ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ್ಯಂತರ ಜನರಿಗಿಲ್ಲ ಸೂರು: ಎಸ್.ಆರ್.ನಾಯಕ್

Last Updated 18 ಜನವರಿ 2011, 9:55 IST
ಅಕ್ಷರ ಗಾತ್ರ

ತುಮಕೂರು: ನೆಲೆಸಲು ಶಾಶ್ವತ ಆಶ್ರಯ, ಶುದ್ಧ ಗಾಳಿ, ಪೌಷ್ಟಿಕ ಆಹಾರ, ಆರೋಗ್ಯ ಸೇವೆಯಿಂದ ವಂಚಿತವಾದ ದೊಡ್ಡ ಸಮುದಾಯವೇ ಇದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ. ಎಸ್.ಆರ್.ನಾಯಕ್ ವಿಷಾದಿಸಿದರು.

ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆ ಮತ್ತು ಮಾತೃಭೂಮಿ ಶಾಂತಿ ಪ್ರತಿಷ್ಠಾನ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ಬೃಹತ್ ಜನ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭೂಮಿಗೆ ಬರುವ ಪ್ರತಿ ಮನುಷ್ಯನಿಗೂ ಆಶ್ರಯ ಪಡೆಯಲು ಜಾಗ ಕೊಡಬೇಕು. ಆಶ್ರಯ, ಸೂರು ಕೊಡದಿದ್ದರೆ ಅದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಸ್ವಾತಂತ್ರ್ಯ ಲಭಿಸಿ 63 ವರ್ಷ ಕಳೆದರೂ ಇಂದಿಗೂ ಕೋಟ್ಯಂತರ ಜನರಿಗೆ ಅವರದೇ ಆದ ಒಂದಿಂಚು ಸ್ವಂತ ಜಾಗ, ಸೂರು ಇಲ್ಲ. ಅಲ್ಲದೆ ಉಸಿರಾಟಕ್ಕೆ ಬೇಕಾದ ಶುದ್ಧ ಗಾಳಿಯಿಂದಲೂ ವಂಚಿಸಲಾಗಿದೆ. ಬೆಂಗಳೂರಿನಂತಹ ನಗರಗಳಲ್ಲಿ ಶುದ್ಧ ಗಾಳಿ ಸಿಗುತ್ತಿಲ್ಲ. ಪೌಷ್ಟಿಕ, ಸಂತುಲಿತ ಆಹಾರದಿಂದಲೂ ವಂಚಿತವಾದ ದೊಡ್ಡ ಸಮುದಾಯವೇ ಇದೆ. ಎಲ್ಲರಿಗೂ ಆರೋಗ್ಯ ಸೇವೆ, ರಕ್ಷಣೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನುಷ್ಯನ ಬೆಳವಣಿಗೆಗೆ ಶಿಕ್ಷಣ ಮತ್ತು ತರಬೇತಿ ಅತ್ಯಂತ ಅಗತ್ಯ. 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ ಮೂಲಭೂತ ಹಕ್ಕಾಗಿದೆ. ಆದರೆ, ಇಂದಿಗೂ ಎಳೆಯ ವಯಸ್ಸಿನ ಅನೇಕ ಮಕ್ಕಳು ಡಾಬ, ಹೋಟೆಲ್‌ಗಳಲ್ಲಿ ದುಡಿಯುತ್ತಿದ್ದಾರೆ. ಅಲ್ಲದೆ 10-12 ವರ್ಷದ ಹೆಣ್ಣು ಮಕ್ಕಳನ್ನು ಅವರ ತಾಯಂದಿರೇ ಮತ್ತು ಕೆಲ ನೀಚ ವ್ಯಕ್ತಿಗಳು ವೇಶ್ಯಾವಾಟಿಕೆಗೆ ತಳ್ಳಿರುವ ನಿದರ್ಶನಗಳು ಗಮನಕ್ಕೆ ಬಂದಿವೆ ಎಂದು ವಿಷಾದಿಸಿದರು.

ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ದೂರುಗಳು ಬಂದರೆ ಖುದ್ದು ಪರಿಶೀಲಿಸುತ್ತೇನೆ. ಅಧಿಕಾರಿಗಳನ್ನು ಸೇರಿಸಿ ನ್ಯಾಯಾಲಯದ ರೀತಿಯಲ್ಲೇ ವಿಚಾರಣೆ ನಡೆಸಿ ಪರಿಹಾರ ಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎಂದ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಕೆಲವರು ಮಾನವ ಹಕ್ಕುಗಳ ಅಸ್ತ್ರ ಬಳಸಿಕೊಂಡು ಸ್ವಹಿತಾಸಕ್ತಿ ಸಾಧಿಸಿಕೊಳ್ಳುತ್ತಿರುವುದು ನಡೆಯುತ್ತಿದೆ. ಈ ಬಗ್ಗೆ ಸಮಾಜ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ
ಸಂವಾದದಲ್ಲಿ ಸೇಂಟ್ ಮೇರಿಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಮೇಘನಾ, ದೇಶದಲ್ಲಿ ಜಾತಿ ವ್ಯವಸ್ಥೆ ಏಕೆ? ದಲಿತರೆಲ್ಲರೂ ಬಡವರಲ್ಲ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಏಕೆ? ಎಂದು ನ್ಯಾಯಮೂರ್ತಿ ಡಾ.ಎಸ್.ಆರ್.ನಾಯಕ್ ಮುಂದೆ ಪ್ರಶ್ನೆಗಳನ್ನಿಟ್ಟರು.
ವಿದ್ಯಾರ್ಥಿನಿ ವಾದ ಒಪ್ಪದ ನ್ಯಾಯಮೂರ್ತಿ ಗಳು, ಇಂತಹದ್ದೇ ವಾದ ದೇಶದ ಉದ್ದಗಲಕ್ಕೂ ಕೇಳಿಬರುತ್ತಿದೆ. ಆದರೆ, ಇಂದಿಗೂ ದಲಿತರು, ಹಿಂದುಳಿದವರ ಸ್ಥಿತಿ ಸುಧಾರಿಸಿಲ್ಲ. ಶತಶತಮಾನಗಳಿಂದ ಅವರನ್ನು ಕೀಳಾಗಿ ನಡೆಸಿಕೊಳ್ಳಲಾಗಿದೆ. ಆರ್ಥಿಕ, ಸಾಮಾಜಿಕ ಸಮಾನತೆ ನೆಲೆಸುವವರೆಗೂ ಸಂವಿಧಾನದಲ್ಲಿ ನೀಡಿರುವ ಸವಲತ್ತುಗಳನ್ನು ಮುಂದುವರಿಸ ಬೇಕು ಎಂದು ಪ್ರತಿಪಾದಿಸಿದರು.

ಕಾನೂನು ರೂಪಿಸುವವರಿಂದ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಯಲ್ಲ? ಎಂದು ಮತ್ತೊಬ್ಬ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ, ಮಹಾತ್ಮಗಾಂಧಿ ರಾಜಕೀಯ ಸ್ವಾತಂತ್ರ್ಯ ತಂದುಕೊಟ್ಟರೂ ಇನ್ನು ಕಲ್ಯಾಣ ರಾಜ್ಯ ಸ್ಥಾಪನೆಯಾಗಿಲ್ಲ. ರಕ್ಷಕರೇ ಭಕ್ಷಕರಾಗಿದ್ದಾರೆ. ಇದೆಲ್ಲದಕ್ಕೂ ಪರಿಹಾರವಾಗಿ ಗಾಂಧೀಜಿ ಪ್ರತಿಪಾದಿಸಿದ ಅಹಿಂಸಾತ್ಮಕ ಹಾದಿಯ ಮತ್ತೊಂದು ಬಹುದೊಡ್ಡ ಆಂದೋಲನವೇ ದೇಶದಲ್ಲಿ ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ವಕೀಲ ಬಿ.ಎಸ್.ಚಂದ್ರಶೇಖರ್ ಮಾತನಾಡಿ ದರು. ಟುಡಾ ಅಧ್ಯಕ್ಷ ಎಸ್.ಆರ್. ಶ್ರೀಧರಮೂರ್ತಿ, ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎನ್.ಶ್ರೀನಿವಾಸ, ಸದಸ್ಯ ಟಿ.ಆರ್.ಕುಮಾರಸ್ವಾಮಿ, ಸುಪ್ರೀಂ ಕೋರ್ಟ್ ವಕೀಲ ದವನಂ ವಿ.ಸತ್ಯನಾರಾಯಣ, ಜಿ.ಎಸ್.ರವಿಶಂಕರ್, ಎ. ಅಮರನಾಥ್  ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT