ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೇಶ್ವರ ಕ್ಷೇತ್ರ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕುಂದಾಪುರ ತಾಲ್ಲೂಕಿನ ಕೋಟೇಶ್ವರ ಕರಾವಳಿ ಕರ್ನಾಟಕದ ಏಳು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಮುಖವಾದದು. ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಶಂಕರನಾರಾಯಣ, ಗೋಕರ್ಣ ಹಾಗೂ ಕೊಲ್ಲೂರು ಇನ್ನುಳಿದ ಕ್ಷೇತ್ರಗಳು. ಪುರಾಣಗಳಲ್ಲಿ ಕೋಟೇಶ್ವರ ಧ್ವಜಪುರವೆಂದೂ, ಶಾಸನಗಳಲ್ಲಿ ಕುಡಿಕೂರು ಎಂದೂ ಪ್ರಸಿದ್ಧಿ ಪಡೆದಿದೆ.

 ಈ ಕ್ಷೇತ್ರದ ಸ್ಥಳ ಪುರಾಣದ ಬಗ್ಗೆ ಪದ್ಮ ಪುರಾಣದ ಪುಷ್ಕರ ಖಂಡದಲ್ಲಿ ಪ್ರಸ್ತಾಪವಿದೆ. ಪುಷ್ಕರ ಕಲ್ಪದಲ್ಲಿ ಬ್ರಹ್ಮನು ಜಗತ್ತಿನ ಸಮಸ್ತ ಜೀವಜಂತುಗಳ ಸೃಷ್ಟಿಗೆ ಕಾರಣನಾದ ತಾನೇ ಶ್ರೇಷ್ಠನೆಂದು ಅಹಂಕಾರದಿಂದ ಬೀಗುತ್ತಿರುವಾಗ ಷಣ್ಮುಖನು ಅವನಿಗೆ ಶ್ರೇಷ್ಠವಾದ ಶಿವ ತತ್ವವನ್ನು ಉಪದೇಶಿಸಿದನಂತೆ.
 
ಶಿವ ತತ್ವವನ್ನು ಕೇಳಿದ ಬ್ರಹ್ಮನು ತನ್ನ ತಪ್ಪನ್ನು ಒಪ್ಪಿಕೊಂಡು ಪ್ರಾಯಶ್ಚಿತ್ತಕ್ಕಾಗಿ ಶಿವನನ್ನು ಕುರಿತು ಉಗ್ರ ತಪಸ್ಸು ಮಾಡಿದ. ಬ್ರಹ್ಮನ ತಪಸ್ಸಿಗೆ ಮೆಚ್ಚಿದ ಶಂಕರನು ಲಿಂಗರೂಪದಲ್ಲಿ  ಪ್ರತ್ಯಕ್ಷನಾದನು. ಆಗ ಬ್ರಹ್ಮನು ಲಿಂಗಕ್ಕೆ ಸಾಷ್ಟಾಂಗ ನಮಸ್ಕರಿಸಿ ಏಳುವಾಗ ಎದುರಿನಲ್ಲಿ ಕೋಟಿ ಲಿಂಗಗಳನ್ನು ನೋಡಿ ಆಶ್ಚರ್ಯಗೊಂಡ. ಬ್ರಹ್ಮನನ್ನು ಆಶೀರ್ವದಿಸಿದ ಶಿವ ಆ ಲಿಂಗದಲ್ಲೇ ಅಂತರ್ದಾನ ಹೊಂದಿದ ಎಂದು ಪದ್ಮ ಪುರಾಣದಲ್ಲಿ ಹೇಳಲಾಗಿದೆ.

ಅನೇಕ ಶಾಸನಗಳಲ್ಲಿ ಕೋಟೇಶ್ವರವನ್ನು ಕುಡಿಕೂರು ಎಂದು ಹೇಳಲಾಗಿದೆ. ಪ್ರತಿ ವರ್ಷ ವೃಶ್ಚಿಕ ಮಾಸದ ಹುಣ್ಣಿಮೆಯಂದು ಇಲ್ಲಿ ನಡೆಯುವ ಜಾತ್ರೆಯನ್ನು ಈಗಲೂ ಕೊ(ಕು)ಡಿ ಹಬ್ಬ ಎಂದೇ ಕರೆಯುತ್ತಾರೆ. ಸಮುದ್ರದ ಹತ್ತಿರದಲ್ಲಿರುವ ಈ ಊರನ್ನು ಭೂಮಿಯ ತುದಿ ಎಂಬ ಅರ್ಥದಲ್ಲಿ ಕುಡಿಯೂರು ಎಂದು ಕರೆದಿರಬಹುದು ಎಂಬ ಅಭಿಪ್ರಾಯವಿದೆ.
 
ನವ ದಂಪತಿಗಳು ಕೋಟೇಶ್ವರ ಜಾತ್ರೆಯಲ್ಲಿ ದೇವರಿಗೆ ಸೇವೆ ಸಲ್ಲಿಸಿದ ನಂತರ ಕಬ್ಬಿನ ಕುಡಿಗಳನ್ನು ತೆಗೆದುಕೊಂಡು ಮನೆಗೆ ಹೋಗುವ ಸಂಪ್ರದಾಯವಿದೆ. ಅವರ ಮನೆಯಲ್ಲೂ ಮಕ್ಕಳೆಂಬ ಕುಡಿಗಳು ಜನ್ಮ ತಳೆಯುತ್ತವೆ ಎಂಬುದರ ಸಂಕೇತ ಈ ಕಬ್ಬಿನ ಕುಡಿಗಳು.

ಈಗಿನ ಕೋಟೇಶ್ವರದ ಪ್ರದೇಶವನ್ನು ಅಳುಪ ಅರಸರಿಂದ ಮೊದಲ್ಗೊಂಡು ಹೊಯ್ಸಳ, ವಿಜಯನಗರ, ಕೆಳದಿಯ ಅರಸರು ಆಳಿದರು. ಆನಂತರ ಹೈದರಾಲಿ, ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟು ನಂತರ ಬ್ರಿಟಿಷರ ವಶವಾಯಿತು. ಕೋಟೇಶ್ವರ ದೇವಸ್ಥಾನದ ನಿರ್ಮಾಣ ಹಂತ ಹಂತವಾಗಿ ನಡೆಯಿತು ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಗರ್ಭಗುಡಿಯಲ್ಲಿ ಚಿಕ್ಕ ಶಿಲಾ ಬಾವಿಯಿದೆ. ಅದರ ಒಳಗಡೆ ಕೈಯಾಡಿಸಿದರೆ ಲಿಂಗದ ತುದಿಯಂತಹ ಬಹಳಷ್ಟು ಭಾಗಗಳು ಸ್ಪರ್ಶಕ್ಕೆ ನಿಲುಕುತ್ತವೆ. ಇವುಗಳನ್ನು ಕೋಟಿಲಿಂಗಗಳೆಂದು ಕರೆಯುತ್ತಾರೆ. ಈ ಬಾವಿಯ ಮೇಲೆ ಪಾಣಿ ಪೀಠವನ್ನಿಟ್ಟು ಅದರ ಮೇಲೆ ಶಿವನ ಕಂಚಿನ ಪ್ರತಿಮೆಯನ್ನಿಟ್ಟು ಪೂಜೆ ಸಲ್ಲಿಸುತ್ತಾರೆ.

ದೇವಸ್ಥಾನದ ಒಳಸುತ್ತಿನಲ್ಲಿ ಸಪ್ತ ಮಾತೃಕೆಯರು, ಷಣ್ಮುಖ, ಜೇಷ್ಟಲಕ್ಷ್ಮಿ, ಮಹಿಷ ಮರ್ದಿನಿ, ವೆಂಕಟರಮಣ ದೇವರ ಚಿಕ್ಕ ಚಿಕ್ಕ ಗುಡಿಗಳಿವೆ. ನವರಂಗದಲ್ಲಿ ದೇವರ ಎದುರು ಪಂಚಲೋಹದ ನಂದಿ ವಿಗ್ರಹವಿದೆ. ಮುಖ ಮಂಟಪದಲ್ಲಿ ದೊಡ್ಡದಾದ ಶಿಲಾ ನಂದಿ, ಪಾರ್ವತಿ ಹಾಗೂ ತಾಂಡವೇಶ್ವರ ಮೂರ್ತಿಗಳಿವೆ.

ದೇವಸ್ಥಾನದ ಆವಾರದ ಉತ್ತರದ ಬಾಗಿಲಿನಿಂದ ಕೋಟಿತೀರ್ಥಕ್ಕೆ ಹೋಗಬಹುದು. ಸುಮಾರು ನಾಲ್ಕೂವರೆ ಎಕರೆ ವಿಸ್ತೀರ್ಣದ ಈ ಕೆರೆ ಜಿಲ್ಲೆಯಲ್ಲೇ ಪ್ರಸಿದ್ಧಿ ಪಡೆದಿದೆ. ಕೆರೆಯ ಸುತ್ತ ಪ್ರದಕ್ಷಿಣಾ ಪಥವಿದೆ.

ಎಲ್ಲ ಹಬ್ಬಗಳಂದು ವಿಶೇಷ ಪೂಜೆ ನಡೆಯುತ್ತದೆ. ಕರಾವಳಿ ಜಿಲ್ಲೆಗಳಿಂದ ಇಲ್ಲಿಗೆ ಭಕ್ತರು ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT