ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತು ನಾಶ

Last Updated 30 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಎಲಾಸ್ಟ್ರೆಕ್ಸ್ ಪಾಲಿಮರ್ಸ್‌ ಪ್ರೈವೇಟ್ ಲಿಮಿಟೆಡ್ (ಪ್ಯಾರಗಾನ್ ಪಾಲಿಮರ್ಸ್‌ ) ಪಾದರಕ್ಷೆ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಘಟನೆ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಸುಮಾರು 500 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಕಾರ್ಮಿಕರು ಕಾರ್ಖಾನೆಯಿಂದ ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶದ ನಾಲ್ಕನೇ ಹಂತದ ಮೂರನೇ ಮುಖ್ಯರಸ್ತೆಯಲ್ಲಿ ಈ ಕಾರ್ಖಾನೆ ಇದೆ. ಇಲ್ಲಿ ಶೂ ಮತ್ತು ಪಾದರಕ್ಷೆಗಳನ್ನು ತಯಾರಿಸಲಾಗುತ್ತದೆ. ಕಾರ್ಖಾನೆಯ ಪಕ್ಕದಲ್ಲೇ ದಾಸ್ತಾನು ಮಳಿಗೆ ಸಹ ಇದೆ. ಒಟ್ಟು ನಾಲ್ಕು ಅಂತಸ್ತುಗಳಲ್ಲಿರುವ ಕಾರ್ಖಾನೆಯ ಮೊದಲನೇ ಮಹಡಿಯಲ್ಲಿ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು.
 
ಶೀಘ್ರವಾಗಿ ವ್ಯಾಪಿಸಿದ ಬೆಂಕಿ ಪಕ್ಕದಲ್ಲೇ ಇದ್ದ ರಾಸಾಯನಿಕ ತುಂಬಿದ ಡ್ರಮ್‌ಗೆ ಹೊತ್ತಿಕೊಂಡಿದ್ದರಿಂದ ಅದು ಸ್ಫೋಟಗೊಂಡಿತು. ಇದರಿಂದಾಗಿ ಬೆಂಕಿ ಮೊದಲ ಮಹಡಿಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿತು.

ಸ್ಫೋಟದ ಶಬ್ದ ಕೇಳುತ್ತಿದ್ದಂತೆ ಕಾರ್ಮಿಕರೆಲ್ಲ ಕಾರ್ಖಾನೆಯಿಂದ ಹೊರ ಬಂದರು. ವಿಷಯ ತಿಳಿದು ಕೂಡಲೇ 50 ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾದರು. ಆದರೆ ಬೆಂಕಿ ಎರಡು ಮತ್ತು ಮೂರನೇ ಮಹಡಿಗೂ ಆವರಿಸಿತು. ರಾಸಾಯನಿಕ ತುಂಬಿದ್ದ ಮತ್ತೊಂದು ಡ್ರಮ್ ಸಂಜೆ ಐದು ಗಂಟೆ ಸುಮಾರಿಗೆ ಸ್ಫೋಟಗೊಂಡು ಇಡೀ ಕಟ್ಟಡ ಹೊತ್ತಿ ಉರಿಯಲಾರಂಭಿಸಿತು.

ಬೆಂಕಿ ದಾಸ್ತಾನು ಮಳಿಗೆಗೂ ವ್ಯಾಪಿಸಿ ಸುಮಾರು 20 ಲೋಡ್ ಪಾದರಕ್ಷೆಗಳು ಸುಟ್ಟು ಹೋದವು. ಅಗ್ನಿಶಾಮಕ ಸಿಬ್ಬಂದಿ ಜತೆ ಕೈಜೋಡಿಸಿದ ಅಕ್ಕಪಕ್ಕದ ಕಾರ್ಖಾನೆಗಳ ಕಾರ್ಮಿಕರು ರಾಸಾಯನಿಕ ತುಂಬಿದ್ದ 100ಕ್ಕೂ ಹೆಚ್ಚು ಡ್ರಮ್‌ಗಳನ್ನು ಕಾರ್ಖಾನೆ ಆವರಣಕ್ಕೆ ಸ್ಥಳಾಂತರಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು.

ಸ್ಥಳದಲ್ಲಿ ಆತಂಕ: ಕಾರ್ಖಾನೆಯ ಕಟ್ಟಡ ಸಂಪೂರ್ಣವಾಗಿ ಹೊತ್ತಿ ಉರಿಯುತ್ತಿದ್ದರಿಂದ ಸ್ಥಳದಲ್ಲಿ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇಡೀ ಕೈಗಾರಿಕಾ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು. ಸುಮಾರು 1 ಕಿ.ಮೀ ದೂರದಿಂದಲೂ ಹೊಗೆ ಗೋಚರಿಸುತ್ತಿತ್ತು.

ಈ ಕಾರ್ಖಾನೆಗೆ ಹೊಂದಿಕೊಂಡಂತೆಯೇ ಔಷಧ ಮತ್ತು ರಾಸಾಯನಿಕ ತಯಾರಿಕಾ ಕಾರ್ಖಾನೆಗಳು ಇರುವುದರಿಂದ ಬೆಂಕಿ ಜ್ವಾಲೆಗಳು ಆ ಕಾರ್ಖಾನೆಗಳಿಗೂ ವ್ಯಾಪಿಸುವ ಸಾಧ್ಯತೆ ಇತ್ತು. ಆದರೆ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ಪಕ್ಕದ ಕಾರ್ಖಾನೆಗಳಿಗೆ ವ್ಯಾಪಿಸದಂತೆ ಕಾರ್ಯಾಚರಣೆ ನಡೆಸಿದರು.

ಘಟನೆ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಕಾರ್ಖಾನೆಗಳಲ್ಲಿ ಕೆಲಸ ಸ್ಥಗಿತಗೊಳಿಸಿ ಕಾರ್ಮಿಕರನ್ನು ಮನೆಗೆ ಕಳುಹಿಸಲಾಯಿತು.

ಭಾರಿ ಜನಸ್ತೋಮ: ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಸಾವಿರಾರು ಮಂದಿ ಸ್ಥಳದಲ್ಲಿ ಜಮಾಯಿಸಿದರು. ಜನರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಪೊಲೀಸರು ಜನರ ಗುಂಪನ್ನು ಚದುರಿಸಿದರೂ ಮತ್ತೆ ಮತ್ತೆ ಜನರು ಜಮಾಯಿಸುತ್ತಿದ್ದರು.

ಅಗ್ನಿಶಾಮಕ ಸಿಬ್ಬಂದಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ಕೆಲ ರಸ್ತೆಗಳಲ್ಲಿ ಇತರೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.

ನಿರಂತರ ಕಾರ್ಯಾಚರಣೆ: ಮೊದಲು 3 ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಆರಂಭಿಸಿದರು. ಆದರೆ ನಿಯಂತ್ರಣಕ್ಕೆ ಬಾರದ ಬೆಂಕಿ ಇಡೀ ಕಟ್ಟಡಕ್ಕೆ ಆವರಿಸಿದ್ದರಿಂದ 50ಕ್ಕೂ ಹೆಚ್ಚು ವಾಹನ ಬಳಸಿ ತಡ ರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರು.

ನಗರದ ಅಗ್ನಿಶಾಮಕ ಠಾಣೆಗಳ ವಾಹನಗಳಷ್ಟೇ ಅಲ್ಲದೇ ತುಮಕೂರು, ಕುಣಿಗಲ್, ನೆಲಮಂಗಲ, ಹೊಸಕೋಟೆ, ಮಾಗಡಿ ಠಾಣೆ ವಾಹನಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು. ವಾಹನಗಳ ಟ್ಯಾಂಕ್‌ನಲ್ಲಿ ನೀರು ಖಾಲಿಯಾದಾಗ ಅಕ್ಕಪಕ್ಕದ ಕೈಗಾರಿಕೆಗಳ ಟ್ಯಾಂಕ್‌ನಿಂದ ನೀರು ತುಂಬಿಸಿಕೊಳ್ಳಲಾಯಿತು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನಿರ್ದೇಶಕ ಬಿ.ಜಿ.ಚೆಂಗಪ್ಪ, ಪಶ್ಚಿಮ ವಲಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಎನ್.ಯು.ಈರಪ್ಪ ಸೇರಿದಂತೆ ಇಲಾಖೆಯ ಎಲ್ಲ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಿಬ್ಬಂದಿ ಪ್ರಾಣಾಪಾಯ ಲೆಕ್ಕಿಸದೆ ಕಾರ್ಯ ನಿರ್ವಹಿಸಿದರು. ಫೈರ್‌ಮನ್ ಗಂಗಬೈರಯ್ಯ ಎಂಬುವರು ಗಾಯಗೊಂಡಿದ್ದಾರೆ.

ಉತ್ತರ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ ಹಾಗೂ ಇತರೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಷ್ಟದ ಮಾಹಿತಿ ಸಿಕ್ಕಿಲ್ಲ: `ಅಗ್ನಿ ಅನಾಹುತದಲ್ಲಿ ಆಗಿರುವ ನಷ್ಟದ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಈ ಅವಘಡ ಸಂಭವಿಸಿದೆಯೇ ಅಥವಾ ರಾಸಾಯನಿಕ ತುಂಬಿದ ಡ್ರಮ್‌ಗಳಿಗೆ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ನಡೆದಿದೆಯೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ~ ಎಂದು ಬಿ.ಜಿ.ಚೆಂಗಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಸುರಕ್ಷತೆ ಇಲ್ಲ: `ಈ ಕಾರ್ಖಾನೆಯಲ್ಲಿ ಹಿಂದೆಯೂ ಹಲವು ಬಾರಿ ಸಣ್ಣ ಪ್ರಮಾಣದಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಕಚ್ಚಾ ಚರ್ಮ ಮತ್ತು ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸದಂತೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದರು.

ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಕಾರ್ಖಾನೆಯಲ್ಲಿ ಇರುವುದರಿಂದ ಹಾಗೂ 2 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುವುದರಿಂದ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದ್ದರು~ ಎಂದು ಕಾರ್ಮಿಕರು ತಿಳಿಸಿದ್ದಾರೆ.

`ಆಡಳಿತ ಮಂಡಳಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಭಾರಿ ಪ್ರಮಾಣದಲ್ಲಿ ಪಾದರಕ್ಷೆ ಮತ್ತು ಕಚ್ಚಾ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು. ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡರೂ ನಂದಿಸಲು ಬೇಕಾದ ಯಾವುದೇ ಸಲಕರಣೆ ಸಹ ಇರಲಿಲ್ಲ~ ಂದು ಕಾರ್ಮಿಕರು ಹೇಳಿದ್ದಾರೆ.

`ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾರ್ಖಾನೆಯಿಂದ ಹೊರಗೆ ಬಂದೆ. ಆಗ ಬಾಂಬ್ ಸ್ಫೋಟಗೊಂಡಂತೆ ಶಬ್ದ ಕೇಳಿಸಿತು. ಸ್ವಲ್ಪ ಸಮಯದಲ್ಲೇ ಬೆಂಕಿ ಮೊದಲನೇ ಮಹಡಿಗೆ ಆವರಿಸಿತು. ಭಯಭೀತರಾದ ಕಾರ್ಮಿಕರೆಲ್ಲ ಓಡಿ ಹೊರಗೆ ಬಂದರು~ ಎಂದು ಸ್ಥಳೀಯ ಕಾರ್ಖಾನೆಯೊಂದರ ಕಾರ್ಮಿಕ ಮುನಿಯಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT