ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿಗಟ್ಟಲೆ ಲೂಟಿ: ತನಿಖೆಗೆ ಒತ್ತಾಯ

ನಿರ್ಮಿತಿ ಕೇಂದ್ರದ ಕಾಮಗಾರಿ ಕಳಪೆ: ಕಾಂಗ್ರೆಸ್ ಆಕ್ರೋಶ
Last Updated 1 ಆಗಸ್ಟ್ 2013, 12:55 IST
ಅಕ್ಷರ ಗಾತ್ರ

ಕಳಸ: ಹೋಬಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ಮತ್ತು ಕಳಪೆ ಕಾಮಗಾರಿ ನಡೆದಿದ್ದು ಕೋಟ್ಯಂತರ ರೂಪಾಯಿ ಸರ್ಕಾರಿ ಹಣ ಕೊಳ್ಳೆ ಹೊಡೆಯಲಾಗಿದೆ ಎಂದು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಹೋಬಳಿ ವ್ಯಾಪ್ತಿಯ ಬಾಳೆಹೊಳೆ ಸರ್ಕಾರಿ ಪದವಿಪೂರ್ವ ಕಾಲೇಜು, ಕಳಸ ಪದವಿ ಕಾಲೇಜು, ಹೋಬಳಿಯ ವಿವಿಧೆಡೆ ನಿರ್ಮಿತಿ ಕೇಂದ್ರ ನಡೆಸಿದ ರಸ್ತೆ, ತಡೆಗೋಡೆ ಕಾಮಗಾರಿಗಳನ್ನು ವೀಕ್ಷಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ  ಕಾಂಗ್ರೆಸ್ ಮುಖಂಡರು ಲೋಕಾಯುಕ್ತ ತನಿಖೆಯ ಒತ್ತಾಯ ಮಾಡಿದ್ದಾರೆ.

ಬಾಳೆಹೊಳೆ ಸರ್ಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡದ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದ್ದು ಮಳೆ ನೀರು ಕೊಠಡಿಯೊಳಗೆ ಒಸರುತ್ತಿದೆ. ಈ ಹುಳುಕನ್ನು ಮುಚ್ಚಲು ಸರ್ಕಾರಿ ಪ್ರೌಢಶಾಲೆಯ 2 ಲಕ್ಷ ರೂಪಾಯಿ ಹಣವನ್ನು ಅಕ್ರಮವಾಗಿ ಬಳಸಿ ಕಾಲೇಜು ಕಟ್ಟಡಕ್ಕೆ ಮೇಲ್ಛಾವಣಿ ನಿರ್ಮಿಸಲಾಗಿದೆ ಎಂದು  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್ ದೂರಿದರು.

ನಿರ್ಮಿತಿ ಕೇಂದ್ರವು ನಿರ್ಮಿಸಿದ ತಲಗೋಡು -ನೆಲ್ಲಿಕೋಟ ರಸ್ತೆಯು ಎರಡು ತಿಂಗಳ ಮಳೆಯಲ್ಲೇ ಮಣ್ಣುಪಾಲು ಆಗಿದೆ. ಬಾಳೆಹೊಳೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರಂಗಮಂದಿರದಲ್ಲಿ ನೀರು ಸೋರುತ್ತಿದೆ. ಗೋಡೆಗಳ ಮೇಲೆಲ್ಲಾ ನೀರು ಬೀಳುವಂತೆ ಮಾಡಿನ ಕೆಲಸ ಕಳಪೆ ಆಗಿದೆ ಎಂದು ಶ್ರಿನಿವಾಸ ಹೆಬ್ಬಾರ್ ದೂರಿದರು.

ಸಂಸೆಯ ಬಾಳಗಲ್‌ನಲ್ಲಿ ಕಾಂಕ್ರೆಟ್ ತಡೆಗೋಡೆ ಕುಸಿದು ಬೀಳಲು ಅಡಿಪಾಯ ಇಲ್ಲದಿದ್ದುದೇ ಕಾರಣ ಎಂದು ಕೆ.ಸಿ .ಧರಣೇಂದ್ರ ಹೇಳಿದರು. ಸಂಸೆ ಐಟಿಐ ರಸ್ತೆ ಕಾಮಗಾರಿಯೂ ಸೇರಿದಂತೆ ಸಂಸೆ ಗ್ರಾಮದ ವ್ಯಾಪ್ತಿಯ ಎಲ್ಲ ಕಾಮಗಾರಿಗಳು ಕಳಪೆ ಮತ್ತು ಹಣ ದೋಚುವ ಸಲುವಾಗಿಯೇ ಮಾಡಿದ ಕಾಮಗಾರಿಗಳು ಎಂದು ಧರಣೇಂದ್ರ ಆರೋಪಿಸಿದರು.

ಕಳಸದ ಪ್ರಥಮ ದರ್ಜೆ ಕಾಲೇಜು ಕಟ್ಟಡದ ಕಾಮಗಾರಿಯೂ ತೃಪ್ತಿಕರವಾಗಿಲ್ಲ. ವರ್ಷದೊಳಗೇ ಕೊಠಡಿಗಳ ಒಳಗೆ ನೀರು ಒಸರುತ್ತಿದೆ. ಅಂಬಾತೀರ್ಥ ಬಳಿಯ ತೋಟಗಾರಿಕಾ ಇಲಾಖೆಯ ನರ್ಸರಿಯಲ್ಲಿ ಕಟ್ಟಡವೊಂದನ್ನು ಅತ್ಯಂತ ಕಳಪೆ ವಸ್ತುಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ ಎಂದು ಪಕ್ಷದ ಮುಖಂಡ ಮಹಾಬಲೇಶ್ವರ ಶಾಸ್ತ್ರಿ ಅಸಮಾಧಾನ ಹೊರ ಹಾಕಿದರು.

ಈ ಕಾಮಗಾರಿಗಳ ಜೊತೆಗೆ ನಿರ್ಮಿತಿ ಕೇಂದ್ರವು 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಹೋಬಳಿಯ ನಕ್ಸಲ್ ಪ್ರಭಾವಿತ ಪ್ರದೇಶದಲ್ಲಿ ನಡೆಸಿದ ಕಾಮಗಾರಿಗಳೆಲ್ಲದರ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಶಿಕ್ಷೆ ಆಗಬೇಕು ಎಂದು ಕಾಂಗ್ರೆಸ್ ವಕ್ತಾರ ಎನ್.ಎಂ.ಹರ್ಷ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT