ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮುಂಗಾರಿನ ಆಟ- ಸಣ್ಣ ರೈತರಿಗೆ ಸಂಕಟ

Last Updated 14 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಕೋಲಾರ:  ಸಮರ್ಪಕವಾಗಿ ಸುರಿಯದೆ ಕಣ್ಣಾ ಮುಚ್ಚಾಲೆಯಾಡುತ್ತಿರುವ ಮುಂಗಾರು ಮಳೆ ಜಿಲ್ಲೆಯ ರೈತರ ಬದುಕಿನಲ್ಲಿ ಸಂಕಟವನ್ನು ಹೆಚ್ಚು ಮಾಡಿದೆ. ಅದರಲ್ಲೂ, ಮಳೆಯನ್ನೇ ನಂಬಿಕೊಂಡು ಕೃಷಿ ಮಾಡುವ ಸಾವಿರಾರು ಸಣ್ಣ ರೈತರಿಗೆ ಕಡುಕಷ್ಟದ ದಿನಗಳು ಎದುರಾಗಿವೆ.

ಕೊಳವೆಬಾವಿಗಳನ್ನು ಕೊರೆಸಿರುವ ದೊಡ್ಡ, ಶ್ರೀಮಂತ ರೈತರು ತಮ್ಮ ಜಮೀನಿನಲ್ಲಿ ಕಾರ್ಯನಿರತರಾಗಿರುವ ಹೊತ್ತಿನಲ್ಲೆ ಸಣ್ಣ ರೈತರು ಒಣಗುತ್ತಿರುವ ತಮ್ಮ ಹೊಲದ ಬೆಳೆಯನ್ನು ಅಸಹಾಯಕರಾಗಿ ನೋಡುತ್ತ ನಿಲ್ಲುವಂತಾಗಿದೆ. ಮಳೆ ಬರುತ್ತದೆಂದು ನೆಲವನ್ನು ಉತ್ತವರ ಕಾಯುವಿಕೆ ನೋಡುವವರಲ್ಲಿ ಕರುಣೆ ಹುಟ್ಟಿಸುವಂತಿದೆ. ದುಃಖ ಹೆಚ್ಚಾಗಿ ಹಲವರು ಹೊಲಗಳ ಕಡೆ ಹೋಗುವುದನ್ನೇ ನಿಲ್ಲಿಸಿದ್ದಾರೆ.

ಮಳೆ ಆಶ್ರಯದಲ್ಲಿ ಟೊಮೆಟೊ ಬೆಳೆದವರಿಗೆ ಸರಿಯಾಗಿ ಬೆಲೆ ಸಿಕ್ಕಿಲ್ಲ. ಹೀಗಾಗಿ, ಅದನ್ನು ಮತ್ತೆ ಕೀಳುವ, ಮಾರಲು ಕೊಂಡೊಯ್ಯುವ ಖರ್ಚು ಭರಿಸಲಾಗದೆ ತಾಲ್ಲೂಕಿನ ಕೆಲವೆಡೆ ರೈತರು ಟೊಮೆಟೋವನ್ನು ಗಿಡದಲ್ಲೆ ಬಿಟ್ಟಿದ್ದಾರೆ, ಹಣ್ಣಾಗಿದ್ದರೂ ಟೊಮೆಟೊ ವ್ಯರ್ಥವಾಗಿದೆ.

`ಮುಂಗಾರನ್ನು ನೆಚ್ಚಿಕೊಂಡು ಎರಡು ತಿಂಗಳ ಹಿಂದೆ ಟೊಮೆಟೊ ಬಿತ್ತನೆ ಮಾಡಿದೆವು. ಆದರೆ ಮಳೆ ಕೈಕೊಟ್ಟಿತು. ಒಮ್ಮೆ ಕಿತ್ತು ಕೊಂಡೊಯ್ದ ಹಣ್ಣಿಗೆ ಬೆಲೆ ಸಿಗಲಿಲ್ಲ. 15 ಕೆಜಿಯ ಒಂದು ಬಾಕ್ಸ್ ಟೊಮೆಟೋಗೆ ರೂ 10-15 ರೂಪಾಯಿ ಬೆಲೆ ಇತ್ತು.

ಅಲ್ಲದೆ, ಕಡಿಮೆ ಎಂದರೂ, 100 ಬಾಕ್ಸ್ ಟೊಮೆಟೊ ಇದ್ದರೆ ಮಾತ್ರ ವ್ಯಾಪಾರಿಗಳು ಕೊಳ್ಳುತ್ತಾರೆ. ನಮ್ಮ ಬಳಿ ಅಷ್ಟು ಟೊಮೆಟೊ ಇರಲಿಲ್ಲ. ಬೇರೆ ರೈತರ ಬಾಕ್ಸ್‌ಗಳ ಜೊತೆಗೆ ಸೇರಿಸಿ ಮಾರಿದೆವು~ ಎಂದು ತಾಲ್ಲೂಕಿನ ಮಂಗಸಂದ್ರದ ರೈತ ಯುವಕ ಆನಂದ್ ಭಾನುವಾರ `ಪ್ರಜಾವಾಣಿ~ಗೆ ತಿಳಿಸಿದರು.

`ಅರ್ಧ ಎಕರೆಯಲ್ಲಿ 20 ಸಾವಿರ ರೂಪಾಯಿ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದು. ಆದರೆ ಅಸಲು ಕೂಡ ಸಿಕ್ಕಿಲ್ಲ. ಕಿತ್ತರೂ ಪ್ರಯೋಜನವಿಲ್ಲ ಎಂದು ಈಗ ಹಾಗೇ ಬಿಟ್ಟಿದ್ದೇವೆ~ ಎಂದು ಅವರು ಹೇಳಿದರು.
`ಮುಂಗಾರು ಮಳೆ ಸಾಕಷ್ಟು ಸುರಿದರೆ ಸಣ್ಣ ರೈತರು ರಾಗಿ ಬೆಳೆಯುತ್ತಾರೆ.
 
ಅದೇ ನೆಮ್ಮದಿ ಕೊಡುತ್ತದೆ. ಆಗ ಟೊಮೆಟೊ ಬೆಳೆಯಲೇಬೇಕೆಂದೇನಿಲ್ಲ. ಆದರೆ ಅಷ್ಟು ಮಳೆಯೂ ಈ ಬಾರಿ ಬರಲಿಲ್ಲ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅವರ ಜಮೀನಿನ ಪಕ್ಕದಲ್ಲೆ ಹನಿ ನೀರಾವರಿಯಲ್ಲಿ ಹಿಪ್ಪು ನೇರಳೆ ಬೆಳೆಯುತ್ತಿರುವ ರೈತ ಈರಪ್ಪನವರ ಸಂಕಟ ಇನ್ನೊಂದು ಬಗೆ: ತೆರೆದ ಬಾವಿಯಲ್ಲಿದ್ದ ನೀರು ಮುಗೀತು. ಬೆಟ್ಟದ ಮೇಲೆ ಮಳೆ ಒಮ್ಮೆಯಾದರೂ ಸರಿಯಾಗಿ ಸುರಿದಿದ್ದರೆ ಎಷ್ಟು ತೆಗೆದರೂ ನೀರುಬಾವಿಯಲ್ಲಿ ದಿನವೂ ಏಳೆಂಟು ಅಡಿ ಏರುತ್ತಿತ್ತು. ಈಗ ಏಳಿಂಚೂ ಕೂಡ ಹೆಚ್ಚಾಗುವು ದಿಲ್ಲ~ ಎನ್ನುತ್ತಾರೆ ಅವರು.

`ಕಳೆದ ವರ್ಷ ಗದ್ದೆ, ಹೊಲ ಎಲ್ಲ ಕಡೆ ಹಸಿರಿತ್ತು. ಬೆಟ್ಟದಿಂದ ನೀರು ಸದಾ ಇಳಿಯುತ್ತಿತ್ತು.ಆದರೆ ಈ ವರ್ಷ ಹುಲ್ಲೂ ಹಚ್ಚಗಾಗಲಿಲ್ಲ. ಮುಂಗಾರು ಹುಟ್ಟಿದ ಬಳಿಕ ಭೂಮಿ ತಣಿಯುವಷ್ಟು ಒಮ್ಮೆಯಾದರೂ ಮಳೆ ಬಿದ್ದರೆ, ನಂತರ 3 ತಿಂಗಳು ಬರದಿದ್ದರೂ ತೊಂದರೆ ಇರುವುದಿಲ್ಲ. ಆದರೆ ಈ ಬಾರಿ ಮೇ ತಿಂಗಳಿಂದಲೂ ಮಳೆ ಇಷ್ಟಿಷ್ಟೇ ಸುರಿಯುತ್ತಿದೆ. ಅದರಿಂದ ಪ್ರಯೋಜನವಂತೂ ಆಗಿಲ್ಲ~ ಎನ್ನುತ್ತಾರೆ ಅದೇ ಗ್ರಾಮದ ಮತ್ತೊಬ್ಬ ರೈತ ಮುನಿಯಪ್ಪ.

ಬೆಳೆ ನಷ್ಟವಾದರೂ, ನೀರಿನ ಸೌಲಭ್ಯವಿದ್ದರೆ ಆ ಬೆಳೆಯನ್ನು ಕಿತ್ತು ಮತ್ತೊಂದು ಬೆಳೆಯನ್ನು ಬೆಳೆಯಲು ಮುಂದಾಗಬಹುದು. ಆದರೆ ಅಂಥ ಅವಕಾಶ ಕೆಲವೇ, ದೊಡ್ಡ ಶ್ರೀಮಂತ ರೈತರಿಗೆ ಮಾತ್ರ ಲಭ್ಯ. ಬಡ, ಸಣ್ಣ ರೈತರಿಗೆ ಮಾತ್ರ ಈಗ `ಮಳೆಯೂ ಇಲ್ಲ, ಬೆಳೆಯೂ ಇಲ್ಲ~ ಎಂಬಂತಾಗಿದೆ. ಹೀಗಾಗಿಯೇ ನಮ್ಮ ಹಳ್ಳಿಯ ಅಕ್ಷರ ಕಲಿತವರು ಬೇರೆ ಕೆಲಸಕ್ಕಾಗಿ ಬೆಂಗಳೂರು ಸೇರಿದ್ದಾರೆ~ ಎಂದು ಆನಂದ್  ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT