ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ತಾ.ಪಂ: ಪಕ್ಷೇತರರಿಗೆ ಒಲಿದ ಅದೃಷ್ಟ

Last Updated 23 ಫೆಬ್ರುವರಿ 2011, 6:55 IST
ಅಕ್ಷರ ಗಾತ್ರ

ಕೋಲಾರ: ಕೆಲವೇ ದಿನಗಳ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರುವಂತೆ ಮಾಡಿದ ಶಾಸಕ ಆರ್.ವರ್ತೂರು ಪ್ರಕಾಶ್, ಈಗ ತಾಲ್ಲೂಕು ಪಂಚಾಯಿತಿಯಲ್ಲಿ ಪಕ್ಷೇತರರ ಬಾವುಟ ಹಾರಿಸಿದ್ದಾರೆ. ಅವರ ಬಣಕ್ಕೆ ಸೇರಿದ ಪಕ್ಷೇತರ ಸದಸ್ಯರೇ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನಗರದ ತಾಪಂ ಕಚೇರಿಯಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಶಾಸಕರ ಬಣಕ್ಕೆ ಸೇರಿದ, ವಕ್ಕಲೇರಿ ಕ್ಷೇತ್ರದ ಸದಸ್ಯೆ ಎನ್.ರಮಾದೇವಿ ವಿರೋಧವಿಲ್ಲದೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಚೌಡದೇನಹಳ್ಳಿ ಕ್ಷೇತ್ರದ ವಿ.ಮಂಜುನಾಥ್ 12 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಈ ಮೂಲಕ., 23 ಸದಸ್ಯ ಬಲದ ತಾಪಂ ಆಡಳಿತ ಕಾಂಗ್ರೆಸ್-ಜೆಡಿಎಸ್ ಹಿಡಿತ ತಪ್ಪಿ ವರ್ತೂರು ಹಿಡಿತಕ್ಕೆ ದೊರಕಿದಂತಾಗಿದೆ.

ಅವಿರೋಧ: ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಹುದ್ದೆಗೆ ಏಕೈಕ ಅರ್ಹ ಅಭ್ಯರ್ಥಿಯಾಗಿದ್ದವರು ಎನ್.ರಮಾದೇವಿ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಅವರೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಕೆಯಾದ ಕಾರಣ, ರಮಾದೇವಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ ಘೋಷಿಸಿದರು.

ಉಪಾಧ್ಯಕ್ಷ: ಉಪಾಧ್ಯಕ್ಷ ಸ್ಥಾನಕ್ಕೆ ಚೌಡದೇನಹಳ್ಳಿ ಕ್ಷೇತ್ರದ ಪಕ್ಷೇತರ ಸದಸ್ಯ ವಿ.ಮಂಜುನಾಥ್, ಜೆಡಿಎಸ್‌ನ, ಮಡಿವಾಳ ಕ್ಷೇತ್ರದ ರಾಮಕೃಷ್ಣಪ್ಪ ಮತ್ತು ಕಾಂಗ್ರೆಸ್‌ನ, ಶಾಪೂರು ಕ್ಷೇತ್ರದ ಜಿ.ಮುದ್ದುಮಣಿ ನಾಮಪತ್ರ ಸಲ್ಲಿಸಿದ್ದರು. ವಿ.ಮಂಜುನಾಥ ಅವರ ಪರವಾಗಿ 12 ಸದಸ್ಯರು (10 ಪಕ್ಷೇತರ ಸದಸ್ಯರು ಹಾಗೂ ಬಿಜೆಪಿಯ, ಹುತ್ತೂರು ಕ್ಷೇತ್ರದ ಸುನಂದಮ್ಮ ಮತ್ತು ಕಾಂಗ್ರೆಸ್‌ನ, ಹೋಳೂರು ಕ್ಷೇತ್ರದ ನಾಗಮ್ಮ) ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ರಾಮಕೃಷ್ಣಪ್ಪ ಪರವಾಗಿ ಜೆಡಿಎಸ್‌ನ 8 ಮತ್ತು ಮುದ್ದುಮಣಿ ಪರವಾಗಿ ಕಾಂಗ್ರೆಸ್‌ನ ಮೂವರು ಮತ ಚಲಾಯಿಸಿದರು. ಅಧಿಕ ಮತ ಪಡೆದ ಮಂಜುನಾಥ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಚುನಾವಣಾಧಿಕಾರಿ ಪೆದ್ದಪ್ಪಯ್ಯ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT