ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ನಿಂದ ವಿಚಾರಣೆ ಮುಂದಕ್ಕೆ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ. ರಾಘವೇಂದ್ರ, ಬಿ.ವೈ.  ವಿಜಯೇಂದ್ರ ಮುಂತಾದವರ ವಿರುದ್ಧದ ಭೂಹಗರಣದ ಕುರಿತಾದ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ  ನ್ಯಾಯಾಲಯವು ಅ.15ಕ್ಕೆ ಮುಂದೂಡಿದೆ.

ಸ್ವಂತ ಹಾಗೂ ಕುಟುಂಬದ ಹಿತಾಸಕ್ತಿಗಾಗಿ ನಿಯಮ ಉಲ್ಲಂಘಿಸಿ ಹಲವು ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ವಕೀಲ ಸಿರಾಜಿನ್ ಬಾಷಾ ಅವರು ದಾಖಲು ಮಾಡಿರುವ 2 ಮತ್ತು 3ನೇ ದೂರಿನ ವಿವಾದ ಇದಾಗಿದೆ.

ಈ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಯ ವಾದ, ಪ್ರತಿವಾದಗಳನ್ನು ಕಳೆದ ವಾರ ಆಲಿಸಿ ಮುಗಿಸಿದ್ದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಈ ಕುರಿತ ಆದೇಶವನ್ನು ಸೋಮವಾರ ಪ್ರಕಟಿಸಬೇಕಿತ್ತು. ಆದರೆ ಈ ಪ್ರಕರಣಗಳ ವಿಚಾರಣೆಗೆ  ಹೈಕೋರ್ಟ್ ಕಳೆದ ಶುಕ್ರವಾರ ತಡೆ ನೀಡಿದೆ.

ಈ ಕುರಿತು ಯಡಿಯೂರಪ್ಪನವರ ಪರ ವಕೀಲ ರವಿ ಬಿ. ನಾಯಕ್ ಅವರು ನ್ಯಾಯಾಧೀಶರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಯಿತು.

ಮಾನ್ಯವಾಗದ ಮನವಿ: ಹೈಕೋರ್ಟ್‌ನಿಂದ ಈಗ ಮಧ್ಯಂತರ ತಡೆಯಾಜ್ಞೆ ಮಾತ್ರ ಸಿಕ್ಕಿರುವ ಹಿನ್ನೆಲೆಯಲ್ಲಿ ಅಲ್ಲಿ ವಿಚಾರಣೆ ಮುಗಿಯುವವರೆಗೆ ವಿಶೇಷ ಕೋರ್ಟ್‌ನಲ್ಲಿನ ವಿಚಾರಣೆಯನ್ನು ಮುಂದೂಡುವಂತೆ ನಾಯಕ್ ಮನವಿ ಮಾಡಿಕೊಂಡರು.

ಆದರೆ ಇದಕ್ಕೆ ನ್ಯಾ. ರಾವ್ ಒಪ್ಪಲಿಲ್ಲ. `ಹೈಕೋರ್ಟ್ ವಿಚಾರಣೆಯನ್ನು ಅ.14ಕ್ಕೆ ಮುಂದೂಡಿರುವ ಕಾರಣ, 15ರಂದೇ ಇಲ್ಲಿ ವಿಚಾರಣೆ ನಡೆಸಲಾಗುವುದು~ ಎಂದರು. `ಕೊನೆಯ ಪಕ್ಷ ಅ.22ರವರೆಗಾದರೂ ಸಮಯ ನೀಡಿ~ ಎಂಬ ವಕೀಲರ ಮನವಿಯನ್ನೂ ನ್ಯಾಯಾಧೀಶರು ಪುರಸ್ಕರಿಸಲಿಲ್ಲ.

ಯಡಿಯೂರಪ್ಪನವರ ಜೊತೆಗೆ ಅವರ ಪುತ್ರರು, ಅಳಿಯ ಸೋಹನ್‌ಕುಮಾರ್, ಶಾಸಕರಾದ ಹೇಮಚಂದ್ರ ಸಾಗರ್, ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಎಲ್ಲ ಆರೋಪಿಗಳು ಕೋರ್ಟ್‌ನಲ್ಲಿ ಹಾಜರು ಇದ್ದರು.

ಕೇವಿಯಟ್ ಸಲ್ಲಿಕೆ: ಲೋಕಾಯುಕ್ತ ವಿಶೇಷ ಕೋರ್ಟ್ ವಿಚಾರಣೆಗೆ ಹೈಕೋರ್ಟ್ ಏಕಸದಸ್ಯ ಪೀಠ ತಡೆ ನೀಡಿರುವ ಆದೇಶವನ್ನು ವಕೀಲ ಬಾಷಾ ಅವರು ವಿಭಾಗೀಯ ಪೀಠದಲ್ಲಿ ಪ್ರಶ್ನಿಸಲಿರುವ ಹಿನ್ನೆಲೆಯಲ್ಲಿ, ಯಡಿಯೂರಪ್ಪನವರು `ಕೇವಿಯೆಟ್~ ಸಲ್ಲಿಸಿದ್ದಾರೆ.

ಒಂದು ವೇಳೆ ಬಾಷಾ ಅವರು ಮೇಲ್ಮನವಿ ಸಲ್ಲಿಸಿದರೆ ತಮ್ಮ ವಾದವನ್ನು ಆಲಿಸದೆ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬಾರದು ಎಂದು `ಕೇವಿಯೆಟ್~ ನಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಏಕಸದಸ್ಯ ಪೀಠದ ಆದೇಶದ ಪ್ರತಿಯು ಬಾಷಾ ಅವರಿಗೆ ಇದುವರೆಗೆ ದೊರಕದ ಹಿನ್ನೆಲೆಯಲ್ಲಿ ಸೋಮವಾರ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಬಿಎಸ್‌ವೈ ಪರ ವಕೀಲರು  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT