ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ ಕಮಿಟಿ ಸಭೆಯಲ್ಲಿ ಅಸಮಾಧಾನದ ಹೊಗೆ !

Last Updated 21 ಡಿಸೆಂಬರ್ 2012, 10:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟಿಸಲು ಮತ್ತು ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾ ಪ್ರವಾಸ ಕೈಗೊಂಡಿರುವ  ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದ ಮುಖಂಡರ ತಂಡ ಮೂಡಿಗೆರೆ ಕ್ಷೇತ್ರದಲ್ಲಿ ಗುರುವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದೊಳಗಿನ `ಭಿನ್ನಮತ'ದ ಬಿಸಿಯನ್ನು ಅನುಭವಿಸಬೇಕಾಯಿತು.  

ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿಯ ಇಬ್ಬಣದ ದೂರು -ಪ್ರತಿ ದೂರನ್ನು ಆಲಿಸಿದ ಪಕ್ಷದ ರಾಜ್ಯ ಅಧ್ಯಕ್ಷರಾದ ಈಶ್ವರಪ್ಪ ಯಾವುದೇ ಪ್ರತಿಕ್ರಿಯೆ ನೀಡದೆ ಕೋರ್ ಕಮಿಟಿ ಸಭೆಯಲ್ಲಿ ಕೆಲ ಕಾಲ ಮೌನದ ಮೊರೆ ಹೋದರು ಎಂದು ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಮೂಡಿಗೆರೆ ಶಾಸಕ ಕುಮಾರಸ್ವಾಮಿಯವರಿಗೆ ಮುಂದಿನ ಚುನಾವಣೆಗೆ ಟಿಕೆಟ್ ತಪ್ಪಿಸಲೇಬೇಕೆಂದು ಪಣತೊಟ್ಟಂತಿರುವ ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಕೆ.ಪ್ರಾಣೇಶ್ ಮತ್ತು ಅವರ ಬೆಂಬಲಿಗರ ಗುಂಪು ಶಾಸಕರ ಮೇಲೆ ಆರೋಪದ ಸುರಿಮಳೆ ಮಾಡಿತು.

ಸ್ಥಳೀಯ ನಾಯಕರ ಮೇಲೆ ತಮಗಿರುವ ಅಸಮಾ ಧಾನವನ್ನು ಪಕ್ಷದ ವರಿಷ್ಠರಿಗೆ ನೇರವಾಗಿ ಮುಟ್ಟಿಸಲು ಇದೇ ಸಂದರ್ಭಕ್ಕೆ ಕಾಯುತ್ತಿದ್ದಂತಿದ್ದ ಶಾಸಕ ಎಂ.ಪಿ.ಕುಮಾರಸ್ವಾಮಿ, `ಇವರ ದಬ್ಬಾಳಿಕೆ ಹೆಚ್ಚಾಗಿದೆ. ಇದನ್ನು ಸಹಿಸಲು ಆಗುವುದಿಲ್ಲ.

ಅವರ ಭಾಗದಲ್ಲಿ ಮತ್ತು ಅವರು ಸೂಚಿಸಿದ ಒಬ್ಬೇ ಒಬ್ಬ ಅಭ್ಯರ್ಥಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಗೆದ್ದಿದ್ದರೆ ತೋರಿಸಲಿ? ಇವರಿಗೆ ಸ್ಥಳೀಯ ಸಂಸ್ಥೆಗಳಿಗೆ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಮರ್ಥ್ಯ ಇಲ್ಲ.

ಸಚಿವರಾದ ಜೀವರಾಜ್ ಮತ್ತು ಸಿ.ಟಿ.ರವಿ ಅವರಿಗೆ ಒಂದು ಮಾನದಂಡ ಮತ್ತು ನನಗೇ ಒಂದು ಮಾನದಂಡವೇ? ಮೂಡಿಗೆರೆ ಕ್ಷೇತ್ರದಲ್ಲಿ ನಾನೇ ನಾಯಕ. ಕಳೆದ 15 ವರ್ಷಗಳಿಂದ ಪಕ್ಷಕ್ಕಾಗಿ ದುಡಿ ದಿದ್ದೇನೆ' ಎಂದು ಪಕ್ಷದ ಜಿಲ್ಲಾ ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ಖಚಿತಪಡಿಸಿವೆ.

`ಮೂಡಿಗೆರೆಯ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಎರಡು ಬಣ ಸೃಷ್ಟಿಯಾಗಿ ಎರಡು ವರ್ಷಗಳೇ ಕಳೆದಿವೆ. ಭಿನ್ನಮತ ಶಮನ ಮಾಡಿ, ಸಾಮರಸ್ಯ ಮೂಡಿಸುವ ಪ್ರಯತ್ನ ವರಿಷ್ಠರು ಮಾಡಲಿಲ್ಲ. ಈಗ ಪಕ್ಷದ ರಾಜ್ಯ ಅಧ್ಯಕ್ಷರ ಸಮ್ಮುಖದಲ್ಲೇ ಎರಡು ಬಣಗಳ ನಡುವಿನ ವೈಮನುಸು ಬಹಿರಂಗವಾಯಿತು. ಇದರ ಪರಿಣಾಮ ಕ್ಷೇತ್ರದಲ್ಲಿ ಬಿಜೆಪಿ ಎರಡು ಹೋಳಾದರೂ ಅಚ್ಚರಿಪಡ ಬೇಕಿಲ್ಲ' ಎಂದು ಹೆಸರು ಬಯಸದ ಮುಖಂಡ ರೊಬ್ಬರು ತಿಳಿಸಿದ್ದಾರೆ.

ಪಕ್ಷದ ರಾಜ್ಯ ಅಧ್ಯಕ್ಷರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದಾಗಲೂ ಎಂ.ಪಿ.ಕುಮಾರಸ್ವಾಮಿ ಮತ್ತು ಕಡೂರು ಶಾಸಕ ಡಾ.ವಿಶ್ವನಾಥ್ ಕಾಣಿಸಿಕೊಳ್ಳಲಿಲ್ಲ. ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಈಗಾಗಲೇ ಬಹಿರಂಗವಾಗಿಯೇ ಕೆಜೆಪಿ ಜತೆ ಗುರುತಿಸಿಕೊಂಡು ಬಿಜೆಪಿ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ಅವರು ಕೂಡ ಇತ್ತ ತಿರುಗಿ ನೋಡಲಿಲ್ಲ. ಪ್ರಕ್ರಿಯೆ ಪಡೆಯಲು ದೂರವಾಣಿ ಮೂಲಕ ಪ್ರಯತ್ನಿಸಿದಾಗ ಕಡೂರು ಮತ್ತು ತರೀಕೆರೆ ಶಾಸಕರ ಮೊಬೈಲ್‌ಗಳು ಸ್ವಿಚ್ ಆಪ್ ಆಗಿದ್ದವು.

`ಕಳಸದಲ್ಲಿ ಮಹಿಳಾ ಸಮಾವೇಶ ಇದ್ದಿದ್ದರಿಂದ ಪಕ್ಷದ ರಾಜ್ಯ ಉಪಾಧ್ಯಕ್ಷರ ಗಮನಕ್ಕೆ ತಂದು ಗೈರು ಹಾಜರಾಗಿದ್ದೆ. ನಾನೂ ಬೇರೆಲ್ಲೂ ಹೋಗುವುದಿಲ್ಲ. ಬಿಜೆಪಿಯಲ್ಲೇ ಇರುತ್ತೇನೆ' ಎಂದು ಶಾಸಕ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

`ಇನಾಂ: ಅನ್ಯಾಯ ಆಗಲು ಬಿಡಲ್ಲ' 
ಚಿಕ್ಕಮಗಳೂರು:
ಕಳಸ ಇನಾಂ ಭೂಮಿ ವಿವಾದದಲ್ಲಿ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ. ಇನಾಂ ಭೂಮಿಯ ರೈತರನ್ನು ರಾಜ್ಯ ಸರ್ಕಾರ ರಕ್ಷಿಸಲಿದೆ ಎಂದು ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು.

ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನಾಂ ಭೂಮಿಯಲ್ಲಿ ವಾಸಿಸುತ್ತಿರುವರಿಗೆ ಅನ್ಯಾಯ ವಾಗಲು ಬಿಡುವುದಿಲ್ಲ. ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಿದೆ. ಯಾವುದೇ ಕಾರಣಕ್ಕೂ ಒಕ್ಕಲೇಳಿಸು ವುದಿಲ್ಲ.

ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸುವ ಜತೆಗೆ, ವಾಸ್ತವತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು. ಕೊಡಗು ಮಾದರಿಯಲ್ಲಿ ಇನಾಂ ಭೂಮಿ ಸಮಸ್ಯೆ ಪರಿಹರಿಸಬೇಕೆಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಇಟ್ಟಿರುವ ಹೊಸ ಪ್ರಸ್ತಾವದ ಬಗ್ಗೆ ಪ್ರಶ್ನಿಸಿದಾಗ ಈಶ್ವರಪ್ಪ ಮತ್ತು ಜೀವರಾಜ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT