ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್ ಗೋಪಿಚಂದ್ ಸಮರ್ಥನೆ

ಐಬಿಎಲ್: ಹರಾಜಿನಲ್ಲಿ ಮೂಲಬೆಲೆ ಕಡಿಮೆ
Last Updated 24 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಟೂರ್ನಿ ಹರಾಜು ಪ್ರಕ್ರಿಯೆಯಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಅವರ ಮೂಲಬೆಲೆಯನ್ನು ಕಡಿಮೆ ಮಾಡಿದ ಸಂಘಟಕರ ಕ್ರಮವನ್ನು ರಾಷ್ಟ್ರೀಯ ಕೋಚ್ ಪುಲ್ಲೇಲ ಗೋಪಿಚಂದ್ ಸಮರ್ಥಿಸಿಕೊಂಡಿದ್ದಾರೆ.

`ಈ ವಿವಾದಕ್ಕೆ ಬೇಗನೇ ತೆರೆ ಬೀಳಲಿದೆ ಎಂಬುದು ನನ್ನ ವಿಶ್ವಾಸ. ಅಶ್ವಿನಿ ಹಾಗೂ ಜ್ವಾಲಾ ಅವರ ಮೂಲಬೆಲೆಯನ್ನು ಕಡಿಮೆ ಮಾಡಿರುವ ಹಿಂದೆ ಸ್ಪಷ್ಟ ಉದ್ದೇಶವಿದೆ. ಆ ರೀತಿ ಮಾಡದಿದ್ದರೆ ಈ ಆಟಗಾರ್ತಿಯರಿಗೆ ಈಗ ಸಿಕ್ಕಿರುವಷ್ಟು ಹಣವೂ ಲಭಿಸುತ್ತಿರಲಿಲ್ಲ' ಎಂದು ಅವರು ಹೇಳಿದ್ದಾರೆ.

ಅಶ್ವಿನಿ ಹಾಗೂ ಜ್ವಾಲಾ ಅವರ ಮೂಲಬೆಲೆಯನ್ನು ಸುಮಾರು 30 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿತ್ತು. ಆದರೆ ಈ ಆಟಗಾರ್ತಿಯರನ್ನು ಯಾರೂ ಖರೀದಿಸದ ಕಾರಣ ಕೊನೆಕ್ಷಣದಲ್ಲಿ ಇವರ ಮೂಲಬೆಲೆಯಲ್ಲಿ ಬದಲಾವಣೆ ಮಾಡಲು ಸಂಘಟಕರು ತೀರ್ಮಾನಿಸಿದರು. ಇದಕ್ಕೆ ಕಾರಣ ಈ ಲೀಗ್‌ನಲ್ಲಿ ಮಹಿಳೆಯರ ಡಬಲ್ಸ್ ಪಂದ್ಯಗಳು ಇಲ್ಲದಿರುವುದು. ಆದರೆ ಈ ಬಗ್ಗೆ ಅಶ್ವಿನಿ ಹಾಗೂ ಜ್ವಾಲಾ ಆಕ್ರೋಶ ವ್ಯಕ್ತಪಡಿಸಿದ್ದರು. ಮೂಲಬೆಲೆ ಕಡಿಮೆ ಮಾಡಿದ ಮೇಲೆ ಅಶ್ವಿನಿ 15 ಲಕ್ಷ ರೂಪಾಯಿಗೆ ಪುಣೆ ಪಿಸ್ಟನ್ಸ್ ತಂಡದ ಪಾಲಾದರು. ಜ್ವಾಲಾ ಅವರಿಗೆ 18.6 ಲಕ್ಷ ರೂಪಾಯಿ ನೀಡಿ ದೆಹಲಿ ಸ್ಮ್ಯಾಷರ್ಸ್ ತಂಡದವರು ಖರೀದಿಸಿದರು.

`ಹರಾಜಿನಲ್ಲಿ ಲಭಿಸಿರುವ ಹಣದ ಬಗ್ಗೆ ಕೆಲ ಆಟಗಾರರು ತುಂಬಾ ಖುಷಿಯಾಗಿದ್ದಾರೆ. ಭಾರತ ಅಥವಾ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಈ ರೀತಿ ಹಣ ಕನಸಿನ ಮಾತಾಗಿತ್ತು. ಈ ಲೀಗ್‌ನಿಂದ ಬ್ಯಾಡ್ಮಿಂಟನ್ ಹಾಗೂ ಆಟಗಾರರಿಗೆ ತುಂಬಾ ಸಹಾಯವಾಗಿದೆ. ಇದನ್ನು ನಾವು ತುಂಬು ಹೃದಯದಿಂದ ಸ್ವಾಗತಿಸಬೇಕು. ಉತ್ತಮ ದಿಕ್ಕಿನಲ್ಲಿ ಮುನ್ನಡೆಯಲು ಪ್ರಯತ್ನಿಸಬೇಕು' ಎಂದು ಆಲ್ ಇಂಗ್ಲೆಂಡ್ ಮಾಜಿ ಚಾಂಪಿಯನ್ ಗೋಪಿಚಂದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT