ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿಫಾರಂ ಸ್ಥಳಾಂತರಕ್ಕೆ ಒತ್ತಾಯ

Last Updated 6 ಆಗಸ್ಟ್ 2013, 6:27 IST
ಅಕ್ಷರ ಗಾತ್ರ

ಕೊರಟಗೆರೆ: ಗ್ರಾಮಕ್ಕೆ ಹೊಂದಿಕೊಂಡಂತಿರುವ ಕೋಳಿ ಫಾರಂನ್ನು ಸ್ಥಳಾಂತರಿಸಿ ಗ್ರಾಮ ನೈರ್ಮಲ್ಯತೆ ಕಾಪಾಡಿ, ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಹರಿಹರಪ್ಪನಪಾಳ್ಯದ ಗ್ರಾಮಸ್ಥರು ಹುಲಿಕುಂಟೆ ಗ್ರಾಮ ಪಂಚಾಯಿತಿ ಕಚೇರಿಗೆ ಸೋಮವಾರ ಬೀಗ ಹಾಕಿ ಪ್ರತಿಭಟಿಸಿದರು.

ಹರಿಹರಪ್ಪನಪಾಳ್ಯ ಗ್ರಾಮದಲ್ಲಿ ಹಲ ವರ್ಷಗಳಿಂದ ಖಾಸಗಿ ವ್ಯಕ್ತಿಯೊಬ್ಬರು ಅನಧಿಕೃತವಾಗಿ ಕೋಳಿ ಫಾರಂ ನಡೆಸುತ್ತಿದ್ದು, ಇದಕ್ಕೆ ಗ್ರಾಮ ಪಂಚಾಯಿತಿಯಿಂದ ಯಾವುದೇ ಪರವಾನಗಿ ಪಡೆದಿಲ್ಲ. ಅದಲ್ಲದೆ ಊರಿನ ಪಕ್ಕದಲ್ಲೇ ಕೋಳಿ ಫಾರಂ ತೆರೆದಿದ್ದು, ಇದರಿಂದ ಗ್ರಾಮದಲ್ಲಿ ಸಾರ್ವಜನಿಕರು ವಾಸಿಸುವುದು ಕಷ್ಟವಾಗಿದೆ.

ಕೋಳಿ ಫಾರಂನಲ್ಲಿ ಕಾಯಿಲೆಗೆ ಒಳಗಾದ ಕೋಳಿಗಳನ್ನು ಅಲ್ಲೇ ಎಸೆಯುತ್ತಿರುವುದರಿಂದ ನಾಯಿಗಳು ಅವುಗಳನ್ನು ಕಚ್ಚಿಕೊಂಡು ಬಂದು ಊರಲೆಲ್ಲಾ ಎಳೆದಾಡುತ್ತಿರುತ್ತವೆ. ಇದರೊಂದಿಗೆ ಗ್ರಾಮದಲ್ಲಿ ಮಕ್ಕಳು, ಕುರಿ, ಮೇಕೆ, ಕರುಗಳನ್ನು ಕಚ್ಚುತ್ತಿವೆ. ಇದಲ್ಲದೆ ಕೋಳಿ ಫಾರಂನಿಂದ ಹೊರಹೊಮ್ಮುವ ದುರ್ವಾಸನೆಯಿಂದ ಗ್ರಾಮಕ್ಕೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಬಗ್ಗೆ ಅನೇಕ ಬಾರಿ ಗ್ರಾಮ ಪಂಚಾಯಿತಿ ಕಚೇರಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಬಗ್ಗೆಯೂ ಕ್ರಮಕೈಗೊಂಡಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸ್ಥಳಕ್ಕೆ ಆಗಮಿಸುವವರೆಗೆ ಪಂಚಾಯಿತಿ ಅಧಿಕಾರಿಗಳನ್ನು ಕಚೇರಿಯಲ್ಲೇ ಕೂಡಿ ಬೀಗ ಹಾಕಿ ಪ್ರತಿಭಟಿಸಿದರು.

ಗ್ರಾಮ ಪಂಚಾಯಿತಿಗೆ ಮೊದಲು ಭೇಟಿ ನೀಡಿದ ತಾ.ಪಂ. ಇಒ ಎಂ.ಎ.ಗೋಪಾಲ್ ಪ್ರತಿಭಟನಾಕಾರರಿಂದ ಸಮಸ್ಯೆ ಆಲಿಸಿ ನಂತರ ಹರಿಹರಪ್ಪನಪಾಳ್ಯದಲ್ಲಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ತೆರೆದಿರುವ ಕೋಳಿ ಫಾರಂಗೆ ಭೇಟಿ ನೀಡಿ ಪರಿಶೀಲಿಸಿ ಮಾಲೀಕರಿಗೆ ಪಂಚಾಯಿತಿ ವತಿಯಿಂದ ನೋಟಿಸ್ ನೀಡಿ ಕೂಡಲೇ ಸ್ಥಳಾಂತರಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT