ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಸ್ ಮುಗಿಸಿದರೂ ಸಿಗದ ಉದ್ಯೋಗ

Last Updated 8 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಹುಪಾಲು ಸರ್ಕಾರಿ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ) ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್‌ನ (ಎನ್‌ಸಿವಿಟಿ) ಮಾನ್ಯತೆ ಪಡೆಯದೆ ಇರುವುದರಿಂದ ಆ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದವರು ಕೇಂದ್ರ ಸರ್ಕಾರದ ಉದ್ಯೋಗಾವಕಾಶಗಳಿಂದ ವಂಚಿತರಾಗಿದ್ದಾರೆ.

 158 ಸರ್ಕಾರಿ, 196 ಅನುದಾನಿತ ಮತ್ತು 1,100 ಅನುದಾನರಹಿತ ಸೇರಿದಂತೆ ರಾಜ್ಯದಲ್ಲಿ ಒಟ್ಟು 1,454 ಕೈಗಾರಿಕಾ ತರಬೇತಿ ಸಂಸ್ಥೆಗಳಿವೆ. ಪ್ರತಿ ವರ್ಷ ಸುಮಾರು 87 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ.
 
ಆದರೆ ಅರ್ಧದಷ್ಟು ಸಂಸ್ಥೆಗಳು ಎನ್‌ಸಿವಿಟಿ ಮಾನ್ಯತೆ ಪಡೆದಿಲ್ಲ. ಇದರಿಂದಾಗಿ ಐಟಿಐ ವ್ಯಾಸಂಗ ಮಾಡಿದ ಸಾವಿರಾರು ಮಂದಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಇಲ್ಲದಂತಾಗಿದೆ.

 

ತಾತ್ಕಾಲಿಕ ಅಷ್ಟೆ
ಎನ್‌ಸಿವಿಟಿ ಮಾನ್ಯತೆ ದೊರೆಯುವುದು ಕೆಲವೊಮ್ಮೆ ವಿಳಂಬವಾಗುತ್ತದೆ. ಮೂಲಸೌಕರ್ಯಗಳು ಇಲ್ಲ ಎಂಬ ಕಾರಣಕ್ಕೆ ಮಾನ್ಯತೆ ಪ್ರಸ್ತಾವವನ್ನು ತಿರಸ್ಕರಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಎಸ್‌ಸಿವಿಟಿ ಮಾನ್ಯತೆ ನೀಡಲಾಗುತ್ತದೆ. ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ.
ಕೆಲವು ಉದ್ದಿಮೆಗಳು ತಮ್ಮದೇ ಆದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಿಕೊಂಡಿರುತ್ತವೆ. ಅದರಲ್ಲಿ ಎನ್‌ಸಿವಿಟಿ ಸೇರದೆ ಇದ್ದರೆ ತಾಂತ್ರಿಕ ಕಾರಣಗಳಿಂದ ಅವಕಾಶ ನಿರಾಕರಿಸಬಹುದು. ಆದರೆ ಖಾಸಗಿ ಸಂಸ್ಥೆಗಳಲ್ಲಿ ಆ ರೀತಿ ಆಗುವುದಿಲ್ಲ. ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿದವರಿಗೂ ಅವಕಾಶ ನೀಡಲಾಗುತ್ತದೆ. - ಎನ್.ಶ್ರೀರಾಮನ್, ಆಯುಕ್ತರು,  ಉದ್ಯೋಗ ಮತ್ತು ತರಬೇತಿ ಇಲಾಖೆ

ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಹೊಂದಿಲ್ಲ ಎಂಬ ಕಾರಣಕ್ಕಾಗಿ ಬಹಳಷ್ಟು ಐಟಿಐ ಸಂಸ್ಥೆಗಳಿಗೆ ಎನ್‌ಸಿವಿಟಿ ಮಾನ್ಯತೆ ದೊರೆತಿಲ್ಲ. ಆದರೂ ಈ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಜೀವದಾನ ನೀಡಿರುವುದರಿಂದ ಅಸ್ತಿತ್ವ ಉಳಿಸಿಕೊಂಡಿವೆ. `ಇಂತಹ ಸಂಸ್ಥೆಗಳಿಂದ ಐಟಿಐ ತರಬೇತಿ ಪಡೆದ ಪ್ರಮಾಣಪತ್ರ ನೀಡಲಾಗುತ್ತಿದೆ. ಆದರೆ ಉದ್ಯೋಗ ದೊರೆಯುತ್ತಿಲ್ಲ~ ಎಂದು ತಾಂತ್ರಿಕ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಬಿ.ವಿ.ರಮೇಶ್ ಗೌಡ ದೂರಿದರು.

ರಾಜ್ಯದಲ್ಲಿ ಐಟಿಐಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಆದರೆ ಬಹಳಷ್ಟು ಐಟಿಐ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳು ಇಲ್ಲ. ಅಂತಹ ಸಂಸ್ಥೆಗಳಿಗೆ ಎನ್‌ಸಿವಿಟಿ ಮಾನ್ಯತೆಯನ್ನು ನಿರಾಕರಿಸಲಾಗಿದೆ. ಆದರೂ ಸಂಸ್ಥೆಗಳನ್ನು ಉಳಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ತನಗಿರುವ ಅಧಿಕಾರವನ್ನು ಬಳಸಿಕೊಂಡು ರಾಜ್ಯ ವೃತ್ತಿಶಿಕ್ಷಣ ಪರಿಷತ್‌ನ (ಎಸ್‌ಸಿವಿಟಿ) ಮಾನ್ಯತೆ ನೀಡಿದೆ.

ಆದರೆ ರಾಜ್ಯ ವೃತ್ತಿಶಿಕ್ಷಣ ಪರಿಷತ್‌ನ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದವರನ್ನು ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಪರಿಗಣಿಸುತ್ತಿಲ್ಲ. ಎಚ್‌ಎಎಲ್, ಇಸ್ರೊ, ಎನ್‌ಎಎಲ್, ಬಿಎಚ್‌ಇಎಲ್, ಬಿಇಎಲ್, ಎಲ್‌ಆರ್‌ಡಿಇ, ಎಡಿಇ, ಸಿಪಿಆರ್‌ಐ, ಸಿಎಫ್‌ಟಿಆರ್‌ಐ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅರ್ಹರಾಗುವುದಿಲ್ಲ. ವಿದೇಶಗಳಲ್ಲಿ ಕೆಲಸ ಮಾಡುವ ಅವಕಾಶವೂ ಇರುವುದಿಲ್ಲ ಎಂದು ಅವರು ತಿಳಿಸಿದರು.

ಎಸ್‌ಸಿವಿಟಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪ್ರಮಾಣ ಪತ್ರ ಪಡೆದವರು ರಾಜ್ಯ ಸರ್ಕಾರದ ಉದ್ಯೋಗ ಅವಕಾಶಗಳನ್ನಷ್ಟೇ ನೆಚ್ಚಿಕೊಳ್ಳಬೇಕಿದೆ. ಈ ಮಾನ್ಯತೆ ಪಡೆದ ಸಂಸ್ಥೆಗಳಿಂದ ಕಳೆದ ವರ್ಷ 21 ಸಾವಿರ ವಿದ್ಯಾರ್ಥಿಗಳು ಐಟಿಐ ಪ್ರಮಾಣಪತ್ರ ಪಡೆದಿದ್ದಾರೆ. ಆದರೆ ಆ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಉದ್ದಿಮೆಗಳು ಮಾನ್ಯ ಮಾಡುತ್ತಿಲ್ಲ. ಇದರಿಂದಾಗಿ ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿದವರು ಕಂಗಾಲಾಗಿದ್ದಾರೆ.

ಎಸ್‌ಸಿವಿಟಿಗೆ ಪ್ರತ್ಯೇಕ ಪಠ್ಯಕ್ರಮವಾಗಲಿ, ಬೋಧನಾ ಸಿಬ್ಬಂದಿಯಾಗಲಿ ಇಲ್ಲ. ಎನ್‌ಸಿವಿಟಿ ಮಾನ್ಯತೆ ಹೊಂದಿರುವ ಸಂಸ್ಥೆಗಳಲ್ಲಿ ಕಲಿಸುವ ಪಠ್ಯಕ್ರಮವೇ ಎಸ್‌ಸಿವಿಟಿ ಮಾನ್ಯತೆ ಪಡೆದ ಸಂಸ್ಥೆಗಳಲ್ಲೂ ಇದೆ. ಆದರೆ ಪ್ರಮಾಣ ಪತ್ರ ಮಾತ್ರ ಬೇರೆಯಾಗಿರುತ್ತದೆ.

ಸರ್ಕಾರಿ ಐಟಿಐಗಳಲ್ಲಿ ಒಟ್ಟು 22 ಸಾವಿರ ಸೀಟುಗಳಿವೆ. 86 ಸರ್ಕಾರಿ ಐಟಿಐಗಳು ಎನ್‌ಸಿವಿಟಿ ಮಾನ್ಯತೆ ಪಡೆದಿಲ್ಲ. ಈ ಸಂಸ್ಥೆಗಳಲ್ಲಿ ಪ್ರಸಕ್ತ ವರ್ಷ 7,956 ಸೀಟುಗಳಿವೆ. ಅನುದಾನಿತ ಸಂಸ್ಥೆಗಳಲ್ಲಿ ಹತ್ತು ಸಾವಿರ ಹಾಗೂ ಅನುದಾನರಹಿತ ಸಂಸ್ಥೆಗಳಲ್ಲಿ 55 ಸಾವಿರ ಸೀಟುಗಳು ಲಭ್ಯವಾಗಲಿವೆ.

ಆರ್ಥಿಕ ಸಮಸ್ಯೆಯಿಂದ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಮುಗಿಯುತ್ತಿದ್ದಂತೆಯೇ ಐಟಿಐಗೆ ಸೇರುತ್ತಾರೆ. ಅವರಿಗೆ ಎನ್‌ಸಿವಿಟಿ ಮತ್ತು ಎಸ್‌ಸಿವಿಟಿ ನಡುವಿನ ವ್ಯತ್ಯಾಸವೇ ಗೊತ್ತಿರುವುದಿಲ್ಲ. ಕೋರ್ಸ್ ಪೂರ್ಣಗೊಂಡ ನಂತರ ಪ್ರಮಾಣ ಪತ್ರ ಪಡೆದು ಉದ್ಯೋಗಕ್ಕಾಗಿ ನಾನಾ ಕಡೆ ಅರ್ಜಿ ಹಾಕುತ್ತಾರೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಎಸ್‌ಸಿವಿಟಿ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿದಾಗಲೇ ಬಹಳಷ್ಟು ಜನರಿಗೆ ಎನ್‌ಸಿವಿಟಿ ಮತ್ತು ಎಸ್‌ಸಿವಿಟಿ ನಡುವಣ ವ್ಯತ್ಯಾಸ ಗೊತ್ತಾಗುವುದು. ಅಷ್ಟರಲ್ಲಿ ಕಾಲ ಮಿಂಚಿರುತ್ತದೆ ಎಂದು ರಮೇಶ್ ಗೌಡ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT