ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿಲಿಂಗೇಶ್ವರ ನಿರ್ಮಾಣ ಗೊತ್ತೇ ಇರಲಿಲ್ಲ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತುಮಕೂರು: `ಮಠದ ಆವರಣದಲ್ಲಿ ಕೋಟಿಲಿಂಗೇಶ್ವರ ಸ್ಥಾಪನೆ ಅವಶ್ಯಕತೆ ಇಲ್ಲ. ಇದು ತಮಗೆ ಗೊತ್ತೇ ಇರಲಿಲ್ಲ~ ಎಂದು ಸಿದ್ದಗಂಗಾ ಮಠದ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಗುರುವಾರ ಹೇಳುವ ಮೂಲಕ ಅಚ್ಚರಿ ಉಂಟುಮಾಡಿದರು.

`ಮಠದಲ್ಲಿ ಕೋಟಿಲಿಂಗೇಶ್ವರ ಸ್ಥಾಪನೆ ಮಾಡುತ್ತಾರೆಂಬುದು ನನಗೆ ಗೊತ್ತೇ ಇರಲಿಲ್ಲ. ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮ ಇದೆ ಬನ್ನಿ ಎಂದರು, ಹೋದೆ~ ಎಂದು ಮಠದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

`ಕೋಟಿಲಿಂಗ ಸ್ಥಾಪನೆ ಅವಶ್ಯಕತೆ ಇಲ್ಲ ಎಂದು ಹೇಳಿದ್ದೇನೆ. ಅದರಾಚೆಗೆ ಏನನ್ನೂ ಕೇಳಬೇಡಿ~ ಎಂದು ಪತ್ರಕರ್ತರ ವಿರುದ್ಧ ಸ್ವಾಮೀಜಿ ಸಿಟ್ಟಾದರು. ಪತ್ರಕರ್ತರ ಪ್ರಶ್ನೆಗಳಿಗೆ ಸಿಡುಕಿನಿಂದಲೇ ಉತ್ತರಿಸಿದರು. ಕೆಲವು ಪ್ರಶ್ನೆಗಳಿಗೆ  ವ್ಯಘ್ರರಾದರು. ಮತ್ತೆ ಕೆಲವು ಪ್ರಶ್ನೆಗಳಿಗೆ ಮೌನವಾದರು.

ಕೋಟಿಲಿಂಗೇಶ್ವರ ಶಿಲಾನ್ಯಾಸಕ್ಕೂ ಮುನ್ನ ನಿಮ್ಮ ನೇತೃತ್ವದಲ್ಲೇ ಸಭೆ ನಡೆದು, ನಿಮ್ಮ ಉಪಸ್ಥಿತಿಯಲ್ಲೇ ಪತ್ರಕರ್ತರಿಗೆ ಮಾಹಿತಿ ನೀಡಲಾಗಿತ್ತು.  ಭಕ್ತರಿಂದ ದೇಣಿಗೆ ಸಂಗ್ರಹಿಸುವ ಕರಪತ್ರ ನೀವೇ ಬಿಡುಗಡೆ ಮಾಡಿದ್ದೀರಿ. ಆಗ ನಿಮಗೆ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆಗೆ `ಇಲ್ಲ ನನಗೆ ಗೊತ್ತೇ ಇರಲಿಲ್ಲ. ಅವರು ಹೇಳಿದಂತೆ ಕೇಳಿದೆ ಅಷ್ಟೇ~ ಎಂದರು.

ಮಹಾ ಶಿವರಾತ್ರಿ ದಿನ ನಡೆದ ಶಿಲಾನ್ಯಾಸ ಕಾರ್ಯಕ್ರಮ ನಿಮ್ಮ ಸಾನ್ನಿಧ್ಯದಲ್ಲೇ ನಡೆಯಿತು. ಮುಖ್ಯಮುಂತ್ರಿ, ಸಚಿವರು ಕೋಟಿಲಿಂಗೇಶ್ವರ ಸ್ಥಾಪನೆಯ ಬಗ್ಗೆಯೇ ಮಾತನಾಡಿದರು. ಮರುದಿನ ಮಾಧ್ಯಮಗಳಲ್ಲೂ ಸಾಕಷ್ಟು ದೊಡ್ಡ ಪ್ರಚಾರ ಪಡೆಯಿತು. ಇಷ್ಟೆಲ್ಲ ನಿಮ್ಮ ಗಮನಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆಗಳಿಗೂ ಉತ್ತರ ನೀಡಲಿಲ್ಲ.

~ಇವು ನನ್ನ ಗಮನಕ್ಕೆ ಬರಲೇ ಇಲ್ಲ. ಮಹಾಶಿವರಾತ್ರಿ ದಿನ ಕಾರ್ಯಕ್ರಮಕ್ಕೆ ಬನ್ನಿ ಎಂದರು. ಆದರೆ ಅದು ಕೋಟಿಲಿಂಗೇಶ್ವರ ಶಿಲಾನ್ಯಾಸ ಕಾರ್ಯಕ್ರಮ ಎಂದು ಗೊತ್ತಿರಲಿಲ್ಲ~ ಎಂದು ಹೇಳಿದರು.

`ಕೋಟಿಲಿಂಗೇಶ್ವರ ಸ್ಥಾಪನೆಯ ಮಾತೇ ನಾನು ಆಡಿಲ್ಲ. ಆ ವಿಷಯ ಸಹ ಗೊತ್ತಿಲ್ಲ. ಇದರಾಚೆಗೆ ಏನು ಕೇಳಬೇಡಿ. ಮಠಕ್ಕೆ ಅದರ ಅವಶಕ್ಯತೆ ಇಲ್ಲ. ಲಿಂಗ ಸ್ಥಾಪನೆ ಬಗ್ಗೆ ನನ್ನೊಂದಿಗೆ ಯಾರೂ ಚರ್ಚೆ ಮಾಡಿಲ್ಲ~ ಎಂದು ಪದೇ ಪದೇ ಪುನರುಚ್ಚರಿಸಿದರು.

ಕೋಟಿಲಿಂಗೇಶ್ವರ ಸ್ಥಾಪನೆಯಿಂದ ಮಠಕ್ಕೆ ಆಗುವ ತೊಂದರೆ ಏನು ಎಂಬ ಪ್ರಶ್ನೆಗೆ `ಅದರ ಅವಶ್ಯಕತೆಯೇ ಇಲ್ಲ ಎಂದರೆ ಯಾರಿಗೆ ಏನು ಸಮಸ್ಯೆ ಆಗುತ್ತೆ~ ಎಂದು ಮರು ಪ್ರಶ್ನಿಸಿದರು.

ಬೃಹತ್ ಲಿಂಗ ಸ್ಥಾಪನೆ ಕೈಬಿಡುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರ ಬರೆದಿದ್ದರೆ ಎಂಬ ಪ್ರಶ್ನೆಗೆ, `ಅವರು ಪತ್ರ ಬರೆದಿಲ್ಲ. ಯಾರ ಒತ್ತಡವೂ ಇಲ್ಲ. ಈ ಗೊಂದಲಕ್ಕೆ ಕಾರಣ ನನಗೆ ಗೊತ್ತಿಲ್ಲ~ ಎಂದರು.

`ಕೋಟಿಲಿಂಗೇಶ್ವರ ಸ್ಥಾಪನೆ ಕೈ ಬಿಡುವ ಸಂಬಂಧ ಮಠದಲ್ಲಿ ಯಾವ ಸಭೆಯೂ ನಡೆದಿಲ್ಲ. ಮಠ ಪಕ್ಷಾತೀತ, ಜಾತ್ಯತೀತವಾದದ್ದು. ಯಾವುದೇ ಭಿನ್ನಭಾವಗಳು ಇಲ್ಲದೆ ಜನ ಸೇವೆ ಮಾಡುವುದು ಮಠದ ತತ್ವ ಸಿದ್ಧಾಂತವಾಗಿದೆ. ಮಠದಲ್ಲಿ ಕೋಟಿಲಿಂಗೇಶ್ವರ ಪ್ರತಿಷ್ಠಾಪನೆ ಕುರಿತು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಗಳಿಂದ ಭಕ್ತರು ಆತಂಕಗೊಂಡಿದ್ದಾರೆ. ಈ ವಿಚಾರದ ಬಗ್ಗೆ ಭಕ್ತಾದಿಗಳೊಂದಿಗೆ ಸಮಾಲೋಚಿಸಿ ಮುಂದೆ ಸೂಕ್ತ ನಿರ್ಧಾರಕ್ಕೆ ಬರಲಾಗುವುದು~ ಎಂಬ ಸಾರಾಂಶವುಳ್ಳ ಪತ್ರಿಕಾ ಹೇಳಿಕೆಯನ್ನು ಸ್ವಾಮೀಜಿ ಬಿಡುಗಡೆ ಮಾಡಿದರು.

ಶಿವಕುಮಾರ ಸ್ವಾಮೀಜಿ ಅವರ 105ನೇ ಹುಟ್ಟುಹಬ್ಬದ ಕಾಣಿಕೆಯಾಗಿ ಅರ್ಪಿಸಲು ಕೋಟಿ ಲಿಂಗೇಶ್ವರ ಪ್ರತಿಷ್ಠಾಪನಾ ಸಮಿತಿ ಈ ಲಿಂಗ ನಿರ್ಮಾಣಕ್ಕೆ ಮುಂದಾಗಿತ್ತು. ಸಮಿತಿಯಲ್ಲಿ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಚಿವ ಎಸ್.ಎ.ರಾಮದಾಸ್, ಶಾಸಕರಾದ ಅರವಿಂದ ಲಿಂಬಾವಳಿ, ಎಸ್.ಶಿವಣ್ಣ ಮತ್ತಿತರರಿದರು. ಆದರೆ ಯಡಿಯೂರಪ್ಪ ಪರ ಬೆಂಬಲಿಗರ‌್ಯಾರೂ ಸಮಿತಿಯಲ್ಲಿ ಇರಲಿಲ್ಲ.

ಪಲ್ಲಕ್ಕಿ ಉತ್ಸವದಲ್ಲಿ ಕೋಟಿಲಿಂಗೇಶ್ವರ ಸ್ಥಾಪನೆಗಾಗಿ ಭಕ್ತರಿಂದ ರೂ 5700 ಹಣವನ್ನು ಸಂಗ್ರಹಿಸಲಾಗಿದೆ. ಆದರೆ ಹಣ ಸಂಗ್ರಹದ ವೇಳೆ ಭಕ್ತರ ಹೆಸರನ್ನಷ್ಟೇ ರಸೀದಿ ಮೇಲೆ ಬರೆದುಕೊಳ್ಳಲಾಗಿದೆ. ವಿಳಾಸ ಪಡೆದಿಲ್ಲ. ಈ ಹಣಏನು ಮಾಡುತ್ತಾರೆಂಬುದು ಗೊತ್ತಿಲ್ಲ ಎಂದು ಮಠ ಆವರಣದಲ್ಲಿದ್ದ ಕೋಟಿಲಿಂಗೇಶ್ವರ ಪ್ರತಿಷ್ಠಾಪನಾ ಸಮಿತಿ ಸಿಬ್ಬಂದಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT