ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ನಲ್ಲಿ ಎಡವಿದ ಸರ್ಕಾರ: ದತ್ತ ಆತಂಕ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ತಮಿಳುನಾಡಿಗೆ ಜನವರಿ 31ರವರೆಗೆ 38 ಟಿಎಂಸಿ ಅಡಿ ನೀರು ಬಿಡುವುದಾಗಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿರುವುದು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ~ ಎಂದು ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಭಾನುವಾರ ಇಲ್ಲಿ ಲೇವಡಿ ಮಾಡಿದರು.

ರಾಜ್ಯದಲ್ಲಿ ಈಗಲೇ ನೀರಿನ ಸಮಸ್ಯೆ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಜನವರಿ ತಿಂಗಳವರೆಗೆ 38 ಟಿಎಂಸಿ ಅಡಿ ನೀರು ಬಿಡುವುದಾಗಿ ಹೇಳಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

`ಜೂನ್ 1ರಿಂದ ಸೆ.30ರವರೆಗೆ ತಮಿಳುನಾಡಿಗೆ 40 ಟಿಎಂಸಿ ಅಡಿ ನೀರು ಬಿಡಲಾಗಿದೆ. ಇದಲ್ಲದೆ, ಅಕ್ಟೋಬರ್ 1ರಿಂದ ಜನವರಿ 31ರ ವರೆಗೆ 38 ಟಿಎಂಸಿ ಅಡಿ ನೀರು ಬಿಡುವುದಾಗಿ ಪ್ರಮಾಣ ಪತ್ರ ಸಲ್ಲಿಸಿರುವುದು ಅವೈಜ್ಞಾನಿಕ. ಇದರ ಜತೆಗೆ ಜಲಾಶಯದ ಕೆಳಭಾಗದಲ್ಲಿನ ಮಳೆಯಿಂದಾಗಿ ಐದು ಟಿಎಂಸಿ ನೀರು ಸೇರುವ ಅಂದಾಜಿದೆ. ಒಟ್ಟಾರೆ ಈ ಅವಧಿಯಲ್ಲಿ 43 ಟಿಎಂಸಿ ನೀರು ಮೆಟ್ಟೂರು ಜಲಾಶಯ ಸೇರಲಿದೆ~ ಎಂದು ಮಾಹಿತಿ ನೀಡಿದರು.

`ಫೆಬ್ರುವರಿ 1ರಿಂದ ಮೇ 31ರ ವರೆಗೆ ಇದೇ ಲೆಕ್ಕದ ಪ್ರಕಾರ ನೀರು ಬಿಟ್ಟಲ್ಲಿ ಈ ವರ್ಷದಲ್ಲಿ ಒಟ್ಟು 123 ಟಿಎಂಸಿ ಅಡಿ ನೀರು ಬಿಟ್ಟಂತಾಗುತ್ತದೆ. ಇದು ಕಾವೇರಿ ನ್ಯಾಯಮಂಡಳಿ ಸಂಕಷ್ಟದ ಸಂದರ್ಭದಲ್ಲಿ ಬಿಡಲು ಸೂಚಿಸಿರುವ ನೀರಿನ ಪ್ರಮಾಣಕ್ಕಿಂತಲೂ ಜಾಸ್ತಿ ಆಗಲಿದೆ.

ಇದರಿಂದ ರಾಜ್ಯಕ್ಕೆ ಭಾರಿ ಅನ್ಯಾಯವಾಗಲಿದೆ. ರಾಜ್ಯದಲ್ಲಿ ಬರಗಾಲವಿದೆ. ಕೃಷಿ ಹಾಗೂ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸರ್ಕಾರ 38 ಟಿಎಂಸಿ ಅಡಿ ನೀರು ಬಿಡುವುದಾಗಿ ಪ್ರಮಾಣ ಪತ್ರ ಸಲ್ಲಿಸಿರುವುದು ಸರಿಯಲ್ಲ~ ಎಂದು ಅವರು ಆಕ್ಷೇಪಿಸಿದರು.

`ದೇವರಿದ್ದಾನೆ, ಮಳೆ ಬರಲಿದೆ ಎಂಬ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಸರಿಯಲ್ಲ. ಸಮಸ್ಯೆ ಕುರಿತು ಸಮರ್ಪಕವಾಗಿ ಅಧ್ಯಯನ ಮಾಡಿ ಜಾಣ್ಮೆ ಹಾಗೂ ಬುದ್ಧಿಶಕ್ತಿ ಬಳಸಿ ಕಾರ್ಯನಿರ್ವಹಿಸಬೇಕು. ಪ್ರಸ್ತುತ ಪ್ರಮಾಣ ಪತ್ರ ಸಲ್ಲಿಕೆಯಿಂದಾಗಿ ಮುಂದೆ ಎದುರಾಗಲಿರುವ ಸಂಕಷ್ಟಗಳಿಗೆ ರಾಜ್ಯ ಸರ್ಕಾರ ಹಾಗೂ ಬಸವರಾಜ ಬೊಮ್ಮಾಯಿ ಅವರೇ ಹೊಣೆ ಹೊರಬೇಕಾಗುತ್ತದೆ~ ಎಂದು ಎಚ್ಚರಿಸಿದರು.

ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರದ ಅಧ್ಯಯನ ತಂಡ ಒಂದೆರಡು ದಿನದಲ್ಲಿ ವರದಿ ಸಲ್ಲಿಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ಆದರೆ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಅಮೆರಿಕದಿಂದ ಪ್ರಧಾನಿ ಅವರಿಗೆ ಪತ್ರ ಬರೆದು, `ಇದೇ 20ರಂದು ಅಧ್ಯಯನ ತಂಡ ವರದಿ ಸಲ್ಲಿಸಲಿದೆ. ಈ ಕುರಿತು ಪರಿಶೀಲಿಸಿ, ಸೂಕ್ತ ತೀರ್ಮಾನ ಕೈಗೊಳ್ಳಬೇಕು~ ಎಂದು ತಿಳಿಸಿದ್ದಾರೆ. ಹಾಗಿದ್ದರೆ ಸಮಸ್ಯೆಯ ಗಂಭೀರತೆಯ ಅರಿವು ಕೃಷ್ಣ ಅವರಿಗೆ ಇದೆಯೇ ಎಂದು ಲೇವಡಿ ಮಾಡಿದರು.

ಜೆಡಿಎಸ್ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಕುಮಾರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಕೀಲ್ ನವಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT