ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ನಲ್ಲಿ ವಿಟಿಯು ಕುಲಪತಿ ತಪ್ಪೊಪ್ಪಿಗೆ

Last Updated 7 ಜನವರಿ 2012, 19:55 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಯಾಗುವ ಸಂದರ್ಭದಲ್ಲಿ ಪದವಿಯಲ್ಲಿ ತಾವು ಗಳಿಸಿರುವ ಅಂಕಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿರುವುದು ನಿಜ ಎಂದು ಡಾ.ಎಸ್.ಮಹೇಶಪ್ಪ ಅವರು ಹೈಕೋರ್ಟ್‌ನಲ್ಲಿ ಶುಕ್ರವಾರ ಒಪ್ಪಿಕೊಂಡಿದ್ದಾರೆ.

`ಮೈಸೂರು ವಿವಿಯ ತಾಂತ್ರಿಕ ಎಂಜಿನಿಯರಿಂಗ್ ಪದವಿಯಲ್ಲಿ ದ್ವಿತೀಯ ದರ್ಜೆ ಪಡೆದಿದ್ದೇನೆ. ಆದರೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಎಂದು ವೈಯಕ್ತಿಕ ವಿವರದಲ್ಲಿ ಕಣ್ತಪ್ಪಿನಿಂದ ನಮೂದಿಸಲಾಗಿತ್ತು. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ~ ಎಂದು ತಮ್ಮ ವಕೀಲರ ಮೂಲಕ ಅವರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಹತೆ ಹಾಗೂ ಅನುಭವಕ್ಕೆ ಸಂಬಂಧಿಸಿದಂತೆ ಇವರು ನಕಲಿ ದಾಖಲೆ ನೀಡಿ ನೇಮಕಗೊಂಡಿರುವುದಾಗಿ ದೂರಿ ಜೆ.ಎಚ್. ಅನಿಲ್‌ಕುಮಾರ್ ಎನ್ನುವವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠಕ್ಕೆ ಈ ವಿಷಯವನ್ನು ವಕೀಲರು ತಿಳಿಸಿದರು.

ಅವರನ್ನು ಯಾವ ಆಧಾರದ ಮೇಲೆ ನೇಮಕ ಮಾಡಲಾಗಿದೆ ಎಂಬ ಕುರಿತಾದ ಮೂಲ ದಾಖಲೆಗಳನ್ನು ನೀಡುವಂತೆ  ಕಳೆದ ಬಾರಿ ಕೋರ್ಟ್ ನೀಡಿದ್ದ ನಿರ್ದೇಶನದ ಮೇರೆಗೆ ಅವರು ದಾಖಲೆ ನೀಡಿದರು.
ಈ ಹಿನ್ನೆಲೆಯಲ್ಲಿ ಮಹೇಶಪ್ಪ ಅವರನ್ನು ಕುಲಪತಿಯಾಗಿ ಮುಂದುವರಿಸುವ ಕುರಿತು ತನ್ನ ನಿಲುವನ್ನು ತಿಳಿಸುವಂತೆ ಪೀಠ, ವಿಶ್ವವಿದ್ಯಾಲಯಕ್ಕೆ ಸೂಚಿಸಿತು.

ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರ ಪರ ವಾದಿಸಿದ ವಕೀಲ ಉದಯ ಹೊಳ್ಳ ಅವರು, `ಒಮ್ಮೆ ಕುಲಪತಿಯನ್ನು ರಾಜ್ಯಪಾಲರು ನೇಮಕ ಮಾಡಿದರೆ, ಅದನ್ನು ಪುನರ್‌ಪರಿಶೀಲನೆ ಮಾಡುವ ಬಗ್ಗೆ ವಿಶ್ವವಿದ್ಯಾಲಯದ ಕಾಯ್ದೆಯಲ್ಲಿ ಯಾವುದೇ ನಿಯಮ ಇಲ್ಲ. ಒಂದು ವೇಳೆ ಕೋರ್ಟ್ ಆದೇಶ ಹೊರಡಿಸಿದರೆ, ಹಾಗೆ ಮಾಡಲು ಸಾಧ್ಯವಾಗುತ್ತದೆ~ ಎಂದರು.

ನಾಲ್ವರು ಪಿಎಚ್‌ಡಿ ಹಾಗೂ 15 ಎಂ.ಟೆಕ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಬಗ್ಗೆ ಮತ್ತು 2010ರ ಮಾರ್ಚ್ 5ರಂದು ಒಂದೇ ದಿನ ನಾಲ್ಕು ಪ್ರಬಂಧ ಮಂಡಿಸಿರುವ ಬಗ್ಗೆಯೂ ಮಹೇಶಪ್ಪ ತಪ್ಪು ಮಾಹಿತಿ ನೀಡಿದ್ದಾರೆ ಎನ್ನುವ ಆರೋಪ ಕೂಡ ಅರ್ಜಿಯಲ್ಲಿ ಇದೆ. ವಿಚಾರಣೆಯನ್ನು ಮುಂದೂಡಲಾಯಿತು.

ಕುಂಬ್ಳೆ ವಿರುದ್ಧ ಅರ್ಜಿ- ನೋಟಿಸ್
ನಕಲಿ ಸಹಿ ಹಾಕುವ ಮೂಲಕ `ಫೋರ್ಜರಿ~ ಮಾಡಿರುವ ಆರೋಪ ಹೊತ್ತ ಕ್ರಿಕೆಟ್ ಪಟು ಅನಿಲ್ ಕುಂಬ್ಳೆ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.

ಕುಂಬ್ಳೆ ಹಾಗೂ ಅವರ ಪತ್ನಿ ಚೇತನಾ ವಿರುದ್ಧ ಚೇತನಾ ಅವರ ವಿಚ್ಛೇದಿತ ಪತಿ ಕುಮಾರ್ ಜಹಗೀರದಾರ ಅವರು ಸಲ್ಲಿಸಿರುವ ಅರ್ಜಿ ಇದಾಗಿದೆ. ತಮ್ಮ ಮಗಳು ಆರುಣಿಯ ಪಾಸ್‌ಪೋರ್ಟ್ ನವೀಕರಣಗೊಳಿಸುವ ಸಂದರ್ಭದಲ್ಲಿ ಆಕೆಯ ತಂದೆಯ ಹೆಸರಿನ ಮುಂದೆ ತಮ್ಮ ಹೆಸರು ಇದೆ.

ಆದರೆ ಈ ಹೆಸರಿನ ಮೇಲೆ ಕುಂಬ್ಳೆ ನಕಲಿ ಸಹಿ ಹಾಕಿದ್ದಾರೆ ಎನ್ನುವುದು ಅವರ ಆರೋಪ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದರೂ ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಕುಂಬ್ಳೆ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲು ಮಾಡಿ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಆದೇಶಿಸುವಂತೆ ಅವರು ಕೋರಿದ್ದಾರೆ. ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT