ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ 2030ನೀಲನಕ್ಷೆ ತಯಾರಿಕೆಗೆ ಚಾಲನೆ

Last Updated 21 ಜನವರಿ 2011, 8:55 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಪ್ರಗತಿ ಕುರಿತು ವಿಧಾನಸೌಧದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯುವ ಮುನ್ನವೇ, ಜಿಲ್ಲೆಯಲ್ಲಿ ಮುಂದಿನ 20 ವರ್ಷಗಳಲ್ಲಿ ನಡೆಸಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತ ‘ಕೋಲಾರ-2030’ ನೀಲನಕ್ಷೆ ತಯಾರಿಕೆಗೆ ಚಾಲನೆ ದೊರಕಿದೆ!

ವಿಶೇಷ ಅನುದಾನದ ಅಡಿಯಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಗೆ ಜಿಲ್ಲೆಯನ್ನು ಆಯ್ಕೆ ಮಾಡುವ ಕುರಿತು ಹಿರಿಯ ಅಧಿಕಾರಿಗಳಿಂದ ಕೆಲವು ದಿನಗಳ ಹಿಂದೆ ಮೌಖಿಕ ಮಾಹಿತಿ ದೊರೆತ ಕೂಡಲೇ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರು, ಜಿಲ್ಲಾ ಅಭಿವೃದ್ಧಿ ಯೋಜನೆ ತಯಾರಿಸಲು ನೆರವು ಕೋರಿ ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಐಐಡಿಸಿ- ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿ) ಪತ್ರ ಬರೆದಿದ್ದಾರೆ. ಜ.17ರಂದೇ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ವಂದಿತಾ ಶರ್ಮರಿಗೆ ಪತ್ರವನ್ನು ಬರೆದಿರುವ ಅವರು, ಯೋಜನೆ ತಯಾರಿಸಲು ನೆರವು ಕೋರಿದ್ದಾರೆ.

ವಿಶೇಷ ಅನುದಾನದ ಅಡಿಯಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಗೆ ಆಯ್ಕೆಯಾಗಿರುವ ಕಾರವಾರ ಮತ್ತು ಬಿಜಾಪುರದಲ್ಲಿಯೂ ಅಭಿವೃದ್ಧಿ ಯೋಜನೆ ಸಿದ್ಧಪಡಿಸಲು ನಿಗಮದ ನೆರವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯೂ ನಿಗಮದ ನೆರವು ಪಡೆಯುವುದು ಸೂಕ್ತ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಕೆ.ವಿ.ರಾಜು ಅವರು ಸಲಹೆ, ಸೂಚನೆ ನೀಡಿದ್ದರು. ಅದರ ಪ್ರಕಾರ ಪತ್ರ ಬರೆಯಲಾಗಿದೆ.

ರಾಜು ಅವರು ಅವರು ಜ.17ರಂದು ಜಿಲ್ಲೆಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ, ಕೋಲಾರವನ್ನು ಯೋಜನೆಗೆ ಸೇರ್ಪಡೆಗೊಳಿಸುವ ಸಾಧ್ಯತೆ ಕುರಿತು ಮೌಖಿಕವಾಗಿಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ನೀಡಿದ್ದರು. ಮಾಹಿತಿ ದೊರಕಿದ ಕೂಡಲೇ, ಅಂದೇ ಜಿಲ್ಲಾಧಿಕಾರಿಗಳು ನಿಗಮಕ್ಕೆ ಪತ್ರ ಬರೆದಿರುವುದು ವಿಶೇಷ.‘ಜಿಲ್ಲಾ ಅಭಿವೃದ್ಧಿ ಯೋಜನೆ ತಯಾರಿಸಲು ನಿಮ್ಮ ನೆರವು, ಸಹಯೋಗ ಬೇಕಾಗಿದೆ ಎಂದು ಕೋರಿ ನಿಗಮಕ್ಕೆ ಪತ್ರ ಬರೆಯಲಾಗಿದೆ. ಆದರೆ ಇನ್ನೂ ನಿಗಮದಿಂದ ಪ್ರತಿಕ್ರಿಯೆ ದೊರೆತಿಲ್ಲ’ ಎಂದು ಮನೋಜ್‌ಕುಮಾರ್ ಮೀನಾ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಯೋಜನೆ ತಯಾರಿಸಲು ನಿಗಮ ನಮಗೆ ತಾಂತ್ರಿಕ ಸಲಹೆ, ಮಾರ್ಗದರ್ಶನ ನೀಡಲಿದೆ. ಅದಕ್ಕಾಗಿಯೇ ಸಮಿತಿಯೊಂದು ರಚನೆಯಾಗುವ ಸಾಧ್ಯತೆಯೂ ಇದೆ.ಸಮಿತಿಯ ಸದಸ್ಯರು ಜಿಲ್ಲೆಗೆ ಭೇಟಿ ನೀಡಿ ಎಲ್ಲ ಕ್ಷೇತ್ರಗಳ ಪ್ರಗತಿಯ ಅಂಕಿ-ಅಂಶ ಸಂಗ್ರಹಿಸುತ್ತಾರೆ. ಜನ, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳೊಡನೆ ಚರ್ಚಿಸಿದ ಬಳಿಕ ಅವರು ನೀಡುವ ಸಲಹೆ ಆಧರಿಸಿ ಯೋಜನೆಯನ್ನು ತಯಾರಿಸಲಾಗುವುದು’ ಎಂದು ಅವರು ವಿವರಿಸಿದರು.

‘ಯೋಜನೆಗೆ ಜಿಲ್ಲೆ ಆಯ್ಕೆಯಾಗಿರುವ ಕುರಿತು ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ಬುಧವಾರದ ಸಭೆಯಲ್ಲಿ ತಿಳಿಸಿದ್ದಾರೆ. ಆದರೆ ಸರ್ಕಾರಿದಂದ ಆ ಕುರಿತು ಇನ್ನೂ ಅಧಿಕೃತವಾಗಿ ಯಾವುದೇ ಸಂದೇಶ, ಪತ್ರ ಬಂದಿಲ್ಲ. ಪತ್ರಕ್ಕಾಗಿ ನಿರೀಕ್ಷಿಸುತ್ತಿದ್ದೇವೆ’ ಎಂದು ತಿಳಿಸಿದರು.

‘20 ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಕುರಿತು ಯೋಜನೆ-ನೀಲನಕ್ಷೆ ತಯಾರಿಸುವುದು ಕೂಡ ದೀರ್ಘ ಪ್ರಕ್ರಿಯೆ. ಅದಕ್ಕೆ, ನಿಗಮದ ನೆರವು, ಮಾರ್ಗದರ್ಶನದ ಜೊತೆಗೆ ಜಿಲ್ಲೆಯ ಎಲ್ಲ ಪ್ರಮುಖರ ಸಹಕಾರ, ಸಹಾಯ ಅತ್ಯಗತ್ಯ. ಎಲ್ಲ ಪ್ರಮುಖರೊಡನೆ ಸಮಾಲೋಚನೆ ನಡೆಸಿಯೇ ಯೋಜನೆ ತಯಾರಿಸಲಾಗುವುದು’ ಎಂದರು.

ಸಂತಸ: ಬುಧವಾರದ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಒಕ್ಕೊರಲಿನಿಂದ ಆಗ್ರಹಿಸಿದ್ದು ನಿಜಕ್ಕೂ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಯೋಜನೆ ತಯಾರಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಅವರೆಲ್ಲರ ಸಹಕಾರ ಜಿಲ್ಲಾಡಳಿತಕ್ಕೆ ಅತ್ಯಗತ್ಯವಾಗಿದೆ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT