ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮಲ್ ಹಾಡಿನ ಮನೆ

Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನಟ ಕೋಮಲ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ನಿರ್ಮಾಣದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುತ್ತಲೇ, ಇತ್ತ ಆಡಿಯೊ ಕಂಪೆನಿಯನ್ನೂ ಹುಟ್ಟುಹಾಕಿದ್ದಾರೆ. `ಹಾಡುಗಳಿಗೆ ಮಾರುಕಟ್ಟೆ ಇಲ್ಲ. ಹೀಗಾಗಿ ಆಡಿಯೊ ಸಿ.ಡಿ.ಗಳಿಂದ ನಷ್ಟವಾಗುತ್ತಿದೆ' ಎನ್ನುವ ಆಡಿಯೊ ಕಂಪೆನಿಗಳ ಮಾಲೀಕರ ವಿರುದ್ಧ `ನಷ್ಟವಾಗುತ್ತಿದ್ದರೂ ಹೊಸ ಮನೆಗಳನ್ನು ಕಟ್ಟಿಸುತ್ತಲೇ ಇದ್ದಾರೆ' ಎಂದು ಈ ಹಿಂದೆ ಗುಡುಗಿದ್ದರು ಕೋಮಲ್. ಈಗ ಲಾಭ ನಷ್ಟಗಳ ಅಳತೆಯನ್ನು ಸ್ವತಃ ನೋಡುವ ಸಾಹಸಕ್ಕೆ ಮುಂದಾಗಿದ್ದಾರೆ.

ಅಂದಹಾಗೆ, ಅವರ ಆಡಿಯೊ ಕಂಪೆನಿಯ ಹೆಸರು `ಗೋವಿಂದಾಯ ನಮಃ ಆಡಿಯೊ ಹೌಸ್'. ತಮ್ಮ ಸಿನಿಮಾಯಾನಕ್ಕೆ ಹೊಸ ಆಯಾಮ ಕೊಟ್ಟ `ಗೋವಿಂದಾಯ ನಮಃ' ಚಿತ್ರದ ಹೆಸರನ್ನೇ ಕಂಪೆನಿಗೆ ಇರಿಸಿದ್ದಾರೆ. ಆದರೆ ಈ ಹೆಸರಿಗೆ ಆ ಚಿತ್ರವೊಂದೇ ಕಾರಣವಲ್ಲ. ದಿನವೂ ವಿಷ್ಣು ಸಹಸ್ರನಾಮ ಪಠಿಸುವ ಕೋಮಲ್‌ಗೆ ಅದರಲ್ಲಿ ಬರುವ `ಗೋವಿಂದ' ಪದವೇ ಇದಕ್ಕೆ ಪ್ರೇರಣೆಯಂತೆ. `ನಂದೀಶ' ಚಿತ್ರದ ಮೂಲಕ ಕೋಮಲ್‌ರ ಹಾಡಿನ ಮನೆ ಮಾರುಕಟ್ಟೆ ಪ್ರವೇಶಿಸಿದೆ. ಅದನ್ನು ಬಿಡುಗಡೆ ಮಾಡಿದ್ದು ಕೋಮಲ್‌ರ ಸಹೋದರ, ನಟ ಜಗ್ಗೇಶ್. ಕೋಮಲ್‌ರ ಮಗಳು ತುಷಾರಾ ಕೋಮಲ್ ಸಹ ಈ ಚಿತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಡಿ.28ರಂದು ಚಿತ್ರ ಬಿಡುಗಡೆ ಮಾಡುವುದು ಕೋಮಲ್‌ರ ಉದ್ದೇಶ.

ಬದುಕಿನ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರಿಗೆ ನಾನು, ಕಷ್ಟಗಳನ್ನು ಹೇಗೆ ಎದುರಿಸಿ ಗೆಲ್ಲಬಹುದು ಎಂಬುದಕ್ಕೆ ನನ್ನ ತಮ್ಮನನ್ನು ಉದಾಹರಣೆಯಾಗಿ ತೋರಿಸುತ್ತೇನೆ ಎಂದರು ನಟ ಜಗ್ಗೇಶ್. ಕೋಮಲ್ ಎದುರಿಗಿರುವ ಸವಾಲುಗಳ ಮಧ್ಯೆಯೂ ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಅವುಗಳನ್ನು ಗೆಲ್ಲುವ ಛಾತಿಯೂ ಅವರಿಗಿದೆ ಎನ್ನುವುದು ಜಗ್ಗೇಶ್ ಪ್ರಶಂಸೆಯ ಮಾತು.

ಕನ್ನಡದಲ್ಲಿ ಸಿನಿಮಾವನ್ನು ಅತಿಯಾಗಿ ಪ್ರೀತಿಸುವ ಮತ್ತು ಅದನ್ನೇ ಜೀವನವನ್ನಾಗಿರಿಸಿಕೊಂಡಿರುವ ವ್ಯಕ್ತಿ ರವಿಚಂದ್ರನ್. ಕೋಮಲ್ ಕೂಡ ಅವರ ಸಾಲಿಗೆ ಸೇರುತ್ತಾರೆ ಎಂದು ಹೊಗಳಿದರು ನಟ ಶ್ರೀನಿವಾಸಮೂರ್ತಿ. ಸಿನಿಮಾ ಕಲೆಯನ್ನು ಕೋಮಲ್ ಚೆನ್ನಾಗಿ ಅರಿತಿದ್ದಾರೆ. ಮುಂದೆಯೂ ಒಳ್ಳೆಯ ಚಿತ್ರಗಳನ್ನೂ ನೀಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಿತರಕ ಕೆ.ವಿ.ನಾಗೇಶ್‌ಕುಮಾರ್, ನಿರ್ಮಾಪಕಿ ಅನಸೂಯಾ ಕೋಮಲ್ ಆಡಿಯೊ ಬಿಡುಗಡೆ ಸಮಾರಂಭದಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT