ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತದಲ್ಲಿ ವಿದ್ಯಾರ್ಥಿ ಸಾವು: ಕೋಲಾಹಲ

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಕಾಲೇಜು ವಿದ್ಯಾರ್ಥಿ ಒಕ್ಕೂಟಕ್ಕೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಪ್ರತಿಭಟನೆ ನಡೆಸುತ್ತಿದ್ದಾಗ ವಿದ್ಯಾರ್ಥಿ ಮುಖಂಡನೊಬ್ಬ ಸತ್ತಿರುವ ಘಟನೆ ಕೋಲ್ಕತ್ತದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.

ಇಲ್ಲಿನ ರವೀಂದ್ರ ಭಾರತಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಸುದೀಪ್ತ ಗುಪ್ತ (22) ಪ್ರತಿಭಟನೆ ವೇಳೆ ಮೃತಪಟ್ಟ ದುರ್ದೈವಿ.

ಘಟನೆ ವಿವರ: ಸರ್ಕಾರ ಕಾಲೇಜು ವಿದ್ಯಾರ್ಥಿ ಒಕ್ಕೂಟಕ್ಕೆ  ಶೀಘ್ರ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಎಸ್‌ಎಫ್‌ಐ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿತ್ತು. ಪ್ರತಿಭಟನಾನಿರತರು ಮತ್ತು ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.

ಪ್ರತಿಭಟನಾನಿರತ ಎಸ್‌ಎಫ್‌ಐ ರಾಜ್ಯ ಸಮಿತಿಯ ಸದಸ್ಯನಾದ ಸುದೀಪ್ತ ಸೇರಿದಂತೆ ಹಲವು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ, ಬಸ್‌ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ವಿದ್ಯಾರ್ಥಿ ನಾಯಕ ಸುದೀಪ್ತ ಮೃತಪಟ್ಟಿದ್ದ.

ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಖಾಸಗಿ ಬಸ್‌ನ ಚಾಲಕನನ್ನು ಬುಧವಾರ ಬಂಧಿಸಿದ್ದಾರೆ.

ಪೊಲೀಸರ ದೌರ್ಜನ್ಯದಿಂದ ಸಾವು- ಆರೋಪ: `ಪ್ರತಿಭಟನಾನಿರತರನ್ನು ಬಂಧಿಸಿ ಬಸ್‌ನಲ್ಲಿ ಜೈಲಿಗೆ ಕರೆದೊಯ್ಯುತ್ತಿದ್ದಾಗ ಪೊಲೀಸರು ಬಸ್‌ನಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಎಡಬಿಡದೆ ಲಾಠಿ ಪ್ರಹಾರ ಮಾಡಿದರು.

`ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ಸುದೀಪ್ತ ಬಸ್‌ನಿಂದ ಆಯತಪ್ಪಿ ಬಿದ್ದ. ಬೀಳುವಾಗ ರಸ್ತೆ ಬದಿಯ ಕಂಬಕ್ಕೆ ಆತ ಡಿಕ್ಕಿ ಹೊಡೆದ. ಸುದೀಪ್ತ ತಲೆಗೆ ಎಷ್ಟು ಬಲವಾಗಿ ಹೊಡೆಯಲಾಗಿತ್ತು ಎಂದರೆ, ಆತನ ಕಣ್ಣು ಗುಡ್ಡೆಗಳು ಹೊರಗೆ ಬಂದಿದ್ದವು' ಎಂದು ಘಟನೆಯ ಪ್ರತ್ಯಕ್ಷದರ್ಶಿ ಎಸ್‌ಎಫ್‌ಐ ಜಂಟಿ ಕಾರ್ಯದರ್ಶಿ ಶತರೂಪ್ ಘೋಷ್ ತಿಳಿಸಿದ್ದಾರೆ.

ಅಲ್ಲಗಳೆದ ಪೊಲೀಸರು: ಎಸ್‌ಎಫ್‌ಐ ವಿದ್ಯಾರ್ಥಿ ನಾಯಕನ ಸಾವಿಗೆ ಪೊಲೀಸರ ದೌರ್ಜನ್ಯ ಕಾರಣ ಎಂಬ ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಿ ಬಸ್‌ನಲ್ಲಿ ಜೈಲಿಗೆ ಕರೆದುಕೊಂಡು ಹೋಗುವಾಗ, ಸುದೀಪ್ತ ಬಸ್‌ನಿಂದ ಹೊರಕ್ಕೆ ಜಿಗಿದು ತೀವ್ರವಾಗಿ  ಗಾಯಗೊಂಡು ಮೃತಪಟ್ಟಿದ್ದಾನೆಯೇ ಹೊರತು, ಪೊಲೀಸರ ದೌರ್ಜನ್ಯದಿಂದಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಯಾಂಗ ತನಿಖೆಗೆ ಆಗ್ರಹ: ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಿಪಿಎಂ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದೆ.

`ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ನೀಡುತ್ತಿರುವ ಹೇಳಿಕೆಯನ್ನು ಒಪ್ಪಲಾಗದು. ಹಾಗಾಗಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು' ಸಿಪಿಎಂ ಹಿರಿಯ ನಾಯಕ ಸೀತಾರಾಂ ಯೆಚೂರಿ ಒತ್ತಾಯಿಸಿದ್ದಾರೆ.

ದುರದೃಷ್ಟಕರ: ವಿದ್ಯಾರ್ಥಿ ಸಾವು ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, `ಇದೊಂದು ದುರದೃಷ್ಟಕರ ಘಟನೆ. ಇಷ್ಟಲ್ಲದೇ ಬೇರೆನನ್ನೂ ಹೇಳಲಾರೆ' ಎಂದಿದ್ದಾರೆ.

ಘಟನೆಯನ್ನು ಖಂಡಿಸಿರುವ ಕೇಂದ್ರ ಸಚಿವ ಮನೀಷ್ ತಿವಾರಿ, `ಮೃತ ವಿದ್ಯಾರ್ಥಿ ಕಮ್ಯುನಿಸ್ಟ್ ಸಂಘಟನೆಗೆ ಸೇರಿದ್ದಾನೆ ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳ ಸರ್ಕಾರ ತಾರತಮ್ಯ ಮಾಡದೇ ಆತನಿಗೆ ನ್ಯಾಯ ಒದಗಿಸಬೇಕು' ಎಂದಿದ್ದಾರೆ.
 

ನ್ಯಾಯಕ್ಕಾಗಿ ಹೋರಾಡುವೆ
`ನನ್ನ ಮಗನನ್ನು ಸಾಯುವಂತೆ ಹೊಡೆದಿದ್ದಾರೆ. ಇದು ನ್ಯಾಯವೇ?' ಎಂದಿರುವ ಮೃತ ವಿದ್ಯಾರ್ಥಿಯ ತಂದೆ ಪ್ರಣೋಬ್ ಕುಮಾರ್ ಅವರು, `ಹಣದ ನೆರವು ನೀಡುವುದಾಗಿ ಹೇಳುತ್ತಿರುವ ಸಿಎಂ ಮಮತಾ ಬ್ಯಾನರ್ಜಿ, ನನ್ನ ಮಗನನ್ನು ವಾಪಸ್ ನೀಡಬಲ್ಲರೆ?' ಎಂದು ಪ್ರಶ್ನಿಸಿದ್ದಾರೆ.

`ನಾನು ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿ. ನನಗೆ ಪಿಂಚಣಿ ಬರುತ್ತದೆ. ಹಣಕ್ಕಾಗಿ ನಾನು ಕೈಯೊಡ್ಡುವುದಿಲ್ಲ. ಇದು ನನ್ನ ತತ್ವಕ್ಕೆ ವಿರುದ್ಧವಾದುದು. ನಾನು ನ್ಯಾಯಕ್ಕಾಗಿ ಹೋರಾಡುತ್ತೇನೆ' ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT