ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ನಾಡಿನಲ್ಲಿ ‘ಕ್ರಿಸ್ತಕಾವ್ಯ’ದ ಸೊಬಗು

8ರ ಸಂಜೆ ತರಾಸು ರಂಗಮಂದಿರದಲ್ಲಿ ನೃತ್ಯ ರೂಪಕ
Last Updated 6 ಡಿಸೆಂಬರ್ 2013, 9:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಂಸ್ಕೃತಿ, ಐತಿಹಾಸಿಕ ಕತೆಗಳು, ಸ್ಮಾರಕ, ಪುರಾತತ್ವ ಮೌಲ್ಯಗಳಿಗೆ ಹೆಸರಾದ ಕೋಟೆ ನಾಡು ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಭಾನುವಾರದ ಸಂಜೆ ಹೊಸ ರೂಪದ ಕಾವ್ಯವೊಂದು ನೃತ್ಯ ರೂಪದಲ್ಲಿ ಅನಾವರಣಗೊಳ್ಳಲಿದೆ.

ಕಲೆ-ವಿಜ್ಞಾನ, ವೈದ್ಯೆ, ಬರಹಗಾರ್ತಿ ಈಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ‘ಬಹುಮುಖಿ’ ಮನೋವೈದ್ಯೆ ಡಾ. ಕೆ.ಎಸ್.ಪವಿತ್ರಾ ‘ಕ್ರಿಸ್ತಕಾವ್ಯ’ ಎಂಬ ವಿನೂತನ ನೃತ್ಯರೂಪಕ ಅನಾವರಣ ಗೊಳಿಸಲಿದ್ದಾರೆ. ಇದೇ ರವಿವಾರದ ಸಂಜೆಯ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ.

ಇತಿಹಾಸದಲ್ಲಿ ಮಾನವ ಕಲ್ಯಾಣಕ್ಕಾಗಿ ಪ್ರೀತಿ-ಸ್ನೇಹ-ಶಾಂತಿಗಯನ್ನು ಪ್ರತಿಪಾದಿಸಿದ ಮಹಾತ್ಮರು ಹಲವರು. ಅತ್ಯಂತ ಪ್ರಭಾವಶಾಲಿ ಧರ್ಮವೊಂದರ ಹುಟ್ಟಿಗೆ ಕಾರಣನಾದ ಎಂಬ ಸಂಗತಿಗಿಂತ ತಾನು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳಿಂದಲೇ ಮುಖ್ಯನಾಗುವ ‘ಏಸುಕ್ರಿಸ್ತ’  ಮಹಾತ್ಮರ ಸಾಲಿಗೆ ಸೇರುತ್ತಾನೆ. ಹಾಗೆಯೇ ಏಸುವಿನ ಹುಟ್ಟಿನಿಂದ ಆರಂಭಿಸಿ, ಆತನ ಪುನರುತ್ಥಾನದವರೆಗಿನ  ಜೀವನ ಘಟನೆಗಳು, ಧರ್ಮ-ಅಧರ್ಮಗಳ, ಸದ್ಗುಣ- ದುರ್ಗುಣಗಳ ಸಂಘರ್ಷವನ್ನೇ ಪ್ರತಿನಿಧಿಸುತ್ತವೆ. ಸಾವಿರಾರು ವರ್ಷಗಳಿಂದ ಏಸುವಿನ ಸುತ್ತ ಬೆಳೆದಿರುವ ಪವಾಡಗಳ, ಪುರಾಣಗಳ ಅತಿಮಾನುಷ ಪರಿವೇಶವನ್ನು ಕಳಚಿ ನಿಲ್ಲಿಸಿದರೂ ಏಸು ಕ್ರಿಸ್ತ ಸಾಧನೆಯಿಂದ ದೇವಮಾನವನಾಗಿದ್ದಾನೆ.

ಜಗತ್ ಸೃಷ್ಟಿಯಿಂದ ಮೊದಲುಗೊಂಡು ಕ್ರಿಸ್ ಮಸ್ -ಹೊಸವರ್ಷದ ಸಂಭ್ರಮಗಳೊಂದಿಗೆ ಸಂಪನ್ನಗೊಳ್ಳುವ ‘ಕ್ರಿಸ್ತಕಾವ್ಯ’ ಎಂಬ ಈ ಪ್ರಸ್ತುತಿಯ ಕೇಂದ್ರ ಬಿಂದು ‘ಕ್ರಿಸ್ತ’ನಲ್ಲ. ಬದಲಾಗಿ ಮಾನವೀಯ ಮೌಲ್ಯಗಳು. ಮನೋವೈಜ್ಞಾನಿಕ ದೃಷ್ಟಿಕೋನ ಮತ್ತು ರಸಸೃಷ್ಟಿ ಇವುಗಳಿಂದ ಕ್ರಿಸ್ತನ ಹಿಂದಿನ  ಜಗತ್ತು, ಕ್ರಿಸ್ತನಿದ್ದ ಕಾಲಘಟ್ಟ ಮತ್ತು ಇಂದಿನ ಸಮಾಜ ಇವುಗಳನ್ನು ಸಂಶೋಧನಾತ್ಮಕವಾಗಿ ಶೋಧಿಸುವ ಪ್ರಯತ್ನವೇ ‘ಕ್ರಿಸ್ತ ಕಾವ್ಯ’ದ ನೃತ್ಯರೂಪಕ. ಈ ರೂಪಕದಲ್ಲಿ ‘ಮನಸ್ಸಿ’ನ ಭಾವನೆಗಳೇ ಇಲ್ಲಿಯ ಕೇಂದ್ರ ಬಿಂದು.

ಸ್ವತಃ ಮನೋವೈದ್ಯೆ, ಭರತನಾಟ್ಯ ಕಲಾವಿದೆಯೂ ಆದ ಡಾ.ಕೆ.ಎಸ್. ಪವಿತ್ರಾ ಅವರ ಸೃಜನ ಪ್ರತಿಭೆಯ ಒಳನೋಟ ಮತ್ತು ಕಲ್ಪನಾಶೀಲತೆಗಳಿಂದ ‘ಕ್ರಿಸ್ತಕಾವ್ಯ’ ರೂಪುಗೊಂಡಿದೆ. ‘ಕ್ರಿಸ್ತಕಾವ್ಯ’ದ ಪ್ರತಿಸಾಲಿನ ಹಿಂದೆ, ಸಂದರ್ಭದ ಹಿಂದೆ ಧರ್ಮಬೋಧನೆಗಿಂತ ಇಂದಿನ ಸಮಾಜದ ಆಗುಹೋಗುಗಳನ್ನು ಅವಲೋಕಿಸುವ, ಅವುಗಳಿಗೊಂದು ಸಂದೇಶ  ನೀಡುವ ಪ್ರಯತ್ನವಿದೆ.

ಕನ್ನಡ ಸಾಹಿತ್ಯದ ವಿಭಿನ್ನ ಆಕರಗಳನ್ನು ‘ಕ್ರಿಸ್ತಕಾವ್ಯ’ ದ ಸಾಹಿತ್ಯಕ್ಕಾಗಿ ಆರಿಸಿಕೊಳ್ಳಲಾಗಿದೆ. ಈ ನಾಡಿನ ಬಹುತೇಕ ಎಲ್ಲಾ ಪ್ರಮುಖ ಕವಿಗಳೂ ಕ್ರಿಸ್ತನ ಕುರಿತು ಬರೆದಿದ್ದಾರೆ. ಇವರಲ್ಲಿ ಹೆಚ್ಚಿನವರು ಮುಖ್ಯವಾಗಿ ಕ್ರೈಸ್ತರಲ್ಲದವರು. ಶ್ರೀ ವಿಲಿಯಂ ಅವರು ಸಂಪಾದಿಸಿರುವ ‘ಕ್ರಿಸ್ತಕಾವ್ಯ’ ಎಂಬ ಗ್ರಂಥದ ಸಾಹಿತ್ಯದ ಜೊತೆಗೇ ಡಾ. ಎ.ಜಿ. ಗೋಪಾಲಕೃಷ್ಣ ಕೊಳ್ತಾಯ ಅವರ ಸಾಹಿತ್ಯವನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ ರೆವರೆಂಡ್‌ ಫರ್ಡಿನಾಂಡ್‌ ಕಿಟ್ಟೆಲ್, ರಂಗಪ್ಪ, ಯೋಸೆಫಪ್ಪ, ದಲಭಂಜನ, ಮುಲ್ಕಿ ಕವಿ ರಾಮಕೃಷ್ಣಯ್ಯ, ಡಾ.ಲತಾ ರಾಜಶೇಖರ್, ಮಂಜೇಶ್ವರ ಗೋವಿಂದ ಪೈ, ಕೆ.ಎಸ್.ನರಸಿಂಹಸ್ವಾಮಿ, ಕುವೆಂಪು, ಡಾ.ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿ, ಸು.ರಂ.ಎಕ್ಕುಂಡಿ, ದೊಡ್ಡರಂಗೇಗೌಡ,  ಶ್ರೀದಾಂತಿ, ಬಸವಭಕ್ತ, ಅಮರನಾಥ ಈ ಕವಿಗಳ ಕವನಗಳನ್ನು ಈ ರೂಪಕದಲ್ಲಿ ದೃಶ್ಯರೂಪಕವಾಗಿ ಸವಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT