ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ್ಯಂತರ ರೂಪಾಯಿ ಅವ್ಯವಹಾರದ ಶಂಕೆ

Last Updated 11 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೀದಿ ದೀಪಗಳ ನಿರ್ವಹಣೆಗೆ ಸಂಬಂಧಪಟ್ಟಂತೆ ಬಿಬಿಎಂಪಿ ಕರೆದಿದ್ದ 42 ಕೋಟಿ ರೂಪಾಯಿ ಮೊತ್ತದ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿರುವುದರಿಂದ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮೇಯರ್ ಡಿ. ವೆಂಕಟೇಶಮೂರ್ತಿ ಆಯುಕ್ತರ ತಾಂತ್ರಿಕ ಜಾಗೃತ ಕೋಶದಿಂದ (ಟಿವಿಸಿಸಿ) ಪಡೆದುಕೊಂಡಿದ್ದ ಟೆಂಡರ್‌ಗೆ ಸಂಬಂಧಿಸಿದ ಮೂಲ ಕಡತವನ್ನು ಶುಕ್ರವಾರ ವಾಪಸು ನೀಡಿದ್ದಾರೆ. ಆಯುಕ್ತರ ಅನುಮತಿ ಪಡೆಯದೆ ಏಕಾಏಕಿ ಕಡತ ಪಡೆದುಕೊಂಡ ಮೇಯರ್ ಕ್ರಮ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದರಿಂದ ಮುಜುಗರಕ್ಕೆ ಒಳಗಾದ ಮೇಯರ್ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ವೇಳೆಗೆ ಆಯುಕ್ತರ ತಾಂತ್ರಿಕ ಜಾಗೃತ ಕೋಶಕ್ಕೆ ಕಡತ ವಾಪಸು ನೀಡಿದ್ದಾರೆ ಎಂದು ಪಾಲಿಕೆ ಮೂಲಗಳು ಖಚಿತಪಡಿಸಿವೆ.

ಪ್ರಕರಣದ ಹಿನ್ನೆಲೆ: ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿ ದೀಪಗಳ ವಾರ್ಷಿಕ ನಿರ್ವಹಣೆಗೆ 2012-13 ಹಾಗೂ 2013-14ನೇ ಸಾಲಿಗೆ ಕಳೆದ ಫೆಬ್ರುವರಿಯಲ್ಲಿ `ಇ-ಪ್ರೊಕ್ಯೂರ್‌ಮೆಂಟ್~ನಡಿ ಟೆಂಡರ್ ಕರೆಯಲಾಗಿತ್ತು. ಒಟ್ಟು 127 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಲಾಗಿತ್ತು. ಮಾರ್ಚ್ 15ಕ್ಕೆ ಟೆಂಡರ್ ತೆರೆಯಲಾಗಿತ್ತು.

ಆದರೆ, ಟೆಂಡರ್‌ನಲ್ಲಿ ಕನಿಷ್ಠ ಮೊತ್ತ ದಾಖಲಿಸಿರುವ ಗುತ್ತಿಗೆದಾರರು ನಿರ್ವಹಣಾ ಕಾಮಗಾರಿಗಳಲ್ಲಿ ಅಂದಾಜು ಮೊತ್ತಕ್ಕಿಂತ ಶೇ 25ರಷ್ಟು ಕಡಿಮೆ ಮೊತ್ತಕ್ಕೆ ಬಿಡ್ ಮಾಡಬೇಕಿತ್ತು. ಆದರೆ, ಹಲವು ಪ್ಯಾಕೇಜ್‌ಗಳಲ್ಲಿ ಶೇ 33ರಷ್ಟು ಹೆಚ್ಚಳ ನಮೂದಿಸಿದ್ದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಟೆಂಡರ್ ಪ್ರಕ್ರಿಯೆ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಟಿವಿಸಿಸಿಗೆ ಸೂಚಿಸಿದ್ದರು.

ಹತ್ತಾರು ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಿದ ಮೊತ್ತದ ಶೇ 10ರಿಂದ 33ರಷ್ಟು ದುಬಾರಿ ಮೊತ್ತವನ್ನು ಮಂಜೂರಾದ ಟೆಂಡರ್ ಮೊತ್ತದಲ್ಲಿ ನಮೂದಿಸಿರುವ ಅಂಶವನ್ನು ಟಿವಿಸಿಸಿ ಪತ್ತೆ ಮಾಡಿತ್ತು.
ಈ ಟೆಂಡರ್ ಪ್ರಕ್ರಿಯೆಯನ್ನು ಯಥಾವತ್ತಾಗಿ ಜಾರಿಗೊಳಿಸಿದ್ದರೆ ಬಿಬಿಎಂಪಿಗೆ 8ರಿಂದ 12 ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತಿತ್ತು ಎಂದು ಟಿವಿಸಿಸಿ ಶಂಕೆ ವ್ಯಕ್ತಪಡಿಸಿತ್ತು.

ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಟಿವಿಸಿಸಿ ಅಂತಿಮ ವರದಿ ಸಿದ್ಧಪಡಿಸುವ ಹಂತದಲ್ಲಿದ್ದಾಗಲೇ ಮೇಯರ್ ಡಿ. ವೆಂಕಟೇಶಮೂರ್ತಿ ಪರಿಶೀಲನೆಗಾಗಿ ಕಡತ ಪಡೆದುಕೊಂಡಿದ್ದರು. ಮೇಯರ್ ಅವರ ಈ ಕ್ರಮ ಟೀಕೆಗೂ ಗುರಿಯಾಗಿತ್ತು. ಆಯುಕ್ತರ ಅನುಮತಿ ಪಡೆದ ನಂತರವೇ ಮೇಯರ್ ಕಡತ ಪಡೆದುಕೊಳ್ಳಬಹುದು.

ಈ ನಡುವೆ, ಶುಕ್ರವಾರ ಬೆಳಿಗ್ಗೆ ಕಡತವನ್ನು ಮೇಯರ್ ಟಿವಿಸಿಸಿಗೆ ವಾಪಸು ಕಳಿಸಿದ್ದಾರೆ. ಶನಿವಾರ ಹಾಗೂ ಭಾನುವಾರ ರಜೆ ಇರುವುದರಿಂದ ಟಿವಿಸಿಸಿ ಮಂಗಳವಾರ ಅಥವಾ ಬುಧವಾರ ಆಯುಕ್ತರು ಹಾಗೂ ವಿಶೇಷ ಆಯುಕ್ತರಿಗೆ ಸಮಗ್ರ ವರದಿ ಸಲ್ಲಿಸಲಿದೆ.

ಟಿವಿಸಿಸಿಯು ಟೆಂಡರ್‌ನಲ್ಲಿನ ಲೋಪಗಳನ್ನು ಪರಿಶೀಲಿಸಿದ ನಂತರವಷ್ಟೇ ಪಾಲಿಕೆಯ ಬೊಕ್ಕಸಕ್ಕೆ ಎಷ್ಟು ನಷ್ಟವಾಗುತ್ತಿತ್ತು ಎಂಬುದು ಸ್ಪಷ್ಟವಾಗಿ ತಿಳಿದು ಬರಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT