ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ನಿಂದಲೇ ನ್ಯಾಯ: ನ್ಯಾ.ಸಾಚಾರ್

Last Updated 12 ಫೆಬ್ರುವರಿ 2011, 9:05 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯದಲ್ಲಿ ಚರ್ಚ್ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾ.ಬಿ.ಕೆ.ಸೋಮಶೇಖರ ಆಯೋಗ ನೀಡಿರುವ ವರದಿ ಏಕಪಕ್ಷೀಯವಾಗಿದ್ದು ಅಲ್ಪಸಂಖ್ಯಾತ ವರ್ಗಕ್ಕೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದೆ’ ಎಂದು ಕಿಡಿಕಾರಿರುವ ನಿವೃತ್ತ ನ್ಯಾಯಮೂರ್ತಿ ರಾಜಿಂದರ್ ಸಾಚಾರ್, ಕೂಡಲೇ ಎಲ್ಲ ಪ್ರಗತಿಪರ ಸಂಘಟನೆಗಳು ಸೇರಿಕೊಂಡು ಕರ್ನಾಟಕ ಹೈಕೋರ್ಟ್ ಮೂಲಕ ಸಂಘರ್ಷ ಆರಂಭಿಸಲಿ, ನ್ಯಾಯ ಖಂಡಿತಾ ಸಿಗುತ್ತದೆ ಎಂದು ಸಲಹೆ ನೀಡಿದರು.

ಪಿಯುಸಿಎಲ್ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ನಗರದ ಹೋಟೆಲೊಂದರಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಪ್ರಸಕ್ತ ಸಮಸ್ಯೆಗಳ ಕುರಿತು ಚರ್ಚಿಸಿದ ಅವರು, ‘ಚರ್ಚ್ ದಾಳಿ ಪ್ರಕರಣದಿಂದಾಗಿ ಇಡೀ ವಿಶ್ವದಲ್ಲೇ ಕರ್ನಾಟಕ ಕುರಿತು ಕೆಟ್ಟ ಭಾವನೆ ಬರುವಂತಾಗಿದ್ದರೂ ಆಯೋಗ ವಾಸ್ತವಾಂಶ ಮರೆಮಾಚಿ ವರದಿ ನೀಡಿರುವುದು ದುರದೃಷ್ಟಕರ. ಆದರೆ ಈ ವರದಿಯಿಂದ ಕ್ರಿಶ್ಚಿಯನ್ ಸಮುದಾಯ ಅಧೀರರಾಗಬೇಕಿಲ್ಲ, ಹೈಕೋರ್ಟ್‌ನಿಂದ ಖಂಡಿತ ನ್ಯಾಯ ಸಿಗುತ್ತದೆ, ನಡೆದ ಘಟನೆಗಳನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

ಪ್ರಗತಿಪರ ಸಂಘಟನೆಗಳ ಮುಖಂಡರು ಮೊದಲು ಸಾಕ್ಷ್ಯಗಳನ್ನು ಸಂಗ್ರಹಿಸಿ, ಪ್ರಬಲ ಜನಾಭಿಪ್ರಾಯ ಮೂಡಿಸಿ ನಂತರ ಹಂತ ಹಂತವಾಗಿ ಕೋರ್ಟ್ ಮೂಲಕ ನ್ಯಾಯ ಪಡೆಯಲು ಪ್ರಯತ್ನಿಸಬೇಕು ಎಂದರು.ಪಿಯುಸಿಎಲ್ ಅಧ್ಯಕ್ಷ ಪಿ.ಬಿ.ಡೆಸಾ ಮಾತನಾಡಿ, ಮಂಗಳೂರಿನಲ್ಲಿ ನಡೆದ ಚರ್ಚ್ ದಾಳಿ ಪ್ರಕರಣದಲ್ಲಿ ನೂರಾರು ಅಮಾಯಕ ಕ್ರಿಶ್ಚಿಯನ್ ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚರ್ಚ್‌ಗಳಿಗೆ ಬಲವಂತವಾಗಿ ನುಗ್ಗಿ ಪ್ರಾರ್ಥನೆ ಮಾಡುತ್ತಿರುವವರ ಮೇಲೆ ಹಲ್ಲೆ ನಡೆಸಿದ್ದರೂ ಪೊಲೀಸರ ಮೇಲೆ ಕ್ರಮ ಜರುಗಿಸಿಲ್ಲ ಎಂದು ಆಕ್ಷೇಪಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂಘ ಪರಿವಾರಕ್ಕೆ ಸಂಬಂಧಿಸಿದ ನೂರಾರು ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಆದರೆ ಸಾಮಾಜಿಕ ಸಮಾನತೆಗೆ ಹೋರಾಟ ನಡೆಸಿದವರ ಮೇಲಿನ ಪ್ರಕರಣಗಳು ಇನ್ನೂ ಹಾಗೆ ಇವೆ ಎಂದು ವಿವಿಧ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ, ಚರ್ಚ್ ದಾಳಿಗೆ ಸಂಬಂಧಿಸಿ ನ್ಯಾ.ಮೈಕೆಲ್ ಸಾಲ್ಡಾನ ಅವರು ಸಂಪಾದಿಸಿದ ಜನಾಭಿಪ್ರಾಯದ ‘ರಿಪೋರ್ಟ್ ಆಫ್ ದಿ ಪೀಪುಲ್ಸ್ ಟ್ರಿಬ್ಯೂನಲ್ ಎನ್‌ಕ್ವಯರಿ’ ಕೃತಿ ಬಿಡುಗಡೆ ಮಾಡಲಾಯಿತು.

‘ಕೋರ್ಟ್-ಸಿಬಿಐ ಯಾವುದು ಸರಿ?’
‘ಚರ್ಚ್ ದಾಳಿ ಪ್ರಕರಣಗಳಲ್ಲಿ ನ್ಯಾ.ಬಿ.ಕೆ.ಸೋಮಶೇಖರ ಆಯೋಗದಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲವಾದ್ದರಿಂದ ಈ ಕುರಿತು ಸಂಘಟಿತ ಹೋರಾಟ ಹೈಕೋರ್ಟ್ ಮೂಲಕ ನಡೆಸಬೇಕೋ, ಇಲ್ಲವೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬೀದಿಗಿಳಿದು ಹೋರಾಟ ಮಾಡಬೇಕೋ? ಯಾವುದರಿಂದ ನಮಗೆ ನ್ಯಾಯ ಸಿಕ್ಕಲು ಸಾಧ್ಯ. ಯಾವ ಮಾರ್ಗದಿಂದ ನ್ಯಾಯ ಬೇಗ ಹೊರಬರಲು ಸಾಧ್ಯ’....

ಹೀಗೆ ವಿವಿಧ ಮುಖಂಡರು ವಿಭಿನ್ನ ಅಭಿಪ್ರಾಯ ಮಂಡಿಸಿದಾಗ ಉತ್ತರಿಸಿದ ನ್ಯಾ. ಸಾಚಾರ್, ಜನ ನ್ಯಾಯಾಂಗ ವ್ಯವಸ್ಥೆ ಕುರಿತು ಇತ್ತಿತ್ತಲಾಗಿ ಭ್ರಮನಿರಸನಗೊಂಡಿದ್ದಾರೆ ಎಂಬುದು ನನಗೂ ಅನಿಸುತ್ತಿದೆ. ಆದರೆ ಈ ಪ್ರಕರಣಗಳಲ್ಲಿ ಕೋರ್ಟ್ ವಿಚಾರಣೆ ಉತ್ತಮವಾಗಿ ನಡೆದು ಆರೋಪಿಗಳಿಗೆ ಶಿಕ್ಷೆಯಾಗುತ್ತದೆ ಎಂಬ ವಿಶ್ವಾಸ ತಮಗಿದೆ ಎಂದರು.ಕೋರ್ಟ್ ವಿಚಾರಣೆ ಮತ್ತೆ ವಿಳಂಬವಾಗುವುದು ಖಚಿತ. ಬದಲಿಗೆ ಸಿಬಿಐ ವಿಚಾರಣೆ ನಡೆದಲ್ಲಿ ಬೇಗ ನ್ಯಾಯ ಹೊರಬರಲು ಸಾಧ್ಯ. ಕಾಂಗ್ರೆಸ್ ಮುಖಂಡರು ಸಹ ಈ ಬಗ್ಗೆ ಈಗಾಗಲೆ ಒಲವು ತೋರಿರುವುದರಿಂದ ಸಿಬಿಐ ಮೂಲಕವೇ ಹೋರಾಟ ಸೂಕ್ತ ಎಂಬ ಸಲಹೆಯನ್ನು ಕೆಲವರು ಮುಂದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT