ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಖಗೋಳ ರಥಯಾತ್ರೆಗೆ ತೆರೆ

Last Updated 7 ಜುಲೈ 2012, 7:00 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಕಶೆಟ್ಟಿಪಲ್ಲಿ ಸರ್ಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಇಂಟರ್ ನ್ಯಾಷನಲ್ ಇಯರ್ ಆಫ್ ಅಸ್ಟ್ರೋನಮಿ ಗೆಲಿಲಿಯೋ ಮೊಬೈಲ್ ಸಂಸ್ಥೆಯ ಖಗೋಳ ರಥಯಾತ್ರೆಯ ಸಮಾರೋಪ ಸಮಾರಂಭ ಜರುಗಿತು.

ಕೋಣೆಯಲ್ಲಿ ಕತ್ತಲೆ ಆವರಿಸುತ್ತಿದ್ದಂತೆ ಗೋಡೆ ಮೇಲೆ ಮೂಡಿದ ಬೆಳಕಿನಲ್ಲಿ ಮಕ್ಕಳ ಕಣ್ಮನಸುಗಳ ಮುಂದೆ ಖಗೋಳ ಪಕ್ಷಿ ಒಂದೊಂದಾಗಿ ತನ್ನ ರೆಕ್ಕೆಗಳನ್ನು ಬಿಚ್ಚುತ್ತಾ ಮಕ್ಕಳಿಗೆ ಖಗೋಳ ಚಟುವಟಿಕೆ ವಿವರಿಸಿತು. ಗೆಲಾಕ್ಸಿಗಳು ಮನಸ್ಸನ್ನು ಸೂರೆಗೊಂಡವು. ಸೌರವ್ಯೆಹ ಅಕ್ಷರಗಳ ಮೂಲಕ ಪರಿಚಯವಿದ್ದ ಮಕ್ಕಳಲ್ಲಿ ಕುತೂಹಲ ಹುಟ್ಟಿಸಿ ತನ್ನ ರಮ್ಯತೆಯಿಂದ ರಂಜಿಸಿತು.

ಗ್ರಹಗಳ ನಡುವಿನ ಅಂತರ ಅವುಗಳ ಗಾತ್ರ ಚಲನೆ ವೈಶಿಷ್ಟ್ಯ ಪುಸ್ತಕದಿಂದಾಚೆ ಬಂದು ಕಣ್ಣಮುಂದೆ ಜರುಗುತ್ತಿರುವ ಅನುಭವವನ್ನು ಮಕ್ಕಳು ಪಡೆದುಕೊಂಡರು.ಗ್ರಹದ ವೀಕ್ಷಣೆಯಲ್ಲಿ ಶನಿಗ್ರಹ ತೊಟ್ಟಿದ್ದ ಉಂಗುರ, ಮಂಗಳನ ಮೇಲ್ಮೈ ಬಣ್ಣ, ಒಟ್ಟು ಎಂಟು ಗ್ರಹಗಳ ಚಲನೆ ಕೊಡುವ ಆನಂದವನ್ನು ಮಕ್ಕಳು ಒಂದೊಂದೇ ಕ್ರಮದಲ್ಲಿ ಅನುಭವಿಸುತ್ತಾ ಹೋದರು.
 
ಭಾನಂಗಳದಲ್ಲಿ ಚುಕ್ಕಿಗಳು ಚೆಲ್ಲಿದ ಅಕ್ಕಿ ನುಚ್ಚಿನಂತೆ ಕಾಣಿಸತೊಡಗಿದವು. ಖಗೋಳವು ಒಂದು ಅದ್ಭುತ, ಬೆರಗು, ಸುಂದರ ಲೋಕ ಎಂಬ ಅಭಿಪ್ರಾಯ ಮಕ್ಕಳಲ್ಲಿ ಮೂಡಿದ್ದು ಅದು ಸಂವಾದ ಕಾರ್ಯಕ್ರಮದಲ್ಲಿ ಹೊರಬಿದ್ದಿತು.

ನಂತರ ಶಿಕ್ಷಕರಿಗೆ ಮಾಹಿತಿ-ತರಬೇತಿ ಅವಧಿ ನಡೆಯಿತು. ಇಲ್ಲಿ ಶಿಕ್ಷಕರನ್ನು ಸಂಪನ್ಮೂಲಗೊಳಿಸಿದ ನಂತರ ಅವರ ನೆರವನ್ನು ಪಡೆದು ಗುಂಪುಗಳಾಗಿ ವಿಂಗಡಿಸಿದ್ದ ಮಕ್ಕಳಿಗೆ ಗ್ರಹಗಳ ಆಕಾರ ಗುರುತಿಸುವುದು, ಅವುಗಳ ಸೌಂದರ್ಯ ಗ್ರಹಿಸುವ ಚಟುವಟಿಕೆ ನಡೆಯಿತು. ಇನ್ನೊಂದು ಗುಂಪಿನಲ್ಲಿ ಭೂಮಿಯ ಚಲನೆ ಅನುಸರಿಸಿ ಸೂರ್ಯನ ಬೆಳಕು ಉಂಟು ಮಾಡುವ ಕಾಲವನ್ನು ಗುರುತಿಸುವ ಚಟುವಟಿಕೆ ನಡೆದರೆ ಮತ್ತೊಂದು ಗುಂಪಿನಲ್ಲಿ ಕತ್ತರಿಸಲ್ಪಟ್ಟ ಗೋಳಗಳ ಭಾಗಗಳನ್ನು ಜೋಡಿಸುವ ಕೌಶಲ ಕಲ್ಪಿಸಲಾಯಿತು.

ದೂರದರ್ಶಕ ಯಂತ್ರ ಬಳಸುವ ವಿಧಾನ, ಕಾರ್ಯ ನಡೆಸುವ ಬಗ್ಗೆ ಹಾಗೂ ಅದರ ಮೂಲಕ ಆಕಾಶ ವೀಕ್ಷಣೆ ನಡೆಸುವ ವಿಧಾನ ತಿಳಿಸಲಾಯಿತು. 40 ನಿಮಿಷಗಳ ಒಂದೊಂದು ಗುಂಪಿನ ಚಟುವಟಿಕೆ ನಂತರದಲ್ಲಿ ಬದಲಾಗುತ್ತಿತ್ತು. ಇದರಿಂದ ಎಲ್ಲ ಗುಂಪಿನ ಚಟುವಟಿಕೆಗಳು ಕೊನೆಯಲ್ಲಿ ಏಕತ್ರಗೊಳ್ಳುತ್ತಿದ್ದವು. ಇದರಿಂದ ಸಮಾನ ಕಲಿಕೆ ಮತ್ತು ಗ್ರಹಿಕೆಗೆ ಅವಕಾಶವಾಗಿತ್ತು.

ಕಡೆ ಚಟುವಟಿಕೆಯಾಗಿ ಖಗೋಳ ಸಂವಾದ ನಡೆಯಿತು. ಮಕ್ಕಳು ತಮ್ಮ ಅನುಭವ ಹಂಚಿಕೊಂಡರು. ಗಣಿತ ಹಾಗೂ ಕಾಗದ ಕಲೆ ಪರಿಣತ ವಿ.ಎಸ್.ಎಸ್ ಶಾಸ್ತ್ರಿ, ಜರ್ಮನಿಯ ಖಗೋಳ ಶಾಸ್ತ್ರಜ್ಞರು ವಿವಿಧ ದೇಶಗಳಿಗೆ ಸೇರಿದವರಾದರೂ ನಮ್ಮ ಗ್ರಾಮೀಣ ಬಡ ಮಕ್ಕಳ ವಿಜ್ಞಾನ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ. ವಿಜ್ಞಾನದ ಎಲ್ಲ ಶಾಖೆಗಳಂತೆ ಖಗೋಳ ಶಾಸ್ತ್ರವನ್ನು ಅಧ್ಯಯನ ಮಾಡುವುದು ಬಹಳ ಮುಖ್ಯವಾದುದು ಎಂದು ತಿಳಿಸಿ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.

ಜರ್ಮನಿಯ ಈ ತಂಡ ಡಾ.ಮೇಘಾ ಭಟ್ ಮಾರ್ಗದರ್ಶನದಲ್ಲಿ 20 ದಿನಗಳ ಪ್ರವಾಸ ನಡೆಸುತ್ತದೆ. ಕಶೆಟ್ಟಿಪಲ್ಲಿ ಶಾಲೆಯಲ್ಲಿ ಡಾ.ಮರಿಯಾದಾಸ್, ಪಿಲಿಪ್ಸೆ ಕೋಬೆಲ್, ಮಿಸ್ ಪಿಲಾರ್, ಮಿಸ್ ಸಾಂದ್ರ, ಮಿಸ್ ಮೈಟೇ, ರವೀಂದ್ರ ಖಗೋಳ ತಜ್ಞರಾಗಿ ಭಾಗವಹಿಸಿದ್ದರು.

ಗೌನಿಪಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಎಂ.ಕೆ.ಶೋಭಾ, ಶ್ರೀನಿವಾಸಪುರ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಎ.ಶೇಷಗಿರಿ, ಶಾಲಾ ಶಿಕ್ಷಕರಾದ ರಾಮರತ್ನ ಶೇಷಗಿರಿ, ಕಲಾಧರ್, ವರಲಕ್ಷ್ಮೀ ಶ್ರೀನಿವಾಸ್, ಜಿ.ಎನ್.ಪ್ರವೀಣ್ ಕುಮಾರ್, ಮುನಿವೆಂಕಟಪ್ಪ, ರಾಧಮ್ಮ ರೋಣೂರು, ಜಯಲಕ್ಷ್ಮೀ ಆವುಲಕುಪ್ಪ, ವಿಜೇತ, ಶಿಕ್ಷಕರಾದ ರಾಜುಗೌಡ, ಅಗಸ್ತ್ಯ ಫೌಂಡೇಷನ್‌ನ ಋತ್ವಿಜ ಕೌಶಿಕ್, ಕೋಲಾರದ ತ್ಯಾಗರಾಜ್, ಅನಿಲ್, ಭವಾನಿ ಶಂಕರ್, ಇಮ್ರೋನ್ ಅನುವಾದಕರಾಗಿ ಮಕ್ಕಳೊಂದಿಗೆ ಅತಿಥಿಗಳ ಸಂಪರ್ಕ ಏರ್ಪಡಿಸಿದ್ದರು.

ಕಮತಂಪಲ್ಲಿ ಶಾಲೆ ಮುಖ್ಯ ಶಿಕ್ಷಕ ಶಿವರಾಘವರೆಡ್ಡಿ, ತಾಡಿಗೋಳ್ ಸಿ.ಆರ್.ಪಿ. ಶ್ರೀರಾಮೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಕೆ.ಎನ್.ವೆಂಕಟರಮಣಾರೆಡ್ಡಿ, ಉಪಾಧ್ಯಕ್ಷ ಕೆ.ವಿ.ರಮಾಣಾರೆಡ್ಡಿ, ಪಂಚಾಯಿತಿ ನರಸಿಂಹಪ್ಪ, ಗ್ರಾಮಸ್ಥ ಮುನಿವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಲ್.ಅಶ್ವತ್ಥರೆಡ್ಡಿ, ಹನುಮಾನ್ ಕೆಪಿಎಲ್ ಯುವಕ ಸಂಘದ ಗಣೇಶ, ಅಶೋಕ, ನಾರಾಯಣಸ್ವಾಮಿ, ಅಂಗನವಾಡಿಯ ಇಂದಿರಮ್ಮ ಹಾಗೂ ಕೆ.ಎಂ.ಲಕ್ಷ್ಮೀದೇವಮ್ಮ, ಕೆ.ವಿ.ಅನಿತಾ, ದೇವಮ್ಮ, ಟೈಲರಿಂಗ್ ಶಿಕ್ಷಕಿ ಶಿಲ್ಪಾ, ಶಿಡ್ಲಘಟ್ಟ ಶಾಲೆಯ ಸಂಪನ್ಮೂಲ ವ್ಯಕ್ತಿ ಕೃಷ್ಣಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT