಿಲ್ಲೆಯಲ್ಲಿ ಸುರಿದ ಜಡಿಮಳೆ ಪರಿಣಾಮ ಬಹುತೇಕ ಕೋಕೊ ಗಿಡಗಳಲ್ಲಿ  ಕೊಳೆ ರೋಗ ಕಾಣಿಸಿಕೊಂಡಿದೆ. ಶೇ.75 ರಷ್ಟು ಬೆಳೆ ನೆಲಕಚ್ಚಿದೆ.

ಮಲೆನಾಡು ಹಾಗೂ ಕರಾವಳಿಯ ಅಡಿಕೆ, ತೆಂಗಿನ ತೋಟಗಳಲ್ಲಿ ಕೋಕೊ ಗಿಡಗಳನ್ನು ಕಾಣಬಹುದು. ಮಳೆಗಾಲದಲ್ಲಿ ರೈತರಿಗೆ ಕೋಕೊ ಉತ್ತಮ ಆದಾಯ ತಂದು ಕೊಡುತ್ತದೆ. ಅಡಿಕೆ ಸುಗ್ಗಿ ಮುಗಿದ ಈ ಸಮಯದಲ್ಲಿ ರೈತರ ದೈನಂದಿನ ಖರ್ಚುಗಳನ್ನು ಕೋಕೊ ಮಾರಾಟದಿಂದ ಬಂದ ಹಣದಿಂದ ಸರಿದೂಗಿಸುತ್ತಾರೆ.

ಕೋಕೊ ಹಸಿ ಬೀಜಕ್ಕೆ ಕೇಜಿಗೆ 40ರೂ ಬೆಲೆ ಇದೆ. ಬೆಲೆ ಇದ್ದರೂ ಈಗ ಬೆಳೆ ಇಲ್ಲ.
ಕೋಳೆರೋಗ ಪೀಡಿತ ಗಿಡಗಳಲ್ಲಿ ಕಾಯಿಗಳಲ್ಲಿ ಬೆಳವಣಿಗೆ ಸಮರ್ಪಕವಾಗಿಲ್ಲ. ಎಳೆ ಕಾಯಿಗಳು ಬಲಿಯದೆ ಕಪ್ಪಾಗಿ ಕ್ರಮೇಣ ಒಣಗುತ್ತವೆ. ಇವು ತೊಟ್ಟು ಕಳಚಿ ಕೆಳಗೆ ಉದುರುವುದಿಲ್ಲ.
 
ಗಿಡದಲ್ಲಿ ಬಲಿತ ಕಾಯಿಗಳೂ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇಂತಹ ಕಾಯಿಗಳಿಂದ ಬೀಜ ಬೇರ್ಪಡಿಸುವುದು ಕಷ್ಟ.ಬಹುತೇಕ  ಬೀಜಗಳು ಜಳ್ಳಾಗಿವೆ. ರೋಗ ಉಲ್ಬಣಗೊಂಡರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಒಣಗುತ್ತವೆ. ಕೊಂಬೆಗಳು ಸಾಯುತ್ತವೆ.

ಕಳೆದ ವರ್ಷ ಮಳೆಗಾಲದಲ್ಲಿ ವಾರಕ್ಕೊಮ್ಮೆ 2 ಕ್ವಿಂಟಲ್ ಕೋಕೊ ಪಡೆಯುತ್ತಿದ್ದ ಮಡಿಕೇರಿ ತಾಲೂಕಿನ ಅರೆಕಲ್ಲು  ಗ್ರಾಮದ ರೈತ ಲೈನ್ಕಜೆ ಕೃಷ್ಣಭಟ್ ಅವರಿಗೆ ಈ ಸಲ 50 ಕೆ.ಜಿ.ಯಷ್ಟು ಇಳುವರಿ ಸಿಕ್ಕಿದೆ. ಇಳುವರಿ ಕುಸಿತದಿಂದ ಅವರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅವರೊಬ್ಬರೇ ಅಲ್ಲ ಇಂಥ ಹಲವು ರೈತರಿದ್ದಾರೆ.

ಕೋಳೆ ರೋಗ ಒಂದು ಬಗೆಯ ಶಿಲೀಂದ್ರದಿಂದ ಹರಡುತ್ತದೆ. ಗಾಳಿ ಹಾಗೂ ಮಳೆ ಹನಿ ಮೂಲಕ ಶಿಲೀಂದ್ರವು ಆರೋಗ್ಯವಂತ ಕಾಯಿಗಳನ್ನು ಆವರಿಸಿಕೊಳ್ಳುತ್ತದೆ. ನಾಲೈದು ದಿನಗಳಲ್ಲಿ ಶಿಲೀಂದ್ರದ ಪ್ರಮಾಣ ಹೆಚ್ಚಾಗಿ ರೋಗ ಹರಡುತ್ತದೆ. ಕಡಿಮೆ ಉಷ್ಣಾಂಶ, ಹೆಚ್ಚು ಮಳೆ, ತೇವಾಂಶದ ವಾತಾವರಣ ಈ ರೋಗ ಹರಡಲು ಅನುಕೂಲ ಕಲ್ಪಿಸುತ್ತದೆ.

 ಮಳೆಗಾಲ ಆರಂಭದ ಸಮಯದಲ್ಲಿ ಅಡಿಕೆ ಮರಗಳಿಗೆ ಸಿಂಪಡಿಸುವಂತೆ ಕೋಕೊ ಗಿಡಗಳಿಗೆ ಗೆ ಬೋರ್ಡೋ ದ್ರಾವಣ ಸಿಂಪಡಿಸುವುದೇ ಇದಕ್ಕೆ ಪರಿಹಾರ. ಈ ಸಲ ವಿಪರೀತ ಮಳೆ ಮತ್ತು ಕಾರ್ಮಿಕರ ಅಭಾವದಿಂದ ಸಿಂಪಡಣೆಗೆ ಅಡ್ಡಿಯಾಗಿದೆ. ರೋಗ ಬಂದ ಮೇಲೆ ಅದನ್ನು ನಿಯಂತ್ರಿಸುವುದು ಕಷ್ಟ ಎನ್ನುತ್ತಾರೆ ಪುತ್ತೂರಿನ ಕೋಕೊ ಬೆಳೆಗಾರ ಕೆದಿಲ ಕೃಷ್ಣಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT