ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾಹಲ ಎಬ್ಬಿಸಿದ ನಾಮನಿರ್ದೇಶನ ವಿವಾದ

Last Updated 9 ಸೆಪ್ಟೆಂಬರ್ 2011, 10:35 IST
ಅಕ್ಷರ ಗಾತ್ರ

ಶಿವಮೊಗ್ಗ: ಅರಣ್ಯಹಕ್ಕುಗಳ ಮಾನ್ಯತಾ ಸಮಿತಿಯ ನಾಮನಿರ್ದೇಶನ ವಿಷಯ ಗುರುವಾರ ನಡೆದ ಜಿ.ಪಂ. ಮುಂದುವರಿದ ಸಾಮಾನ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿತು. ಅಧ್ಯಕ್ಷರ ಪೀಠದ ಎದುರಿನ ಬಾವಿಗಿಳಿದು ಧರಣಿ, ಪ್ರತಿಭಟನೆ, ಸಭೆ ಮುಂದೂಡಿಕೆ ಮತ್ತಿತರ ಘಟನೆಗಳಿಗೆ ಸಭೆ ಸಾಕ್ಷಿಯಾಯಿತು.

ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ 2006 ಮತ್ತು ನಿಯಮ 2008ನ್ನು ಜಾರಿಗೊಳಿಸುವ ಕುರಿತ ವಿಭಾಗೀಯ ಮತ್ತು ಜಿಲ್ಲಾಮಟ್ಟದ ಸಮಿತಿಗಳಿಗೆ ಜನಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡುವಲ್ಲಿ ವಿರೋಧಪಕ್ಷವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ, ತದನಂತರ ಅಧ್ಯಕ್ಷರ ಪೀಠದ ಎದುರಿನ ಬಾವಿಗಿಳಿದು ಧರಣಿ ನಡೆಸಿದರು.

ಸಮಿತಿಯಲ್ಲಿ ವಿರೋಧಪಕ್ಷದ ಸದಸ್ಯರನ್ನು ಸೇರಿಸಿಕೊಳ್ಳಬೇಕು; ಹಾಗೆಯೇ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರು ಹೇಳಿದ ಬ್ಲಾಕ್‌ಮೇಲ್ ಪದವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಪಟ್ಟುಹಿಡಿದು ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದಾಗ, ಸಂಜೆ 4.30ರ ಸುಮಾರಿಗೆ ಆಗಮಿಸಿದ ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, `ಸಮಿತಿ ಪರಿಷ್ಕರಣೆ ಮಾಡಲಾಗುವುದು~ ಎಂದು ಭರವಸೆ ನೀಡಿದ ಮೇರೆಗೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ. ಅಶೋಕ್‌ನಾಯ್ಕ, ಬ್ಲಾಕ್‌ಮೇಲ್ ಪದವನ್ನು ಹಿಂದಕ್ಕೆ ಪಡೆದ ಮೇಲೆ ಕಾಂಗ್ರೆಸ್ ಪಕ್ಷ ಧರಣಿಯನ್ನು ಹಿಂದಕ್ಕೆ ಪಡೆಯಿತು.

ಬೆಳಿಗ್ಗೆ ಸಭೆ ಆರಂಭವಾಗುತ್ತಿದ್ದಂತೆ ವಿರೋಧಪಕ್ಷದ ನಾಯಕ ಕಲಗೋಡು ರತ್ನಾಕರ್, ನಾಮನಿರ್ದೇಶನ ಸೂಕ್ತಪ್ರಾತಿನಿಧ್ಯತೆಯಿಂದ ಕೂಡಿಲ್ಲ. ಹಿಂದಿನ ಸಭೆ ಈ ಕುರಿತ ಚರ್ಚೆಯಲ್ಲಿ ಅಪೂರ್ಣಗೊಂಡಿತ್ತು. ಇಂದಿನ ಸಭೆ ಇದೇ ಚರ್ಚೆಯಿಂದ ಆರಂಭಗೊಳ್ಳಬೇಕು. ಪಟ್ಟಿ ಪರಿಷ್ಕರಣೆಯಾಗಬೇಕು. ಇದಕ್ಕೆ ತಾವು ಒಪ್ಪಿಗೆ ನೀಡಿದರೆ ಮಾತ್ರ ತಾವು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವುದಾಗಿ ಅಧ್ಯಕ್ಷರಿಗೆ ಹೇಳಿದರು.

`ಸಭೆ ಅಜೆಂಡಾ ಪ್ರಕಾರ ನಡೆಯಲಿ. ಈ ವಿಷಯ ಕೈಗೆತ್ತಿಕೊಂಡಾಗ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ~ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಸಭೆಗೆ ಭರವಸೆ ನೀಡಿದರು. ಅಧ್ಯಕ್ಷರ ಮಾತಿಗೆ ಉಪಾಧ್ಯಕ್ಷ ಎಚ್.ಬಿ. ಗಂಗಾಧರ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಿ. ಅಶೋಕನಾಯ್ಕ, ಆಡಳಿತ ಪಕ್ಷದ ಸದಸ್ಯರಾದ ರುದ್ರಪ್ಪ ದಾನೇರಿ, ಬಂಗಾರಿನಾಯ್ಕ, ಗೀತಾ ಮಲ್ಲಿಕಾರ್ಜುನ್ ದನಿಗೂಡಿಸಿದರು.

ಆದರೆ, ವಿರೋಧಪಕ್ಷದ ಸದಸ್ಯರು, ಪಟ್ಟಿ ಪರಿಷ್ಕರಣೆಯಾಗಲೇಬೇಕು ಎಂದು ಪಟ್ಟುಹಿಡಿದರು. ಸಭೆ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗದಿದ್ದಾಗ ಸಭೆಯನ್ನು ಅಧ್ಯಕ್ಷರು ಅರ್ಧಗಂಟೆ ಮುಂದೂಡಿದರು. ಮುಕ್ಕಾಲು ಗಂಟೆ ನಂತರ ಮತ್ತೆ ಸಭೆ ಸೇರಿದಾಗಲೂ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವಂತೆ ವಿರೋಧಪಕ್ಷದ ಸದಸ್ಯರನ್ನು ಅಧ್ಯಕ್ಷರು ಕೇಳಿಕೊಂಡರು. ಆದರೆ, ಪ್ರತಿಪಕ್ಷಗಳು ತಮ್ಮ ಪಟ್ಟು ಮುಂದುವರಿಸಿದಾಗ, ಆಶೋಕನಾಯ್ಕ, ಇದು ಪ್ರತಿಪಕ್ಷಗಳ ಬ್ಲಾಕ್‌ಮೇಲ್ ಎಂದು ಹೇಳಿದರು.

ಈ ಪದವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ ಈಸೂರು ಬಸವರಾಜ್ ಅಧ್ಯಕ್ಷರ ಪೀಠದ ಎದುರಿನ ಬಾವಿಯಲ್ಲಿ ಧರಣಿ ಕುಳಿತರು. ಉಳಿದ ಎಲ್ಲಾ ಕಾಂಗ್ರೆಸ್ ಸದಸ್ಯರು ಅವರನ್ನು ಹಿಂಬಾಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT