ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಪ-ತಾಪ ಟಾಪ್-10

Last Updated 24 ಡಿಸೆಂಬರ್ 2010, 5:30 IST
ಅಕ್ಷರ ಗಾತ್ರ

ಸಿನಿಮಾ ಎಂದಮೇಲೆ ವಿವಾದಗಳು ಇಲ್ಲದಿದ್ದರೆ ಹೇಗೆ? ವಿವಾದಗಳೇ ಇಲ್ಲದಿದ್ದಲ್ಲಿ ಉಪ್ಪುಖಾರ ಇಲ್ಲದ ಅಡುಗೆಯಂತೆ ಸಿನಿಮಾರಂಗ ರುಚಿಹೀನವಾದೀತು. ರಂಜನೆಯೇ ಪ್ರಧಾನವಾದ ಈ ರಂಗದಲ್ಲಿ ವಿವಾದಗಳು ಕೂಡ ರಂಜನೆಯ ಭಾಗವೇ! ಈ ನಿಟ್ಟಿನಲ್ಲಿ, 2010 ಕನ್ನಡ ಚಿತ್ರರಂಗದ ಪಾಲಿಗೆ ಅತ್ಯಂತ ಸಮಾಧಾನಕರ.

ಸಣ್ಣಪುಟ್ಟ ವಿವಾದಗಳನ್ನೆಲ್ಲ ಕೊನೆಗಿಟ್ಟುಕೊಂಡು, ಗಮನಸೆಳೆದ ವಿವಾದಗಳನ್ನು ದಾಖಲೆಯ ಅನುಕೂಲಕ್ಕಾಗಿ ‘ಟಾಪ್-10’ ಎಂದು ವಿಂಗಡಿಸಿಕೊಳ್ಳೋಣ. ಮೊದಲಿಗೆ ಚಿತ್ರೋದ್ಯಮದ ಗರ್ಭಗುಡಿಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯಿಂದಲೇ ಶುರು ಮಾಡೋಣ.

1. ಸಿನಿಮಾ ಮಂಡಳಿ ಮಧ್ಯದೊಳಗೆ...
ಕರ್ನಾಟಕ ಚಲನಚಿತ್ರ ಮಂಡಳಿ ವರ್ಷದುದ್ದಕ್ಕೂ ಒಂದಲ್ಲಾ ಒಂದು ಕಾರಣದಿಂದ ಸುದ್ದಿಯಲ್ಲಿತ್ತು. ಕನ್ನಡ ಚಿತ್ರರಂಗದ ವಿರುದ್ಧ ಲಘುವಾಗಿ ಮಾತನಾಡಿದ ಎಫ್.ಎಂ. ವಾಹಿನಿ ವಿರುದ್ಧ ಸಮರ ಸಾರಿದ ವಾಣಿಜ್ಯ ಮಂಡಳಿ, ಚಿತ್ರೋದ್ಯಮ ಬಂದ್ ಮಾಡುವುದಾಗಿ ಬೆದರಿಸಿತ್ತು. ಎಫ್‌ಎಂ ವಾಹಿನಿ ಬೇಷರತ್ತು ಕ್ಷಮೆ ಕೇಳುವುದರೊಂದಿಗೆ ಪ್ರಕರಣ ಸುಖಾಂತ್ಯ. ಇದೇ ಮಂಡಳಿಯ ಮುಖ್ಯಸ್ಥ ಬಸಂತಕುಮಾರ್ ಪಾಟೀಲರು ಮತ್ತೊಮ್ಮೆ ಬಂದ್ ಮಾತನಾಡಿದಾಗ ಮಂಡಳಿಯ ಸೋದರರೇ ಬಸಂತಣ್ಣನ ವಿರುದ್ಧ ಕತ್ತಿಮಸೆದರು. ‘ನಾಲಾಯಕ್, ಅಸಮರ್ಥ, ಅನನುಭವಿ’ ಎಂದು ಜರಿದ ರಾಕ್‌ಲೈನ್ ವೆಂಕಟೇಶ್ ಬಳಗ, ‘ಬಸಂತ್ ಡೌನ್ ಡೌನ್’ ಎಂದು ಘೋಷಣೆಯನ್ನೂ ಕೂಗಿತು. ದ್ವಾರಕೀಶ್ ಕೂಡ ಸಿಟ್ಟು ಕಾರಿಕೊಂಡರು. ಖಾಜಿನ್ಯಾಯವಾದ ಮೇಲೆ ಬಸಂತ್ ಮುಂದುವರಿದಿದ್ದಾರೆ. ಬಸಂತ್‌ರ ಮುಂದಿಕ್ಕಿಕೊಂಡೇ ರಾಕ್‌ಲೈನ್ ಪೈರಸಿ ಸೀಡಿ ಮಾರುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಇದಲ್ಲವೇ ಈಸ್ಟ್‌ಮನ್ ಕಲ್ಲರ್ ಸಿನಿಮಾ! ಇದೇ ಮಂಡಳಿ, ಎಂದಿನಂತೆ ಈ ವರ್ಷವೂ ಪರಭಾಷಾ ಚಿತ್ರಗಳ ಕಡಿವಾಣ ನೀತಿಯನ್ನು ಮುಂದುವರಿಸಿ- ‘ರಾವಣ್’, ‘ಕೈಟ್ಸ್’ ಹಾಗೂ ‘ಎಂದಿರನ್’ ಚಿತ್ರಗಳಿಗೆ ಸಂಬಂಧಿಸಿದಂತೆ ದೊಡ್ಡ ಗದ್ದಲ ಎಬ್ಬಿಸಿತು. ಫಲಾಫಲ ಅಸ್ಪಷ್ಟ.

2. ಸಾಯಿ ಪ್ರಸಂಗ
‘ದೇವರು ಕೊಟ್ಟ ತಂಗಿ’ ಚಿತ್ರದ ನಿರ್ಮಾಣದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ನಿರ್ದೇಶಕ ಸಾಯಿಪ್ರಕಾಶ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಸಾಯಿಪ್ರಕಾಶ್ ಉಳಿದುಕೊಂಡರು. ‘ಶ್ರೀನಾಗಶಕ್ತಿ’ ಸೇರಿದಂತೆ ಒಂದಷ್ಟು ಕಾರಣಿಕ ಚಿತ್ರಗಳು ಅವರನ್ನು ಮುನ್ನಡೆಸಿವೆ. ಸಾಯಿಪ್ರಕಾಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಯೊಂದರಲ್ಲಿ ಬಂದ ವರದಿಯ ಬಗ್ಗೆ ಶಿವರಾಜ್‌ಕುಮಾರ್ ಕೋಪ ಮಾಡಿಕೊಂಡರು.

3. ಸುಳ್ಳೇ ಮುತ್ತು
ಯುವನಟಿ ಅಮೂಲ್ಯ ಹಾಗೂ ನಿರ್ದೇಶಕ ರತ್ನಜ ಚುಂಬನದ ಚಿತ್ರ ಗಾಂಧಿನಗರದ ನಾಭಿಯಿಂದ ಹೊರಟು ಮಾಧ್ಯಮಗಳಲ್ಲಿ ಪಸರಿಸಿ, ಚಿತ್ರರಸಿಕರ ಕಲ್ಪನೆಗಳನ್ನು ಹುಚ್ಚೆಬ್ಬಿಸಿತ್ತು. ಆ ಚಿತ್ರ ನಕಲಿ ಎಂದು ಗೊತ್ತಾದ ಮೇಲೆ ಅಮೂಲ್ಯ ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದಾರೆ. ರತ್ನಜ ಸಿನಿಮಾ ಕನಸು ಕಾಣುತ್ತಿದ್ದಾರೆ.

4. ಶೀರ್ಷಿಕೆಗಾಗಿ ಶಿವಾ!
ಶಿವರಾಜ್‌ಕುಮಾರ್ ಅಭಿನಯದ ‘ಮೈಲಾರಿ’ ಶೀರ್ಷಿಕೆಗೆ ಸಂಬಂಧಿಸಿದಂತೆ ಅಶ್ವಿನಿ ರಾಮ್‌ಪ್ರಸಾದ್ ಹಾಗೂ ಆರ್.ಚಂದ್ರು ಪ್ರಚಾರ ಗಿಟ್ಟಿಸಿಕೊಂಡರು. ‘ವಿಷ್ಣುವರ್ಧನ’ ಶೀರ್ಷಿಕೆಗೆ ಸಂಬಂಧಿಸಿದಂತೆ ಆ ಚಿತ್ರದ ನಿರ್ಮಾಪಕ ದ್ವಾರಕೀಶ್ ವಾಣಿಜ್ಯ ಮಂಡಳಿ ಅಧಿಕಾರವನ್ನೇ ಪ್ರಶ್ನಿಸಿದರು. ಸುದೀಪ್ ಅಭಿನಯದ ‘ವಿಷ್ಣುವರ್ಧನ’ ಶೀರ್ಷಿಕೆ ಯಾರ ಸೊತ್ತೂ ಅಲ್ಲ ಎನ್ನುವುದು ದ್ವಾರಕೀಶ್ ವಾದ. ಉಹೂಂ, ಆ ಶೀರ್ಷಿಕೆ ಕೂಡದು ಎನ್ನುತ್ತಾರೆ ಭಾರತಿ ವಿಷ್ಣುವರ್ಧನ್.

5. ಪುಟ್ಟಣ್ಣ ಪರಸಂಗ
ಪ್ರತಿಷ್ಠಿತ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಯ ಮರ್ಯಾದೆಯನ್ನು ಬೀದಿಗೆ ತಂದ ಭಾಗ್ಯ ನಿರ್ದೇಶಕ ಭಾರ್ಗವ ಅವರಿಗೆ ಸಲ್ಲಬೇಕು. ಹಿರಿಯ ನಿರ್ದೇಶಕ ಕೆ.ಎಸ್.ಆರ್.ದಾಸ್ ಅವರಿಗೆ ಪುಟ್ಟಣ್ಣ ಪ್ರಶಸ್ತಿ ಪ್ರಕಟಿಸಿದ ಭಾರ್ಗವ, ಕೆಲವರ ಅಡ್ಡಮಾತಿನಿಂದ ಒಮ್ಮೆಗೇ ಜ್ಞಾನೋದಯವಾದಂತಾಗಿ ನಿರ್ಧಾರ ಬದಲಿಸಿದರು, ಗಿರೀಶ ಕಾರ್ನಾಡರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಹೇಳಿದರು. ಕಾರ್ನಾಡರು ಪ್ರಶಸ್ತಿ ನಿರಾಕರಿಸುವುದರೊಂದಿಗೆ ಪ್ರಶಸ್ತಿ ಗೌರವ ಉಳಿಯಿತು.

6. ಅಕಾಡೆಮಿಕ್ ಎಡವಟ್ಟು
ಬೆಳ್ಳಿಹೆಜ್ಜೆ, ಗೆಜ್ಜೆ ರೀತಿಯ ಕಾರ್ಯಕ್ರಮಗಳಲ್ಲಿ ಮುಳುಗಿರುವ ‘ಕರ್ನಾಟಕ ಚಲನಚಿತ್ರ ಅಕಾಡೆಮಿ’ ಡಬ್ಬಿಂಗ್ ಪರವಾದ ವರದಿಯೊಂದನ್ನು ಪ್ರಕಟಿಸುವ ಮೂಲಕ ಜನರ ಗಮನಸೆಳೆಯಿತು. ಅಕಾಡೆಮಿ ವಿರುದ್ಧ ಉದ್ಯಮದ ಒಂದು ಗುಂಪು ಮುರಕೊಂಡು ಬಿದ್ದದ್ದೇ ತಡ, ಅಕಾಡೆಮಿ ವರದಿ ಪ್ರಕಟವಾಗಿದ್ದ ಕೈಪಿಡಿಯನ್ನು ವಾಪಸ್ಸು ಪಡೆಯಿತು. ಈಚೆಗಷ್ಟೇ ಬೆಂಗಳೂರಿನಲ್ಲಿ ಚಿತ್ರೋತ್ಸವವೊಂದನ್ನು ಆಯೋಜಿಸಿತಾದರೂ, ಪ್ರಚಾರದ ಕೊರತೆಯಿಂದಲೋ ತಣ್ಣನೆ ಹವಾಮಾನದಿಂದಲೋ ಏನೋ, ಅಕಾಡೆಮಿಯ ಆ ಉತ್ಸವಕ್ಕೆ ತಣ್ಣನೆ ಪ್ರತಿಕ್ರಿಯೆ ವ್ಯಕ್ತವಾಯಿತು.

7. ಹೂಕಾರವೂ ಹೂಂಕಾರವೂ
‘ಹೂ’ ಚಿತ್ರದ ನಿರ್ಮಾಪಕ ದಿನೇಶ್‌ಗಾಂಧಿ ಪತ್ರಕರ್ತರೊಬ್ಬರ ಮೇಲೆ ಹೂಂಕರಿಸಿದ್ದು, ಆ ಬಡಪಾಯಿ ಪತ್ರಕರ್ತ ಪೊಲೀಸ್ ಠಾಣೆ ಮೆಟ್ಟಿಲು ತುಳಿದದ್ದೂ, ಆಮೇಲೆ ಗಾಂಧಿ ತಮ್ಮ ಪೋಜು ಬದಲಿಸಿದ್ದು- ಹೀಗೆ ಪತ್ರಕರ್ತರ ಮೇಲೆ ಚಿತ್ರೋದ್ಯಮದ ಮುನಿಸು 2010ರಲ್ಲೂ ಚಾಲ್ತಿಯಲ್ಲಿತ್ತು. ಈಗ ರಾಯಣ್ಣನಾಗಿ ಕುದುರೆ ಏರಿರುವ ದರ್ಶನ್, ‘ಪೊರ್ಕಿ’ ಜೋಶ್‌ನಲ್ಲಿ ಮಾಧ್ಯಮಗಳ ವಿರುದ್ಧ ಗುಟುರು ಹಾಕಿ ಶೌರ್ಯ ಪ್ರದರ್ಶಿಸಿದರು.

8. ಗಣೇಶನ ಗಲಾಟೆ
ಮಳೆ-ಚಳಿ ಪಂಚಾಂಗಗಳೆಲ್ಲ ಲಯ ತಪ್ಪಿರುವ ಗ್ಲೋಬಲ್ ವಾರ್ಮಿಂಗ್ ದಿನಗಳಲ್ಲಿ ಗಣೇಶ್‌ರ ಚಿತ್ರಜೀವನವೂ ಸ್ಥಿರತೆ ಕಳೆದುಕೊಂಡಿದೆ. ‘ಕೂಲ್’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕ ಮಹೇಶ್ ಜೊತೆ ಗಣೇಶ್ ಗಲಾಟೆ ಮಾಡಿಕೊಂಡರು. ಊಟಿಯ ಚಳಿಯಲ್ಲೂ ಬೆವರಿದ ಮಹೇಶ್ ಬಸ್ ಹತ್ತಿಕೊಂಡು ಬೆಂಗಳೂರಿಗೆ ಬಂದವರು, ಮಂಡಳಿಗೆ- ನಿರ್ದೇಶಕರ ಸಂಘಕ್ಕೆ ದೂರು ನೀಡಿದರು. ಖಾಜಿ ನ್ಯಾಯದಲ್ಲಿ ಮಹೇಶ್‌ಗೆ ನ್ಯಾಯ ದೊರೆಯಲಿಲ್ಲ ಎಂದು ಕೆಲವರು ಗೊಣಗಿದರು. ಗಣೇಶನ ಗಲಾಟೆ ಇಷ್ಟಕ್ಕೇ ಮುಂದುವರಿಯಲಿಲ್ಲ. ‘ಏನೋ ಒಂಥರಾ’ ನಿರ್ಮಾಪಕರು ಗಣೇಶ್ ಅಸಹಕಾರದಿಂದ ತಮಗೆ ನಷ್ಟವಾಯಿತು ಎಂದು ಅಳಲು ತೋಡಿಕೊಂಡರು. ‘ಅಪರಾಧಿ ನಾನಲ್ಲ’ ಎನ್ನುವುದು ಗಣೇಶ್ ಪ್ರತಿಕ್ರಿಯೆ.

9. ಸುದೀಪ್ ಕೆಂಗಣ್ಣು
ಕಳೆದ ವರ್ಷ ನಟಿ ರಮ್ಯಾ ಅವರೊಂದಿಗೆ ಠೂ ಬಿಟ್ಟಿದ್ದ ಸುದೀಪ್ ಈ ವರ್ಷ, ‘ಕನ್ವರ್‌ಲಾಲ್’ ಸೆಟ್‌ನಲ್ಲಿ ತಮ್ಮ ಸಹಾಯಕನೊಬ್ಬನಿಗೆ ಕಪಾಳಮೋಕ್ಷ ಮಾಡಿದರು. ಇದು ವದಂತಿಯೋ ಸತ್ಯವೋ ದೃಢೀಕರಣಗೊಂಡಿಲ್ಲ. ‘ಕನ್ವರ್‌ಲಾಲ್’ ಚಿತ್ರವೂ ಮುಂದುವರಿದಿಲ್ಲ. ಇದೇ ಸುದೀಪ್, ಕಳೆದ ವಾರ ‘ಕೆಂಪೇಗೌಡ’ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಗಾಯಗೊಂಡರು.

10. ಹತ್ತರಲ್ಲಿ ಹನ್ನೊಂದು
ನಟಿ ರಾಗಿಣಿ ಮಲೆಯಾಳಂ ಪ್ರೀತಿ ವ್ಯಕ್ತಪಡಿಸಿ ಆಮೇಲೆ ನಿರಾಕರಿಸಿದ್ದು, ‘ಬಿಂದಾಸ್ ಹುಡುಗಿ’ಯನ್ನು ಎತ್ತಂಗಡಿ ಮಾಡಲಾಗಿದೆ ಎಂದು ಪ್ರಿಯಾ ಹಾಸನ್ ಅಳಲು ತೋಡಿಕೊಂಡಿದ್ದು, ಸಂಭಾವನೆ ಸಾಲಲಿಲ್ಲ ಎಂದು ರಮ್ಯಾ ಅವಕಾಶಗಳನ್ನು ನಿರಾಕರಿಸಿದ್ದು- ಹೀಗೆ, ಅನೇಕ ಸಣ್ಣಪುಟ್ಟ ಸಂಗತಿಗಳು ಹತ್ತರಲ್ಲಿ ಹನ್ನೊಂದಾದರೂ ಕನಿಷ್ಠವೇನೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT