ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪ ಎಂಬ ಪೊಮೆರಿಯನ್ ನಾಯಿ

ಅಂತರ್ಯುದ್ಧ
Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನಾವು ಬದುಕಿನಲ್ಲಿ ಒಮ್ಮೊಮ್ಮೆ ಸಂಬಂಧ, ಆಸ್ತಿ, ಹಣ ಸೇರಿದಂತೆ ಏನೇನನ್ನೆಲ್ಲ ಕಳೆದು­ಕೊಂಡು ಬಿಡು­ತ್ತೇವೆ. ಯಾಕೆ ಹೀಗೆ? ಇದೆಲ್ಲಕ್ಕೆ ಯಾರು ಕಾರಣ? ನಿಮಗೆ ಗೊತ್ತೇ, ಇದೆಲ್ಲದರ ಹಿಂದೆ ಇರುವುದು ಒಂದೇ ಕ್ರಿಮಿ-, ಅದೇ ಕೋಪ. ಇಷ್ಟೆಲ್ಲ ಆದರೂ ನಾವು ಸಿಟ್ಟನ್ನು ಮಾತ್ರ ಬಿಡಲು ತಯಾರಿ­ರು­ವು­ದಿಲ್ಲ.

ಕೆಲವೇ ನಿಮಿಷಗಳಲ್ಲಿ ನಮಗೆ ಭಯಂಕರ ಸಿಟ್ಟು ಬಂದುಬಿಡುತ್ತದೆ. ಕೆಲವರಿಗಂತೂ ತಮ್ಮ ಕೋಪದ ಮೇಲೆ ಅಸಾಧ್ಯವಾದ ಹೆಮ್ಮೆ. ‘ನನಗೆ ಸಿಟ್ಟು ಬಂದರೆ ನನ್ನ ಮುಂದೆ ಯಾರೂ ನಿಲ್ಲಲಾರರು ಗೊತ್ತೇ’ ಎಂದು ಹೇಳಿಕೊಳ್ಳುತ್ತಾರೆ. ಪೊಮೆರಿಯನ್ ನಾಯಿ­ಯಂತೆ ಕಿರುಚಾಡಿದರೆ ಯಾರು ತಾನೇ ನಿಲ್ಲಲು ಸಾಧ್ಯ?
ಬೆಳಿಗ್ಗೆಯಿಂದ ರಾತ್ರಿಯವರೆಗೆ ಎಲ್ಲದರಲ್ಲೂ, ಎಲ್ಲರ ಮೇಲೂ ಸಿಟ್ಟು. ಉದಾಹರಣೆಗೆ ಮೆಜಿಸ್ಟಿಕ್‌ನಲ್ಲಿರುವ ಒಂದು ಹೋಟೆಲ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ ಭೇಟಿಯಾಗುವಂತೆ ನಿಮ್ಮ ಸ್ನೇಹಿತನಿಗೆ ಹೇಳುತ್ತೀರಿ. ನೀವು 2.55ಕ್ಕೆ ಸರಿಯಾಗಿ ತಲುಪುತ್ತೀರಿ. ಆದರೆ ಸ್ನೇಹಿತ 3.50ಕ್ಕೆ ಬರುತ್ತಾನೆ. ಅವನ ಮುಖದಲ್ಲಿ ತಪ್ಪಿತಸ್ಥ ಭಾವನೆಯೇ ಇರುವುದಿಲ್ಲ. ಆದರೆ ನಿಮ್ಮ ಸಿಟ್ಟು ನೆತ್ತಿಗೇರುತ್ತದೆ. ಒಂದೇ ಸಮನೆ ಕಿರುಚಾಡಿ ನಿಮ್ಮ ರಕ್ತದ ಒತ್ತಡವನ್ನು ಹೆಚ್ಚಿಸಿಕೊಳ್ಳುತ್ತೀರಿ. ತಪ್ಪು ಮಾಡಿದವನು ಮಾತ್ರ ಶಾಂತವಾಗೇ ಇರುತ್ತಾನೆ.

ಇನ್ನೊಂದು ಉದಾಹರಣೆ: ನೀವೊಬ್ಬ ಉದ್ಯೋಗಿ. ನಿಮ್ಮ ಗ್ರಾಹಕನಿಗೆ 2000 ರೂಪಾಯಿ ಬೆಲೆಯ ವಸ್ತುಗಳನ್ನು ಕೊಟ್ಟಿದ್ದೀರಿ. ಹಣ ಪಡೆಯಲು ಸೋಮ­ವಾರ ಹೋಗುತ್ತೀರಿ. ಆತ ಹೇಳುತ್ತಾನೆ `ನಿನ್ನೆ ಭಾನು­ವಾರ ಮಳೆಯಿಂದಾಗಿ ವ್ಯಾಪಾರ ಆಗಿಲ್ಲ. ಇನ್ನೂ ಒಂದೆರಡು ದಿನಗಳ ನಂತರ ಬನ್ನಿ'. ಅದರಂತೆ ಮತ್ತೆ ಹೋಗು­ತ್ತೀರಿ. ಗ್ರಾಹಕನ ಬದಲು ಚಿಕ್ಕ ಹುಡುಗ ಇರುತ್ತಾನೆ. ಹಿಂದಕ್ಕೆ ಬಂದು, ಮತ್ತೆ ಮೂರು ದಿನಗಳ ನಂತರ ಹೋಗುತ್ತೀರಿ. ಆತ ‘ಸರ್ ಚೆಕ್ ಪುಸ್ತಕ ಇಲ್ಲ’ ಎನ್ನುತ್ತಾನೆ. ನಿಮಗೆ ಸಿಟ್ಟು ಬಂದು ಕಿರುಚಾಡುತ್ತೀರಿ.

ಮೂರನೇ ಉದಾಹರಣೆ: ರಾತ್ರಿ ತಡವಾಗಿ ಮನೆಗೆ ಬರುತ್ತೀರಿ. ಹೆಂಡತಿ ನಿದ್ದೆಯ ಮಂಪರಿನಲ್ಲಿ ಇರು­ತ್ತಾರೆ. ನೀವು ಹೇಳುತ್ತೀರಿ ‘ನಾಳೆ ನನಗೆ ಒಂದು ಮುಖ್ಯ­­ವಾದ ಮೀಟಿಂಗ್ ಇದೆ. ಬೇಗ ಹೋಗಬೇಕು. 7.45ಕ್ಕೆ ತಿಂಡಿ ರೆಡಿ ಆಗಬೇಕು'. ನೀವು ಬೆಳಿಗ್ಗೆ ಬೇಗನೇ ಎದ್ದು ಸಿದ್ಧರಾಗಿ ತಿಂಡಿಗಾಗಿ ಬರುತ್ತೀರಿ. ತಿಂಡಿ ಇಲ್ಲ, ಹೆಂಡತಿ ಇನ್ನೂ ಮಲಗಿದ್ದಾರೆ. ನೀವು ಕೂಗಾಡಲು ಆರಂಭಿಸು­ತ್ತೀರಿ. ಇಬ್ಬರ ನಡುವೆ ವಿರಸ, ಮಾತುಕತೆ ಬಂದ್.

ಇದು ಒಂದು ಮುಖವಾಯಿತು. ಇದಕ್ಕೆ ವಿರುದ್ಧವಾದ ಇನ್ನೊಂದು ಮುಖ ನೋಡೋಣ. ಉದಾ 1: ನಿಮ್ಮ ಅಂಗಡಿಯ ಪ್ರಾರಂಭೋತ್ಸವಕ್ಕೆ ಅಮಿತಾಭ್ ಬಚ್ಚನ್‌ರನ್ನು ಆಹ್ವಾನಿಸಿದ್ದೀರಿ. ಅವರು ಸಂಜೆ 5 ಗಂಟೆಗೆ ಬರಲು ಒಪ್ಪಿದ್ದಾರೆ. ಆದರೆ ಬರುವುದು 6.55ಕ್ಕೆ. ನೀವು ಶಾಂತವಾಗಿ ಕಾಯುತ್ತೀರಿ. ಅವರು ಬಂದಾಗ ನಗುಮುಖದಿಂದ ಸ್ವಾಗತಿಸುತ್ತೀರಿ. ಯಾವ ಸಿಟ್ಟು, -ಕೂಗಾಟವೂ ಇರುವುದಿಲ್ಲ. ಎಷ್ಟಾದರೂ ಅವರು ವಿ.ಐ.ಪಿ. ಅಲ್ಲವೇ!

ಉದಾಹರಣೆ 2: ಇನ್ಫೊಸಿಸ್ ಕಂಪೆನಿಗೆ ವಸ್ತುಗಳನ್ನು ಕೊಡುತ್ತೀರಿ. ಎಷ್ಟು ಅಲೆದರೂ ನಿಮ್ಮ ಹಣ ಸಿಗುವುದಿಲ್ಲ. ನಂತರ ನಾರಾಯಣ ಮೂರ್ತಿಯವರೇ ನಿಮಗೆ ಫೋನ್ ಮಾಡಿ, ತಮ್ಮನ್ನು ಭೇಟಿ ಮಾಡುವಂತೆ ತಿಳಿಸುತ್ತಾರೆ. ‘ಸರ್, 25 ವರ್ಷಗಳಿಂದ ನಾವು ಯಾವುದೇ ಕಾರಣಕ್ಕೂ ಹಣವನ್ನು ತಡೆಹಿಡಿದಿಲ್ಲ. ಆದರೆ ಈ ಸಲ ಅನಿವಾರ್ಯ ಕಾರಣಗಳಿಂದ ನಿಮ್ಮ ಹಣವನ್ನು ಕೊಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಇನ್ನೊಂದು 15 ದಿನ ಕಾಯುವಿರಾ?' ಎನ್ನುತ್ತಾರೆ. ಅದಕ್ಕೆ ನಿಮ್ಮ ಉತ್ತರ ‘ಸರ್ ಇದನ್ನು ತಿಳಿಸಲು ತಾವು ಇಷ್ಟು ಸಂಕೋಚ ಪಡಬೇಕೇ? ಫೋನ್‌ನಲ್ಲಿ ತಿಳಿಸಿದ್ದರೆ ಸಾಕಿತ್ತು'.

ಉದಾಹರಣೆ 3: ಒಂದು ಭಾನುವಾರ ಪ್ರತಿಷ್ಠಿತ­ರೊಬ್ಬರು ಕುಟುಂಬ ಸಹಿತ ನಿಮ್ಮನ್ನು ಮನೆಗೆ ಆಹ್ವಾನಿಸಿರು­ತ್ತಾರೆ. ಅದರಂತೆ ನೀವು ಹೋದಾಗ ಅವರಿಗೆ ಈ ವಿಷಯ ಪೂರ್ತಿ ಮರೆತು ಹೋಗಿ­ರು­ತ್ತದೆ.  ಅವರ ಕುಟುಂಬದವರೆಲ್ಲ ಸಿನಿಮಾ ನೋಡಲು ಹೋಗಬೇಕೆಂದು ಮನೆಗೆ ಬೀಗ ಹಾಕು­ತ್ತಿರು­ತ್ತಾರೆ. ನಿಮ್ಮನ್ನು ನೋಡಿ. ‘ಓಹ್! ನನಗೆ ಮರೆತೇ ಹೋಗಿತ್ತು. ತೊಂದರೆ ಇಲ್ಲ, ನಾವೆಲ್ಲರೂ ಸೇರಿ ಯಾವುದಾದರೂ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿ ಸಿನಿಮಾಕ್ಕೆ ಹೋಗೋಣ' ಎಂದರೆ ನೀವು ಕೂಗಾಡುತ್ತೀರಾ? ಇಲ್ಲ.

ಈ ಘಟನೆಗಳಿಂದ ನೀವು ಎರಡು ರೀತಿಯ ವರ್ತನೆಗಳನ್ನು ಹೊಂದಿರುವುದು ತಿಳಿಯುತ್ತದೆ.- ಹೆಂಡತಿ, ಸ್ನೇಹಿತ, ಗ್ರಾಹಕರ ಮೇಲೆ ಒಂದು ರೀತಿ. ಅಮಿತಾಭ್ ಬಚ್ಚನ್, ನಾರಾಯಣ ಮೂರ್ತಿ ಅವರಂತಹ ಪ್ರತಿಷ್ಠಿತ ವ್ಯಕ್ತಿಗಳ ವಿಷಯದಲ್ಲಿ ಇನ್ನೊಂದು ರೀತಿ ವರ್ತಿಸುತ್ತೀರಿ. ಅಂದರೆ ಒಳಗೊಂದು, ಹೊರ­ಗೊಂದು; ಸಾಮಾನ್ಯ­ರಿಗೊಂದು, ವಿ.ಐ.ಪಿ.ಗಳಿಗೆ ಇನ್ನೊಂದು; ವಿಷಯ ಒಂದೇ ಆದರೂ ವರ್ತನೆ ಬೇರೆ ಬೇರೆ ಯಾಕೆ?

ಸಣ್ಣ ಸಣ್ಣ ವಿಷಯಗಳಿಗೆ ಅಸಾಧ್ಯ ಕೋಪ ಮಾಡಿ­ಕೊಳ್ಳು­ತ್ತೇವೆ. ಅದಕ್ಕಾಗಿ ಬೇರೆಲ್ಲ­ವನ್ನು ಎಷ್ಟು ಕಳೆದು­ಕೊಂಡರೂ ಕೋಪ­ವನ್ನು ಮಾತ್ರ ಕಳೆದು­ಕೊಳ್ಳಲು ನಾವು ಸಿದ್ಧರಿರುವುದಿಲ್ಲ.

ಶಿಷ್ಯನೊಬ್ಬ ಬುದ್ಧನನ್ನು ಕೇಳಿ­ದ­‘ಗುರುಗಳೇ ಕೋಪ ಮಾಡಿಕೊಳ್ಳುವ­ವರಿಗೆ ಏನು ಶಿಕ್ಷೆ ಕೊಡಬೇಕು?'. ಬುದ್ಧ ಹೇಳಿದ ‘ಕೋಪವೇ ಒಂದು ದೊಡ್ಡ ಶಿಕ್ಷೆ. ಆದ್ದರಿಂದ ಅವರನ್ನು ಕ್ಷಮಿಸಿಬಿಡಿ'.

ಕೋಪ ಆ್ಯಸಿಡ್‌ನಂತೆ. ಎಷ್ಟೇ ಆ್ಯಸಿಡ್‌ನ್ನು ಹೊರಗೆ ಹಾಕಿದರೂ ಇನ್ನೂ ಸ್ವಲ್ಪ ಒಳಗೆ ಉಳಿದೇ ಇರುತ್ತದೆ. ಅದೇ ರೀತಿ ಕೋಪ ಸಹ ನಮ್ಮನ್ನು ಒಳಗೇ ಸುಡುತ್ತದೆ. ಕೋಪವೆಂಬ ಇದ್ದಿಲನ್ನು ನಾವು ಬೇರೆಯ­ವರ ಮೇಲೆ ಎಸೆಯುವ ಮೊದಲು ಅದು ನಮ್ಮ ಕೈಯನ್ನೇ ಸುಡುತ್ತದೆ ಎಂಬುದು ನೆನಪಿರಲಿ.

(ಈ ಅಂಕಣ ಇನ್ನು ಮುಂದೆ 15 ದಿನಗಳಿಗೊಮ್ಮೆ   ಪ್ರಕಟವಾಗುತ್ತದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT