ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿ ನುಂಗಿ ನೀರು ಕುಡಿದ ಮಾಪನ ಯಂತ್ರ

Last Updated 7 ಜನವರಿ 2012, 9:35 IST
ಅಕ್ಷರ ಗಾತ್ರ

ಬೀಳಗಿ: ಕಾಲುವೆಯಲ್ಲಿ ಸಂಗ್ರಹಣೆಗೊಂಡಿರುವ ಹೂಳೆತ್ತಲು, ಕಾಲುವೆ ಕಾಣದಷ್ಟು ಗುಡ್ಡದಂತೆ ಬೆಳೆದು ನಿಂತು ನೀರು ಸಾಗಲು ಅಡಚಣೆಯಾಗಿರುವ ಗಿಡಗಂಟಿಗಳನ್ನು ತೆಗೆಸಲು “ಫಂಡ್ ಬಂದೇ ಇಲ್ರಿ”ಎಂದು ಗೊಣಗುತ್ತಿರುವ ನೀರಾವರಿ ನಿಗಮದ ಅಧಿಕಾರಿಗಳು...

ಘಟಪ್ರಭಾ ಎಡದಂಡೆ ಕಾಲುವೆಯ ಬೀಳಗಿ ವಿಭಾಗೀಯ ಕಚೇರಿ ವ್ಯಾಪ್ತಿಯ ಬೀಳಗಿ, ಯಡಹಳ್ಳಿ, ಕಾತರಕಿ, ಮುಧೋಳ ಉಪವಿಭಾಗೀಯ ಕಚೇರಿಗಳ ಕಾಲುವೆಗಳ ಮೇಲೆ ಅಲ್ಲಲ್ಲಿ ಸ್ಥಾಪಿಸಲಾದ “ಜಲ ಮಾಪನ” ಯಂತ್ರಗಳ ಕಥೆ ಇದು.

ಯಾರ‌್ಯಾರದೋ ಒತ್ತಡಕ್ಕೆ ಮಣಿದು ಕೋಟ್ಯಂತರ ರೂ.ಖರ್ಚು ಮಾಡಿ ಜಲಮಾಪನ ಯಂತ್ರಗಳನ್ನು ಟೆಂಡರ್ ಮೂಲಕ ಖರೀದಿಸಿದ್ದೂ ಆಗಿದೆ. ಅವು ತಮ್ಮೆದುರಿಗೇನೇ ಹಾಳಾಗುತ್ತಿರುವುದನ್ನು ನೋಡಿದ್ದೂ ಆಗಿದೆ.
 
ಇಷ್ಟಕ್ಕೂ ಸಂಬಂಧಿಸಿದ ಸಚಿವರು “ಉನ್ನತ ತಂತ್ರಜ್ಞಾನ ದಿಂದ ಕೂಡಿದ ಈ ಜಲಮಾಪನ ಯಂತ್ರಗಳನ್ನು ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೂ ಶೀಘ್ರದಲ್ಲಿಯೇ ಅಳವಡಿಸುತ್ತೇವೆ” ಎಂದು ಹೇಳಿಕೊಳ್ಳುತ್ತಾರೆ.  ಆದರೆ ಜಸಮಾಪನ ಅಳವಡಿಸುವಲ್ಲಿ ಇರುವ ಸಮಸ್ಯೆಗಳು ಮಾತ್ರ ಗಂಭೀರವಾಗಿವೆ.

“ಅಧಿಕಾರದೊಳ್ಗ ಇದ್ದವ್ರ ತಮ್ಮ ಹಿಂಬಾಲಕರಿಗಿ ಏನೇನೋ ಕೆಲ್ಸಾ ಕೊಡ್ಸಿ ಅವರ‌್ನ ಗಟ್ಟಿ ಕುಳಾ ಮಾಡಾಕ ಇಂಥಾವೆಲ್ಲಾ ಮಾಡ್ತಾರ‌್ರೀ, ನೋಡ್ರೀ ಈ ಮಿಶೇನ್ಕ  ಹತ್ತ ಲಕ್ಷ ರೂ. ಬಿದೈತ್ಯಂತ. ಇದೇನ ಕೆಲ್ಸಾ ಮಾಡತೈತಿ, ಇದರೊಳ್ಗ ಅಂಥಾದ್ದೇನೈತಿ, ಸುಮ್ನ ತಿಂದ ಹಾಕಾಕ ಏನೇನೋ ಪ್ಲಾನ್ ಮಾಡ್ತಾರ‌್ರೀ” ಎನ್ನುತ್ತಾರೆ ಜಿ.ಎಲ್.ಬಿ.ಸಿ.ಕಾಲುವೆ ಪಕ್ಕದ ಹೊಲದ ಹೆಸರು ಹೇಳಲಿಚ್ಛಿಸದ ರೈತರೊಬ್ಬರು.

ಘಟಪ್ರಭಾ ಜಲಾಶಯದಿಂದ ವ್ಯಾಪ್ತಿಯಲ್ಲಿ ಬರುವ ಘಟಪ್ರಭಾ, ಜಮಖಂಡಿ, ಬೀಳಗಿ ವಿಭಾಗಗಳ ಕಾಲುವೆಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣವನ್ನು ಗುರುತಿಸಲು 50 ಜಲಮಾಪನ ಯಂತ್ರಗಳನ್ನು ಟೆಂಡರ್ ಮೂಲಕ ಖರೀದಿಸಲಾಗಿದೆ. ಇದಕ್ಕೆ ಸದ್ಯದ ಸರಕಾರದಲ್ಲಿರುವ ಪ್ರಭಾವಿ ಸಚಿವರ ಒತ್ತಡವೇ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಈ 50 ಜಲಮಾಪನ ಯಂತ್ರಗಳ ಒಟ್ಟು ಮೌಲ್ಯ ರೂ.4 ಕೋಟಿ 95 ಲಕ್ಷ. ಆನ್‌ಲೈನ್ ಮೇಲೆ ಕರೆಯಲಾಗಿದ್ದ ಟೆಂಡರ್‌ಗೆ ಬೆಂಗಳೂರು ಮೂಲದ ಮೂರು ಕಂಪೆನಿಗಳು ಸ್ಪರ್ಧಿಸಿದ್ದು ಅದರಲ್ಲಿಯೇ ಒಂದು ಕಂಪೆನಿ ಟೆಂಡರ್ ಗಿಟ್ಟಿಸಿಕೊಂಡಿದೆ. ಮೂರು ವಿಭಾಗೀಯ ಕಚೇರಿಗಳಿಗೆ ಸರಬರಾಜಾಗುವ ಈ ಯಂತ್ರಗಳ ಸರಬರಾಜಿಗಾಗಿ ವೃತ್ತ ಕಚೇರಿ ಅಥವಾ ಕೇಂದ್ರ ಕಚೇರಿಯಿಂದ ಟೆಂಡರ್ ಪ್ರಕ್ರಿಯೆ ನಡೆಸಬಹುದಾಗಿತ್ತು. ಆದರೆ ಇದೆಲ್ಲ ನಡೆದಿದ್ದು ಟೇಲೆಂಡ್ ಪ್ರದೇಶವಾದ ಬೀಳಗಿ ವಿಭಾಗೀಯ ಕಚೇರಿಯಿಂದಲೇ. ಪ್ಯಾಕೇಜ್ ಮೂಲಕ ಕರೆದ ಟೆಂಡರ್‌ಗೆ ಬೀಳಗಿ ವಿಭಾಗೀಯ ಕಚೇರಿಯ ಕಾರ್ಯ ನಿರ್ವಾಹಕ ಇಂಜಿನೀಯರರೇ ನೋಡಲ್ ಅಧಿಕಾರಿ ಎಂದು ಹೇಳಲಾಗುತ್ತಿದೆ.

ಬೀಳಗಿ ವಿಭಾಗೀಯ ಕಚೇರಿ ವ್ಯಾಪ್ತಿಯ ಬೀಳಗಿ, ಯಡಹಳ್ಳಿ, ಕಾತರಕಿ, ಮುಧೋಳ, ಉಪ ವಿಭಾಗಗಳಿಗೆ ಗುತ್ತಿಗೆದಾರರು ಪೂರೈಸಿದ ಈ ಯಂತ್ರಗಳ ಬಿಲ್ಲನ್ನು ಕೇವಲ ಮುಧೋಳ ಉಪ ವಿಭಾಗದ ಅಳತೆ ಪುಸ್ತಕದಲ್ಲಿ ದಾಖಲಿಸಲಾಗಿದೆ. (ಎಂ.ಬಿ.ರೆಕಾರ್ಡ್). ಬೇರೇಬೇರೆ ಉಪವಿಭಾಗಗಳಲ್ಲಿ ದಾಖಲಿಸಲು  ಆಯಾ ಉಪವಿಭಾಗಗಳಿಗೆ ಸಂಬಂಧಿಸಿದಂತೆ ಮಾಪನ ದಾಖಲೆಗಳಿರುತ್ತವೆ. ಆದರೂ ಮುಧೋಳ ಉಪವಿಭಾಗದ ಮಾಪನ ಪುಸ್ತಕವನ್ನೇ  ದಾಖಲಿಸಿಕೊಳ್ಳಲು ಬಳಸಿಕೊಳ್ಳಲಾಗಿದೆ. ಹೀಗೆ ಎಂ.ಬಿ. ಬಳಸಿಕೊಳ್ಳುವಲ್ಲಿ ಕಾನೂನಿನ ತೊಡಕೇನೂ ಇಲ್ಲವಾದರೂ ಎಲ್ಲ ಉಪವಿಭಾಗೀಯ ಕಚೇರಿಗಳು ಸೇರಿ ಕೇವಲ ಮುಧೋಳದ ಒಂದೇ ಎಂ.ಬಿ.ಯಲ್ಲಿ ಮಾತ್ರ ರಿಕಾರ್ಡ್ ಮಾಡಿದ್ದು ಸಂಶಯಕ್ಕೆ ಕಾರಣವಾಗಿದೆ.

ಟೆಂಡರ್‌ನಲ್ಲಿ ಈ ಜಲಮಾಪನ ಯಂತ್ರಗಳನ್ನು ಪೂರೈಸಿದ ಗುತ್ತಿಗೆದಾರರೇ ಅವುಗಳ ಉಸ್ತುವಾರಿ ನೋಡಿಕೊಳ್ಳಬೇಕೆಂದು ಕರಾರಿದ್ದರೂ ಯಂತ್ರಗಳನ್ನು ಪೂರೈಸಿದನಂತರ ಕಂಪೆನಿಯವರಾರೂ ಇತ್ತ ಕಡೆ ಸುಳಿದಿಲ್ಲ. ಅವು ಹಾಳಾಗಿ ಹೋಗಿಬಿಟ್ಟಿವೆ. ಇವುಗಳಿಂದ ಎಷ್ಟು ಪ್ರಯೋಜನ ಎನ್ನುವುದು ಜನಸಾಮಾನ್ಯರಿಗೆ ಹೋಗಲಿ, ಸಂಬಂಧಿಸಿದ ಅಧಿಕಾರಿಗಳಿಗೂ ಸರಿಯಾಗಿ  ಗೊತ್ತಿಲ್ಲ.

ಐವತ್ತು ವರ್ಷಗಳಿಂದ ಕಾಲುವೆಯಲ್ಲಿ ಇಡಲಾಗಿರುವ “ಗೇಜ್‌”ಪಟ್ಟಿಯನ್ನು ನೋಡಿ ನೀರು ಇಷ್ಟೇ ಪ್ರಮಾಣದಲ್ಲಿದೆ ಎಂದು ಕಾಲುವೆಯ ಉಸ್ತುವಾರಿ ನೋಡಿಕೊಳ್ಳುವ ಪಾಟಕರಿ, ಕಾಲುವೆಯಿಂದ ನೀರು ಪಡೆದುಕೊಳ್ಳುವ ಶಾಲೆ ಕಲಿಯದ ರೈತರು ಹೇಳುತ್ತಿರಬೇಕಾದರೆ ಯಾವ ಸಂಭ್ರಮಕ್ಕೆ ಇಷ್ಟೊಂದು ಹಣ ಖರ್ಚು ಮಾಡಿ ಈ ಯಂತ್ರಗಳನ್ನು ಖರೀದಿಸಲಾಗಿದೆ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT